ದಸರಾ ಹೊತ್ತಿಗೆ ಅಂಬಾರಿ ಹೊರುವ ಆನೆ ಹೈಕಮಾಂಡ್‍ಗೆ ಸಿಗುತ್ತೆ: ಯೋಗೇಶ್ವರ್

– ಸಿಎಂ ಹುದ್ದೆ ದಸರಾದ ಅಂಬಾರಿ ಹೊರುವ ಆನೆ ಇದ್ದಂತೆ, ಶಾಶ್ವತ ಅಲ್ಲ

ಮೈಸೂರು: ಸಿಎಂ ಹುದ್ದೆಯನ್ನು ಮೈಸೂರು ದಸರಾದ ಅಂಬಾರಿ ಹೊರುವ ಆನೆಗೆ ಹೋಲಿಸಿ ಸಚಿವ ಸಿ.ಪಿ.ಯೋಗೇಶ್ವರ್ ನಿಗೂಢವಾಗಿ ಮಾತನಾಡಿದ್ದಾರೆ.

ಈ ಕುರಿತು ನಗರದಲ್ಲಿ ಮಾತನಾಡಿದ ಅವರು, ಸಿಎಂ ಹುದ್ದೆ ಮೈಸೂರು ದಸರಾದ ಅಂಬಾರಿ ಹೊರುವ ಆನೆ ಇದ್ದಂತೆ, ಅದೇನು ಶಾಶ್ವತ ಅಲ್ಲ. ಅಂಬಾರಿಯನ್ನು, ತಾಯಿ ಚಾಮುಂಡೇಶ್ವರಿಯನ್ನು ನಾವು ಗೌರವಿಸುತ್ತೇವೆ. ಸಿಎಂ ಆದವರು ಸಂವೇದನಾಶೀಲರಾಗಿರಬೇಕು, ಆದರ್ಶ ಆಲೋಚನೆ ಹೊಂದಿರಬೇಕು, ಸಮರ್ಥವಾಗಿರಬೇಕು. ಆನೆ ತೂಕ ಮಾತ್ರ ಪ್ರಾಮುಖ್ಯ ಆಗಲ್ಲ, ಕೊನೆಯ ತನಕ ಯಶಸ್ವಿಯಾಗಿ ಅಂಬಾರಿ ತಲುಪಿಸುವ ಆನೆಯಾಗಬೇಕು. ಸಿಎಂ ಅನ್ನುವುದು ವೈಭವ, ಪ್ರೆಸ್ಟೀಜ್ ಅಲ್ಲ. ಅದು ಜನಪರ ಕಾಳಜಿ ಇರುವ ಸಂವೇದಶೀಲವಾದ ಹುದ್ದೆ ಎಂದು ಪರೋಕ್ಷವಾಗಿ ಮುಖ್ಯಮಂತ್ರಿ. ಬಿ.ಎಸ್.ಯಡಿಯೂರಪ್ಪನವರಿಗೆ ಟಾಂಗ್ ನೀಡಿದ್ದಾರೆ.

ಸಿಎಂ ಸ್ಥಾನ ಸಾಕು ಎಂದು ಸಿದ್ದರಾಮಯ್ಯ ಹೇಳಿದ್ದರು, ಈಗ ಬೇಕು ಎನ್ನುತ್ತಿದ್ದಾರೆ. ಅಂಬಾರಿ ಹೊರುವ ಆನೆಯನ್ನು ಆಗಾಗ ಬದಲಾಯಿಸಲಾಗುತ್ತದೆ, ಬದಲಾವಣೆ ಜಗದ ನಿಯಮ. ಅರ್ಜುನ, ಅಭಿಮನ್ಯು, ಬಲರಾಮ ಎಲ್ಲರೂ ಅಂಬಾರಿ ಹೊತ್ತಿದ್ದಾರೆ. ಅರ್ಜುನ ಅಂಬಾರಿ ಹೊತ್ತ ಎಂದು ಮರಿ ಆನೆಗೆ ಅಂಬಾರಿ ಹೊರಿಸಲು ಸಾಧ್ಯವಿಲ್ಲ. ಕರ್ನಾಟಕ ಆನೆ, ಹುಲಿಗಳಿಗೆ ಜಾಸ್ತಿ ಹೆಸರುವಾಸಿ. ಸಮರ್ಥವಾಗಿ ಅಂಬಾರಿ ಹೊರುವ ಆನೆ ಖಂಡಿತ ಸಿಗುತ್ತದೆ. ಇನ್ನೇನು ದಸರಾ ಬರುತ್ತದೆ, ಅಷ್ಟರಲ್ಲಿ ಅಂಬಾರಿ ಹೊರುವ ಆನೆ ಹೈ ಕಮಾಂಡ್‍ಗೆ ಸಿಗಲಿದೆ ಎಂದು ಹೇಳುವ ಮೂಲಕ ಮತ್ತೆ ನಾಯಕತ್ವ ಬದಲಾವಣೆ ಬಗ್ಗೆ ಸಿಪಿವೈ ಮಾತನಾಡಿದ್ದಾರೆ.

