ತೋಳಗಳ ವಿರುದ್ಧ ಸಮರ ಸಾರಿದ 3 ರಾಷ್ಟ್ರಗಳು.. ರಣಬೇಟೆಗಾರನ ಸಾಯಿಸುತ್ತಿರೋದೇಕೆ..?


ಪ್ರಪಂಚದಲ್ಲಿ ಹಲವು ವನ್ಯಮೃಗಗಳ ಸಂತತಿ ಅವನತಿಯತ್ತ ಸಾಗುತ್ತಿದೆ. ಈ ಮಧ್ಯೆ ಕಾಡು ಪ್ರಾಣಿಗಳನ್ನ ಉಳಿಸಿ ಎಂಬ ಕೂಗುಗಳು ಸರ್ಕಾರಗಳಿಂದಲೇ ಕೇಳಿ ಬರ್ತಿವೆ. ಆದ್ರೆ, ಸಮಯ ಬಂದಾಗ ಅದೇ ಸರ್ಕಾರಗಳಿಂದ ವನ್ಯಜೀವಿಗಳ ಮಾರಣಹೋಮವಾಗಿಬಿಡುತ್ವೆ. ಅಂತದ್ದೇ ಒಂದು ಅಮಾನುಷ ಘಟನೆ ಈಗ ಯೂರೋಪ್​ ರಾಷ್ಟ್ರಗಳಲ್ಲಿ ಕಳೆದ ಕೆಲ ತಿಂಗಳುಗಳಿಂದ ಚಾಲ್ತಿಯಲ್ಲಿದೆ. ಅದೇನ್​ ಗೊತ್ತಾ? ಬೇಟೆಯಲ್ಲಿ ಪಕ್ಕಾ ಚತುರ ಎನಿಸಿಕೊಂಡಿರೋ ತೋಳಗಳ ಹತ್ಯೆ! ಯೆಸ್​.. ಯೂರೋಪಿನಲ್ಲಿ ತೋಳಗಳದ್ದೇ ಬೇಟೆಯಾಗುತ್ತಿದೆ.

ಒಂಟೆಗಳ ಮಾರಣಹೋಮ ನಡೆಸಿದ್ದ ಆಸೀಸ್ ಸರ್ಕಾರ
ನಿಮ್ಗೆಲ್ಲಾ ಕಳೆದ ವರ್ಷದ ಒಂದು ವರ್ಷದ ಸುದ್ದಿ ನೆನಪಿರಬಹುದು.. ಒಂದು ಕಡೆ ಭೀಕರ ಕಾಡ್ಗಿಚ್ಚು, ಮತ್ತೊಂದು ಕಡೆ ಬರ.. ಇಂತಹದ್ದೇ ವಿಷಯ ಪರಿಸ್ಥಿತಿಯ ವೇಳೆ ಆಸ್ಟ್ರೇಲಿಯಾ ಸರ್ಕಾರ ಯಾರೂ ಕಲ್ಪನೆಯನ್ನೂ ಮಾಡಿಕೊಳ್ಳಲಾಗದಂತಹ ಕೆಲಸಕ್ಕೆ ಕೈ ಹಾಕಿ ಮುಗಿಸಿತ್ತು.. ಅದೇನ್ ಗೊತ್ತಾ? ಒಂಟೆಗಳ ಮಾರಣಹೋಮ.

ಒಂಟೆಗಳು ಕುಡಿದು ಕುಡಿದು ಇರುವ ನೀರನ್ನೆಲ್ಲಾ ಖಾಲಿ ಮಾಡ್ತಿವೆ. ಇದ್ರಿಂದ ದಕ್ಷಿಣ ಆಸ್ಟ್ರೇಲಿಯಾದಲ್ಲಿರೋ ಬುಡಕಟ್ಟುವಾಸಿಗಳಿಗೆ ನೀರಿನ ಬರ ಎದುರಾಗಿದೆ ಎನ್ನೋ ದೂರು ಕೇಳಿಬಂದಿದ್ದವು. ಯಾವಾಗ ಈ ದೂರುಗಳನ್ನ ಸರ್ಕಾರ ಪರಿಶೀಲನೆ ಮಾಡ್ತೋ, ಹಿಂದೆ ಮುಂದೆ ನೋಡದೇ ಅಲ್ಲಿನ ಸರ್ಕಾರ 10 ಸಾವಿರ ಒಂಟೆಗಳನ್ನ ಕೊಂದು ಹಾಕಲು ಆದೇಶ ಕೊಟ್ಟಿತ್ತು.

