ತೈಲೋತ್ಪನ್ನ ಬೆಲೆ ನಿಗದಿ ಕೇಂದ್ರ ಸರ್ಕಾರದ ಅಧೀನದಲ್ಲಿ ಇಲ್ಲ: ಸಚಿವೆ ಶೋಭಾ ಕರಂದ್ಲಾಜೆ | Shobha Karandlaje Louds PM Narendra Modi Decision to Slash Fuel Price


ತೈಲೋತ್ಪನ್ನ ಬೆಲೆ ನಿಗದಿ ಕೇಂದ್ರ ಸರ್ಕಾರದ ಅಧೀನದಲ್ಲಿ ಇಲ್ಲ: ಸಚಿವೆ ಶೋಭಾ ಕರಂದ್ಲಾಜೆ

ಶೋಭಾ ಕರಂದ್ಲಾಜೆ (ಸಂಗ್ರಹ ಚಿತ್ರ)

ಉಡುಪಿ: ಭಾರತದಲ್ಲಿ ಪೆಟ್ರೋಲಿಯಂ ಉತ್ಪನ್ನಗಳು ಉತ್ಪಾದನೆಯಾಗುವುದಿಲ್ಲ. ಹೀಗಾಗಿ ಈ ಉತ್ಪನ್ನಗಳ ಬೆಲೆ ನಿಗದಿ ಕೇಂದ್ರ ಸರ್ಕಾರದ ಅಧೀನದಲ್ಲಿ ಇಲ್ಲ. ಆದರೂ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಜನರ ಹಿತವನ್ನು ಗಮನದಲ್ಲಿರಿಸಿಕೊಂಡು ದೀಪಾವಳಿ ವೇಳೆ ಹೊಸ ಘೋಷಣೆ ಮಾಡಿದ್ದಾರೆ. ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ಕಡಿಮೆ ಮಾಡುವ ಮೂಲಕ ಜನರಿಗೆ ಒಳ್ಳೆಯ ಕೊಡುಗೆ ನೀಡಿದ್ದಾರೆ ಎಂದು ಕೇಂದ್ರ ಕೃಷಿ ಇಲಾಖೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಇಂಧನ ದರದ ವಿಚಾರದಲ್ಲಿ ಈಗ ಇರುವ ದರಗಳನ್ನೇ ಕಾಯ್ದುಕೊಳ್ಳಬೇಕು ಎಂಬ ಅಪೇಕ್ಷೆ ಸರ್ಕಾರಕ್ಕೆ ಇದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರುಪೇರಾದಾಗ ದರ ವ್ಯತ್ಯಾಸ ಆಗುತ್ತದೆ. ಕಳೆದ ಹಲವಾರು ವರ್ಷಗಳಿಂದ ಈ ರೀತಿಯಾಗುತ್ತಿದೆ. ಕೇವಲ ನಮ್ಮ ಸರ್ಕಾರ ಮಾತ್ರವಲ್ಲ ಹಿಂದಿನ ಸರ್ಕಾರಗಳ ಅವಧಿಯಲ್ಲೂ ಹೀಗೆಯೇ ಆಗಿತ್ತು. ಇದೀಗ ದರ ಕಡಿಮೆಯಾಗಿದೆ ಅದು ಹಾಗೆಯೇ ಉಳಿಯಬೇಕು. ಇಂಧನ ದರ ಆಧರಿಸಿ ಇತರ ಪದಾರ್ಥಗಳ ಬೆಲೆ ಏರಿಕೆಯಾಗುತ್ತದೆ ಎಂದು ಅವರು ಹೇಳಿದರು.

