ದಮ್ಮನಕಟ್ಟೆ ಸಫಾರಿ ತೆರಳಿದವರಿಗೆ ಮರ ಹತ್ತಲು ಯತ್ನಿಸುವ ಹುಲಿ ಮತ್ತು ಸ್ವೇಚ್ಛೆಯಾಗಿ ಮೇಯುತ್ತಿರುವ ಆನೆ, ಜಿಂಕೆಗಳು ಕಾಣಿಸಿಕೊಂಡಿದ್ದು | People on Dammankatte safari spot a tiger making futile effort to climb a tree


ಹುಲಿ ಬೆಕ್ಕಿನ ಜಾತಿಗೆ ಸೇರಿದ ಪ್ರಾಣಿ, ಇದನ್ನು ಆಂಗ್ಲ ಭಾಷೆಯಲ್ಲಿ ಬಿಗ್ ಕ್ಯಾಟ್ ಅಂತಲೂ ಕರೆಯುತ್ತಾರೆ. ಹುಲಿ ಮತ್ತು ಬೆಕ್ಕಿನ ಪ್ರವರ್ಗಕ್ಕೆ ಸೇರಿದ ಇತರ ಪ್ರಾಣಿಗಳ ಗಂಭೀರ ನಡಿಗೆ ಮನಸ್ಸಿಗೆ ಮುದ ನೀಡುತ್ತದೆ. ಮನೆಯಲ್ಲಿರುವ ಬೆಕ್ಕಿನ ನಡಿಗೆಯನ್ನು ಗಮನಿಸಿ ನೋಡಿ. ಇದನ್ನು ಯಾಕೆ ಹೇಳಬೇಕಾಗಿದೆ ಎಂದರೆ, ವಾರಾಂತ್ಯದಲ್ಲಿ ಹೆಚ್ ಡಿ ಕೋಟೆ ಕಬಿನಿ ಹಿನ್ನೀರಿಗೆ ಹತ್ತಿರದ ದಮ್ಮನಕಟ್ಟೆ ಅರಣ್ಯ ಪ್ರದೇದಲ್ಲಿ ಸಫಾರಿಗೆಂದು ಹೋದ ಜನರಿಗೆ ಮರ ಹತ್ತಲು ಪ್ರಯತ್ನಿಸುತ್ತಿರುವ ಭಾರಿ ಗಾತ್ರದ ಹುಲಿಯೊಂದು ಕಾಣಿಸಿದೆ. ಹಾಗೆ ನೋಡಿದರೆ ಹುಲಿ, ಚಿರತೆ ಮತ್ತು ಬೆಕ್ಕು ಸಲೀಸಾಗಿ ಮರ ಹತ್ತುತ್ತವೆ. ತಾವು ಬೇಟೆಯಾಡಿದ ಪ್ರಾಣಿಯನ್ನು ಮರದ ಮೇಲೆ ಎಳೆದೊಯ್ದು ನಿರಾತಂಕದಿಂದ ಭಕ್ಷಿಸುವ ಹುಲಿ ಮತ್ತು ಚಿರತೆಗಳ ಫೋಟೋ ಮತ್ತು ಇಮೇಜುಗಳನ್ನು ನಾವು ಅನೇಕ ಸಲ ನೋಡಿದ್ದೇವೆ.

ಆದರೆ, ಈ ವಿಡಿಯೋನಲ್ಲಿ ನಿಮಗೆ ಗೋಚರಿಸುತ್ತಿರುವ ಹಾಗೆ, ಹುಲಿಗೆ ಮರ ಹತ್ತುವುದು ಸಾಧ್ಯವಾಗುತ್ತಿಲ್ಲ. ಅದು ಹತ್ತಲು ಪ್ರಯತ್ನಿಸುತ್ತಿರುವ ಮರದ ಬೊಡ್ಡೆ ಬಹಳ ಅಗಲವಾಗಿರುವುದರಿಂದ ಅದರ ಹಿಡಿತಕ್ಕೆ ಅದು ಬರುತ್ತಿಲ್ಲ. ಹಾಗಂತ, ಹತ್ತಿಯೇ ತೀರುವ ವ್ಯರ್ಥ ಪ್ರಯತ್ನವನ್ನೇನೂ ಹುಲಿ ಮಾಡುತ್ತಿಲ್ಲ. ಒಮ್ಮೆ ಪ್ರಯತ್ನಿಸಿ ಅದೇ ರಾಜ ಗಾಂಭೀರ್ಯದೊಂದಿಗೆ ಮುಂದೆ ಸಾಗುತ್ತದೆ.

ಸಫಾರಿಗೆ ತೆರಳಿದವರಿಗೆ ವೀರನ ಹೊಸಹಳ್ಳಿ ಕಟ್ಟು ರಸ್ತೆಯಲ್ಲಿ ಬೇರೆ ವನ್ಯ ಜೀವಿಗಳು ಸಹ ಕಾಣಿಸಿವೆ. ಜಿಂಕೆಗಳು ಅರಣ್ಯ ಪ್ರದೇಶದಲ್ಲಿ ಸ್ವೇಚ್ಛೆಯಾಗಿ ಹುಲ್ಲು ಮೇಯುತ್ತಿವೆ. ವಾಹನದ ಶಬ್ದ ಕೇಳಿ ಕೊಂಚ ವಿಚಲಿತಗೊಳ್ಳುತ್ತವೆಯಾದರೂ ಅದರಿಂದ ತಮಗೇನು ಅಪಾಯವಿಲ್ಲ ಅಂತ ಖಾತ್ರಿಯಾದ ನಂತರ ತಮ್ಮ ಪಾಡಿಗೆ ತಾವು ಮೇಯುವುದನ್ನು ಮುಂದುವರಿಸುತ್ತವೆ.

ಭರ್ಜರಿಯಾದ ಎರಡು ಕೋರೆಹಲ್ಲುಗಳೊಂದಿಗೆ ಮಿಂಚುತ್ತಿರುವ ಆನೆ ಸಹ ಮೇಯುತ್ತಾ ನಿಂತಿರುವುದು ಕಣ್ಣಿಗೆ ಬಿದ್ದಿದೆ.  ಹಾಗೆಯೇ, ಮುಂಗುಸಿಯೊಂದು ರಸ್ತೆಗೆ ಬಂದು ಬಿಟ್ಟಿದೆ. ವಾಹನವನ್ನು ನೋಡಿದ ಕೂಡಲೇ ರಸ್ತೆ ಬಿಟ್ಟು ಅಡವಿಯೊಳಗೆ ಓಡುತ್ತದೆ.

ಇದನ್ನೂ ಓದಿ:    Shardul Thakur: ದೀರ್ಘಕಾಲದ ಗೆಳತಿಯೊಂದಿಗೆ ಟೀಂ ಇಂಡಿಯಾ ವೇಗಿ ಶಾರ್ದೂಲ್ ಠಾಕೂರ್ ನಿಶ್ಚಿತಾರ್ಥ; ವಿಡಿಯೋ

TV9 Kannada


Leave a Reply

Your email address will not be published. Required fields are marked *