ಇಕ್ರಲಾ, ಒದಿರ್ಲಾ, ಚರ್ಮ ಎಬ್ರಲಾ ಎಂದು ಹರಿತವಾಗಿ ಬರೆದು ದಲಿತ ಜನರ ಮೇಲಿನ ಶೋಷಣೆಗಳನ್ನ ಕಾವ್ಯದಲ್ಲಿ ಮೇಳೈಸಿ ಬಂಡಾಯ ಕಾವ್ಯದಲ್ಲಿ ಸಂಚಲನ ಹುಟ್ಟಿಸಿದವರು.. ಹೊಸದೊಂದು ರೂಪ ಕೊಟ್ಟವರು ಡಾ. ಸಿದ್ದಲಿಂಗಯ್ಯ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿ ತಾಲೂಕಿನ ಮಂಚನಬೆಲೆಯಲ್ಲಿ 1954 ರಲ್ಲಿ ಜನಿಸಿದ ಡಾ. ಸಿದ್ದಲಿಂಗಯ್ಯ ಸರ್ಕಾರಿ ಪ್ರೌಢಶಾಲೆಯಲ್ಲಿ ಓದುವಾಗಲೇ ಕವಿತೆ ಬರೆಯಲು ಪ್ರಾರಂಭಿಸಿದ್ದವರು. ವಿದ್ಯಾರ್ಥಿಯಾಗಿದ್ದಾಗಲೇ ಅವರು ಉತ್ತಮ ಭಾಷಣಕಾರರು ಅಂತಲೂ ಅನ್ನಿಸಿಕೊಂಡಿದ್ದವರು. ಅಂಬೇಡ್ಕರ್, ಪೆರಿಯಾರ್ ಲೋಹಿಯಾರಂಥವರ ವಿಚಾರಧಾರೆಗಳಿಂದ ಆಕರ್ಷಿತರಾಗಿದ್ದ ಸಿದ್ದಲಿಂಗಯ್ಯ ಅವರು ದೊಡ್ಡಮಟ್ಟದ ಸಂಚಲನ ಸೃಷ್ಟಿಸಿದ್ದು ಹೊಲೆಮಾದಿಗರ ಹಾಡು ಕವನ ಸಂಕಲನದಿಂದ.

ಯಾವುದೇ ಒಂದು ವಿಚಾರವನ್ನ ಜನರ ಮನಸ್ಸಿಗೆ ಆಳವಾಗಿ ತಟ್ಟುವಂತೆ ಮಾಡುವ ಮಾಧ್ಯಮಗಳಲ್ಲಿ ಕಾವ್ಯ ಬಹುಮುಖ್ಯ ಪಾತ್ರ ವಹಿಸುತ್ತದೆ. ಅಂತೆಯೇ ದಲಿತರ ಮೇಲಿನ ಶೋಷಣೆಗಳಿಗೆ ಕಾವ್ಯದ ಕನ್ನಡಿ ಹಿಡಿದು ಪ್ರಲಿಫಲಿಸುವಂತೆ ಮಾಡಿದ ಬಹುಮುಖ್ಯ ಬಂಡಾಯ ಕವಿಗಳಲ್ಲಿ ಸಿದ್ದಲಿಂಗಯ್ಯ ಕೂಡ ಒಬ್ಬರು.

ಆಡು ಭಾಷೆಯ ಚಾಟಿ

ಒಂದು ಸಮುದಾಯಕ್ಕಾಗುತ್ತಿರುವ ಅನ್ಯಾಯವನ್ನು ಗ್ರಾಂಥಿಕ ಭಾಷೆಯಲ್ಲಿ ಅದೆಷ್ಟೇ ದೊಡ್ಡ ಪುಸ್ತಕವಾಗಿ ಬರೆದು ವಿವರಿಸಿದರೂ ಜನರ ಮನಸ್ಸಿನಾಳಕ್ಕೆ ಇಳಿಯುವುದಿಲ್ಲ. ಹೀಗಾಗಿಯೇ ಸಿದ್ದಲಿಂಗಯ್ಯ ಆಡುಭಾಷೆಯಲ್ಲೇ ಅದ್ರಲ್ಲೂ ತಮ್ಮ ಸ್ಥಳೀಯ ಭಾಷೆಯಲ್ಲೇ ಇಕ್ರಲಾ, ಒದಿರ್ಲಾ, ಚರ್ಮ ಎಬ್ರುಲಾ ಎಂದು ಕವನ ಬರೆದು ದಲಿತರ ಮೇಲಿನ ಶೋಷಣೆಯ ವಿರುದ್ಧ ಕಾವ್ಯ ಬಂಡಾಯ ಸಾರಿದ್ದರು.

