ತೈವಾನ್​ ಮೇಲೆ ಚೀನಾದ 30 ಯುದ್ಧ ವಿಮಾನಗಳ ಹಾರಾಟ, ಮತ್ತೊಂದು ಸಂಘರ್ಷದ ಭೀತಿಯಲ್ಲಿ ಜಗತ್ತು | China Taiwan Tension Chinese Air force Planes Enters Taiwan Defence Zone With 30 Jets


ತೈವಾನ್​ ಮೇಲೆ ಚೀನಾದ 30 ಯುದ್ಧ ವಿಮಾನಗಳ ಹಾರಾಟ, ಮತ್ತೊಂದು ಸಂಘರ್ಷದ ಭೀತಿಯಲ್ಲಿ ಜಗತ್ತು

ತೈವಾನ್ ಮೇಲೆ ಚೀನಾ ಯುದ್ಧ ವಿಮಾನಗಳು ಹಲವು ಬಾರಿ ದಾಳಿ ನಡೆಸಿವೆ.

ತೈವಾನ್ ವಿರುದ್ಧ ಚೀನಾ ಸೈನಿಕ ಕಾರ್ಯಾಚರಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂಬ ಮಾತುಗಳು ಕೇಳಿ ಬಂದಿವೆ.

ತೈಪೆ: ತೈವಾನ್​ನ ವಾಯುಗಡಿಯಲ್ಲಿ ಚೀನಾದ 30ಕ್ಕೂ ಹೆಚ್ಚು ಯುದ್ಧ ವಿಮಾನಗಳು ಹಾರಾಟ ನಡೆಸಿದ್ದು, ಸೈನಿಕ ಕಾರ್ಯಾಚರಣೆಗೆ ಚೀನಾ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂಬ ಮಾತುಗಳು ಕೇಳಿ ಬಂದಿವೆ. ಚೀನಾದ ಆಕ್ರಮಣಕಾರಿ ಪ್ರವೃತ್ತಿಯನ್ನು ಗಂಭೀರವಾಗಿ ಪರಿಗಣಿಸಿರುವ ತೈವಾನ್, ಚೀನಾ ಗಡಿಯಲ್ಲಿ ವಾಯುರಕ್ಷಣಾ ವ್ಯವಸ್ಥೆ ಮತ್ತು ಕ್ಷಿಪಣಿಗಳನ್ನು ನಿಯೋಜಿಸಿದೆ (Air Defence Missile Systems). ರಾಡಾರ್​​ಗಳ ಮೂಲಕ ನಿಗಾವಣೆಯನ್ನೂ ಚುರುಕುಗೊಳಿಸಿದೆ. ಇತ್ತೀಚಿನ ದಿನಗಳಲ್ಲಿ ತೈವಾನ್​ನ ವಾಯುಗಡಿಯನ್ನು ಹಲವು ಬಾರಿ ಚೀನಾದ ಯುದ್ಧ ವಿಮಾನಗಳು ಉಲ್ಲಂಘಿಸಿ. ತೈವಾನ್​ನ ವಿದೇಶಾಂಗ ನೀತಿಯನ್ನು ಬಹಿರಂಗವಾಗಿಯೇ ವಿರೋಧಿಸುತ್ತಿರುವ ಚೀನಾ, ತೈವಾನ್​ನ ರಕ್ಷಣಾ ವ್ಯವಸ್ಥೆಯ ದೌರ್ಬಲ್ಯಗಳನ್ನು ಪರಿಶೀಲಿಸುತ್ತಿದೆ.

ಪ್ರಜಾಪ್ರಭುತ್ವ ದೇಶವಾಗಿರುವ ತೈವಾನ್​ ಸದಾ ಚೀನಾ ದಾಳಿಯ ಭೀತಿಯಲ್ಲಿಯೇ ಬದುಕುತ್ತಿದೆ. ತೈವಾನ್​ ಅನ್ನು ಚೀನಾ ತನ್ನ ಅಂಗ ಎಂದೇ ಭಾವಿಸಿದ್ದು, ಒಂದಲ್ಲಾ ಒಂದು ದಿನ ಬಲಪ್ರಯೋಗದಿಂದಲಾದರೂ ಸರಿ ಅದನ್ನು ವಶಪಡಿಸಿಕೊಳ್ಳುವುದಾಗಿ ಘೋಷಿಸಿದೆ.

