ವಿಜಯನಗರ: ಪೊಲೀಸ್ ಅಧಿಕಾರಿಯ ಮಗನನ್ನ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಮುಸ್ತಕಿನ್ ಕೂಡಗಿ(28) ಹತ್ಯೆಯಾದ ದುರ್ದೈವಿ. ಜಿಲ್ಲೆಯ ಗಾಂಧಿ ಚೌಕ್ ಪೊಲೀಸ್ ಠಾಣೆಯ ಕ್ರೈಂ ಪಿಎಸ್ಐ ಆರ್.ಬಿ. ಕೂಡಗಿ ಪುತ್ರ ಹತ್ಯೆಗೊಳಗಾದ ವ್ಯಕ್ತಿ ಎಂಬ ಮಾಹಿತಿ ಲಭ್ಯವಾಗಿದೆ.
ಹತ್ಯೆ ಮಾಡಿ ಆಕ್ಸಿಡೆಂಟ್ ಎಂಬಂತೆ ಬಿಂಬಿಸುವ ಪ್ರಯತ್ನ ನಡೆದಿದೆಯಾ..!
ಮುಸ್ತಕಿನ್ ದ್ವಿಚಕ್ರ ವಾಹನದಲ್ಲಿ ನಿರ್ಮಾಣ ಹಂತದಲ್ಲಿರುವ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಮೊದಲಿಗೆ ಬುಲೆರೋ ವಾಹನದಿಂದ ಡಿಕ್ಕಿ ಹೊಡೆಸಿ, ನಂತರ ಮಾರಕಾಸ್ತ್ರಗಳನ್ನು ಬಳಸಿ ಹತ್ಯೆ ಮಾಡಿರುವುದಾಗಿ ಶಂಕೆ ವ್ಯಕ್ತವಾಗಿದೆ. ಮಹಾನಗರ ಪಾಲಿಕೆ ಮಾಜಿ ಸದಸ್ಯ ರೌಫ್ ಶೇಖ್ ಹಾಗೂ ಕುಟುಂಬಸ್ಥರು ಸೇರಿ ಹತ್ಯೆ ಮಾಡಿರುವುದಾಗಿ ಮೃತನ ಪತ್ನಿ ಅತೀಕ ಮತ್ತು ತಂದೆ ಕ್ರೈಂ ಪಿಎಸ್ಐ ಆರ್ ಬಿ ಕೂಡಗಿ ರೌಫ್ ಶೇಖ್ರ ಮೇಲೆ ಆರೋಪ ಮಾಡಿದ್ದಾರೆ.

ರೌಫ್ ಶೇಖ್ ತೀವ್ರ ವಿರೋಧದ ನಡುವೆಯೂ ತನ್ನ ಪುತ್ರಿ ಅತೀಕಾಳನ್ನು ಪ್ರೀತಿಸಿ ವಿವಾಹವಾಗಿದ್ದ ಕಾರಣದಿಂದಲೇ ಮುಸ್ತಕಿನ್ ಕೊಲೆ ಮಾಡಿರುವುದು ಎಂಬ ಶಂಕೆ ವ್ಯಕ್ತವಾಗುತ್ತಿದೆ. ಮಗಳ ಮದುವೆಯಿಂದ ಅಸಮಾಧಾನಗೊಂಡಿದ್ದ ಯುವತಿಯ ತಂದೆ ರೌಫ್ ಶೇಖ್, ಹಲವು ಬಾರಿ ಅಳಿಯನ ಕೊಲೆಗೆ ಯತ್ನಿಸಿದ್ದರು. ಮೃತನ ಪತ್ನಿ ಅತೀಕಾ ಐದು ತಿಂಗಳ ಗರ್ಭಿಣಿಯಾಗಿದ್ದರೂ, ಅಳಿಯನ ಕೊಲೆಗೆ ಖುದ್ದು ಮಾವನೆ ಸ್ಕೆಚ್ ಹಾಕಿದ್ರಾ ಎಂಬುದು ಸದ್ಯ ಎಲ್ಲರ ಮನದಲ್ಲಿಯೂ ಮೂಡಿರುವ ಬಹುದೊಡ್ಡ ಪ್ರಶ್ನೆ.
ಪ್ರಕರಣದ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆ ಕೇಸ್ ಹಾಗೂ ಆರೋಪಿಗಳ ಬಂಧನಕ್ಕೆಂದು ಮೂರು ತನಿಖಾ ತಂಡಗಳನ್ನು ರಚಿಸಿರುವುದಾಗಿ ವಿಜಯನಗರ ಎಸ್ಪಿ ಆನಂದ್ಕುಮಾರ್ ಮಾಹಿತಿ ನೀಡಿದ್ದಾರೆ.