ತೀರ್ಥಹಳ್ಳಿ ಕಾಂಗ್ರೆಸ್​​ನಲ್ಲಿ ಮನೆಯೊಂದು ಎರಡು ಬಾಗಿಲು; ನಿರಾಸೆಯಲ್ಲಿ ಡಿಕೆಎಸ್​?

ತೀರ್ಥಹಳ್ಳಿ ಕಾಂಗ್ರೆಸ್​​ನಲ್ಲಿ ಮನೆಯೊಂದು ಎರಡು ಬಾಗಿಲು; ನಿರಾಸೆಯಲ್ಲಿ ಡಿಕೆಎಸ್​?

ಶಿವಮೊಗ್ಗ: ಡಿ.ಕೆ.ಶಿವಕುಮಾರ್ ಕೆಪಿಸಿಸಿ ಸಾರಥ್ಯ ವಹಿಸಿಕೊಂಡ ಮೇಲೆ ಬಿಜೆಪಿಯ ಶಕ್ತಿ ಕೇಂದ್ರವಾಗಿರುವ ಶಿವಮೊಗ್ಗವನ್ನು ಕಾಂಗ್ರೆಸ್​ ತೆಕ್ಕೆಗೆ ಪಡೆದುಕೊಳ್ಳಬೇಕು ಎನ್ನುವ ಕಾರಣಕ್ಕೆ ನಾಯಕರ ಧ್ರುವೀಕರಣಕ್ಕೆ ಮುಂದಾಗಿದ್ದರು.

ಇದರ ಪರಿಣಾಮ ಜೆಡಿಎಸ್​ನಲ್ಲಿದ್ದ ಮಾಜಿ ಶಾಸಕ ಮಧು ಬಂಗಾರಪ್ಪ ಕಾಂಗ್ರೆಸ್​ ಸೇರಿದರು. ಇವರ ಆಗಮನಕ್ಕೆ ಕಾಂಗ್ರೆಸ್​ನಲ್ಲಿ ಭರ್ಜರಿ ಸ್ವಾಗತವೇ ಸಿಕ್ಕಿತ್ತು. ಆದರೆ, ಇದೇ ಸ್ವಾಗತ ಮಂಜುನಾಥ್​ ಗೌಡ ಕಾಂಗ್ರೆಸ್​ ಸೇರ್ಪಡೆಗೆ ವೇಳೆ ಕಾಣಲಿಲ್ಲ.‌ ಇವರ ಬರುವಿಕೆಯನ್ನ ಮಾಜಿ ಸಚಿವ ಕಿಮ್ಮೆನೆ ರತ್ನಾಕರ್​ ಬಲವಾಗಿ ವಿರೋಧಿಸಿದ್ದರು.

ನಿರಾಸೆಯಲ್ಲಿ ಕಾರ್ಯಕರ್ತರು
ಒಂದು ಪಕ್ಷದಲ್ಲಿದ್ದುಕೊಂಡು, ಇನ್ನೊಂದು ಪಕ್ಷದ ಪರವಾಗಿ ಕೆಲಸ ಮಾಡುತ್ತಾರೆ. ಅವರಿಂದ ಪಕ್ಷಕ್ಕೆ ನಷ್ಟವೇ ಜಾಸ್ತಿ ಎಂದು ಕಿಮ್ಮನೆ ರತ್ನಾಕರ್ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೂ ಡಿ.ಕೆ. ಶಿವಕುಮಾರ್​ರವರ ಬೆನ್ನುಬಿದ್ದ ಮಂಜುನಾಥ್ ಗೌಡರು, ನಾಯಕರ ಮನವೊಲಿಸಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಅಲ್ಲದೇ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್​ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಆ ಸಂದರ್ಭದಲ್ಲಿ ಕಿಮ್ಮನೆ ರತ್ನಾಕರ್ ಹಾಗೂ ಮಂಜುನಾಥ್ ಗೌಡರ ಜೋಡಿ ನಾಯಕತ್ವ ಸ್ಥಳೀಯವಾಗಿ ಗೆಲುವು ತಂದುಕೊಡ್ತು ಎಂದೇ ಲೆಕ್ಕಾಚಾರ ಹಾಕಿದ್ದ ಕಾರ್ಯಕರ್ತರಿಗೆ ಈಗ ನಿರಾಸೆ ಆಗುತ್ತಿದೆ. ಕಾರಣ ತೀರ್ಥಹಳ್ಳಿಯಲ್ಲೀಗ ಇಬ್ಬರು ನಾಯಕರ ನಡುವೆ ಯಾವೊಂದು ಮಾತುಕತೆಯೂ ಇಲ್ಲದಂತಾಗಿದೆ. ಎಷ್ಟರ ಮಟ್ಟಿಗೆ ಇವರಿಬ್ಬರ ನಡುವಿನ ವೈಮನಸ್ಸು ವ್ಯಾಪಿಸಿದೆ ಎಂದರೆ, ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್​ನಿಂದ ಯಾವುದೇ ಚಟುವಟಿಕೆ ನಡೆದರು, ಎರೆಡೆರಡು ಸಲ ನಡೆಯುತ್ತದೆ ಅನ್ನೋ ಚರ್ಚೆ ಶುರುವಾಗಿದೆ.