ಉಪಚುನಾವಣೆ ಫಲಿತಾಂಶ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಚುನಾವಣೆಯ ಫಲಿತಾಂಶ ಈಗ ವಿಶ್ಲೇಷಣೆ ಮಾಡಲು ಸಾಧ್ಯವಿಲ್ಲ. ಎರಡೂ ಪಕ್ಷಗಳು ತಲಾ ಒಂದು ಸ್ಥಾನ ಗೆದ್ದಿವೆ. ಪ್ರಜಾತಂತ್ರದಲ್ಲಿ ಜನರ ತೀರ್ಪನ್ನು ನಾವು ಸ್ವಾಗತಿಸಬೇಕು. ಹೋಲಿಕೆ ಮಾಡಲು ಹೋದರೆ ಸಿಂದಗಿಯಲ್ಲಿ ನಾವು ದೊಡ್ಡ ಅಂತರದಲ್ಲಿ ಗೆದ್ದಿದ್ದೇವೆ. ಉಪಚುನಾವಣೆಯಲ್ಲಿ ಇಷ್ಟು ದೊಡ್ಡ ಪ್ರಮಾಣದ ಅಂತರ ಸುಲಭದ ವಿಚಾರವಲ್ಲ. ಓರ್ವ ಸಾಮಾನ್ಯ ಅಭ್ಯರ್ಥಿಯನ್ನು ಇಟ್ಟುಕೊಂಡು ಗೆದ್ದಿದ್ದೇವೆ. ಸಿಂದಗಿಯಲ್ಲಿ ಹೈ-ಫೈ ಅಭ್ಯರ್ಥಿ ಕಣದಲ್ಲಿ ಇರಲಿಲ್ಲ. ಈ ಫಲಿತಾಂಶ ನೋಡಿ ಒಬ್ಬ ವ್ಯಕ್ತಿ ಅಥವಾ ಸರ್ಕಾರದ ಬಗ್ಗೆ ನಿರ್ಧಾರ ಮಾಡುವುದು ಸರಿಯಲ್ಲ ಎಂದು ನುಡಿದರು.