ಆಸ್ಟ್ರೇಲಿಯಾ ಸರ್ಕಾರದ ಆದೇಶದಂತೆ ಶಾರ್ಪ್​ ಶೂಟರ್​​ಗಳು ಒಂಟೆಗಳ ಮಾರಣಹೋಮ ನಡೆಸಿದ್ದರು. ಹೆಲಿಕಾಪ್ಟರ್​ ಮೂಲಕ ಕಾರ್ಯಾಚರಣೆ ನಡೆಸಿ ಕಂಡ ಕಂಡಲ್ಲಿ ಒಂಟೆಗಳನ್ನು ಕೊಂದು ಹಾಕಿದ್ದರು. ಜಸ್ಟ್​ ಐದೇ ದಿನದಲ್ಲಿ ಬರೋಬ್ಬರಿ 5 ಸಾವಿರ ಒಂಟೆಗಳನ್ನು ಮುಗಿಸಿದ್ದ ಸುದ್ದಿ ಇಡೀ ಜಗತ್ತಿನಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಆಸ್ಟ್ರೇಲಿಯಾ ಸರ್ಕಾರದ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಪ್ರಾಣಿಪ್ರಿಯರು ಬೀದಿಗಿಳಿದಿದ್ದರು.. ಈ ಸುದ್ದಿ ಇನ್ನೂ ನಮ್ಮ ಕಣ್ಣ ಅಚ್ಚ ಹಸಿರಾರೋವಾಗಲೇ, ಒಂಟೆಯಂತೆಯೇ ಮತ್ತೊಂದು ವನ್ಯಮೃಗದ ನಿರ್ನಾಮಕ್ಕೆ ಯುರೋಪಿನ 3 ರಾಷ್ಟ್ರಗಳ ಕೈಜೋಡಿಸಿವೆ.

ನಾರ್ಡಿಕ್ ರಾಷ್ಟ್ರಗಳಿಂದ ತೋಳಗಳ ಮಾರಣಹೋಮ
ಹೌದು.. ಯೂರೋಪಿನ ಮೂರು ರಾಷ್ಟ್ರಗಳು ವನ್ಯಮೃಗದ ತೋಳಗಳ ಮಾರಣಹೋಮವನ್ನೇ ನಡೆಸುತ್ತಿವೆ. ಸ್ವೀಡನ್, ನಾರ್​ವೇ, ಫಿನ್​​ಲ್ಯಾಂಡ್​ ಮೂರೂ ದೇಶಗಳು ಇಷ್ಟು ನಿಗದಿತ ಪ್ರಮಾಣದ ತೋಳಗಳನ್ನ ಸಾಯಿಸಲೇಬೇಕು ಅಂತಾ ಟಾರ್ಗೆಟ್ ಇಟ್ಟುಕೊಂಡು ಅದರಂತೆ ಜೀವಿಯ ಹತ್ಯೆ ಮಾಡ್ತಿವೆ. ಅಂದಹಾಗೇ ಈ ಮೂರೂ ರಾಷ್ಟ್ರಗಳಲ್ಲಿ ತೋಳಗಳ ಸಂಖ್ಯೆ ಜಾಸ್ತಿಯಾಗಿದ್ಯಂತೆ. ಹಾಗಾಗಿ ತೋಳಗಳನ್ನ ಕೊಲ್ಲೋದಕ್ಕೆ ಅಂತಲೇ, ಬೇಟೆಗಾರರನ್ನ ನಿಯೋಜಿಸಿರುವ ಸರ್ಕಾರಗಳು ಅವುಗಳ ಹತ್ಯೆಗೆ ಸುಪಾರಿ ಕೊಟ್ಟಿವೆ. ಅದರಂತೆ, ಈಗಾಗಲೇ ಸಾಕಷ್ಟು ತೋಳಗಳನ್ನ ಹತ್ಯೆ ಮಾಡಲಾಗಿದೆ.

