ಕಾರವಾರ: ತೌಕ್ತೆ ಚಂಡಮಾರುತದ ಹಾನಿಯ ಅಧ್ಯಯನ ನಡೆಸಲು ಕೇಂದ್ರಸರ್ಕಾರದ ನಿಯೋಜಿತ ತಂಡವು ಇಂದು ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಲಿದೆ.

ಕೇಂದ್ರ ಸರ್ಕಾರದ ಆರು ಜನ ಅಧಿಕಾರಿಗಳ ತಂಡ ಕಾರವಾರಕ್ಕೆ ಆಗಮಿಸಲಿದೆ. ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಜೊತೆ ಸಭೆ ನೆಡೆಸಲಿದ್ದಾರೆ. ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ತೌಕ್ತೆ ಚಂಡಮಾರುತದಿಂದ ಆಗಿರುವ ಹಾನಿ ವಿವರ ಪಡೆದು ಗುರುವಾರ ಜಿಲ್ಲೆಯ ಹಾನಿಗೊಳಗಾದ ಭಟ್ಕಳ, ಹೊನ್ನಾವರ, ಕುಮಟಾ ಭಾಗಕ್ಕೆ ತಂಡ ಭೇಟಿ ನೀಡಲಿದೆ. ನಂತರ ಉಡುಪಿಯ ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಲಿದೆ. ಇದನ್ನೂ ಓದಿ: ಜೂನ್ 21 ರಿಂದ ಬಿಗ್‍ಬಾಸ್ ಆಟ ಮತ್ತೆ ಶುರು

ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಮೇ ತಿಂಗಳಲ್ಲಿ ತೌಕ್ತೆ ಚಂಡಮಾರುತದಿಂದಾಗಿ 102 ಕೋಟಿ ರುಪಾಯಿಗೂ ಹೆಚ್ಚು ನಷ್ಟವಾಗಿದ್ದು, ಹಲವು ಕಡೆ ಮನೆಗಳು ಹಾನಿಯಾದರೆ ಕಡಲ ಕೊರತದಿಂದ ಸಮುದ್ರದ ಅಂಚಿನಲ್ಲಿ ಸಾಕಷ್ಟು ಹಾನಿಯಾಗುವ ಜೊತೆ ಮೀನುಗಾರರ ಬೋಟುಗಳು ಸಹ ಹಾನಿಗೀಡಾಗಿದ್ದವು. ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದ್ದರೂ ತಕ್ಷಣದ ಪರಿಹಾರವಾಗಿ ರಾಜ್ಯ ಸರ್ಕಾರ ಅಲ್ಪ ಹಾನಿಗೆ 10 ಸಾವಿರ , ಮನೆ ಹಾನಿಗೆ 1ಲಕ್ಷದ ವರೆಗೆ ಪರಿಹಾರ ನೀಡಲಾಗಿತ್ತು. ಹೆಚ್ವಿನ ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿತ್ತು. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರದ ಅಧಿಕಾರಿಗಳ ತಂಡ ಇಂದು ಸಂಜೆ ಜಿಲ್ಲೆಗೆ ಭೇಟಿ ನೀಡಿ ಅಧ್ಯಯನ ನಡೆಸಿ ನಂತರ ಕೇಂದ್ರ ಸರ್ಕಾರಕ್ಕೆ ವರದಿ ನೀಡಲಿದ್ದಾರೆ.

The post ತೌಕ್ತೆ ಹಾನಿ – ಇಂದು ಉತ್ತರ ಕನ್ನಡಕ್ಕೆ ಆಗಮಿಸಲಿದೆ ಕೇಂದ್ರ ತಂಡ appeared first on Public TV.

Source: publictv.in

Source link