ತೌಕ್ತೆ ಚಂಡಮಾರುತದ ಪ್ರಭಾವದಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗ್ತಿದೆ.

ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದೆ. ಹೀಗಾಗಿ, ಕಟ್ಟೆಚ್ಚರ ವಹಿಸಲಾಗಿದೆ. ಕೊರೊನಾ ಹಾಗು ತೌಕ್ತೆ ಚಂಡಮಾರುತದ ಸವಾಲನ್ನು ಎದುರಿಸಲು ಜಿಲ್ಲಾಡಾಳಿತ ಸಜ್ಜಾಗಿದ್ದು, ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧವಾಗಿದೆ. ಎನ್​ಡಿಆರ್​ಎಫ್ ತಂಡವನ್ನು ಸನ್ನದ್ದ ಸ್ಥಿತಿಯಲ್ಲಿರಿಸಿದೆ.

ಸೈಕ್ಲೋನ್​ ಎಫೆಕ್ಟ್​ನಿಂದ ಕಾಫಿನಾಡಿನ ಹಲವೆಡೆ ರಾತ್ರಿಯಿಂದ ಬಿಟ್ಟುಬಿಡದೇ ಮಳೆ ಸುರಿಯುತ್ತಿದೆ. ಚಿಕ್ಕಮಗಳೂರು, ಮೂಡಿಗೆರೆ, ಎನ್.ಆರ್.ಪುರ, ಕೊಪ್ಪ, ಶೃಂಗೇರಿ ತಾಲೂಕಿನಲ್ಲಿ ಮಳೆ ಜೋರಾಗಿದ್ದು, ಕೆಲವೆಡೆ ಮೋಡ ಕವಿದ ವಾತವರಣ ಸೃಷ್ಟಿಯಾಗಿದೆ.

ಇಂದಿನಿಂದ ಎರಡು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ ಮಲೆನಾಡು ಭಾಗದಲ್ಲಿರುವ ಜನರಿಗೆ ಎಚ್ಚರದಿಂದಿರುವಂತೆ ಜಿಲ್ಲಾಡಳಿತ ಸೂಚನೆ ಕೊಟ್ಟಿದೆ.

ಉಡುಪಿ ಜಿಲ್ಲೆಯಲ್ಲಿ ಸೈಕ್ಲೋನ್​ ಪರಿಣಾಮ ನಿರಂತರ ತುಂತುರು ಮಳೆಯಾಗ್ತಿದೆ. ತಂಗಾಳಿಯ ಸಹಿತ  ಸಾಧಾರಣ ಮಳೆ ಸುರಿಯುತ್ತಿದೆ. ಇಂದು ದಿನವಿಡೀ ಮಳೆ ಸುರಿಯುವ ಸಾಧ್ಯತೆ ಇದೆ ಎನ್ನಲಾಗಿದೆ. ಪಶ್ಚಿಮ ಕರಾವಳಿಯಲ್ಲಿ ಅಲೆಗಳ ಅಬ್ಬರ ಜೋರಾಗಿದೆ. ಹೀಗಾಗಿ ಕಡಲಿಗೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಮರವಂತೆ ಉಪ್ಪುಂದ ಪರಿಸರದಲ್ಲಿ  ಕಡಲು ಕೊರೆತ ಮುಂದುವರಿದಿದೆ.

The post ತೌಕ್ತೆ ಚಂಡಮಾರುತ: ಉಡುಪಿ, ಮಂಗಳೂರು, ಚಿಕ್ಕಮಗಳೂರಲ್ಲಿ ಮಳೆ appeared first on News First Kannada.

Source: newsfirstlive.com

Source link