ತಿಳಿಯುವ ಹಕ್ಕು ಸಹ ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗ: ದೆಹಲಿ ಹೈಕೋರ್ಟ್ ವ್ಯಾಖ್ಯಾನ | Delhi High Court Seeks Centres Reply On Plea To Label Products As Vegetarian Or Non Vegetarian


ತಿಳಿಯುವ ಹಕ್ಕು ಸಹ ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗ: ದೆಹಲಿ ಹೈಕೋರ್ಟ್ ವ್ಯಾಖ್ಯಾನ

ದೆಹಲಿ ಹೈಕೋರ್ಟ್

ದೆಹಲಿ: ಬಟ್ಟೆ, ಎಲೆಕ್ಟ್ರಾನಿಕ್ ಉಪಕರಣಗಳೂ ಸೇರಿದಂತೆ ಎಲ್ಲ ಉತ್ಪನ್ನಗಳ ಮೇಲೆ ಸಸ್ಯದಿಂದ ತಯಾರಾದದ್ದು ಅಥವಾ ಪ್ರಾಣಿಜನ್ಯ ಎಂಬ ಲೇಬಲ್ ಹಚ್ಚುವ ಕುರಿತು ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಬಗ್ಗೆ ಕೇಂದ್ರ ಸರ್ಕಾರ ತನ್ನ ಅಭಿಪ್ರಾಯ ತಿಳಿಸಬೇಕು ಎಂದು ದೆಹಲಿ ಹೈಕೋರ್ಟ್ (Delhi High Court)​ ಸೂಚಿಸಿದೆ. ಉತ್ಪನ್ನಗಳ ತಯಾರಿಕೆಗೆ ಬಳಸಿರುವ ವಸ್ತುಗಳನ್ನು ಆಧರಿಸಿ ಈ ರೀತಿಯ ವರ್ಗೀಕರಣ ಮಾಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ

‘ಎಲ್ಲರಿಗೂ ಅವರ ಬೇಕೆನಿಸಿದ ಮಾಹಿತಿಯನ್ನು ತಿಳಿಯುವ ಮತ್ತು ನಂಬಿಕೆಗಳನ್ನು ಅನುಸರಿಸುವ ಹಕ್ಕು ಇರುತ್ತದೆ. ಈ ಅಂಶವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಪಿನ್ ಸಂಘಿ ನೇತೃತ್ವದ ನ್ಯಾಯಪೀಠವು ಅಭಿಪ್ರಾಯಪಟ್ಟಿತು. ಈ ರಾಮ್ ಗೋ ರಕ್ಷಾ ದಳವು ಈ ಅರ್ಜಿಯನ್ನು ಸಲ್ಲಿಸಿದೆ. ಹಸುಗಳ ಯೋಗಕ್ಷೇಮಕ್ಕೆ ಈ ಟ್ರಸ್ಟ್​ ಹೆಚ್ಚು ಗಮನ ನೀಡುತ್ತದೆ. ‘ಜನರು ಕೆಲವೊಮ್ಮೆ ತಮಗೆ ಗೊತ್ತಿಲ್ಲದೆ ಕೆಲ ಪ್ರಾಣಿಜ್ಯ ಉತ್ಪನ್ನಗಳನ್ನು ಬಳಸುವ ಅಪಾಯವಿದೆ. ಹೀಗಾಗಿ ಸ್ಪಷ್ಟ ನಿರ್ದೇಶನ ಬೇಕು’ ಎಂದು ಸಸ್ಯಾಹಾರ ಬಳಕೆಯನ್ನೂ ಪ್ರೋತ್ಸಾಹಿಸುವ ಈ ಟ್ರಸ್ಟ್​ ನ್ಯಾಯಾಲಯಕ್ಕೆ ಮನವಿ ಮಾಡಿದೆ.

‘ದೇಶದ ಎಲ್ಲ ಪ್ರಜೆಗಳಿಗೂ ಸಂವಿಧಾನ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದೆ. ತಿಳಿದುಕೊಳ್ಳುವ ಹಕ್ಕು ಸಹ ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವೇ ಆಗಿರುತ್ತದೆ. ಅರ್ಜಿದಾರರು ಪ್ರಸ್ತಾಪಿಸಿರುವ ವಿಷಯವು ವ್ಯಕ್ತಿಯ ಜೀವಿಸುವ ಸ್ವಾತಂತ್ರ್ಯ ಮತ್ತು ತನ್ನಿಷ್ಟದ ನಂಬಿಕೆಗಳನ್ನು ಪಾಲಿಸುವ ಸ್ವಾತಂತ್ರ್ಯವನ್ನೂ ಒಳಗೊಳ್ಳುತ್ತದೆ’ ಎಂದು ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಅಭಿಪ್ರಾಯಪಟ್ಟರು. ಮೂರು ವಾರಗಳ ಒಳಗೆ ಈ ಕುರಿತು ಪ್ರತಿಕ್ರಿಯಿಸಬೇಕೆಂದು ಸೂಚಿಸಿ ಆರೋಗ್ಯ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಗೆ ಹೈಕೋರ್ಟ್ ನಿರ್ದೇಶನ ನೀಡಿದೆ.

