ತೆಲಂಗಾಣ ಜನರಿಗೆ ಕುಟುಂಬ ರಾಜಕಾರಣ ಬೇಕಿಲ್ಲ; ಕೆಸಿಆರ್ ಸರ್ಕಾರದ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ – PM Narendra Modi Telangana attacks KCR govt and dynastic politics said wants people first politics, not family first National Political news in Kannada


ತೆಲಂಗಾಣ ಮುಖ್ಯಮಂತ್ರಿ ಕೆ.ಸಿ. ಚಂದ್ರಶೇಖರ್ ರಾವ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ನೀವು ನನ್ನನ್ನು ನಿಂದಿಸಿ. ಬಿಜೆಪಿಯನ್ನು ಟೀಕಿಸಿ. ಆದರೆ, ತೆಲಂಗಾಣದ ಜನರನ್ನು ನಿಂದಿಸಿದರೆ ಅದಕ್ಕೆ ದೊಡ್ಡ ಬೆಲೆ ತೆರಬೇಕಾಗಲಿದೆ ಎಂದು ಎಚ್ಚರಿಕೆ ನೀಡಿದರು.

ತೆಲಂಗಾಣ ಜನರಿಗೆ ಕುಟುಂಬ ರಾಜಕಾರಣ ಬೇಕಿಲ್ಲ; ಕೆಸಿಆರ್ ಸರ್ಕಾರದ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

ಪ್ರಧಾನಿ ನರೇಂದ್ರ ಮೋದಿ

Image Credit source: ANI

ಬೇಗಂಪೇಟೆ: ತೆಲಂಗಾಣ ಜನ (Telangana) ಜನರನ್ನು ಆದ್ಯತೆಯಾಗಿಸಿಕೊಂಡ ರಾಜಕಾರಣವನ್ನು ಬಯಸುತ್ತಾರೆಯೇ ವಿನಃ ಕುಟುಂಬ ರಾಜಕಾರಣವನ್ನಲ್ಲ (dynastic politics) ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಬೇಗಂಪೇಟೆಯಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು ಭ್ರಷ್ಟಾಚಾರ, ವಂಶಾಡಳಿತ ವಿಚಾರಗಳನ್ನು ಪ್ರಸ್ತಾಪಿಸಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ (K Chandrashekar Rao) ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. ಅವರು ತೆಲಂಗಾಣದ ಹೆಸರು ಹೇಳಿಕೊಂಡು ಅಧಿಕಾರಕ್ಕೇರಿದ್ದಾರೆ. ಆದರೆ, ಅಧಿಕಾರಕ್ಕೆ ಬಂದ ತಕ್ಷಣ ತೆಲಂಗಾಣವನ್ನು ಅಭಿವೃದ್ಧಿಯಲ್ಲಿ ಹಿಂದಕ್ಕೆ ತಳ್ಳಿದ್ದಾರೆ ಎಂದು ಪ್ರಧಾನಿ ಆರೋಪಿಸಿದರು.

ತುಂಬಾ ಕಷ್ಟಪಟ್ಟು ಕೆಲಸ ಮಾಡಿದರೂ ಯಾಕೆ ನಿಮಗೆ ಸುಸ್ತಾಗುವುದಿಲ್ಲ ಎಂದು ಹಲವರು ಕೇಳುತ್ತಾರೆ. ನನಗೆ ಸುಸ್ತಾಗುವುದಿಲ್ಲ. ಯಾಕೆಂದರೆ, ಪ್ರತಿ ದಿನ 2-3 ಕಿಲೋಗಳಷ್ಟು ‘ನಿಂದನೆ’ಗಳನ್ನು ನಾನು ಸೇವಿಸುತ್ತೇನೆ. ಈ ನಿಂದನೆಗಳೇ ನನ್ನೊಳಗೆ ಪೋಷಕಾಂಶಗಳಾಗಿ ಪರಿವರ್ತೆಯಾಗುವಂತೆ ದೇವರು ನನಗೆ ಆಶೀರ್ವದಿಸಿದ್ದಾರೆ ಎಂದು ಟೀಕಾಕಾರರಿಗೆ ಮೋದಿ ತಿರುಗೇಟು ನೀಡಿದರು.