ತೈವಾನ್ ವಿಚಾರದಲ್ಲಿ ಚೀನಾ ತೋರುತ್ತಿರುವ ಆಕ್ರಮಣಕಾರಿ ನೀತಿಯನ್ನು ಅಮೆರಿಕ ಇತ್ತೀಚೆಗೆ ಕಟುವಾಗಿ ಟೀಕಿಸಿತ್ತು. ಅಮೆರಿಕದ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಆಂಟೊನಿ ಬ್ಲಿಂಕೆನ್ ತೈವಾನ್ ಮೇಲೆ ಚೀನಾ ಯುದ್ಧ ವಿಮಾನಗಳ ಹಾರಾಟವನ್ನು ಪ್ರಸ್ತಾಪಿಸಿ, ಇದೊಂದು ಪ್ರಚೋದನಾಕಾರಿ ಚಟುವಟಿಕೆ ಎಂದು ಎಚ್ಚರಿಸಿದ್ದರು.

ಉಕ್ರೇನ್ ಮೇಲೆ ರಷ್ಯಾ ದಾಳಿಯ ನಂತರ ತೈವಾನ್ ವಿಚಾರದಲ್ಲಿ ಚೀನಾ ಕಠಿಣ ಧೋರಣೆ ತಳೆಯಿತು. ಉಕ್ರೇನ್ ಅನ್ನು ಹದ್ದುಬಸ್ತಿನಲ್ಲಿಡಲು ರಷ್ಯಾ ತೆಗೆದುಕೊಳ್ಳುತ್ತಿರುವ ಕ್ರಮಗಳ ಮಾದರಿಯಲ್ಲಿಯೇ ತೈವಾನ್ ವಿಚಾರದಲ್ಲಿ ವರ್ತಿಸಲು ಚೀನಾ ಮುಂದಾಯಿತು. ತೈವಾನ್​ನ ಸುತ್ತಮುತ್ತಲೂ ಮಿಲಿಟರಿ ಚಟುವಟಿಕೆ ಹೆಚ್ಚಿಸಿತು. ತೈವಾನ್​ನ ಭೂ ಪ್ರದೇಶದ ಮಾದರಿಯನ್ನೇ ಮರುಸೃಷ್ಟಿಸಿ ಹಲವು ಬಾರಿ ಚೀನಾ ಸೇನೆಯು ಅಣಕು ದಾಳಿಯ ಕಾರ್ಯಾಚರಣೆ ನಡೆಸಿದೆ. ತೈವಾನ್ ವಿಚಾರದಲ್ಲಿ ಚೀನಾ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಅಮೆರಿಕ ಅಗತ್ಯ ಬಿದ್ದರೆ ಮಧ್ಯಪ್ರವೇಶಿಸುವುದಾಗಿ ಎಚ್ಚರಿಸಿದೆ.

ಕಳೆದ ಜನವರಿ 23ರಂದು ಚೀನಾದ 23 ಯುದ್ಧವಿಮಾನಗಳು ತೈವಾನ್ ವಾಯುಗಡಿ ಉಲ್ಲಂಘಿಸಿದ್ದವು. ಕಳೆದ ವರ್ಷ, 2021ರಲ್ಲಿ ಒಟ್ಟು 969 ಬಾರಿ ತೈವಾನ್ ವಾಯುಗಡಿಯಲ್ಲಿ ಚೀನಾದ ಯುದ್ಧವಿಮಾನಗಳು ಹಾರಾಟ ನಡೆಸಿದ್ದವು. 2020ರಲ್ಲಿ 380 ಬಾರಿ ಚೀನಾದ ಯುದ್ಧವಿಮಾನಗಳು ತೈವಾನ್​ ವಾಯುಗಡಿ ಉಲ್ಲಂಘಿಸಿದ್ದವು. 2022ರಲ್ಲಿ ಈವರೆಗೆ ತೈವಾನ್​ ಮೇಲೆ 465 ಬಾರಿ ಚೀನಾದ ಯುದ್ಧ ವಿಮಾನಗಳು ಹಾರಾಡಿವೆ.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

TV9 Kannada


Leave a Reply

Your email address will not be published. Required fields are marked *