ಭತ್ತದ ಬೆಳೆಗಾರರಿಗೆ ಬೆಂಬಲ ಬೆಲೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಕರಾವಳಿ ಜಿಲ್ಲೆಗಳ ರೈತ ಮುಖಂಡರು ನನ್ನನ್ನು ಭೇಟಿಯಾಗಿದ್ದರು. ಭತ್ತಕ್ಕೆ ಕೇಂದ್ರ ಸರ್ಕಾರ ₹ 1940 ಬೆಂಬಲ ಬೆಲೆ ಘೋಷಣೆ ಮಾಡಿದೆ. ತಕ್ಷಣ ಖರೀದಿ ಕೇಂದ್ರ ಆರಂಭಿಸಲು ಕರ್ನಾಟಕ ಸರಕಾರಕ್ಕೆ ಸೂಚಿಸಿದ್ದೇವೆ. ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಭತ್ತದ ಕೊಯ್ಲು, ಮಾರಾಟ ಮುಗಿಯುತ್ತದೆ. ಖರೀದಿ ಕೇಂದ್ರ ಆರಂಭಿಸಲು ಇದು ಸಕಾಲ. ಈ ಕುರಿತು ತಕ್ಷಣವೇ ಸಚಿವ ಸಂಪುಟದಲ್ಲಿ ನಿರ್ಧಾರ ತೆಗೆದುಕೊಳ್ಳಬೇಕಿದೆ. ಈ ಕುರಿತು ಅಗತ್ಯ ತೀರ್ಮಾನ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಮತ್ತು ಕೃಷಿ ಸಚಿವರು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಕರಾವಳಿಯ ಭತ್ತದ ಬೆಳೆಗಾರರ ಸಮಸ್ಯೆ ಬೇರೆಯೇ ಇದೆ. ಉಡುಪಿ ಜಿಲ್ಲೆಯಲ್ಲಿ ಕುಚ್ಚಿಗೆ ಅಕ್ಕಿಗಾಗಿ ಸಿಒ‌-4 ತಳಿಯ ಭತ್ತ ಬೆಳೆಯುತ್ತಾರೆ. ಈ ಅಕ್ಕಿಯನ್ನೇ ಪಡಿತರದಲ್ಲಿ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಈ ಬಗ್ಗೆ ಆಹಾರ ಆಯುಕ್ತರ ಜೊತೆ ಮಾತನಾಡಿದ್ದೇನೆ. ಕೇಂದ್ರ ಸರ್ಕಾರ ಈ ತಳಿಗೆ ಅವಕಾಶ ಕೊಟ್ಟಿಲ್ಲ ಎಂದಿದ್ದಾರೆ. ಹೊಸದಾಗಿ ಸರ್ವೆ ಮಾಡುವ ಅಗತ್ಯ ಇದೆ. ಈ ಬಗ್ಗೆ ವರದಿ ತರಿಸಿಕೊಂಡು ಕ್ರಮ ತೆಗೆದುಕೊಳ್ಳುತ್ತೇವೆ. ಸಿಒ4 ತಳಿಯ ಭತ್ತ ಖರೀದಿ ಮಾಡಲು ಸೂಕ್ತಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಸುಂಕ ಕಡಿತ ಸಾಮಾನ್ಯ ವಿಚಾರವಲ್ಲ: ಸುಧಾಕರ
ಚಿಕ್ಕಬಳ್ಳಾಪುರ: ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಕೇಂದ್ರ ಹಾಗೂ ರಾಜ್ಯದ ಸುಂಕ ಕಡಿತದ ನಿರ್ಧಾರ ಮಹತ್ವದ್ದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ ಅಭಿಪ್ರಾಯಪಟ್ಟರು. ಜನರಿಗೆ ದೀಪಾವಳಿ ಗೀಪ್ಟ್ ನೀಡಿದ ಪ್ರಧಾನಿ ಹಾಗೂ ಮುಖ್ಯಮಂತ್ರಿಯನ್ನು ಅಭಿನಂದಿಸುತ್ತೇನೆ ಎಂದ ಅವರು, ಆರ್ಥಿಕ ದುಸ್ಥಿತಿಯ ಸಂದರ್ಭದಲ್ಲಿ ಸುಂಕ ಕಡಿತದ ನಿರ್ಧಾರ ಸುಲಭವಲ್ಲ. ಮುಂದಿನ ದಿನಗಳಲ್ಲಿ ಅಗತ್ಯ ವಸ್ತುಗಳ ದರವೂ ಕಡಿಮೆಯಾಗಲಿದೆ ಎಂದರು.

ಪ್ರತಿ ಲೀಟರ್ ಡೀಸೆಲ್ ಬೆಲೆಯು ₹ 17 ಕಡಿತವಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದುಬಾರಿಯಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುವ ಅಪಾಯವಿದ್ದರೂ ಸರ್ಕಾರ ದೃಢ ನಿರ್ಧಾರ ತೆಗೆದುಕೊಂಡಿದೆ ಎಂದು ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಗ್ರಾಮದಲ್ಲಿ ನುಡಿದರು.

ಇದನ್ನೂ ಓದಿ: ವಾಜಪೇಯಿಯವರೂ ಎತ್ತಿನಗಾಡಿಯಲ್ಲಿ ಸಂಸತ್​ಗೆ ಬಂದಿದ್ದರು, ಶೋಭಾ ಕರಂದ್ಲಾಜೆ ಈಗೆಲ್ಲಿದ್ದಾರೆ? ಸಿದ್ದರಾಮಯ್ಯ ಸವಾಲ್
ಇದನ್ನೂ ಓದಿ: ಎಣ್ಣೆ ತಯಾರಿಸುವಲ್ಲಿ ಸ್ವಾವಲಂಬಿ ಆಗಬೇಕು; ಸಿರಿಧಾನ್ಯ ಬೆಳೆಯುವ ಕೆಲಸ ಮಾಡಬೇಕು: ಶೋಭಾ ಕರಂದ್ಲಾಜೆ

TV9 Kannada


Leave a Reply

Your email address will not be published. Required fields are marked *