ತೆಲಂಗಾಣದ ಜನರನ್ನು ಟೀಕಿಸಬೇಡಿ

ನೀವು ಮೋದಿಯನ್ನು ನಿಂದಿಸಿ. ಬಿಜೆಪಿಯನ್ನು ಟೀಕಿಸಿ. ಆದರೆ, ತೆಲಂಗಾಣದ ಜನರನ್ನು ನಿಂದಿಸಿದರೆ ಅದಕ್ಕೆ ದೊಡ್ಡ ಬೆಲೆ ತೆರಬೇಕಾಗಲಿದೆ ಎಂದು ಮೋದಿ ಎಚ್ಚರಿಕೆ ನೀಡಿದರು. ಹತಾಶೆ, ಭಯ ಮತ್ತು ಮೂಢನಂಬಿಕೆಗಳಿಂದಾಗಿ ಕೆಲವರು ಮೋದಿಯನ್ನು ನಿಂದಿಸುಸುತ್ತಾರೆ. ತೆಲಂಗಾಣದ ಬಿಜೆಪಿ ಕಾರ್ಯಕರ್ತರಲ್ಲಿ ನಾನು ಕೇಳಿಕೊಳ್ಳುವುದಿಷ್ಟೇ, ಈ ತಂತ್ರಗಳಿಂದ ನೀವು ವಿಚಲಿತರಾಗಬಾರದು ಎಂದು ಮೋದಿ ಹೇಳಿದರು.

ಅಲ್ಲದೆ, ಕೇಂದ್ರದ ಯೋಜನೆಗಳನ್ನು ತೆಲಂಗಾಣದ ಟಿಆರ್​ಎಸ್ ಸರ್ಕಾರ ಜನರಿಗೆ ತಲುಪಿಸುತ್ತಿಲ್ಲ. ಕೇಂದ್ರದ ಯೋಜನೆಗಳ ಬಗ್ಗೆ ಮಾಹಿತಿ ಮುಚ್ಚಿಡಲು ಯತ್ನಿಸುತ್ತಿದೆ ಎಂದು ಪ್ರಧಾನಿ ದೂರಿದರು.

ತೆಲಂಗಾಣದಲ್ಲಿ ಬಿಜೆಪಿ ಅರಳಲಿದೆ; ಮೋದಿ

ಟಿಆರ್​​ಎಸ್​ ಪಕ್ಷದ ನಾಯಕರು ಜನರಿಗೆ ಅನ್ಯಾಯ ಮಾಡಿದ್ದಾರೆ. ಕತ್ತಲು ಹೆಚ್ಚಾದಾಗ ಕಮಲ ಅರಳಲು ಆರಂಭಿಸುತ್ತದೆ. ಬಿಜೆಪಿಯ ಶ್ರಮಜೀವಿ ಕಾರ್ಯಕರ್ತರಿಂದಾಗಿ ಕತ್ತಲು ಕರಗತೊಡಗಿದೆ. ಇತ್ತೀಚಿನ ಚುನಾವಣಾ ಫಲಿತಾಂಶದಿಂದ ಇದು ಸ್ಪಷ್ಟವಾಗಿದೆ. ತೆಲಂಗಾಣದಾದ್ಯಂತ ಬೆಳಕು ಉದಯಿಸಲಿದೆ. ಬೆಳಗಾಗುವ ಮುನ್ನವೇ ಕಮಲ ಅರಳುವುದನ್ನು ನೀವು ಕಾಣಬಹುದು. ಕಮಲ ಅರಳಲಿದೆ ಎಂಬುದನ್ನು ಉಪಚುನಾವಣೆಗಳು ತೋರಿಸಿವೆ ಎಂದು ಮೋದಿ ಭರವಸೆ ವ್ಯಕ್ತಪಡಿಸಿದರು.

ಡಿಜಿಟಲ್ ವಹಿವಾಟಿನಿಂದ ಭ್ರಷ್ಟಾಚಾರಕ್ಕೆ ತಡೆ

ಡಿಜಿಟಲ್ ವಹಿವಾಟು ಹೆಚ್ಚಳಕ್ಕೆ ಸರ್ಕಾರ ಪ್ರೋತ್ಸಾಹ ನೀಡಿರುವುದರಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಬಿದ್ದಿದೆ. ಗಮನಾರ್ಹ ಪ್ರಮಾಣದಲ್ಲಿ ಭ್ರಷ್ಟಾಚಾರ ಕಡಿಮೆಯಾಗಿದೆ. ಆನ್​ಲೈನ್ ಮೂಲಕ ಪಾವತಿ ಮಾಡುವಾಗ ಭ್ರಷ್ಟಾಚಾರದ ಸಾಧ್ಯತೆಗಳು ಕಡಿಮೆಯಾಗುತ್ತವೆ. ಈ ರೀತಿಯ ವಹಿವಾಟು ಸರ್ಕಾರ ಮತ್ತು ಜನರ ನಡುವೆ ನೇರ ಸಂಪರ್ಕವನ್ನು ಸೃಷ್ಟಿಸುತ್ತದೆ ಎಂದು ಮೋದಿ ಹೇಳಿದರು.

TV9 Kannada


Leave a Reply

Your email address will not be published.