ಕಳೆದ ಕೆಲ ತಿಂಗಳುಗಳಿಂದ ಐರೋಪ್ಯ ರಾಷ್ಟ್ರಗಳಲ್ಲಿ ತೋಳಗಳ ಬೇಟೆ ನಡೆಯುತ್ತಲೇ ಇದ್ದು, ಈ ವರ್ಷಾರಂಭದಲ್ಲೇ ಸ್ವೀಡನ್ 27 ತೋಳಗಳನ್ನ ಹೊಡೆದುರುಳಿಸಿದೆ. ಇನ್ನು, ಫಿನ್​ಲ್ಯಾಂಡ್​ 20 ತೋಳಗಳನ್ನ ಕೊಂದರೆ ನಾರ್ವೆ 25 ತೋಳಗಳ ಹತ್ಯೆ ಮಾಡಿದೆ. ಇದು ಜಸ್ಟ್​ 16 ದಿನಗಳಲ್ಲಿ ಈ 2022ನೇ ವರ್ಷದ ಲೆಕ್ಕ ಅಷ್ಟೇ.

ಇನ್ನು, ಈಗಾಗಲೇ ಸ್ವೀಡನ್​ನಲ್ಲಿ 395ರಷ್ಟಿದ್ದ ತೋಳಗಳ ಸಂಖ್ಯೆ 300ಕ್ಕೆ ಇಳಿದು ಹೋಗಿದೆ. ನಾರ್ವೆ ತನ್ನಲ್ಲಿರುವ ಶೇಕಡಾ 60ಕ್ಕೂ ಹೆಚ್ಚು ತೋಳಗಳನ್ನ ಮುಗಿಸಲು ಉದ್ದೇಶಿಸಿದೆ. ಸರ್ಕಾರಗಳ ಈ ನಡೆ ಅಲ್ಲಿನ ಪ್ರಾಣಿ ಪ್ರಿಯರ ಕೆಂಗಣ್ಣಿಗೆ ಗುರಿಯಾಗಿದೆ. ಅಷ್ಟಕ್ಕೂ ಈ ಮೂರೂ ರಾಷ್ಟ್ರಗಳು ತೋಳಗಳನ್ನ ಈ ರೀತಿ ಕೊಲ್ಲುವುದಕ್ಕೆ ಕಾರಣವೇನು ಅನ್ನೋದನ್ನ ನೋಡೋದಾದ್ರೆ..

ತೋಳಗಳ ಹತ್ಯೆ ಏಕೆ?
ನಾರ್ಡಿಕ್ ರಾಷ್ಟ್ರಗಳಲ್ಲಿರುವ ತೋಳಗಳಿಂದ ಅಲ್ಲಿನ ಅಮಾಯಕ ಪ್ರಾಣಿಗಳು, ಶ್ವಾನಗಳ ಬೇಟೆ ಹೆಚ್ಚಾಗಿದೆಯಂತೆ. ಅಲ್ಲದೇ, ಕಾಡಿಗೆ ಬೇರೆ ಪ್ರಾಣಿಗ ಬೇಟೆಗೆ ಹೋಗುವವರಿಗೂ ತೋಳಗಳ ಹಿಂಡಿನಿಂದ ತೊಂದರೆಯಾಗುತ್ತಿದೆಯಂತೆ. ಇನ್ನು, ಕೆಲವು ತೋಳಗಳು ಅವುಗಳ ವ್ಯಾಪ್ತಿ ಮೀರಿ ಬಂದು ಜನರಿಗೂ ಕಾಟ ಕೊಡುತ್ತಿವೆಯಂತೆ. ಇನ್ನು, ಮನೆಗಳಲ್ಲಿ ಪ್ರೀತಿಯಿಂದ ಸಾಕಿದ ನಾಯಿಗಳ ಮೇಲೂ ತೋಳಗಳೂ ದಾಳಿ ಮಾಡುತ್ತಿವೆಯಂತೆ. ಹೀಗಾಗಿ ತಮ್ಮ ರಾಷ್ಟ್ರಗಳಲ್ಲಿ ತೋಳಗಳ ಪಾಪ್ಯೂಲೇಷನ್​ನ ಕಡಿಮೆ ಮಾಡೋದಕ್ಕೆ ಮೂರೂ ರಾಷ್ಟ್ರಗಳೂ ನಿರ್ಧಾರ ಮಾಡಿವೆ.

