ತಿಮ್ಮಪ್ಪನಿಗೆ ಜಲಸಂಕಟ, ₹4 ಕೋಟಿ ನಷ್ಟ -ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್ ರೌಂಡಪ್

1. ಪರಿಷತ್‌ ನಾಮಪತ್ರ ಸಲ್ಲಿಕೆಗೆ ಇವತ್ತು ಕೊನೆ ದಿನ

ಪರಿಷತ್​ ಚುನಾವಣೆ ರಾಜ್ಯ ರಾಜಕೀಯದ ಜಿದ್ದಾಜಿದ್ದಿಗೆ ಕಾರಣವಾಗಿದೆ. ಈಗಾಗಲೇ ಬಿಜೆಪಿ ಒಂದೆಜ್ಜೆ ಮುಂದೆ ಹೋಗಿ ತಮ್ಮ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಕಾಂಗ್ರೆಸ್ ಕೂಡಾ​ ಅಳೆದುತೂಗಿ 20 ಕ್ಷೇತ್ರಗಳಿಗೆ ಪರಿಷತ್​ ಆಭ್ಯರ್ಥಿಗಳನ್ನು ಇಳಿಸಿದೆ. ಡಿಸೆಂಬರ್ 10ಕ್ಕೆ ಪರಿಷತ್ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಇವತ್ತು ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಉಮೇದುವಾರಿಕೆ ಹಿಂದಕ್ಕೆ ಪಡೆಯಲು ನವೆಂಬರ್ 26 ಕೊನೆಯ ದಿನವಾಗಿದೆ.

2. ಜೆಡಿಎಸ್​​ ಪರಿಷತ್​ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ವಿಧಾನಪರಿಷತ್ ಚುನಾವಣೆ ರಂಗೇರಿದ್ರು ಇಂದು ಜೆಡಿಎಸ್ ಅಭ್ಯರ್ಥಿಗಳ ಅಧಿಕೃತ ಪಟ್ಟಿ ರಿಲೀಸ್​​ ಆಗಿದೆ. ಒಟ್ಟು ಏಳು ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಲಾಗಿದೆ. ಮಂಡ್ಯದಿಂದ ಅಪ್ಪಾಜಿಗೌಡ, ಹಾಸನದಿಂದ ಸೂರಜ್‌ ರೇವಣ್ಣ, ಮೈಸೂರಿನಿಂದ ಮಂಜೇಗೌಡ, ಬೆಂಗಳೂರು ಗ್ರಾಮಾಂತರದಿಂದ ರಮೇಶ್‌ಗೌಡ, ತುಮಕೂರಿನಿಂದ ಅನಿಲ್ ಕುಮಾರ್, ಕೋಲಾರ ವಕ್ಕಲೇರಿ ರಾಮು, ಹಾಗೂ ಕೊಡಗಿನಿಂದ ಹೆಚ್‌.ಯು. ಇಸಾಕ್ ಖಾನ್‌ಗೆ ಟಿಕೆಟ್‌ ಘೋಷಣೆಯಾಗಿದೆ.

3. ಸಂದೇಶ್​​ ನಾಗರಾಜ್​ ​ಕೈ ತಪ್ಪಿದ ‘ದಳ’ ಟಿಕೆಟ್

ರಾಜ್ಯದಲ್ಲಿ ಪರಿಷತ್​ ಚುನಾವಣೆ ಕಾವು ಏರುತ್ತಿದ್ದು, ಮತ್ತೊಮ್ಮೆ ಟಿಕೆಟ್​ ನಿರೀಕ್ಷೆಯಲ್ಲಿದ್ದ ಜೆಡಿಎಸ್​ ಎಂಎಲ್​ಸಿ ಸಂದೇಶ್​ ನಾಗರಾಜ್​ರ ಕೊನೆಯ ಘಳಿಗೆ ಕಸರತ್ತು ವಿಫಲವಾಗಿದೆ. ಇಂದು ಜೆಡಿಎಸ್​ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದ್ದು, ಮೈಸೂರಿನಿಂದ ಮಂಜೇಗೌಡಗೆ ಟಿಕೆಟ್​​ ನೀಡಲಾಗಿದೆ. ಸಂದೇಶ್​ ನಾಗರಾಜ್​ಗೆ ಟಿಕೆಟ್​ ನೀಡಲು ಕಾರ್ಯಕರ್ತರ ವಿರೋಧವಿದ್ದು, ನಾನು ಕಾರ್ಯಕರ್ತರ ಅಭಿಪ್ರಾಯ ಗೌರವಿಸಬೇಕಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದರು. ಅದರ ಬೆನ್ನಲ್ಲೆ ಈಗ ಟಿಕೆಟ್​​ ಕೈ ತಪ್ಪಿದೆ.

