ಪಾಕಿಸ್ತಾನ ಸದಾ ಒಂದಿಲ್ಲೊಂದು ಸಣ್ಣ ಬುದ್ಧಿ ತೋರಿಸಿ ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳಿಗೆ ಗುರಿಯಾಗುತ್ತದೆ. ಇದೀಗ ಪಾಕ್ ರಾಯಭಾರ ಕಚೇರಿ ಸಿಬ್ಬಂದಿ  ಅದೇ ರೀತಿಯ ಕೆಲಸವೊಂದನ್ನ ಮಾಡಿ ತಮ್ಮ ದೇಶಕ್ಕೆ ಮುಜುಗರ ತಂದಿದ್ದಾರೆ.

ದಕ್ಷಿಣ ಕೋರಿಯಾದ ಪಾಕಿಸ್ತಾನ ರಾಯಭಾರ ಕಚೇರಿಯ ಇಬ್ಬರು ಸಿಬ್ಬಂದಿ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾರೆ. ಯೊಂಗ್ಸಾನ್ ಜಿಲ್ಲೆಯ ಅಂಗಡಿಯಲ್ಲಿ ಟೋಪಿ ಹಾಗೂ ಚಾಕ್ಲೇಟ್ ಕದ್ದಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಓರ್ವ ಸಿಬ್ಬಂದಿ ಫೆಬ್ರವರಿಯಲ್ಲಿ 11,000 ವಾನ್( ಸುಮಾರು 750 ರೂಪಾಯಿ) ಬೆಲೆಯ ಟೋಪಿಯನ್ನ ಕದ್ದಿದ್ದಾರೆ ಹಾಗೂ ಈ ಹಿಂದೆ ಜನವರಿಯಲ್ಲಿ ಬೇರೊಬ್ಬ ಸಿಬ್ಬಂದಿ ಅದೇ ಅಂಗಡಿಯಲ್ಲಿ ಚಾಕ್ಲೇಟ್  ಕದ್ದಿದ್ದಾರೆಂದು ವಿಚಾರಣೆಯ ವೇಳೆ ಗೊತ್ತಾಗಿದೆ. ಈ ಕುರಿತು ತನಿಖೆ ನಡೆಸಲಾಗಿದ್ದು, ರಾಜತಾಂತ್ರಿಕ ಕಾರಣಗಳಿಂದ ದಕ್ಷಿಣ ಕೊರಿಯಾ ಅಧಿಕಾರಿಗಳು ಕೇಸ್​ ದಾಖಲು ಮಾಡದೆ ಪ್ರಕರಣವನ್ನು ಕ್ಲೋಸ್ ಮಾಡಿದ್ದಾರೆ ಎಂದು ವರದಿಯಾಗಿದೆ

ರಾಜತಾಂತ್ರಿಕ ಸಿಬ್ಬಂದಿ ಕಳ್ಳತನ ಮಾಡಿ ಪಾಕಿಸ್ತಾನಕ್ಕೆ ಮುಜುಗರ ತಂದಿರೋದು ಇದೇ ಮೊದಲೇನಲ್ಲ. ಈ ಹಿಂದೆ 2018ರಲ್ಲಿ ಪಾಕಿಸ್ತಾನದ ಡಿಪ್ಲೋಮ್ಯಾಟ್, ಹೂಡಿಕೆ ಮತ್ತು ಸೌಲಭ್ಯದ ಜಂಟಿ ಕಾರ್ಯದರ್ಶಿ ಜರಾರ್ ಹೈದರ್ ಖಾನ್ ಕುವೈತ್ ರಾಯಭಾರಿಯ ಪರ್ಸ್​ ಕದಿಯುವಾಗ ಸಿಕ್ಕಿಬಿದ್ದಿದ್ದು ಭಾರೀ ಸುದ್ದಿಯಾಗಿತ್ತು.

ರಾಜತಾಂತ್ರಿಕ ಸಂಬಂಧಗಳ  ಮೇಲಿನ ವಿಯೆನ್ನಾ ಒಪ್ಪಂದದ ಅಡಿ, ರಾಜತಾಂತ್ರಿಕರು ಮತ್ತು ಅವರ ಕುಟುಂಬಗಳು ತಮ್ಮ ಆತಿಥೇಯ ದೇಶದ ಕೆಲವು ಕಾನೂನುಗಳ ಅಡಿಯಲ್ಲಿ ಬಂಧನ ಅಥವಾ ದೋಷಾರೋಪಣೆಯನ್ನು ತಪ್ಪಿಸಬಹುದು.

The post ದಕ್ಷಿಣ ಕೊರಿಯಾದಲ್ಲಿ ಟೋಪಿ ಕದ್ದು ಸಿಕ್ಕಿಬಿದ್ದ ಪಾಕ್​ ರಾಯಭಾರಿ ಕಚೇರಿ ಸಿಬ್ಬಂದಿ appeared first on News First Kannada.

Source: News First Kannada
Read More