ಜಗತ್ತಿನಲ್ಲಿ ತೋಳಗಳ ಮಾರಣಹೋಮವಾಗ್ತಿರೋದು ಇದೇ ಮೊದಲೇನಲ್ಲ.. 2020ರಲ್ಲೂ ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿ ತೋಳಗಳ ಹತ್ಯಾಕಾಂಡವಾಗಿ ಹೋಗಿತ್ತು.

ಅಂದು 463 ತೋಳಗಳ ಹತ್ಯೆ
2020ರಲ್ಲಿ ಕೆನಾಡದ ಬ್ರಿಟಿಷ್​ ಕೊಲಂಬಿಯಾದಲ್ಲಿ ಇದೇ ರೀತಿ ತೋಳಗಳ ಹತ್ಯೆ ಮಾಡಲಾಗಿತ್ತು. ಅದು ಖುದ್ದು ಕೆನಡಾ ಸರ್ಕಾರದ ಪ್ರಾಯೋಜಿತ ಹತ್ಯೆಯಾಗಿತ್ತು. ಮೌಂಟೇನ್​ ಕರಿಬು ಎಂಬ ಪ್ರಾಣಿಗಳನ್ನು ಹೆಚ್ಚಾಗಿ ಬೇಟೆಯಾಡುತ್ತಿದ್ದವು ಎಂಬ ಒಂದೇ ಒಂದು ಕಾರಣಕ್ಕೆ, ತೋಳಗಳ ಮಾರಣಹೋಮವನ್ನೇ ನಡೆಸಲಾಗಿದ್ದು, ಕರಿಬು ಸಂತತಿಯನ್ನು ಉಳಿಸಲು ಈ ರೀತಿ ಮಾಡಲಾಗಿದೆ ಅಂತಾ ಹೇಳಿಕೊಂಡಿತ್ತಾದ್ದರೂ ಬೇಟೆಗಾರರಿಗೆ ಅನುಕೂಲಮಾಡಿಕೊಡಲು ಕೆನಡಾ ಸರ್ಕಾರ ಈ ರೀತಿ ಮಾಡಿದೆ ಅಂತಾ ಪ್ರಾಣಿಪ್ರಿಯರು ಆರೋಪಿಸಿದ್ದರು. ಬರೋಬ್ಬರಿ 463 ತೋಳಗಳನ್ನು ಕೆನಡಾ ಸರ್ಕಾರ ಹತ್ಯೆ ಮಾಡಿಸಿತ್ತು.

ಇದಷ್ಟೇ ಅಲ್ಲ ಅಮೆರಿಕಾದಲ್ಲಿ ಇದಾಹೋ ಎಂಬ ಜಾತಿಯ ತೋಳಗಳನ್ನು ಕೊಲ್ಲಲು ಗುತ್ತಿಗೆದಾರರ ನೇಮಕಕ್ಕೆ ಅನುಮತಿ ನೀಡುವ ಮಸೂದೆಯನ್ನ ಜಾರಿಗೆ ತರಲಾಗಿತ್ತು. ಆ ಮೂಲಕ 1,50ಕ್ಕೂ ಹೆಚ್ಚು ಸಂಖ್ಯೆಯಲ್ಲಿರುವ ಅವುಗಳನ್ನು ಕೊಲ್ಲುವ ಮೂಲಕ 150ಕ್ಕೆ ಇಳಿಸುವ ಗುರಿ ಹೊಂದಲಾಗಿತ್ತು.. ಅಲ್ಲೂ ಕೂಡ ಉತ್ತರ ಅಮೆರಿಕಾ ಈ ರೀತಿಯ ನಿರ್ಧಾರ ಕೈಗೊಳ್ಳೋದಕ್ಕೆ ಕಾರಣ ಒಂದೇ ಆಗಿತ್ತು. ಜಾನುವಾರುಗಳು ಹಾಗೂ ಇನ್ನಿತರ ವನ್ಯಮೃಗಗಳ ಮೇಲೆ ನಡೆಯುತ್ತಿದ್ದ ದಾಳಿಯನ್ನು ತಪ್ಪಿಸಲು ಆ ರೀತಿ ತೋಳಗಳ ಹತ್ಯೆಗೆ ಹೊಸ ಕಾಯ್ದೆಯನ್ನೇ ಜಾರಿಮಾಡಲಾಯ್ತು.

