ಬೆಂಗಳೂರು: ಉಡುಪಿಯ ಪೇಜಾವರ ಶ್ರೀಗಳ ಬಗ್ಗೆ ‘ನಾದಬ್ರಹ್ಮ’ ಡಾ.ಹಂಸಲೇಖ ನೀಡಿರುವ ಹೇಳಿಕೆಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ, ಟೀಕೆಗೆ ಗುರಿಯಾಗಿತ್ತು. ಇದರಿಂದ ಎಚ್ಚೆತ್ತ ಹಂಸಲೇಖ, ತಮ್ಮ ಹೇಳಿಕೆಗೆ ಕ್ಷಮೆ ಕೇಳಿದ್ದಾರೆ. ಫೇಸ್ಬುಕ್ನಲ್ಲಿ ವಿಡಿಯೋ ಅಪ್ಲೋಡ್ ಮಾಡಿ ಕ್ಷಮೆ ಕೇಳಿದ್ದಾರೆ. ಖಾಸಗೀ ಚಾನೆಲ್ನ ಸಂಗೀತ ಕಾರ್ಯಕ್ರಮದಲ್ಲಿ ಮಹಾಗುರುವಿನ ಸ್ಥಾನ ಪಡೆದಿರುವ ಹಂಸ ಲೇಖ, ಕೊನೆಗೂ ಕ್ಷಮೆ ಕೇಳಿ ವಿವಾದಕ್ಕೆ ಫುಲ್ ಸ್ಟಾಪ್ ಇಡೋ ಪ್ರಯತ್ನ ಮಾಡಿದ್ದಾರೆ.
ಮೊದಲಿಗೆ ಕ್ಷಮೆ ಇರಲಿ.. ಎರಡನೆಯದಾಗಿಯೂ ಕ್ಷಮೆ ಇರಲಿ.. ನನಗೆ ಗೊತ್ತಿದೆ ಎಲ್ಲಾ ಮಾತುಗಳು ವೇದಿಕೆಗೆ ಅಲ್ಲ. ಅದು ತಪ್ಪು.. ಅಲ್ಲಿ ಒಂದು ಪ್ರಶಸ್ತಿ ಪುರಸ್ಕಾರ ಸಭೆ ಅದು. ಅಲ್ಲಿ ನುಡಿದರೆ ಮುತ್ತಿನ ಹಾರದಂತೆ ಇರಬೇಕು ಅನ್ನೋ ರೀತಿಯಲ್ಲಿ ಇರಬೇಕಿತ್ತು. ನಾನು ಹಾಗೆಯೇ ಅಲಂಕರಿಸಬೇಕಿತ್ತು. ತಪ್ಪು.. ಅಸ್ಪೃಶ್ಯತೆ, ಇದು ನಮ್ಮ ದೇಶಕ್ಕೆ ಅಂಟಿದ ಶಾಪ. ಇದು ನನ್ನ ಮಾತಲ್ಲ, ಜಿ.ಕೃಷ್ಣಮೂರ್ತಿಗಳ ಸ್ಟೇಟ್‌ಮೆಂಟ್.
ಗುರು ಹಿರಿಯರ ಮೇಲೆ ಗೌರವ ಇದೆ
ಈ ಅಸ್ಪೃಶ್ಯತೆಗಳ ಅನಿಷ್ಟತೆಯನ್ನ ತೊಡೆದು ಹಾಕೋಕೆ ಪೇಜಾವರ ಶ್ರೀಗಳಂತಹ ಅನೇಕ ಗುರು, ಹಿರಿಯರು ಪ್ರಯತ್ನ ಹಾಗೂ ಸಂಧಾನಗಳನ್ನ ಮಾಡ್ತಾನೆ ಇದ್ದಾರೆ. ನನಗೆ ಆ ಎಲ್ಲಾ ಸಂಧಾನ, ಪ್ರಯತ್ನಗಳ ಬಗ್ಗೆ ಅಪಾರವಾದ ಗೌರವ ಇದೆ. ದಶಕಗಳ ಹಿಂದೆ ಕಲಾ ರಂಗದಲ್ಲಿಯೂ ಕೂಡ ಅಸ್ಪೃಶ್ಯತೆಯ ಗಾಳಿ ದಟ್ಟವಾಗಿತ್ತು. ಮನುಷ್ಯವಶಾತ್ ಅದು ಇಲ್ಲಿ ಕರಗಿ ಮಾಯವಾಗಿದೆ. ಭಾರತದಲ್ಲೂ ಕೂಡ ಅದು ಕರಗಿ ಮಾಯವಾಗುವ ದಿನ ಬಂದಿದೆ. ಅದು ನಿಧಾನವಾಗಿ ಕರಗಿ ಮಾಯವಾಗುತ್ತಿದೆ. ಶೀಘ್ರವಾಗಿ ಅದು ಆಗಲಿ ಎಂದು ನಾನು ಆಶಿಸುತ್ತೇನೆ.ನನ್ನ ಮಾತು ಹೆಂಡತಿಗೆ ಹಿಡಿಸಲಿಲ್ಲ
