ತ್ರಿಪುರಾದಲ್ಲಿ ತೃಣಮೂಲ ನಾಯಕಿ ಬಂಧನ; ಬಿಜೆಪಿ ಗೂಂಡಾಗಳು ದಾಳಿ ನಡೆಸಿದ್ದಾರೆ ಎಂದು ಟಿಎಂಸಿ ಆರೋಪ | Trinamool Congress leader and Bengali actor Saayoni Ghosh arrested Tripura Police


ತ್ರಿಪುರಾದಲ್ಲಿ ತೃಣಮೂಲ ನಾಯಕಿ ಬಂಧನ; ಬಿಜೆಪಿ ಗೂಂಡಾಗಳು ದಾಳಿ ನಡೆಸಿದ್ದಾರೆ ಎಂದು ಟಿಎಂಸಿ ಆರೋಪ

ಸಾಯೊನಿ ಘೋಷ್ (ಕೃಪೆ: ಫೇಸ್​​ಬುಕ್)

ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ (Trinamool Congress) ನಾಯಕಿ ಮತ್ತು ಬಂಗಾಳಿ ನಟಿ ಸಾಯೊನಿ ಘೋಷ್  (Saayoni Ghosh)ಅವರನ್ನು ತ್ರಿಪುರಾ ಪೊಲೀಸರು (Tripura Police) ಬಂಧಿಸಿದ್ದಾರೆ. ಟಿಎಂಸಿ ನಾಯಕಿ ತಮ್ಮ ಮೇಲೆ “ಬಿಜೆಪಿ ಗೂಂಡಾಗಳು” ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಪಕ್ಷದ ಹಿರಿಯ ನಾಯಕಿ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee) ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ (Abhishek Banerjee) ಅವರು ಕಾರ್ಯಕರ್ತರೊಂದಿಗೆ ನಿಲ್ಲಲು ತ್ರಿಪುರಾಕ್ಕೆ ಭೇಟಿ ನೀಡಲಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ಹೇಳಿದೆ. ಆದಾಗ್ಯೂ ಈ ಆರೋಪವನ್ನು ಬಿಜೆಪಿ ನಿರಾಕರಿಸಿದೆ ಸಾಯೊನಿ ಅವರು ಶನಿವಾರ ರಾತ್ರಿ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಅವರ ರಸ್ತೆಯಲ್ಲಿ ನಡೆಸುವ ಸಭೆಗೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿರುವುದಾಗಿ ಎಂದು ಸುದ್ದಿ ಸಂಸ್ಥೆ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ವರದಿ ಮಾಡಿದೆ. ಪಶ್ಚಿಮ ಬಂಗಾಳದ ತೃಣಮೂಲ ಯುವ ಕಾಂಗ್ರೆಸ್‌ನ ಅಧ್ಯಕ್ಷರಾದ ಸಾಯೊನಿ ಘೋಷ್ ಮತ್ತು ಸಂಸದೆ ಸುಶ್ಮಿತಾ ದೇಬ್, ಕುನಾಲ್ ಘೋಷ್ ಮತ್ತು ಸುಬಾಲ್ ಭೌಮಿಕ್ ಸೇರಿದಂತೆ ಇತರ ತೃಣಮೂಲ ನಾಯಕರ ಮೇಲೆ ಪೂರ್ವ ಅಗರ್ತಲಾ ಮಹಿಳಾ ಪೊಲೀಸ್ ಠಾಣೆಯೊಳಗೆ ಬಿಜೆಪಿ ಗೂಂಡಾಗಳು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಹಿಂಸಾಚಾರದಲ್ಲಿ ಆರು ತೃಣಮೂಲ ಬೆಂಬಲಿಗರು ಗಾಯಗೊಂಡಿದ್ದಾರೆ ಎಂದು ಪಕ್ಷ ತಿಳಿಸಿದೆ.

ಘೋಷ್ ಅವರನ್ನು ವಿಚಾರಣೆ ನಡೆಸುತ್ತಿದ್ದಾಗ ಪೊಲೀಸ್ ಠಾಣೆಯ ಬಳಿ ಜಮಾಯಿಸಿದ ಜನರ ಗುಂಪಿನ ಮೇಲೆ ಕೆಲವು ಅಪರಿಚಿತ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ, ಆದರೆ ಯಾರಿಗೂ ಗಾಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಮಧ್ಯಾಹ್ನದ ನಂತರ ಘೋಷ್ ಅವರನ್ನು ಬಂಧಿಸಲಾಯಿತು, ಕೊಲೆಯ ಯತ್ನ ಮತ್ತು ಇತರ ಆರೋಪಗಳ ಜತೆಗೆ ಜನರ ನಡುವೆ ವೈಷಮ್ಯ ಸೃಷ್ಟಿಸಿದ ಆರೋಪ ಅವರ ಮೇಲಿದೆ. ಈ ಸೆಕ್ಷನ್‌ಗಳು ಜಾಮೀನು ರಹಿತವಾಗಿದ್ದು, ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಸಾಧ್ಯವಿಲ್ಲ ಎಂದು ಪಕ್ಷ ಹೇಳಿದೆ. ಯಾವುದೇ ರಾಜಕೀಯ ಪಕ್ಷಗಳು ತಮ್ಮ ಹಕ್ಕುಗಳನ್ನು ಚಲಾಯಿಸದಂತೆ ತಡೆಯುವಂತೆ ತ್ರಿಪುರಾ ಪೊಲೀಸರಿಗೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ನಿರ್ದೇಶನ ನೀಡಿತ್ತು.

2023ರ ವಿಧಾನಸಭಾ ಚುನಾವಣೆಗೆ ಮುನ್ನ ತೃಣಮೂಲ ಕಾಂಗ್ರೆಸ್ ರಾಜ್ಯದಲ್ಲಿ ನೆಲೆಯೂರಲು ಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ತ್ರಿಪುರಾದಲ್ಲಿ ಸರಣಿ ಹಿಂಸಾತ್ಮಕ ಘಟನೆಗಳ ವರದಿಗಳು ಬಂದಿವೆ. ನವೆಂಬರ್ 25 ರಂದು ನಡೆಯಲಿರುವ ತ್ರಿಪುರಾ ನಾಗರಿಕ ಚುನಾವಣೆಯಲ್ಲಿ ಪಕ್ಷವು ಸ್ಪರ್ಧಿಸುತ್ತಿದೆ.  ಅಗರ್ತಲಾ ಮುನ್ಸಿಪಲ್ ಕಾರ್ಪೊರೇಷನ್ ಸೇರಿದಂತೆ 20 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆಡಳಿತಾರೂಢ ಬಿಜೆಪಿ ಈಗಾಗಲೇ 334 ಸ್ಥಾನಗಳಲ್ಲಿ 112 ಸ್ಥಾನಗಳನ್ನು ಅವಿರೋಧವಾಗಿ ಗೆದ್ದಿದೆ. 2018ರಲ್ಲಿ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಎದುರಿಸಲಿರುವ ಮೊದಲ ನಾಗರಿಕ ಚುನಾವಣೆ ಇದಾಗಿದೆ.

ಇದನ್ನೂ ಓದಿ: ಪಟಿಯಾಲ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಘೋಷಣೆ

TV9 Kannada


Leave a Reply

Your email address will not be published. Required fields are marked *