4. ಇಂದು ಲಖನ್​ ಜಾರಕಿಹೊಳಿ ನಾಮಪತ್ರ ಸಲ್ಲಿಕೆ

ಬೆಳಗಾವಿಯಲ್ಲಿ ವಿಧಾನಪರಿಷತ್​​ನ ಎರಡು ಸ್ಥಾನಗಳಿಗೆ ಇಂದು ನಾಮಪತ್ರ ಸಲ್ಲಿಸಲಿರುವ ಜಾರಕಿಹೊಳಿ ಸಹೋದರರು, ನಾಮ ಪತ್ರ ಸಲ್ಲಿಸುವ ವೇಳೆ ಶಕ್ತಿ ಪ್ರದರ್ಶನಕ್ಕೆ ನಿರ್ಧರಿಸಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಪಕ್ಷೇತರ ಅಭ್ಯರ್ಥಿಯಾಗಿ ನಾಮ ಪತ್ರ ಸಲ್ಲಿಸಲಿರುವ ಲಖನ್​ ಜಾರಕಿಹೊಳಿ, ಜಿಲ್ಲೆಯ 5 ಸಾವಿರಕ್ಕೂ ಹೆಚ್ಚು ಗ್ರಾಮ ಪಂಚಾಯಿತಿ ಸದಸ್ಯರನ್ನ ಸೇರಿಸಿ ಱಲಿ ನಡೆಸಲು ನಿರ್ಧರಿಸಿದ್ದಾರೆ.

5. ಅಕಾಲಿಕ ಮಳೆಗೆ ಕಾಫಿ ನಾಡು ಕಂಗಾಲು
ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಕಾಲಿಕ ಮಳೆ ಮುಂದುವರೆದಿದ್ದು, ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆಯಾಗಿದೆ. ಭಾರೀ ಮಳೆಗೆ ಜಿಲ್ಲೆಯ ರಸ್ತೆಗಳು ಕೆರೆಯಂತಾಗಿದ್ದು, ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ ಕಳಸದಲ್ಲಿ ಸತತ ಎರಡು ಗಂಟೆಗಳಿಗೂ ಹೆಚ್ಚು ಕಾಲ ಮಳೆ ಸುರಿದಿದ್ದು, ಹಲವು ಕಡೆಗಳಲ್ಲಿ ಚರಂಡಿಗಳು ಬ್ಲಾಕ್​ ಆಗಿ ರಸ್ತೆಗೆ ನೀರು ನುಗ್ಗಿದೆ. ಏಕಾಏಕಿ ಮಳೆಗೆ ಕಾಫಿ, ಅಡಿಕೆ ತೋಟಗಳು ಜಲಾವೃತಗೊಂಡಿದ್ದು, ಕಾಫಿ ನಾಡಿನ ಜನರು ಕಂಗಾಲಾಗಿದ್ದಾರೆ.

