ಬೆಂಗಳೂರು: ರಾಜ್ಯ ಉಪಚುನಾವಣೆ, ನಾಲ್ಕು ರಾಜ್ಯ ಮತ್ತು ಒಂದು ಕೇಂದ್ರಾಡಳಿತ ಪ್ರದೇಶಗಳ ಚುನಾವಣಗಳ ಫಲಿತಾಂಶ ಪ್ರಕಟವಾಗಿದ್ದು, ದಕ್ಷಿಣದ ಇತರ ರಾಜ್ಯಗಳಲ್ಲೂ ಬಿಜೆಪಿ ಇನ್ನಷ್ಟು ಸದೃಢವಾಗಲಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಬೆಳಗಾವಿ ಲೋಕಸಭೆ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಜಯ ಗಳಿಸಿರುವ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪರವರು ಹರ್ಷ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ, 5 ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸಾಧನೆಯೂ ಅಭಿನಂದನಾರ್ಹ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಮತದಾರರು ಮತ್ತೊಮ್ಮೆ ಪಕ್ಷವನ್ನು ಗೆಲ್ಲಿಸಿ, ಆಶೀರ್ವದಿಸಿದ್ದಾರೆ. ಬಸವಕಲ್ಯಾಣದಲ್ಲಿ ಅನುಕಂಪದ ಅಲೆಯನ್ನೂ ಮೀರಿ ಪಕ್ಷದ ಅಭಿವೃದ್ಧಿಪರ ಹಾಗೂ ಜನಹಿತ ಪರ ಕಾರ್ಯಸೂಚಿಗೆ ಮತದಾರರು ಒಲವು ತೋರಿದ್ದಾರೆ. ಅಸ್ಸಾಂನಲ್ಲಿ ಪಕ್ಷ ಮತ್ತೆ ಅಧಿಕಾರಕ್ಕೆ ಮರಳಿದ್ದು, ಪುದುಚೇರಿಯಲ್ಲೂ ಸರ್ಕಾರ ರಚನೆಯಲ್ಲಿ ಪಕ್ಷ ಭಾಗಿಯಾಗಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ತನ್ನ ಸಂಖ್ಯಾಬಲವನ್ನು 3 ರಿಂದ 75 ಸ್ಥಾನಗಳಿಗೆ ಹೆಚ್ಚಿಸಿಕೊಂಡಿರುವುದು, ಕೇರಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಬಿಜೆಪಿಯ ಮತ ಪ್ರಮಾಣ ಹೆಚ್ಚಿರುವುದು ಆಶಾದಾಯಕ ಬೆಳವಣಿಗೆ ಎಂದು ಮುಖ್ಯಮಂತ್ರಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ದಕ್ಷಿಣದ ಇತರ ರಾಜ್ಯಗಳಲ್ಲೂ ಬಿಜೆಪಿ ಇನ್ನಷ್ಟು ಸದೃಢವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಮುಖ್ಯಮಂತ್ರಿಗಳು, ಪ್ರಧಾನಮಂತ್ರಿ ನರೇಂದ್ರಮೋದಿ, ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.

ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ ಶ್ರೀಮತಿ ಮಂಗಳಾ ಅಂಗಡಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವಕ್ಕೆ ಬೆಂಬಲ ವ್ಯಕ್ತಪಡಿಸಿ, ಬಿಜೆಪಿ ಅಭ್ಯರ್ಥಿಗೆ ಆಶೀರ್ವದಿಸಿರುವ ಕ್ಷೇತ್ರದ ಜನತೆಗೆ ಕೃತಜ್ಞತಾ ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ, ಭಾರತೀಯ ಜನತಾ ಪಕ್ಷಕ್ಕೆ ಆಶೀರ್ವದಿಸಿದ ಕ್ಷೇತ್ರದ ಎಲ್ಲ ಮತದಾರ ಬಂಧುಗಳಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಕ್ಷೇತ್ರದ ಜನರ ವಿಶ್ವಾಸ ಗಳಿಸಿ, ಗೆಲುವು ಸಾಧಿಸಿದ ನಮ್ಮ ಅಭ್ಯರ್ಥಿ ಶ್ರೀ ಶರಣು ಸಲಗರ ಅವರಿಗೆ ಮತ್ತು ಅಲ್ಲಿನ ಎಲ್ಲಾ ನಮ್ಮ ಕಾರ್ಯಕರ್ತರಿಗೆ ಅಭಿನಂದನೆಗಳು.

The post ದಕ್ಷಿಣದ ಇತರ ರಾಜ್ಯಗಳಲ್ಲೂ ಬಿಜೆಪಿ ಇನ್ನಷ್ಟು ಸದೃಢವಾಗಲಿದೆ: ಸಿಎಂ ಬಿಎಸ್‍ವೈ appeared first on Public TV.

Source: publictv.in

Source link