ನಾನು ಅಲ್ಲಿ ಆಡಿದ ಕೆಲವು ಮಾತುಗಳು ನನ್ನ ಹೆಂಡತಿಗೆ ಹಿಡಿಸಲಿಲ್ಲ. ಆಕೆಯೇ ಪ್ರತಿಭಟಿಸಿದಳು, ಆಕೆ ಕೂಡ ಕ್ಷಮೆ ಕೂಡ ಕೇಳಿದಳು. ನಾನು ಸಂಗೀತಗಾರ, ನನಗ್ಯಾಕೆ ಈ ಟ್ರೋಲು, ಇತ್ಯಾದಿ.. ಕಂಟ್ರೋಲಾಗಿ ಇರಬೇಕು ತಾನೆ, ನಮ್ಮ ಕೆಲಸ. ನನಗೆ ಯಾರ ಮನಸ್ಸನ್ನೂ ನೋಯಿಸೋದು ಇಷ್ಟವಿಲ್ಲ. ನನ್ನ ಸಂಗೀತ ಹೇಗೆ ಎಲ್ಲರಿಗೂ ಸುಖ ಕೊಡುತ್ತೋ ಹಾಗೆಯೇ ನನ್ನ ಮಾತು ಕೂಡ, ನನ್ನ ಬದುಕು ಕೂಡ ಸುಖ ಕೊಡಬೇಕು. ಇದು ನನ್ನ ಜೀವನದ ಗುರಿ.. ಆದರೆ ಎಲ್ಲಾ ಅನಿಷ್ಟಗಳನ್ನ ತೊಡೆದುಹಾಕುವ ದೃಷ್ಟಿಯಲ್ಲಿ ನನ್ನ ಪಾತ್ರವೂ ಇದ್ದರೆ ಅದನ್ನ ನಾನು ಮಾಡಿಯೇ ಮಾಡುತ್ತೇನೆ. ನಮಸ್ಕಾರ..
ನಾದಬ್ರಹ್ಮ ಹಂಸಲೇಖ, ಸಂಗೀತ ನಿರ್ದೇಶಕ
ಏನಂದಿದ್ರು ಹಂಸಲೇಖ..?
ನಾದಬ್ರಹ್ಮ ಹಂಸಲೇಖ ಅವರನ್ನ ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದರು. ಈ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಹಂಸಲೇಖ..‘ಪೇಜಾವರ ಸ್ವಾಮಿಗಳು ದಲಿತರ ಮನೆಗೆ ವಾಸ್ತವ್ಯಕ್ಕೆ ಹೋಗಿದ್ದಾರೆ ಅಂತ ಸ್ಟೇಟ್‌ಮೆಂಟ್ ಬಂದಿದೆ. ಪೇಜಾವರ ಸ್ವಾಮಿಗಳು ದಲಿತರ ಮನೆಗೆ ಹೋಗಿ ಅಲ್ಲಿ ಕುಳಿತು ಕೊಳ್ಳಬಹುದಷ್ಟೇ, ಅವರು ಕೋಳಿ ಕೊಟ್ಟರೆ ತಿನ್ನೋಕೆ ಆಗುತ್ತದೆಯೇ? ಕೋಳಿ ಬೇಡ, ಕುರಿ ರಕ್ತದ ಫ್ರೈ ಮಾಡಿಕೊಟ್ಟರೆ ತಿಂತಾರಾ? ಲಿವರ್ ಫ್ರೈ ತಿಂತಾರಾ, ಆಗತ್ತಾ? ಅಂದರೆ, ದಲಿತರ ಮನೆಗೆ ಬಲಿತರು ಹೋಗೋದು ಏನ್ ದೊಡ್ಡ ವಿಷ್ಯಾ ಅಂತ ನಂಗ್ ಅನ್ನಿಸ್ತು ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಅಂತ ಶುರು ಮಾಡಿದ್ರು. ಈಗ ಎಲ್ಲರೂ ಗ್ರಾಮ ವಾಸ್ತವ್ಯ ಶುರು ಮಾಡಿದ್ದರು..’ ಎಂದಿದ್ದರು.
ಹಂಸಲೇಖರ ಮಾತಿಗೆ ಸಂಬಂಧಿಸಿ.. ನವೆಂಬರ್ 4 ರಂದು ಉಡುಪಿಯ ಬೀಡಿನಗುಡ್ಡೆಯಲ್ಲಿರುವ ಹರಿಜನ ಕಾಲೋನಿಯಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹಣತೆ ದೀಪ ಬೆಳಗಿ ದೀಪಾವಳಿ ಹಬ್ಬ ಆಚರಿಸಿದ್ದರು. ಬಳಿಕ ಅಲ್ಲಿನ ಪ್ರಾರ್ಥನಾ ಮಂದಿರಕ್ಕೆ ಭೇಟಿ ನೀಡಿ ದೇವರ ಸಾಲಂಕೃತ ಭಾವಚಿತ್ರಗಳಿಗೆ ಮಂಗಳಾರತಿ ಬೆಳಗಿ, ಕಾಲೋನಿ ನಿವಾಸಿಗಳು ಅರ್ಪಿಸಿದ ಭಕ್ತಿ ಗೌರವವನ್ನು ಸ್ವೀಕರಿಸಿ ಅನುಗ್ರಹ ಸಂದೇಶ ನೀಡಿದ್ದರು.
ಇದನ್ನೂ ಓದಿ: ಹರಿಜನ ಕಾಲೋನಿಯಲ್ಲಿ ‘ಬೆಳಕಿನ ಹಬ್ಬ’ ಆಚರಿಸಿದ ಪೇಜಾವರ ಶ್ರೀ