ತುಮಕೂರಿನಲ್ಲಿ ಶಾಲಾ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಖ್ಯ ಶಿಕ್ಷಕ ಅಮಾನತು! | Teacher suspended for behaving indecently with school girls in Tumkur


ತುಮಕೂರಿನಲ್ಲಿ ಶಾಲಾ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಖ್ಯ ಶಿಕ್ಷಕ ಅಮಾನತು!

ಸಾಂದರ್ಭಿಕ ಚಿತ್ರ

ತುಮಕೂರು: ಶಾಲಾ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ (Vulgar) ವರ್ತಿಸಿದ ಆರೋಪದ ಹಿನ್ನೆಲೆ ಜಿಲ್ಲೆಯ ಪಾವಗಡ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕನಾದ ಸಿಎಂ ಮಲ್ಲಿಕಾರ್ಜುನನ್ನು ಅಮಾನತುಗೊಳಿಸಲಾಗಿದೆ (Suspend). ಅನುಚಿತ ಅಸಭ್ಯ ವರ್ತನೆ ಆರೋಪದ ಹಿನ್ನೆಲೆ ಅಮಾನತು ಮಾಡಿ ಬಿಇಒ ಆದೇಶ ಹೊರಡಿಸಿದ್ದಾರೆ. ಮುಖ್ಯ ಶಿಕ್ಷಕ ಸಿಎಂ ಮಲ್ಲಿಕಾರ್ಜುನ ಶಾಲಾ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಾರೆ. ಅಲ್ಲದೇ ಶಾಲಾ ಸಿಬ್ಬಂದಿಯೊಂದಿಗೆ ಗೌರವವಾಗಿ ನಡೆದುಕೊಳ್ಳಲ್ಲ ಎಂಬ ಆರೋಪ ಕೇಳಿಬಂದಿತ್ತು. ಆರೋಪ ಸಾಭೀತಾದ ಹಿನ್ನೆಲೆ ಅಮಾನತು ಮಾಡಲಾಗಿದೆ.

ಕೊಲೆ ಪ್ರಕರಣ; ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ:
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ನಾಗನಹಳ್ಳಿ ಗ್ರಾಮದಲ್ಲಿ ಅಕ್ಟೋಬರ್ 18ಕ್ಕೆ ಕೊಲೆ ನಡೆದಿತ್ತು. ಗ್ರಾಮದ ಗೋವಿಂದೇಗೌಡ, ವೆಂಕಟರಾಮಯ್ಯ, ಪ್ರಕಾಶ್, ನಂಜುಂಡಯ್ಯ ಹಾಗೂ ದೀಪು, ಗುರು, ಮಲ್ಲಿಕಾರ್ಜುನಯ್ಯ, ಸಿದ್ದಲಿಂಗಯ್ಯ ನಡುವೆ ಗಲಾಟೆ ನಡೆದಿತ್ತು. ಗಲಾಟೆಯಲ್ಲಿ ಗೋವಿಂದೇಗೌಡರ ತಂದೆ ಚನ್ನಿಗಪ್ಪರಿಗೆ ಸ್ಪೈನಲ್ ಕಾರ್ಡ್ ಮೇಲೆ ಹಲ್ಲೆ ಮಾಡಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಚನ್ನಿಗಪ್ಪ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು. ಈ ಬಗ್ಗೆ ಕುಣಿಗಲ್ ಸಿಪಿಐ ಧರ್ಮೇಂದ್ರ ತನಿಖೆ ನಡೆಸಿ ದೋಷಾರೋಪಣೆ ಸಲ್ಲಿಸಿದ್ದರು. ಆರೋಪ ಸಾಭೀತಾದ ಹಿನ್ನೆಲೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ತುಮಕೂರಿನ 2ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.

ದೀಪು, ಮಲ್ಲಿಕಾರ್ಜುನಯ್ಯ ಹಾಗೂ ಸಿದ್ದಲಿಂಗಯ್ಯರಿಗೆ ಜೀವಾವಧಿ ಶಿಕ್ಷೆ ಜತೆಗೆ 25 ಸಾವಿರ ದಂಡ ವಿಧಿಸಲಾಗಿದೆ. ಗುರುಗೆ 2 ವರ್ಷಗಳ ಸಜೆ ಮತ್ತು 10 ಸಾವಿರ ದಂಡ ವಿಧಿಸಿ ಕೋರ್ಟ್ ಆದೇಶ ನೀಡಿದೆ.