ನಾವು ಪ್ರತಿದಿನ ಬಳಸುವ ಹಲವು ಉತ್ಪನ್ನಗಳಲ್ಲಿ ನಮಗೆ ತಿಳಿಯದೇ ಪ್ರಾಣಿಜನ್ಯ ಉತ್ಪನ್ನಗಳು ಬಳಕೆಯಾಗಿರುವ ಅಥವಾ ಮಾಂಸಾಹಾರ ಬೆರೆತ ಆಹಾರ ಬಳಸುತ್ತಿರುವ ಸಾಧ್ಯತೆಯಿದೆ. ಪ್ರಾಣಿಜನ್ಯ ವಸ್ತುಗಳನ್ನು ಬಳಸಲು ನಮ್ಮ ನಂಬಿಕೆಗಳು ಅವಕಾಶ ನೀಡುವುದಿಲ್ಲ. ಹೀಗಾಗಿ ಈ ವಿಚಾರದಲ್ಲಿ ಸ್ಪಷ್ಟತೆ ಮೂಡಲು ಸೂಕ್ತ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರ ಪರ ವಕೀಲರಾದ ರಜತ್ ಅನೇಜಾ ಮನವಿ ಮಾಡಿದ್ದರು. ಸಕ್ಕರೆಯ ಸಂಸ್ಕರಣೆ ವೇಳೆ ಮೂಳೆಗಳ ಪುಡಿ ಬಳಸುತ್ತಿರುವ ಶಂಕೆ ಹಲವರಿಗೆ ಇದೆ. ಇದು ಹಲವರ ಧಾರ್ಮಿಕ ನಂಬಿಕೆಗಳಿಗೆ ಘಾಸಿಯುಂಟು ಮಾಡುವ ಸಂಗತಿ. ಚೀನಾದಿಂದ ಆಮದಾಗುತ್ತಿರುವ ಕ್ರೆಯಾನ್​ನಂಥ ಕೆಲ ಉತ್ಪನ್ನಗಳಲ್ಲಿ ಪ್ರಾಣಿಜನ್ಯ ವಸ್ತುಗಳು ಬಳಕೆಯಾಗಿವೆ ಎಂದು ಹೇಳಲಾಗುತ್ತಿದೆ. ಈ ಕುರಿತು ಸ್ಪಷ್ಟನೆ ಬೇಕಿದೆ ಎಂದು ಅವರು ನುಡಿದರು.

‘ಈಗಾಗಲೇ ಚಾಲ್ತಿಯಲ್ಲಿರುವ ಕಾನೂನು ಮತ್ತು ನಿಯಮಗಳ ಕಟ್ಟುನಿಟ್ಟಿನ ಅನುಷ್ಠಾನದೊಂದಿಗೆ ಉತ್ಪನ್ನಗಳ ತಯಾರಿಕೆಗೆ ಬಳಕೆಯಾಗಿರುವ ಕಚ್ಚಾವಸ್ತುಗಳನ್ನು ಆಧರಿಸಿ ಕಡ್ಡಾಯವಾಗಿ ಹಸಿರು, ಕೆಂಪು ಮತ್ತು ಬೂದು ಬಣ್ಣದ ಲೇಬಲ್ ಅಂಟಿಸುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ಆಹಾರ ಉತ್ಪನ್ನಗಳು, ಸೌಂದರ್ಯ ಪ್ರಸಾದನ ತಯಾರಕರು, ಸುಗಂಧ ದ್ರವ್ಯ ಮತ್ತು ಮನೆಬಳಕೆ ಉತ್ಪನ್ನಗಳು, ಆಭರಣಗಳಿಗೂ ಇಂಥ ಲೇಬಲ್​ಗಳನ್ನು ಅಂಟಿಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ. ವಿಚಾರಣೆಯನ್ನು ಡಿಸೆಂಬರ್ 9ಕ್ಕೆ ಮುಂದೂಡಲಾಗಿದೆ.

TV9 Kannada


Leave a Reply

Your email address will not be published. Required fields are marked *