ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ಕಾಣಿಸಿಕೊಂಡ ತೌಕ್ತೆ ಚಂಡಮಾರುತ ಪರಿಣಾಮದಿಂದ ಕರಾವಳಿಯಲ್ಲಿ ಬಿರುಸಿನ ಮಳೆಯಾಗುತ್ತಿದೆ. ಈ ನಡುವೆ ಚಂಡಮಾರುತ ತೀವ್ರತೆ ಹೆಚ್ಚಾಗಿದ್ದು, ರಾಜ್ಯದ 9 ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆ ನೀಡಿರುವ ರಾಜ್ಯ ಹವಾಮಾನ ಇಲಾಖೆ ಅರೆಂಜ್ ಅಲರ್ಟ್ ಘೋಷಣೆ ಮಾಡಿದೆ.

ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ್ ಮಾಹಿತಿ ನೀಡಿದ್ದು, ಇಂದು ಕರ್ನಾಟಕದಾದ್ಯಂತ ವ್ಯಾಪಕ ಮಳೆಯಾಗಿದೆ. ಕೊಲ್ಲೂರು, ಉಡುಪಿ ಜಿಲ್ಲೆಯಲ್ಲಿ 24 ಸೆ.ಮೀ ಮಳೆಯಾಗಿದೆ. ಪುತ್ತೂರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 19 ಸೆ.ಮೀ, ಕುಂದಾಪುರ 16 ಸೆ.ಮೀ, ಭಟ್ಕಳ 16 ಸೆ.ಮೀ, ಧರ್ಮಸ್ಥಳ 14 ಸೆ.ಮೀ, ಶಿವಮೊಗ್ಗ 19 ಸೆ.ಮೀ ಮಳೆಯಾಗಿದೆ ಎಂದು ತಿಳಿಸಿದ್ದಾರೆ.

ತೌಕ್ತೆ ಚಂಡಮಾರುತ ಪೂರ್ವ ಅರಬ್ಬಿ ಸಮುದ್ರದ ಮಧ್ಯ ಭಾಗದಲ್ಲಿ ಗೋವಾದ ನೈರುತ್ಯ ದಿಕ್ಕಿನಲ್ಲಿ 120 ಕಿ.ಮೀ ದೂರದಲ್ಲಿದೆ. ಮುಂದಿನ ಅವಧಿಯಲ್ಲಿ ಚಂಡಮಾರುತ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದ್ದು, ಮೇ 18ರ ಮುಂಜಾನೆಗೆ ಗುಜರಾತ್ ತಲುಪುವ ಸಾಧ್ಯತೆ ಇದೆ. ಇದರ ಪರಿಣಾಮ ಕರ್ನಾಟಕದಲ್ಲಿ ಇಂದಿನಿಂದ ಮೇ 20ರವರೆಗೆ ಮಳೆಯಾಗುವ ಸಾಧ್ಯತೆ ಇದ್ದು, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಧಾರವಾಡ, ಬೆಳಗಾವಿ, ಹಾವೇರಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಈ ಹಿನ್ನಲೆ ಈ ಎಲ್ಲಾ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ.

ಕರಾವಳಿ ಭಾಗದ ಜಿಲ್ಲೆಗಳಲ್ಲಿ ಮೇ 17 ರಿಂದ 20ರವರೆಗೆ ಭಾರೀ ಮಳೆಯಾಗಲಿದೆ. ಈ ಹಿನ್ನೆಲೆ ಮೂರು ದಿನ ಕರಾವಳಿ ಭಾಗದಲ್ಲಿ ಯೆಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಬೆಂಗಳೂರಿನಲ್ಲಿ ಮುಂದಿನ ಎರಡು ದಿನ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

The post ತೌಕ್ತೆ ಚಂಡಮಾರುತ ಮತ್ತಷ್ಟು ತೀವ್ರ- 9 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ appeared first on News First Kannada.

Source: newsfirstlive.com

Source link