ಸಿದ್ದಲಿಂಗಯ್ಯ ಅವರ ಕಾವ್ಯ ಒಂದು ಕಾಲಕ್ಕೆ ಮಾತ್ರ ಸೀಮಿತವಾದುದ್ದಲ್ಲ.. ಬದಲಿಗೆ ಕಾಲ ಕಾಲಕ್ಕೂ ಶೋಷಿತರ ಗೀತೆಯಾಗಿ ಉಳಿಯುವಂಥವು ಎನ್ನುವುದರಲ್ಲಿ ಅನುಮಾನವಿಲ್ಲ. ಇತ್ತೀಚೆಗೆ ತಮಿಳಿನಲ್ಲಿ ಕರ್ಣನ್ ಮತ್ತು ಅಸುರನ್ ಹೆಸರಿನ ಎರಡು ಸಿನಿಮಾಗಳು ದೊಡ್ಡಮಟ್ಟದಲ್ಲಿ ಸದ್ದು ಮಾಡಿದ್ದವು. ಆ ಸಿನಿಮಾಗಳು ದಲಿತ ಸಮುದಾಯಗಳ ಮೇಲಾಗುವ ಶೋಷಣೆ ಮತ್ತು ಅದರ ವಿರುದ್ಧ ದಲಿತರು ಸಿಡಿದೇಳುವ ರೀತಿಯನ್ನ ಗಾಢ ರೂಪಕಗಳ ಮೂಲಕ ಚಿತ್ರಿಸಲಾಗಿತ್ತು. ಈ ಸಿನಿಮಾಗಳಲ್ಲಿ ನಟ ಶೋಷಣೆಯ ವಿರುದ್ಧ ಸಿಡಿದೇಳುವ ರೀತಿಗೂ ಸಿದ್ದಲಿಂಗಯ್ಯ ತಮ್ಮ ಕಾವ್ಯದಲ್ಲಿ ಸಿಡಿದೆದ್ದಿರುವ ರೀತಿಗೂ ಸಾಮ್ಯತೆ ಇದೆ.

ದಲಿತ ತನಗಾಗುತ್ತಿರುವ ಶೋಷಣೆಯ ವಿರುದ್ಧ ಸಿಡಿದೆದ್ದರೆ ಅದು ಹಿಂಸೆಯಲ್ಲ ಬದಲಿಗೆ ಬಂಡಾಯ ಎಂಬುದನ್ನ ಮನದಟ್ಟು ಮಾಡಿಕೊಟ್ಟ ಪ್ರಮುಖರಲ್ಲಿ ಸಿದ್ದಲಿಂಗಯ್ಯ ಒಬ್ಬರು. ಇಂಥ ಸಿದ್ದಲಿಂಗಯ್ಯ ಇತ್ತೀಚೆಗೆ ಚರ್ಚೆಗೆ ಗ್ರಾಸವಾಗಿದ್ದರು. ಸಿಎಂ ಯಡಿಯೂರಪ್ಪ ಅವರನ್ನ ಆಧುನಿಕ ಬಸವಣ್ಣ ಎಂದು ಕರೆದ ಸಿದ್ದಲಿಂಗಯ್ಯ ಅವರ ವಿರುದ್ಧ ಇನ್ನಿತರ ದಲಿತ ಕವಿಗಳೇ ಕಿಡಿಕಾರಿದ್ದರು.

ವಿಶೇಷ ಬರಹ: ರಾಜಶೇಖರ್ ಬಂಡೆ, ಡಿಜಿಟಲ್ ಡೆಸ್ಕ್

The post ದಲಿತರ ಶೋಷಣೆಗೆ ಕಾವ್ಯದ ಕನ್ನಡಿ ಹಿಡಿದವರು ಬಂಡಾಯ ಕವಿ ಸಿದ್ದಲಿಂಗಯ್ಯ appeared first on News First Kannada.

Source: newsfirstlive.com

Source link