ಬೆಂಗಳೂರು: ಕೆಲ ದಲಿತರು ಹೊಟ್ಟೆಪಾಡಿಗಾಗಿ ಬಿಜೆಪಿ ಜೊತೆಗಿದ್ದಾರೆ ಅಂತ ಸಿದ್ದರಾಮಯ್ಯ ಬೈ ಎಲೆಕ್ಷನ್ನಲ್ಲಿ ಹೇಳಿದ್ರು. ಇದನ್ನೇ ಇಟ್ಕೊಂಡು ಸಿದ್ದರಾಮಯ್ಯರ ವಿರುದ್ಧ ದಲಿತಾಸ್ತ್ರ ಪ್ರಯೋಗಿಸಿದ್ದ ಬಿಜೆಪಿ, ದಲಿತ ವಿರೋಧಿ ಅಂತ ಪ್ರಚಾರ ನಡೆಸಿತ್ತು.. ಇದೀಗ ಬಿಜೆಪಿಯ ದಲಿತಾಸ್ತ್ರಕ್ಕೆ ಸಿದ್ದು ತಿರುಮಂತ್ರ ರೂಪಿಸಿದ್ದಾರೆ. ಆ ಮೂಲಕ ರಾಜ್ಯದಲ್ಲಿ ದಲಿತಾಸ್ತ್ರದ ಸಮರ ಕಾವೇರಿದೆ.
ಕಾವು ಪಡೆದ ‘ದಲಿತಾಸ್ತ್ರ ಸಮರ’
ಬಿಜೆಪಿ ವಿರುದ್ಧ ಸೇಡು ತೀರಿಸಿಕೊಳ್ಳಲು ಸಿದ್ದರಾಮಯ್ಯ ಮುಂದಾಗಿದ್ದಾರೆ. ದಲಿತ ಅಸ್ತ್ರ ಪ್ರಯೋಗಿಸಿದ್ದ ಬಿಜೆಪಿ, ಉಪಸಮರದಲ್ಲಿ ಸಿದ್ದುಗೆ ದಲಿತಾಸ್ತ್ರ ಸಮರದ ಮೂಲಕ ಕಂಟಕ ತಂದಿಟ್ಟಿತ್ತು. ಈಗ ಮುಳ್ಳನ್ನು ಮುಳ್ಳಿಂದಲೇ ತೆಗೆಯಲು ತಂತ್ರ ರೂಪಿಸಿರುವ ಸಿದ್ದರಾಮಯ್ಯ, ಕಾಂಗ್ರೆಸ್ ದಲಿತ ನಾಯಕರಿಂದಲೇ ವಾಗ್ದಾಳಿ ನಡೆಸಲು ಸಜ್ಜಾಗಿದ್ದಾರೆ. ಈ ದಲಿತಾಸ್ತ್ರ ಹೋರಾಟ ವಿಜಯಪುರದಿಂದಲೇ ಶುರುವಾಗಲಿದೆ. ಪ್ರತಿಭಟನೆ, ಸುದ್ದಿಗೋಷ್ಠಿ ಮೂಲಕ ತಿರುಗೇಟು ನೀಡಲು ಪ್ಲಾನ್ ರೂಪಿಸಿದ್ದು, ಬಿಜೆಪಿಯ ಅದೇ ಅಸ್ತ್ರದ ಮೂಲಕವೇ ಪ್ರತ್ಯುತ್ತರ ನೀಡಲು ಸಿದ್ದರಾಮಯ್ಯ ತಯಾರಿ ನಡೆಸಿದ್ದಾರೆ.
ಬಿಜೆಪಿಗೆ ದಲಿತಾಸ್ತ್ರದ ಮೂಲಕವೇ ಪ್ರತ್ಯುತ್ತರ ನೀಡಲು ತಂತ್ರ ಹೆಣೆದಿರುವ ಸಿದ್ದರಾಮಯ್ಯ ಪ್ರತಿಭಟನೆ ಮೂಲಕವೇ ತಿರುಗೇಟು ನೀಡಲು ಮುಂದಾಗಿದ್ದಾರೆ. ಅದ್ರ ಹೊಣೆ ಕೈ ಪಡೆಯ ಎಡಗೈ ನಾಯಕರಿಗೆ ಹೊರಿಸಲಾಗಿದೆ.
ಪ್ರತಿಭಟನೆ ಮೂಲಕವೇ ತಿರುಗೇಟು
ವಿಜಯಪುರದಲ್ಲಿ ಕಾಂಗ್ರೆಸ್ ಎಡಗೈ ದಲಿತ ನಾಯಕರಿಂದ ಪ್ರತಿಭಟನೆಗೆ ಪ್ಲ್ಯಾನ್ ರೆಡಿಯಾಗಿದೆ. ಮಾಜಿ ಸಚಿವ ಆರ್.ಬಿ.ತಿಮ್ಮಾಪುರ್ ನೇತೃತ್ವದಲ್ಲಿ ಇದೇ ಸೋಮವಾರ ಪ್ರತಿಭಟನೆ ನಡೆಯಲಿದೆ. ಜೊತೆಗೆ ಸರಣಿ ಸುದ್ದಿಗೋಷ್ಠಿಗಳ ಮೂಲಕ ಬಿಜೆಪಿಗೆ ತಿರುಗೇಟು ನೀಡಲು ಕೈ ಪಡೆ ಸಜ್ಜಾಗಿದ್ದು, ಮಾಜಿ ಸಚಿವ ಆರ್.ಬಿ. ತಿಮ್ಮಾಪುರ್ ಮತ್ತು ಹೆಚ್. ಆಂಜನೇಯ, ರಾಜ್ಯಸಭಾ ಸದಸ್ಯ ಎಲ್ ಹನುಮಂತಯ್ಯ ಸೇರಿ ಹಲವು ನಾಯಕರು ಇದ್ರಲ್ಲಿ ಭಾಗಿಯಾಗಲಿದ್ದಾರೆ.
ಒಟ್ನಲ್ಲಿ ಆಡಿದ ಆ ಒಂದು ಮಾತನ್ನ ಬ್ರಹ್ಮಾಸ್ತ್ರವಾಗಿಟ್ಟುಕೊಂಡು ಬೈ ಎಲೆಕ್ಷನ್ನಲ್ಲಿ ದಲಿತಾಸ್ತ್ರ ಪ್ರಯೋಗಿಸಿ ಸಂಕಷ್ಟಕ್ಕೆ ಕಾರಣವಾಗಿದ್ದ ಬಿಜೆಪಿಗೆ ಸಿದ್ದು ಪ್ರತಿತಂತ್ರ ಹೆಣೆದಿದ್ದಾರೆ. ಇದಕ್ಕಾಗಿಯೇ ವೇದಿಕೆ ಕೂಡ ಸಜ್ಜಾಗಿದ್ದು, ಸದ್ಯ ಎಲ್ಲರ ಚಿತ್ತ ಸೋಮವಾರದ ಬೆಳೆವಣಿಗೆಯತ್ತ ನೆಟ್ಟಿದೆ.
ವಿಶೇಷ ವರದಿ: ವೀರೇಂದ್ರ ಉಪ್ಪುಂದ, ಪೊಲಿಟಿಕಲ್ ಬ್ಯೂರೋ