ದಸರಾ ಹಬ್ಬಕ್ಕೆ ಬರಲಿದೆ ‘ಕಾಂತಾರ’; ರಿಷಬ್​ ಶೆಟ್ಟಿ ಚಿತ್ರದ ರಿಲೀಸ್​ ಡೇಟ್​ ಘೋಷಿಸಿದ ‘ಹೊಂಬಾಳೆ ಫಿಲ್ಮ್ಸ್​’ | Hombale Films announces release date of Rishab Shetty starrer Kantara Kannada movie


ದಸರಾ ಹಬ್ಬಕ್ಕೆ ಬರಲಿದೆ ‘ಕಾಂತಾರ’; ರಿಷಬ್​ ಶೆಟ್ಟಿ ಚಿತ್ರದ ರಿಲೀಸ್​ ಡೇಟ್​ ಘೋಷಿಸಿದ ‘ಹೊಂಬಾಳೆ ಫಿಲ್ಮ್ಸ್​’

ರಿಷಬ್​ ಶೆಟ್ಟಿ

Kantara Movie Release Date: ‘ಹೊಂಬಾಳೆ ಫಿಲ್ಮ್ಸ್​’ ನಿರ್ಮಾಣದ ‘ಕಾಂತಾರ’ ಸಿನಿಮಾ ನೋಡಲು ರಿಷಬ್​ ಶೆಟ್ಟಿ ಅಭಿಮಾನಿಗಳು ಕಾದಿದ್ದಾರೆ. ಸೆಪ್ಟೆಂಬರ್ 30ರಂದು ಈ ಚಿತ್ರ ಅದ್ದೂರಿಯಾಗಿ ಬಿಡುಗಡೆ ಆಗಲಿದೆ.

ನಟನಾಗಿ, ನಿರ್ದೇಶಕನಾಗಿ ಗುರುತಿಸಿಕೊಂಡಿರುವ ರಿಷಬ್​ ಶೆಟ್ಟಿ (Rishab Shetty) ಅವರ ಪ್ರತಿ ಸಿನಿಮಾದಲ್ಲೂ ಪ್ರೇಕ್ಷಕರಿಗೆ ಹೊಸದೇನನ್ನೋ ಪರಿಚಯಿಸುತ್ತಾರೆ. ಈಗ ಅವರು ‘ಕಾಂತಾರ’ ಸಿನಿಮಾದ (Kantara Movie) ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಕರಾವಳಿ ಭಾಗದ ಕಥೆ ಹೊಂದಿರುವ ಈ ಚಿತ್ರವನ್ನು ಅವರು ನಿರ್ದೇಶಿಸುತ್ತಿದ್ದು, ಮುಖ್ಯ ಭೂಮಿಕೆಯಲ್ಲೂ ನಟಿಸುತ್ತಿದ್ದಾರೆ. ಈ ಸಿನಿಮಾ ಮೇಲೆ ಭರಪೂರ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಖ್ಯಾತ ನಿರ್ಮಾಣ ಸಂಸ್ಥೆಯಾದ ‘ಹೊಂಬಾಳೆ ಫಿಲ್ಮ್ಸ್’ (Hombale Films) ಮೂಲಕ ಈ ಚಿತ್ರ ಮೂಡಿಬರುತ್ತಿರುವ ಕಾರಣದಿಂದ ಹೈಪ್​ ಹೆಚ್ಚಿದೆ. ಈಗ ‘ಕಾಂತಾರ’ ಸಿನಿಮಾದ ರಿಲೀಸ್​ ಡೇಟ್​ ಅನೌನ್ಸ್​ ಮಾಡಲಾಗಿದೆ. ಈ ಬಾರಿಯ ದಸರಾ ಹಬ್ಬದ ಪ್ರಯುಕ್ತ ಸೆ.30ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಈ ಚಿತ್ರಕ್ಕೆ ವಿಜಯ್​ ಕಿರಗಂದೂರು ಬಂಡವಾಳ ಹೂಡುತ್ತಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಟೀಸರ್​​ನಿಂದ ಚಿತ್ರದ ಮೇಲಿನ ಕೌತುಕ ಡಬಲ್​ ಆಗಿದೆ.

ಭಾರತೀಯ ಚಿತ್ರರಂಗದಲ್ಲಿ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾಗಿ ‘ಹೊಂಬಾಳೆ ಫಿಲ್ಮ್ಸ್​’ ಬೆಳೆದು ನಿಂತಿದೆ. ‘ಕೆಜಿಎಫ್​: ಚಾಪ್ಟರ್​ 2’ ರೀತಿಯ ಬೃಹತ್​ ಸಿನಿಮಾವನ್ನು ನಿರ್ಮಾಣ ಮಾಡಿದ ಖ್ಯಾತಿ ಈ ಸಂಸ್ಥೆಗೆ ಸಲ್ಲುತ್ತದೆ. ಹಾಗಂತ ಒಂದೇ ರೀತಿಯ ಚಿತ್ರಗಳನ್ನು ಈ ಸಂಸ್ಥೆ ನಿರ್ಮಾಣ ಮಾಡುತ್ತಿಲ್ಲ. ಬಗೆಬಗೆಯ ಸಿನಿಮಾಗಳಿಗೆ ಬಂಡವಾಳ ಹೂಡಲಾಗುತ್ತಿದೆ. ಆ ಪೈಕಿ ‘ಕಾಂತಾರ’ ಸಿನಿಮಾ ಮೂಲಕ ಗಮನ ಸೆಳೆಯುತ್ತಿದೆ.

TV9 Kannada


Leave a Reply

Your email address will not be published. Required fields are marked *