ಈ ರೀತಿ ವಿವಿಧ ರಾಷ್ಟ್ರಗಳು ತೋಳಗಳ ಮೇಲೆ ಸಮರ ಸಾರಿರುವ ಹಿನ್ನೆಲೆ ತೋಳಗಳ ಸಂತತಿ ವಿಶ್ವಾದ್ಯಂತ ಇಳಿಮುಖವಾಗಿವೆ. ಕಾಡು ಪ್ರಾಣಿಗಳ ಬೇಟೆಗೆ ಹೋಗೋರ ಮೇಲೆ ದಾಳಿ ಮಾಡುವ ಹಿನ್ನೆಲೆ ಅವುಗಳನ್ನು ಭೀಭತ್ಸವಾಗಿ ಹತ್ಯೆ ಮಾಡಲಾಗುತ್ತಿದೆ ಎನ್ನುವುದು ಪ್ರಾಣಿಪ್ರಿಯರ ವಾದವಾಗಿದೆ. ಇನ್ನು, ಭಾರತದಲ್ಲೂ ತೋಳಗಳ ಸಂಖ್ಯೆ ಸಾಕಷ್ಟು ಕಡಿಮೆಯಾಗಿದ್ದು, ದೇಶಾದ್ಯಂತ ಎರಡರಿಂದ ಮೂರುಸಾವಿರದಷ್ಟು ತೋಳಗಳು ಮಾತ್ರ ಇವೆ ಅಂತಾ ಅಂದಾಜಿಸಲಾಗಿದೆ. ತೋಳಗಳು ಅನಾದಿ ಕಾಲದಿಂದ ಇಲ್ಲಿಯವರೆಗೂ ಮನುಷ್ಯರ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದವು ಅಂತಲೇ ಆಗಾಗ ಹೇಳಲಾಗುತ್ತೆ. ಇತರ ಪ್ರಾಣಿ ಪ್ರಭೇದಗಳಿಗಿಂತ ಹೆಚ್ಚಿನ ಪುಸ್ತಕಗಳಲ್ಲಿ ತೋಳಗಳ ಬಗ್ಗೆಯೇ ಅಧ್ಯಯನ ಮಾಡಲಾಗಿದೆ. ಅಂತಹ ವನ್ಯಮೃಗದ ಸಂತತಿಯನ್ನೇ ಈ ರೀತಿ ವಿದೇಶಿ ಸರ್ಕಾರಗಳು ತಮ್ಮ ಲಾಭಕ್ಕಾಗಿ ನಾಶಮಾಡಲು ಹೊರಟಿರೋದು ನಿಜಕ್ಕೂ ಘೋರ ದುರಂತ..

ತೋಳ ಬಂತು ತೋಳ ಅನ್ನೋ ಗಾದೆಯನ್ನ ನೀವೆಲ್ಲರೂ ಕೇಳಿಯೇ ಇರ್ತೀರಾ ಅಲ್ವಾ? ಈಗ ಪ್ರಪಂಚದಲ್ಲಿ ನಡೀತಿರೋ ಘಟನೆಯನ್ನ ನೋಡಿದ್ರೆ ಮುಂದೊಂದು ದಿನ ಆ ಗಾದೆ ತೋಳ ಇಲ್ಲ ತೋಳ ಅಂತಾ ಬದಲಾದ್ರೂ ಸಂಶಯವಿಲ್ಲ.

News First Live Kannada


Leave a Reply

Your email address will not be published. Required fields are marked *