6. ತಿಮ್ಮಪ್ಪನಿಗೆ ಜಲಸಂಕಟ, ₹4 ಕೋಟಿ ನಷ್ಟ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತಗೊಂಡ ಹಿನ್ನೆಲೆ ಆಂಧ್ರ ಸೇರಿ ಹಲವೆಡೆ ವರುಣ ಅಬ್ಬರಿಸಿದ್ದಾನೆ. ಭೀಕರ ವರುಣಾಘಾತಕ್ಕೆ ಆಂಧ್ರದಲ್ಲಿ ಅಲ್ಲೊಲ ಕಲ್ಲೊಲ ಉಂಟಾಗಿದೆ. ಭಾರೀ ಮಳೆಗೆ ಜನ ಜೀವನ ಸಂಕಷ್ಟಕ್ಕೆ ಸಿಲುಕಿದ್ದು, ಈಗಾಗಲೇ ಆಂಧ್ರದಲ್ಲಿ ಸುಮಾರು 40ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಜಲಕಂಟಕದಿಂದ ವೆಂಕಟರಮಣನಿಗೆ 4 ಕೋಟಿ ರೂಪಾಯಿಗೂ ಹೆಚ್ಚು ನಷ್ಟವಾಗಿದೆ. ಇದೀಗ ತಮಿಳುನಾಡು ಮತ್ತು ಕೇರಳದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

7. ಮರೆಗುಳಿ ಕಾಯಿಲೆಯ ಮೂಲ ಕಾರಣ ಪತ್ತೆ
ಮನುಷ್ಯರಲ್ಲಿ ಕಾಣಿಸಿಕೊಳ್ಳುವ ಮರೆಗುಳಿ ಕಾಯಿಲೆಯ ಮೂಲ ಕಾರಣವನ್ನು ಪತ್ತೆ ಹಚ್ಚುವಲ್ಲಿ ಮಧ್ಯಪ್ರದೇಶದ ಐಐಟಿಯ ಸಂಶೋಧಕರು ಯಶಸ್ವಿಯಾಗಿದ್ದಾರೆ. ಜೀವಕಣಗಳಲ್ಲಿರುವ ಸಿಗ್ನಲ್‌ ಪೆಪ್ಟೈಡ್‌ಎಂಬ ಪ್ರೊಟೀನ್‌ ಕಣ, ಅಮಿಲೋಯ್ಡ ಬಿಟಾ ಪೆಪ್ಟೈಡ್ ಎಂಬ ಪ್ರೊಟೀನ್‌ ಕಣಗಳ ಜೊತೆ, ಜೀವಾಂಶಗಳೊಳಗೆ ಒಂದು ಜಾಗದಲ್ಲಿ ಕೂಡಿಕೊಂಡಾಗ ಮರೆಗುಳಿ ಕಾಯಿಲೆ ಶುರುವಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಅಸಲಿಗೆ, ಜೀವಕಣಗಳ ಸಕಲ ಕಾರ್ಯ ಚಟುವಟಿಕೆಗಳಿಗೆ ಈ ಎರಡೂ ಪ್ರೋಟೀನ್‌ಗಳು ಕಾರಣ.

8. ‘ಕೋವ್ಯಾಕ್ಸಿನ್‌’ ಲಸಿಕೆಗೆ ಯುಕೆ ಅನುಮೋದನೆ

ಭಾರತದ ಕೋವ್ಯಾಕ್ಸಿನ್‌ ಲಸಿಕೆಗೆ ಇಂಗ್ಲೆಂಡ್‌ ಅನುಮೋದನೆ ನೀಡಿದೆ. ಇದರಿಂದ ಕೋವ್ಯಾಕ್ಸಿನ್‌ ಲಸಿಕೆ ಪಡೆದ ವಿದ್ಯಾರ್ಥಿಗಳು, ಪ್ರವಾಸಿಗರು ಇಂಗ್ಲೆಂಡ್‌ಗೆ ಪ್ರವಾಸ ಕೈಗೊಳ್ಳಬಹುದಾಗಿದೆ. ಚೀನಾದ ಸಿನೋಫಾರ್ಮ್‌ ಹಾಗೂ ಭಾರತದ ಭಾರತ್‌ ಬಯೋಟೆಕ್‌ನ ಲಸಿಕೆಗಳನ್ನು ಇಂಗ್ಲೆಂಡ್‌ ಅನುಮೋದನೆಯ ಪಟ್ಟಿಗೆ ಸೇರಿಸಿದೆ ಎಂದು ಸಾರಿಗೆ, ಆರೋಗ್ಯ ಇಲಾಖೆ ಮತ್ತು ಸಾಮಾಜಿಕ ಕಾಳಜಿ ಇಲಾಖೆಯು ಹೊರಡಿಸಿರುವ ನೋಟಿಸ್‌ನಿಂದ ತಿಳಿದುಬಂದಿದೆ.