ಕೆರೆಗೆ ಬಿದ್ದ ಮಹಿಳೆಯನ್ನು ರಕ್ಷಿಸಿದ ಕಾನ್ಸ್​ಟೇಬಲ್:
ಗಂಗಾಪೂಜೆ ನೆಪದಲ್ಲಿ ಕೆರೆಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ಪೊಲೀಸ್ ಕಾನ್ಸ್​ಟೇಬಲ್ ರಕ್ಷಿಸಿದ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದ ಕುಣಿಗಲ್ ದೊಡ್ಡಕೆರೆಯಲ್ಲಿ ನಡೆದಿದೆ. ಮುಕ್ತಿಯಾರ್ ಅಹಮದ್ ಎಂಬುವವರು ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ. ಬೆಂಗಳೂರಿನ ದಾಸರಹಳ್ಳಿ ನಿವಾಸಿಯೊಬ್ಬರು ಕೌಟುಂಬಿಕ ಸಮಸ್ಯೆಗಳಿಂದ ಬೇಸತ್ತು ಕುಣಿಗಲ್ ದೊಡ್ಡಕೆರೆಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದರು. ದೊಡ್ಡಕೆರೆ ಏರಿಯ ಮೇಲೆ ಯುವಕರು ವೀಲಿಂಗ್ ಮಾಡುತ್ತಿದ್ದ ದೂರುಗಳು ಬಂದ ಕಾರಣ ಕಾನ್ಸ್​ಟೇಬಲ್ ಅಲ್ಲಿಗೆ ಹೋಗಿದ್ದರು. ಈ ವೇಳೆ ಘಟನೆ ನಡೆದಿದೆ. ಮಹಿಳೆ ನೀರಿನಲ್ಲಿ ಮುಳುಗುತ್ತಿದ್ದ ವೇಳೆ ಸ್ಥಳದಲ್ಲಿ ಇದ್ದ ಯುವಕ ಜೊತೆಗೂಡಿ ರಕ್ಷಣೆ ಮಾಡಿದ್ದಾರೆ. ಕುಣಿಗಲ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಹಿಳೆಗೆ ಚಿಕಿತ್ಸೆ ನೀಡಲಾಗುತ್ತಿದೆ.

ಜಿಂಕೆ ಮಾಂಸ ಮಾರಲು ಯತ್ನ:
ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ತಿಪ್ಪಾಪುರ ಗ್ರಾಮದಲ್ಲಿ ಜಿಂಕೆ ಮಾಂಸ ಮಾರಲು ಯತ್ನಿಸಿದ ಆರೋಪಿಗಳು ಪರಾರಿಯಾಗಿದ್ದಾರೆ. ಗಂಡು ಜಿಂಕೆಯೊಂದನ್ನ ಭೇಟಿಯಾಡಿ ಇಬ್ಬರು ಆರೋಪಿಗಳು 5 ಕೆಜಿ ಜಿಂಕೆ ಮಾಂಸ ಮಾರಾಟ ಮಾಡಲು ಯತ್ನಿಸಿದ್ದರು. ಅರಣ್ಯಾಧಿಕಾರಿಗಳನ್ನ ಕಂಡು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ದೇವಾಲಯದ ಹುಂಡಿಗೆ ಕನ್ನ:
ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ರಾತ್ರೋ ರಾತ್ರಿ ದೇವಾಲಯದ ಹುಂಡಿಗೆ ಕನ್ನ ಹಾಕಿದ್ದಾರೆ. ದೇವಾಲಯದ ಹುಂಡಿ ಹೊಡೆದು ಖದೀಮರು ನಗದು ದೋಚಿದ್ದಾರೆ. ಕೊರಟಗೆರೆಯ ಶ್ರೀ ಗುಂಡಾಂಜನೇಯ ಸ್ವಾಮಿ ದೇವಾಲಯದಲ್ಲಿ ಕಳ್ಳತನ ನಡೆದಿದ್ದು, ದೇವಾಲಯದಲ್ಲಿದ್ದ ಇತರೆ ಯಾವುದೇ ಬೆಳ್ಳಿ ಸಾಮಾಗ್ರಿಗಳನ್ನು ಕಳ್ಳರು ಮುಟ್ಟಿಲ್ಲ. ಬೆಳಗ್ಗೆ ದೇವಾಲಯದ ಬಾಗಿಲು ತೆರೆದಾಗ ಘಟನೆ ಬೆಳಕಿಗೆ ಬಂದಿದೆ.

TV9 Kannada


Leave a Reply

Your email address will not be published.