ತುಳು ಲಿಪಿಯ ಯೂನಿಕೋಡ್​ ನಕಾಶೆಪಟ್ಟಿಗೆ ಮಾನ್ಯತೆ ಕೋರಿ ಸಚಿವರಿಂದ ಕನ್ಸಾರ್ಟಿಯಂಗೆ ಪತ್ರ | Kannada and Culture Minister V Sunilkumar Requests Unicode Consortium to consider Tulu Language Script


ತುಳು ಲಿಪಿಯ ಯೂನಿಕೋಡ್​ ನಕಾಶೆಪಟ್ಟಿಗೆ ಮಾನ್ಯತೆ ಕೋರಿ ಸಚಿವರಿಂದ ಕನ್ಸಾರ್ಟಿಯಂಗೆ ಪತ್ರ

ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ವಿ.ಸುನಿಲ್ ಕುಮಾರ್

ತುಳು ಅಕಾಡೆಮಿಯು ಸಲ್ಲಿಸಿರುವ ತುಳು ಲಿಪಿಯ ಯುನಿಕೋಡ್‌ ನಕಾಶೆಪಟ್ಟಿಗೆ ಶೀಘ್ರ ಅನುಮೋದನೆ ನೀಡಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಖಾತೆ ಸಚಿವ ವಿ.ಸುನಿಲ್‌ಕುಮಾರ್‌ ಅವರು ಯುನಿಕೋಡ್‌ ಕನ್ಸಾರ್ಟಿಯಂಗೆ ಸವಿವರ ಪತ್ರ ಬರೆದಿದ್ದಾರೆ.

ಬೆಂಗಳೂರು: ತುಳು ಅಕಾಡೆಮಿಯು ಸಲ್ಲಿಸಿರುವ ತುಳು ಲಿಪಿಯ ಯುನಿಕೋಡ್‌ ನಕಾಶೆಪಟ್ಟಿಗೆ ಶೀಘ್ರ ಅನುಮೋದನೆ ನೀಡಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಖಾತೆ ಸಚಿವ ವಿ.ಸುನಿಲ್‌ಕುಮಾರ್‌ ಅವರು ಯುನಿಕೋಡ್‌ ಕನ್ಸಾರ್ಟಿಯಂಗೆ ಸವಿವರ ಪತ್ರ ಬರೆದಿದ್ದಾರೆ. ಈ ನಕಾಶೆಪಟ್ಟಿಗೆ ಈಗಾಗಲೇ  ಕರ್ನಾಟಕ ಸರ್ಕಾರವು ಅನುಮೋದನೆ ನೀಡಿದೆ. ತುಳು ಅಕಾಡೆಮಿಯು ವಿವಿಧ ಹಂತಗಳಲ್ಲಿ ತುಳು ಭಾಷೆ ಮತ್ತು ಸಂಸ್ಕೃತಿಯ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ತುಳು ಲಿಪಿಯನ್ನು ಯೂನಿಕೋಡ್ ಶಿಷ್ಟತೆ ಅಳವಡಿಸಲು ಅಕಾಡೆಮಿ ತೆಗೆದುಕೊಂಡಿರುವ ಕ್ರಮಗಳನ್ನು ಸ್ವತಃ ಪರಿಶೀಲಿಸಿದ್ದೇನೆ. ತುಳು ಅಕಾಡೆಮಿ ಸಲ್ಲಿಸಿರುವ ತುಳು ಲಿಪಿಯ ಯೂನಿಕೋಡ್ ನಕಾಶೆ ಪಟ್ಟಿಯನ್ನು ಅನುಮೋದನೆಗೆ ಪರಿಗಣಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ಅನುಮೋದನೆ ನೀಡುವ ಪ್ರಕ್ರಿಯೆಯನ್ನು ಚುರುಕುಗೊಳಿಸಬೇಕು ಎಂದು ಸಚಿವ ಸುನಿಲ್ ಕುಮಾರ್ ವಿನಂತಿಸಿದ್ದಾರೆ.

