ದಕ್ಷಿಣ ಕನ್ನಡ: ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ನಮಾಜ್; ಶಿಕ್ಷಣಾಧಿಕಾರಿ ಸಭೆಯಲ್ಲಿ ವಿವಾದಕ್ಕೆ ತಾರ್ಕಿಕ ಅಂತ್ಯ | Namaz amid Hijab Row in Karnataka Schools Issue sorted with talks Karnataka Hijab Kesari Row updates


ದಕ್ಷಿಣ ಕನ್ನಡ: ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ನಮಾಜ್; ಶಿಕ್ಷಣಾಧಿಕಾರಿ ಸಭೆಯಲ್ಲಿ ವಿವಾದಕ್ಕೆ ತಾರ್ಕಿಕ ಅಂತ್ಯ

ನಮಾಜ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಅಂಕತ್ತಡ್ಕ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ನಮಾಜ್ ವಿಚಾರಕ್ಕೆ ಸಂಬಂಧಿಸಿ ಶಿಕ್ಷಣಾಧಿಕಾರಿ ನೇತೃತ್ವದ ಸಭೆಯಲ್ಲಿ ವಿವಾದಕ್ಕೆ ತಾರ್ಕಿಕ ಅಂತ್ಯ ನೀಡಲಾಗಿದೆ. ಸಭೆಯಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಿ ನಿರ್ಣಯ ಕೈಗೊಳ್ಳಲಾಗಿದೆ. ಶಾಲಾ ಅವಧಿಯಲ್ಲಿ ಧಾರ್ಮಿಕ ಚಟುವಟಿಕೆ ನಡೆಸದಂತೆ ಸೂಚನೆ ಕೊಡಲಾಗಿದೆ. ಬಿಇಒ ಸೂಚನೆಗೆ ಮುಸ್ಲಿಂ ವಿದ್ಯಾರ್ಥಿಗಳ ಪೋಷಕರು ಒಪ್ಪಿಕೊಂಡಿದ್ದಾರೆ. ಇನ್ನು ಮುಂದೆ ಶಾಲೆಯಲ್ಲಿ ನಮಾಜ್ ಮಾಡಲ್ಲವೆಂದು ಒಪ್ಪಿಗೆ ಸೂಚಿಸಿದ್ದಾರೆ. ಸಭೆಯ ನಿರ್ಣಯದ ಬಗ್ಗೆ ಜಿಲ್ಲಾ ಶಿಕ್ಷಣ ಇಲಾಖೆಗೆ ವರದಿ ಸಲ್ಲಿಕೆ ಮಾಡಲಾಗಿದೆ.

ಇತ್ತ ಹಿಜಾಬ್ ಕುರಿತು ಶಾಲೆಯಲ್ಲಿ ಗೊಂದಲ‌ ವಿಚಾರವಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಪ್ರತಿಕ್ರಿಯೆ ನೀಡಿದ್ದಾರೆ. ಪೊಲೀಸರು ಪೋಷಕರಿಗೆ ತಿಳಿ ಹೇಳಿ ಕಳಿಸಿದ್ದಾರೆ. ಹೈಕೋರ್ಟ್ ಅದೇಶ ಏನಿದೆ ಅದನ್ನ ಮಕ್ಕಳ ಪೊಷಕರಿಗೆ ಹೇಳಲಾಗಿದೆ. ಯಾವುದೇ ಗಲಾಟೆ ನಡೆದಿಲ್ಲ‌, ಯಾರು ಈ ಬಗ್ಗೆ ದೂರು ಕೊಟ್ಟಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಹಿಜಬ್ ಸಂಬಂಧ ಪ್ರಚೋದನಕಾರಿ ಪೋಸ್ಟ್ ಹಾಕಬಾರದು. ಯಾರಾದ್ರೂ ವಿರೋಧ ಅಥವಾ ಪರವಾಗಿ ಪೋಸ್ಟ್ ಮಾಡಿದ್ದರೆ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಶಾಲೆಗಳಲ್ಲಿ ಮುಸ್ಲಿಂ ಮಕ್ಕಳಿಂದ ನಮಾಜ್ ವಿಚಾರವಾಗಿ ಬಾಗಲಕೋಟೆಯಲ್ಲಿ ಸಚಿವ ಸಿ.ಸಿ. ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ನಮಾಜ್ ಮಾಡುವುದಾದರೆ ಮಸೀದಿಗೆ ಹೋಗಲಿ. ಇವರು ನಮಾಜ್ ಮಾಡಿದ್ರೆ ಇನ್ನೊಬ್ಬರು ಭಜನೆ ಮಾಡ್ತಾರೆ. ಶಾಲೆಯಲ್ಲಿ ತಾರತಮ್ಯವಾಗದಂತೆ ಸಮವಸ್ತ್ರ ಮಾಡಿದೆ ಎಂದು ಹೇಳಿದ್ದಾರೆ. ಉಡುಪಿ ವಿದ್ಯಾರ್ಥಿನಿಯಿಂದ ಕೋರ್ಟ್​ಗೆ ಅರ್ಜಿ ವಿಚಾರವಾಗಿ ಮಾತನಾಡಿ, ವಕೀಲರಿಗೆ ಫೀಸ್​ ಕೊಡುವಷ್ಟು ಅವರು ಆರ್ಥಿಕವಾಗಿ ಸಬಲರಿದ್ದಾರಾ? ಚುನಾವಣೆ ಸಂದರ್ಭದಲ್ಲಿ ಇಂತಹ ಷಡ್ಯಂತ್ರ ಮಾಡ್ತಾರೆ. ತಾತ್ವಿಕ ಹೋರಾಟದ ನೆಲೆಗಟ್ಟು ಇಲ್ಲದ ಪಕ್ಷಗಳ ಷಡ್ಯಂತ್ರ ಇದು. ವಿಷಬೀಜ ಬಿತ್ತಿ ಹತ್ತಿಪ್ಪತ್ತು ವೋಟ್ ಪಡೆಯಲು ಹೀಗೆ ಮಾಡುತ್ತವೆ ಎಂದು ಬಾಗಲಕೋಟೆಯಲ್ಲಿ ಸಚಿವ ಸಿ.ಸಿ.ಪಾಟೀಲ್ ಹೇಳಿದ್ದಾರೆ.

ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ಹಿನ್ನೆಲೆ; ತುಮಕೂರು ಜಿಲ್ಲೆಯ ಎಲ್ಲಾ ಶಾಲೆಗಳ ಸುತ್ತಮುತ್ತ 144 ಸೆಕ್ಷನ್ ಜಾರಿ

ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ಹಿನ್ನೆಲೆ ತುಮಕೂರು ಜಿಲ್ಲೆಯ ಎಲ್ಲಾ ಶಾಲೆಗಳ ಸುತ್ತಮುತ್ತ 144 ಸೆಕ್ಷನ್ ಜಾರಿ ಮಾಡಲಾಗಿದೆ. ಫೆಬ್ರವರಿ 14 ರ ಬೆಳಗ್ಗೆ 6 ಗಂಟೆಯಿಂದ 144 ಸೆಕ್ಷನ್ ಜಾರಿ ಆಗಲಿದೆ. ಶಾಲೆಯ 200 ಮೀಟರ್ ಸುತ್ತಮುತ್ತ ನಿಷೇಧಾಜ್ಞೆ ಇರಲಿದೆ. ತುಮಕೂರು ಜಿಲ್ಲಾಧಿಕಾರಿ ವೈಎಸ್ ಪಾಟೀಲ್ ರಿಂದ ಈ ಬಗ್ಗೆ ಆದೇಶ ಹೊರಡಿಸಲಾಗಿದೆ. ಮುಂದಿನ ಆದೇಶದವರೆಗೆ 144 ಸೆಕ್ಷನ್ ಜಾರಿ ಮಾಡಿ ತುಮಕೂರು ಡಿಸಿ ಆದೇಶ ನೀಡಿದ್ದಾರೆ.

ಕೆಲ ಷರತ್ತುಗಳನ್ನ ವಿಧಿಸಿರುವ ಜಿಲ್ಲಾಡಳಿತ, ಶಾಲೆಯ ಗುರುತಿನ ಚೀಟಿ ಹೊಂದಿರುವ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳಿಗೆ ಮಾತ್ರ ಶಾಲೆಯ ಒಳಗೆ ಹೋಗಲು ಅವಕಾಶ ನೀಡಿದೆ. ಶಾಲೆ ಸುತ್ತಮುತ್ತ ಇರುವ ಅಂಗಡಿ ತೆರೆಯಲು ಅವಕಾಶ ಇದೆ. ಆದರೆ ಅಂಗಡಿ ಸುತ್ತಮುತ್ತ ಜನ ಗುಂಪುಗೂಡುವಂತಿಲ್ಲ‌ ಎಂದು ಹೇಳಲಾಗಿದೆ. ನಿಷೇಧಾಜ್ಞೆ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಸುವಂತಿಲ್ಲ. ಯಾವುದೇ ಮಾರಕಾಸ್ತ್ರಗಳು ಹಾಗೂ ಸ್ಪೋಟಕ ವಸ್ತುಗಳನ್ನ ಹಿಡಿದು ಓಡಾಡುವಂತಿಲ್ಲ‌. ಯಾವುದೇ ಸಭೆ, ಬಹಿರಂಗ ಪ್ರಚಾರ ನಡೆಸುವಂತಿಲ್ಲ. ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳೋದಾಗಿ ತುಮಕೂರು ಡಿಸಿ ವೈಎಸ್ ಪಾಟೀಲ್ ಆದೇಶ ನೀಡಿದ್ದಾರೆ.

TV9 Kannada


Leave a Reply

Your email address will not be published.