ಕೊಲ್ಕತ್ತಾ: ದೇಶದಲ್ಲಿ ವ್ಯಾಕ್ಸಿನೇಷನ್ ವೇಗ ಹೆಚ್ಚಿಸಲು ಹಲವು ಕ್ರಮಗಳನ್ನ ಕೈಗೊಳ್ಳಲಾಗ್ತಿದೆ. ಈವರೆಗೆ ಭಾರತದಲ್ಲಿ 28 ಕೋಟಿ ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ. ದೂರದ ಗ್ರಾಮಾಂತರ ಪ್ರದೇಶದ ಜನರು ಹಾಗೂ ಆದಿವಾಸಿ ಸಮುದಾಯದ ಜನರಿಗೂ ಲಸಿಕೆ ತಲುಪಿಸೋದನ್ನ ಮರೆತಿಲ್ಲ. ಇದಕ್ಕೆ ನಿದರ್ಶನವೆಬಂತೆ ಪಶ್ಚಿಮ ಬಂಗಾಳದಲ್ಲಿ ಜಿಲ್ಲಾಧಿಕಾರಿಯೊಬ್ಬರು ಸುಮಾರು 20 ಕಿಲೋಮೀಟರ್​ ದೂರ ಕಾಡಿನಲ್ಲಿ ಕಾಲ್ನಡಿಗೆಯ ಮೂಲಕವೇ ಬೆಟ್ಟ ಗುಡ್ಡ ಹತ್ತಿಳಿದು  ಹೋಗಿ 100 ಜನರಿಗೆ ಲಸಿಕೆ ಹಾಕಿಸಿದ್ದು , ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಪಶ್ಚಿಮ ಬಂಗಾಳದ ಆಲಿಪುರ್​​ದೌರ್​ನ ಜಿಲ್ಲಾ ಮ್ಯಾಜಿಸ್ಟ್ರೇಟ್​​​ ಆಗಿರೋ ಐಎಎಸ್​ ಅಧಿಕಾರಿ ಸುರೇಂದ್ರ ಕುಮಾರ್ ಮೀನಾ ಉತ್ತರ ಬಂಗಾಳದ ಹಲವು ಗ್ರಾಮಗಳಲ್ಲಿ ವ್ಯಾಕ್ಸಿನೇಷನ್ ಅಭಿಯಾನ ನಡೆಸಿದ್ದಾರೆ. ಅದ್ರಲ್ಲೂ ಅವರು ಭಾರತ-ಭೂತಾನ್ ಗಡಿ ಭಾಗದ ಗ್ರಾಮದಲ್ಲಿರೋ ಜನರಿಗೆ ಲಸಿಕೆ ಹಾಕಿಸಲು ಕಿಲೋಮೀಟರ್​ಗಟ್ಟಲೆ ಕಾಡಿನಲ್ಲಿ ಟ್ರೆಕ್ಕಿಂಗ್ ಮಾಡಿಕೊಂಡು ಹೋಗಿರೋದನ್ನ ಹಲವಾರು ಮಂದಿ ಶ್ಲಾಘಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸುರೇಂದ್ರ ಕುಮಾರ್ ಮೀನಾ, ನಾನು ಹಾಗೂ ನಮ್ಮ ತಂಡ ಭಾರತ-ಭೂತಾನ್ ಗಡಿಯ ಸಮೀಪವಿರುವ ಬಕ್ಸಾ ಬೆಟ್ಟಗಳ ದೂರದ ಹಳ್ಳಿಯಾದ ಅಡ್ಮಾವನ್ನು ತಲುಪಲು ಸುಮಾರು 11 ಕಿ.ಮೀ ಟ್ರೆಕ್ಕಿಂಗ್ ಮಾಡಿದೆವು. ಅತ್ಯಂತ ದೂರದ ಪ್ರದೇಶವಾದ ಅಡ್ಮಾದಲ್ಲಿ ಜನರಿಗೆ ಲಸಿಕೆ ಹಾಕಿಸಿದೆವು. ಆಡ್ಮಾವನ್ನ ತಲುಪಲು ನಾವು ಪೋಖಾರಿ, ಟೋರಿಬಾರಿ, ಶೆಗಾಂವ್ ಮತ್ತು ಫುಲ್ಬತಿ ಗ್ರಾಮಗಳನ್ನ ಹಾದು ಸುಮಾರು 16 ರಿಂದ 18 ಕಿಲೋಮೀಟರ್ ನಡೆದುಕೊಂಡು ಹೋದೆವು. ನಮ್ಮ ತಂಡದಲ್ಲಿದ್ದ ಆರೋಗ್ಯ ಸಿಬ್ಬಂದಿ ಲಸಿಕೆ ಇದ್ದ ಕೋಲ್ಡ್​ ಬಾಕ್ಸ್​​ಗಳನ್ನ ಹೊತ್ತುಕೊಂಡು ಬಂದರು ಅಂತ ಹೇಳಿದ್ದಾರೆ.

ಆಡ್ಮಾ ತಲುಪುವ ಮಾರ್ಗ ಮಧ್ಯೆ ಸಿಕ್ಕ ಗ್ರಾಮಗಳಲ್ಲೂ ಸುರೇಂದ್ರ ಅವರು ಜನರಿಗೆ ಅರಿವು ಮೂಡಿಸಿ ಲಸಿಕೆ ಕೊಡಿಸಿದ್ದಾರೆ. ಅವರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಇತರೆ ಅಧಿಕಾರಿಗಳು ಮತ್ತು ಜನರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

 

The post ದಟ್ಟ ಕಾಡಿನಲ್ಲಿ 20 ಕಿ.ಮೀ ನಡೆದು, 100 ಜನರಿಗೆ ಲಸಿಕೆ ಹಾಕಿಸಿದ ಡಿಸಿ appeared first on News First Kannada.

Source: newsfirstlive.com

Source link