ಮಾತಿಲ್ಲ, ಕತೆಯಿಲ್ಲ
ಒಂದು ಕಡೆ ಕಿಮ್ಮನೆ ಬಣ ಸುದ್ದಿಗೋಷ್ಠಿ ನಡೆಸಿದರೆ, ಇನ್ನೊಂದು ಕಡೆ ಮಂಜುನಾಥ್​ ಗೌಡ ಬಣ ಸುದ್ದಿಗೋಷ್ಠಿ ನಡೆಸುತ್ತದೆ. ಅದೇ ರೀತಿ ಯಾವುದೇ ಪ್ರತಿಭಟನೆಯಾಗಲಿ ಎರಡು ಸಲ ನಡೆಯುತ್ತವೆ. ಸಭೆಗಳು, ವಿಚಾರ ಸಂಕೀರ್ಣಗಳು ಹೀಗೆ ಆಗುತ್ತಿವೆ. ಈ ರೀತಿಯ ಪರಿಸ್ಥಿತಿಯಲ್ಲಿ ತಾವು ಯಾರೊಂದಿಗೆ ಗುರುತಿಸಿಕೊಳ್ಳಬೇಕು ಎಂಬ ಗೊಂದಲ ಕಾರ್ಯಕರ್ತರನ್ನು ಕಾಡುತ್ತಿದೆ. ಕಾಂಗ್ರೆಸ್​ ಎಂದುಕೊಂಡು ಹೋದರೆ, ಯಾವ ನಾಯಕರ ಜೊತೆ ನಿಲ್ಲಬೇಕು. ಅವರ ಪರವಾಗಿ ನಿಂತರೆ ಇವರು, ಇವರ ಪರವಾಗಿ ನಿಂತರೆ ಅವರು ಸಿಟ್ಟಾಗುತ್ತಾರೆ. ಹಾಗಾಗಿ ಏನು ಮಾಡಬೇಕೆಂದೇ ತೋಚುತ್ತಿಲ್ಲ ಎಂದು ಕಾರ್ಯಕರ್ತರು ಹೇಳುತ್ತಾರೆ.

ತಲೆ ಕೆಡಿಸಿಕೊಳ್ಳದ ಡಿಕೆಎಸ್​​
ಕೊರೊನಾ ನಿರ್ವಹಣಾ ವೈಫಲ್ಯ ಹಾಗೂ ಪೆಟ್ರೋಲ್​ ಡಿಸೇಲ್​ ವಿಚಾರದಲ್ಲೂ ಕಿಮ್ಮನೆ ಹಾಗೂ ಗೌಡರ ಬಣಗಳ ಪ್ರತ್ಯೇಕ ಹೋರಾಟ ತೀರ್ಥಹಳ್ಳಿಯಲ್ಲಿ ತಾರಕಕ್ಕೇರಿರುವ ತಾಕಲಾಟದ ಬಗ್ಗೆ ಸಾಕ್ಷಿ ಹೇಳುತ್ತಿವೆ. ಕಾಂಗ್ರೆಸ್​ನಲ್ಲಿನ ಈ ತಿಕ್ಕಾಟದಿಂದಾಗಿ ಕಾರ್ಯಕರ್ತರೆ ತಟಸ್ಥರಾಗುವ ಸಾಧ್ಯತೆಯಿದೆ ಅಷ್ಟೆ ಅಲ್ಲದೆ, ಈ ಭಾಗದಲ್ಲಿ ಮತ್ತೆ ಬಿಜೆಪಿಯೇ ಪಾರುಪತ್ಯ ಸಾಧಿಸಲು ಅವಕಾಶ ಮಾಡಿ ಕೊಡುತ್ತಿದೆ. ಮಂಜುನಾಥ್​ ಗೌಡರನ್ನ ಪಕ್ಷಕ್ಕೆ ಬರಮಾಡಿಕೊಂಡ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ನಾಯಕರ ವೈಮನಸ್ಸು ಸರಿಮಾಡುವ ನಿಟ್ಟಿನಲ್ಲಿ ತಲೆಬಿಸಿ ಮಾಡಿಕೊಂಡಿಲ್ಲ. ಮತ್ತೆ ಸಿಎಂ ಆಗಿ ಅಧಿಕಾರ ಹಿಡಿಯಬೇಕು ಎಂದು ಮಹತ್ವಾಕಾಂಕ್ಷೆ ಹೊಂದಿರುವ ಸಿದ್ದರಾಮಯ್ಯರೇ ಇದಕ್ಕೆಲ್ಲ ಪರಿಹಾರ ಅರೆಯಬೇಕಿದೆ ಅಂತಲೂ ಕೆಲವು ಕಾರ್ಯಕರ್ತರು ಮಾತಾಡಿಕೊಳ್ತಿದ್ದಾರೆ.

ವಿಶೇಷ ಬರಹ; ಪ್ರಸನ್ನ, ವರದಿಗಾರರು

The post ತೀರ್ಥಹಳ್ಳಿ ಕಾಂಗ್ರೆಸ್​​ನಲ್ಲಿ ಮನೆಯೊಂದು ಎರಡು ಬಾಗಿಲು; ನಿರಾಸೆಯಲ್ಲಿ ಡಿಕೆಎಸ್​? appeared first on News First Kannada.

Source: newsfirstlive.com

Source link