ನನಗೂ ಮೊದಲು ಸಂಸ್ಕೃತಿ ಇಲಾಖೆ ಸಚಿವರಾಗಿದ್ದವರು ಜುಲೈ 17, 2021ರಂದು ತೆಗೆದುಕೊಂಡಿದ್ದ ನಿರ್ಧಾರವನ್ನು ಉಲ್ಲೇಖಿಸಲು ಇಚ್ಛಿಸುತ್ತೇನೆ. ಯುನಿಕೋಡ್ ಕನ್ಸಾರ್ಟಿಯಂ ಅನುಮೋದನೆ ಪಡೆದುಕೊಳ್ಳುವುದೂ ಸೇರಿದಂತೆ ತುಳು ಲಿಪಿಯನ್ನು ಯುನಿಕೋಡ್ ಶಿಷ್ಟತೆಗೆ ಅಳವಡಿಸುವ ಕುರಿತು ಎಲ್ಲ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಅಂದು ಸೂಚಿಸಲಾಗಿತ್ತು. ಅದರಂತೆ ತುಳು ಅಕಾಡೆಮಿಯು ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ. ಕರ್ನಾಟಕದಲ್ಲಿ ಬಹುದೊಡ್ಡ ಪ್ರದೇಶದಲ್ಲಿ ತುಳು ಭಾಷೆ ಜೀವಂತವಾಗಿದೆ. ತುಳು ಲಿಪಿಗೆ ಯುನಿಕೋಡ್ ಮಾನ್ಯತೆ ಪಡೆದುಕೊಳ್ಳುವುದು ನನ್ನ ಕರ್ತವ್ಯವಾಗಿದೆ. ಮಾತೃಭಾಷೆಯಲ್ಲಿ ಶಿಕ್ಷಣ ಕೊಡಲು ಆದ್ಯತೆ ನೀಡಬೇಕೆಂದು ಹೊಸ ಶಿಕ್ಷಣ ನೀತಿಯೂ ಸೂಚಿಸುತ್ತದೆ ಎಂದು ಸಚಿವರು ಗಮನ ಸೆಳೆದಿದ್ದಾರೆ.

ಕರ್ನಾಟಕದ ಸಂಸ್ಕೃತಿ ಇಲಾಖೆ ಸಚಿವನಾಗಿ ತುಳುವಿನಂತೆ ಇತರ ನಾಲ್ಕು ಭಾಷೆಗಳನ್ನೂ ಅಕಾಡೆಮಿಗಳ ಮೂಲಕ ಅಭಿವೃದ್ಧಿಪಡಿಸಲು ಶ್ರಮಿಸುತ್ತಿದ್ದೇನೆ. ತುಳು ಭಾಷೆಯ ರೀತಿಯಲ್ಲಿಯೇ ಭಾರತ ವಿವಿಧೆಡೆ ಸಾಕಷ್ಟು ಭಾಷೆಗಳಿವೆ. ಹಲವು ಭಾಷೆಗಳಿಗೆ ಶಿಷ್ಟತೆಯ ಮಾನದಂಡ ನೋಡಿ, ಅನುಮೋದನೆ ನೀಡಿರುವ ಕನ್ಸಾರ್ಟಿಯಂ ಕಾರ್ಯವನ್ನು ನಾನು ಶ್ಲಾಘಿಸುತ್ತೇನೆ. ಅದರೆ ತುಳು ಭಾಷೆಗೆ ಮಾನ್ಯತೆ ಸಿಗುವುದು ತಡವಾಗುತ್ತಿರುವುದನ್ನು ನಿಮ್ಮ ಗಮನಕ್ಕೆ ತರಲು ಇಚ್ಚಶಿಸುತ್ತೇನೆ. ತುಳು ಲಿಪಿ ಈ ಕ್ಷಣದ ಅಗತ್ಯವಾಗಿದೆ. ತುಳು ಭಾಷಿಕ ಜನರು 50 ಲಕ್ಷಕ್ಕೂ ಹೆಚ್ಚು ಮಂದಿಯಿದ್ದಾರೆ. ಈ ನಿಟ್ಟಿನಲ್ಲಿ ನನ್ನ ವಿನಂತಿ ಪರಿಗಣಿಸಿ, ಅಗತ್ಯ ಕ್ರಮ ಜರುಗಿಸಬೇಕು ಎಂದು ಕೋರುತ್ತೇನೆ ಎಂದು ಸಚಿವ ವಿ.ಸುನಿಲ್ ಕುಮಾರ್ ವಿನಂತಿಸಿದ್ದಾರೆ.

Minister-Letter

ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ವಿ.ಸುನಿಲ್ ಕುಮಾರ್ ಬರೆದಿರುವ ಪತ್ರ

TV9 Kannada


Leave a Reply

Your email address will not be published. Required fields are marked *