9. ಈಸ್ಟರ್​​ ದಾಳಿ, 215 ಮಂದಿಯ ಸಾಕ್ಷಿ ಪಟ್ಟಿ ಸಿದ್ಧ

2019 ರಲ್ಲಿ ಶ್ರೀಲಂಕಾದ ಚರ್ಚ್​​​ನ ಈಸ್ಟರ್​​ ದಾಳಿಗೆ 855 ಮಂದಿ ಅಸುನೀಗಿದ್ದರು. ಅಲ್ಲದೆ ಈ ದಾಳಿಗೆ ಜಾಗತಿಕವಾಗಿ ಎಲ್ಲರನ್ನ ಬೆಚ್ಚಬೀಳಿಸಿತ್ತು. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಗಳನ್ನ ನೀಡಲು ಒಟ್ಟು 1 ಸಾವಿರದ 215 ಮಂದಿಯ ಸಾಕ್ಷಿಗಳನ್ನ ಪಟ್ಟಿ ಮಾಡಲಾಗಿದೆ. ಇದರ ಭಾಗವಾಗಿ ಮೊದಲನೇ ಹಂತದ ವಿಚಾರಣೆಯನ್ನ ಶ್ರೀಲಂಕಾ ನ್ಯಾಯಾಲಯ ಕೈಗೆತ್ತಿಕೊಂಡಿದೆ. ಇನ್ನು ಈ ವಿಚಾರಣೆಯಲ್ಲಿ ಮಾಜಿ ರಾಷ್ಟ್ರೀಯ ಪೊಲೀಸ್​ ಮುಖ್ಯಸ್ಥ ಪೂಜಿತ್​ ಜಯಸುಂದರ ಕಾರ್ಯನಿರ್ವಹಿಸಲು ವಿಫಲರಾಗಿದ್ದಾರೆ ಎಂತಲೂ ಆರೋಪಿಸಲಾಗಿದೆ.

10. ಯುರೋಪ್​ನಲ್ಲಿ ಬೂಸ್ಟರ್​​ ಡೋಸ್​​ ಅಧಿಕೃತಕ್ಕೆ ಚಿಂತನೆ

ಜಾನ್ಸನ್ & ಜಾನ್ಸನ್‌ನ ಒಂದು ಬೂಸ್ಟರ್‌ ಡೋಸ್ ಕೊರೊನಾ ಲಸಿಕೆ ಅಧಿಕೃತಗೊಳಿಸಬೇಕೆ ಎಂದು ಮೌಲ್ಯ ಮಾಪನ ಮಾಡಲಾಗುತ್ತಿದೆ ಎಂದು ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ ಹೇಳಿದೆ. ಕೋವಿಡ್ ಲಸಿಕೆ ಪಡೆದ 18 ಮತ್ತು ಅದಕ್ಕೂ ಮೇಲ್ಪಟ್ಟ ವಯೋಮಿತಿಯ ಜನರು ಲಸಿಕೆ ಪಡೆದ ಎರಡು ತಿಂಗಳ ಬಳಿಕ ಒಂದು ಡೋಸ್ ಬೂಸ್ಟರ್ ಲಸಿಕೆ ಪಡೆಯಲು ಅನುಮತಿ ನೀಡುವಂತೆ ಜಾನ್ಸನ್ & ಜಾನ್ಸನ್ ಪತ್ರ ಬರೆದಿದೆ. ಈ ಹಿನ್ನಲೆಯಲ್ಲಿ ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ.

News First Live Kannada

Leave a comment

Your email address will not be published. Required fields are marked *