‘ದಯವಿಟ್ಟು ಸಭ್ಯವಾಗಿ ಹೇಳಿ’; ತಮ್ಮ ತಂಟೆಗೆ ಬಂದವರಿಗೆ ಸಮಂತಾ ತಿರುಗೇಟು | Samantha hit Backs Silently for those who trolls her over Divorce


‘ದಯವಿಟ್ಟು ಸಭ್ಯವಾಗಿ ಹೇಳಿ’; ತಮ್ಮ ತಂಟೆಗೆ ಬಂದವರಿಗೆ ಸಮಂತಾ ತಿರುಗೇಟು

ಸಮಂತಾ

ಸಮಂತಾ ಹಾಗೂ ನಾಗ ಚೈತನ್ಯ ಬೇರೆ ಆಗಿ ಎರಡು ತಿಂಗಳ ಮೇಲಾಗಿದೆ. ಅವರು ವಿಚ್ಛೇದನ ಪಡೆದು ದೂರವಾದರೂ ಟ್ರೋಲ್​ ಮಾಡುವವರು ಮಾತ್ರ ಸುಮ್ಮನೆ ಕುಳಿತಿಲ್ಲ. ಸಮಂತಾ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅವರನ್ನು ಕೆಲವರು ಕೆಟ್ಟದಾಗಿಯೂ ಟೀಕೆ ಮಾಡುತ್ತಿದ್ದಾರೆ. ಇದು ಸಮಂತಾ ಗಮನಕ್ಕೂ ಬಂದಿದೆ. ಕೆಲ ವಿಚಾರಗಳಲ್ಲಿ ಅವರು ಸಾಕಷ್ಟು ಸಹಿಷ್ಣುತೆ ತೋರುತ್ತಿದ್ದಾರೆ. ನೇರವಾಗಿ ಯಾರ ಬಗ್ಗೆಯೂ ಕಟುವಾಗಿ ಮಾತನಾಡಿಲ್ಲ. ಈಗ ಸಮಂತಾ ವಿಶೇಷ ಮನವಿ ಒಂದನ್ನು ಮಾಡಿಕೊಂಡಿದ್ದಾರೆ. ಅವರ ಈ ಮನವಿಯನ್ನು ಟ್ರೋಲಿಗರು ಒಪ್ಪುತ್ತಾರೋ ಅಥವಾ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.

ಅಕ್ಟೋಬರ್​ ತಿಂಗಳ ಆರಂಭದಲ್ಲಿ ಸಮಂತಾ ಹಾಗೂ ನಾಗ ಚೈತನ್ಯ ಬೇರೆ ಆಗುವ ನಿರ್ಧಾರ ಘೋಷಣೆ ಮಾಡಿದರು. ವಿಚ್ಛೇದನ ಪಡೆದುಕೊಳ್ಳುತ್ತಿರುವುದಕ್ಕೆ ಕಾರಣ ಏನು ಎಂಬುದನ್ನು ಯಾರೊಬ್ಬರೂ ತಿಳಿಸಿಲ್ಲ. ಆದರೆ, ಸಮಂತಾ ಅವರನ್ನೇ ಎಲ್ಲರೂ ಟಾರ್ಗೆಟ್​ ಮಾಡುತ್ತಿದ್ದಾರೆ. ‘ದಿ ಫ್ಯಾಮಿಲಿ ಮ್ಯಾನ್​ 2’ ಸರಣಿಯಲ್ಲಿ ಸಮಂತಾ ಸಖತ್​ ಬೋಲ್ಡ್​ ಆಗಿ ಕಾಣಿಸಿಕೊಂಡಿದ್ದರು. ಇದೇ ವಿಚಾರಕ್ಕೆ ಸಮಂತಾ ಮತ್ತು ನಾಗ ಚೈತನ್ಯ ನಡುವೆ ವೈಮನಸ್ಸು ಮೂಡಿದೆ ಎನ್ನಲಾಗಿತ್ತು. ಇದೇ ವಿಚಾರ ಇಟ್ಟುಕೊಂಡು ಸಮಂತಾ ಅವರನ್ನು ಟಾರ್ಗೆಟ್​ ಮಾಡಲಾಗುತ್ತಿದೆ. ಇದು ಅವರಿಗೆ ಬೇಸರ ಮೂಡಿಸಿದೆ.

ಸಮಂತಾ ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ‘ಇದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ ಎಂದು ನಾನು ನಿರೀಕ್ಷಿಸುವುದಿಲ್ಲ. ಭಿನ್ನಾಭಿಪ್ರಾಯಗಳನ್ನು ಹೊಂದಲು ಅವಕಾಶ ಇದೆ. ನಾನು ಅದನ್ನು ಬೆಂಬಲಿಸುತ್ತೇನೆ. ಆದರೆ ಎಲ್ಲರೂ ನಿರಾಶೆಯನ್ನು ಸಭ್ಯವಾಗಿ ವ್ಯಕ್ತಪಡಿಸಲು ನಾನು ವಿನಂತಿಸುತ್ತೇನೆ’ ಎಂದರು ಸಮಂತಾ.

ಸದ್ಯ ಸಮಂತಾ ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ಹಾಲಿವುಡ್​ ಚಿತ್ರವನ್ನೂ ಅವರು ಒಪ್ಪಿಕೊಂಡಿದ್ದಾರೆ. ಇದರ ಜತೆಗೆ ಅವರಿಗೆ ಬಾಲಿವುಡ್​ನಿಂದಲೂ ಆಫರ್ ಬರುತ್ತಿದೆ. ‘ಪುಷ್ಪ’ ಚಿತ್ರದಲ್ಲಿ ಅವರು ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ಸಿನಿಮಾ ಡಿಸೆಂಬರ್ 17ಕ್ಕೆ ತೆರೆಗೆ ಬರುತ್ತಿದೆ.

ಸಮಂತಾ ಅವರು ಇನ್​ಸ್ಟಾಗ್ರಾಮ್​ನಲ್ಲಿ ಅನೇಕ ಸ್ಟೋರಿಗಳನ್ನು ಪೋಸ್ಟ್​ ಮಾಡುತ್ತಿದ್ದಾರೆ. ಸ್ಫೂರ್ತಿ ತುಂಬುವಂತಹ ಹೇಳಿಕೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಪ್ರತಿದಿನ ಅಂತಹ ಕೋಟ್​ಗಳನ್ನು ಸಮಂತಾಗೆ ಕಳಿಸಿಕೊಡುವುದು ಅವರ ತಾಯಿ ಎಂಬುದು ಗೊತ್ತಾಗಿದೆ. ಸಮಂತಾ ಶೇರ್​ ಮಾಡಿರುವ ವಾಟ್ಸಾಪ್​ ಮೆಸೇಜ್​ನ ಸ್ಕ್ರೀನ್​ಶಾಟ್​ನಲ್ಲಿ ಇದು ಗೊತ್ತಾಗಿದೆ. ಆ ಕಾರಣಕ್ಕಾಗಿಯೇ ಅವರು ‘ಅಮ್ಮ ಹೇಳಿದ್ದು’ ಎಂಬ ಹ್ಯಾಶ್​ಟ್ಯಾಗ್​ ಮೂಲಕ ಅವುಗಳನ್ನು ಪೋಸ್ಟ್​ ಮಾಡುತ್ತಾರೆ.

TV9 Kannada


Leave a Reply

Your email address will not be published. Required fields are marked *