ತುಮಕೂರು: ಅಪಘಾತದಲ್ಲಿ ಮೂವರ ಸಾವಿಗೆ ಕಾರಣನಾಗಿದ್ದ ಲಾರಿ ಚಾಲಕ 16 ವರ್ಷಗಳ ಬಳಿಕ ಪೊಲೀಸರ ವಶಕ್ಕೆ! | Tumkur Lorry Accident man arrested after 16 years Crime News Karnataka Police


ತುಮಕೂರು: ಅಪಘಾತದಲ್ಲಿ ಮೂವರ ಸಾವಿಗೆ ಕಾರಣನಾಗಿದ್ದ ಲಾರಿ ಚಾಲಕ 16 ವರ್ಷಗಳ ಬಳಿಕ ಪೊಲೀಸರ ವಶಕ್ಕೆ!

ಲಾರಿ ಚಾಲಕ 16 ವರ್ಷಗಳ ಬಳಿಕ ಪೊಲೀಸರ ವಶಕ್ಕೆ!

ತುಮಕೂರು: ಅಪಘಾತದಲ್ಲಿ ಮೂವರ ಸಾವಿಗೆ ಕಾರಣನಾಗಿದ್ದ ಲಾರಿ ಚಾಲಕನನ್ನು ಶಿರಾ ಗ್ರಾಮಾಂತರ ವೃತ್ತ ಪೊಲೀಸರು 16 ವರ್ಷಗಳ ಬಳಿಕ ಬಂಧಿಸಿದ್ದಾರೆ. ಮುಂಬೈನಲ್ಲಿ 16 ವರ್ಷಗಳ ಬಳಿಕ ಉತ್ತರ ಪ್ರದೇಶ ಮೂಲದ ಲಾರಿ ಚಾಲಕ ರಾಮದಾರ್ ಜೈಸ್ವಾರ್​ನನ್ನ ಬಂಧಿಸಲಾಗಿದೆ. 2006ರಲ್ಲಿ ಶೀರಾ- ಹಿರಿಯೂರು ಹೆದ್ದಾರಿಯಲ್ಲಿ ಟೆಂಪೋ ಟ್ರ್ಯಾಕ್ಸ್​​ಗೆ ಲಾರಿ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದರು. ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಬಸ್ ನಿಲ್ದಾಣದ ಬಳಿ ಜನರನ್ನ ಇಳಿಸುತ್ತಿದ್ದಾಗ ಟೆಂಪೋ ಟ್ರ್ಯಾಕ್ಸ್​ಗೆ ಲಾರಿ ಡಿಕ್ಕಿ ಹೊಡೆದಿತ್ತು. ಈ ವೇಳೆ ಪಶುವೈದ್ಯ ಸೇರಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. 8 ರಿಂದ 9 ಜನರಿಗೆ ಗಂಭೀರ ಗಾಯವಾಗಿತ್ತು. ಈ ಪ್ರಕರಣ ಸಂಬಂಧ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದರು. ಬಳಿಕ ನ್ಯಾಯಾಲಯದಿಂದ ಜಾಮೀನಿನಿಂದ ಹೊರಬಂದು ಆರೋಪಿ ನಾಪತ್ತೆಯಾಗಿದ್ದ. ಆರೋಪಿ ಪತ್ತೆಗೆ ವಿಶೇಷ ತಂಡ ರಚಿಸಿ ಹುಡುಕಾಟ ನಡೆಸುತ್ತಿದ್ದ ಪೊಲೀಸರು ಆರೋಪಿಯನ್ನು ಇದೀಗ ಪತ್ತೆ ಹಚ್ಚಿದ್ದಾರೆ. ಶಿರಾ‌ ಗ್ರಾಮಾಂತರ ಸಿಪಿಐ ರವಿಕುಮಾರ್ ನೇತೃತ್ವದಲ್ಲಿ ಬಂಧನ ಮಾಡಲಾಗಿದೆ.

ಬೆಂಗಳೂರು: ಪ್ಯಾಲೇಸ್​ ಗ್ರೌಂಡ್​​ನ ಪಾರ್ಟಿ ಹಾಲ್​​ನ ಮೇಲ್ಚಾವಣಿ ಕುಸಿತ

ಪ್ಯಾಲೇಸ್​ ಗ್ರೌಂಡ್​​ನ ಪಾರ್ಟಿ ಹಾಲ್​​ನ ಮೇಲ್ಚಾವಣಿ ಕುಸಿತಗೊಂಡ ಘಟನೆ ನಡೆದಿದೆ. ಘಟನೆಯಲ್ಲಿ ಮೂವರು ಕಾರ್ಮಿಕರಿಗೆ ಗಾಯ ಆಗಿದ್ದಯ, ಓರ್ವನ ಕೈ ಮುರಿತವಾಗಿದೆ. ಗೇಟ್ ನಂಬರ್ 8 ರಲ್ಲಿ ಪಾರ್ಟಿ ಹಾಲ್​​ನ ಮೇಲ್ಚಾವಣಿ ಕುಸಿತವಾಗಿದೆ. ಸ್ಥಳದಲ್ಲಿ ಕಾರ್ಯಕ್ರಮ ಹಿನ್ನೆಲೆ ಸೆಟ್ ನಿರ್ಮಾಣ ಮಾಡಲಾಗಿತ್ತು. ಆದರೆ, ಕೊವಿಡ್ ಹೆಚ್ಚಳ ಹಿನ್ನೆಲೆ ಇಂದಿನ ಕಾರ್ಯಕ್ರಮ ರದ್ದಾಗಿತ್ತು. ಡೆಕೋರೇಷನ್ ಮಾಡಿದ್ದ ಸೆಟ್ ಬಿಚ್ಚುವ ವೇಳೆ ಅವಘಡ ಸಂಭವಿಸಿದೆ. ಮೇಲ್ಚಾವಣಿ ಕುಸಿತದಿಂದಾಗಿ ತಾತ್ಕಾಲಿಕ ಸೆಟ್ ವಾಲಿದೆ. ಸದಾಶಿವನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ನೆಲಮಂಗಲ: ಬೈಕ್​ಗೆ ಬಸ್ ಡಿಕ್ಕಿ; ಯುವಕ ಸಾವು

ಬೈಕ್​ಗೆ ಕೆಎಸ್​ಆರ್​ಟಿಸಿ ಬಸ್ ಡಿಕ್ಕಿ ಆಗಿ ಬೈಕ್ ಹಿಂಬದಿಯಲ್ಲಿ ಕುಳಿತಿದ್ದ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ನೆಲಮಂಗಲ ಸಮೀಪ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ 4 ಅರಿಶಿನಕುಂಟೆ ಗ್ರಾಮದ ಬಳಿ ಘಟನೆ ನಡೆದಿದೆ. ಹಿಂಬದಿಯಲ್ಲಿ ಕುಳಿತಿದ್ದ ಜಗದೀಶ್ (23) ಎಂಬಾತ ಮೃತ ದುರ್ದೈವಿ. ಬೈಕ್ ಸವಾರ ಆದರ್ಶ್ ಎಂಬವರಿಗೆ ಗಂಭೀರ ಗಾಯವಾಗಿದೆ. ಗಾಯಾಳುವಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತುಮಕೂರು ಡಿಪೋಗೆ ಸೇರಿದ ಕೆಎಸ್​ಆರ್​ಟಿಸಿ ಬಸ್ ಡಿಕ್ಕಿ ಆಗಿದೆ. ಬಸ್ ಸಮೇತ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

TV9 Kannada


Leave a Reply

Your email address will not be published. Required fields are marked *