ಸರ್ಕಾರದಲ್ಲಿ ನನಗೆ ಈಗಲೂ ಅಸಮಾಧಾನ ಇದೆ. ಇದು ನನ್ನ ಸರ್ಕಾರ ಎನ್ನುವ ಭಾವನೆ ಬರುತ್ತಿಲ್ಲ. ನನಗೆ ಆಗುತ್ತಿರುವ ನೋವು, ಚಿತ್ರಹಿಂಸೆಯನ್ನು ಹೇಳುತ್ತಿದ್ದೇನೆ. ಅದರಲ್ಲಿ ಎಲ್ಲವನ್ನೂ ಹೇಳಲು ಸಾಧ್ಯವಿಲ್ಲ. ನಮ್ಮ ಸರ್ಕಾರ ಇದ್ದರೂ ವಿರೋಧ ಪಕ್ಷದವರ ಕೈ ಮೇಲಾಗುತ್ತಿದೆ. ಜಿ.ಪಂ., ತಾ.ಪಂ., ಮೀಸಲಾತಿ ಸಹ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ ರೀತಿ ಆಗಿದೆ. ಈ ರೀತಿ ಚಿತ್ರಹಿಂಸೆ ಸಾಕಷ್ಟು ಬಾರಿ ಆಗಿದೆ. ಅವರ ಅನುಕೂಲಕ್ಕೆ ತಕ್ಕಂತೆ ವಿಂಗಡನೆ ಮಾಡಿಕೊಂಡಿದ್ದರೆ, ನಾವು ಹೇಗೆ ಸ್ಪರ್ಧೆ ಮಾಡೋದು? ಈ ಸರ್ಕಾರದಲ್ಲಿ ಜನರಿಗೆ ಸಾಮಾಜಿಕ ನ್ಯಾಯ ಕೊಡಿಸಲು ಆಗುತ್ತಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕುಮಾರಸ್ವಾಮಿ ಅವರ ಜೊತೆ ಸಿಎಂ ಯಡಿಯೂರಪ್ಪ ಹೊಂದಾಣಿಕೆ ಸದಾ ಇದೆ. ವಿರೋಧ ಪಕ್ಷಗಳೇ ರಾಜ್ಯದಲ್ಲಿ ಸತ್ತು ಹೋಗಿವೆ ಎಂದು ಕಿಡಿಕಾರಿದರು.

ಯಡಿಯೂರಪ್ಪ ಅವರನ್ನು ಸಿಎಂ ಮಾಡಲು ಸಾಕಷ್ಟು ಶ್ರಮ ವಹಿಸಿದ್ದೇನೆ. ಕೆಲವರು ಅದನ್ನು ಅದುಮುವ ಕೆಲಸ ಮಾಡಿದ್ದಾರೆ. ಆದರೆ ನನ್ನ ಪರಿಸ್ಥಿತಿ ದೇವಸ್ಥಾನದ ಗೋಪುರದ ಅಡಿಗಲ್ಲಿನಂತೆ ಆಗಿದೆ. ಬಂದವರೆಲ್ಲ ಚಪ್ಪಲಿ ಬಿಟ್ಟು, ಕೈ ಮುಗಿದು ಹೋಗುತ್ತಿದ್ದಾರೆ. ಯಾರಿಗೂ ನಾನು ಮಾಡಿದ ಕೆಲಸ ಕಾಣುತ್ತಿಲ್ಲ ಎಂದು ಸಚಿವ ಸಿ.ಪಿ.ಯೋಗೇಶ್ವರ್ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ನಾನು ವಿಜಯೇಂದ್ರ ವಿರುದ್ಧ ಮಾತನಾಡಲ್ಲ, ಯಾಕೆಂದರೆ ಅವರಿಗೆ ಸರ್ಕಾರದಲ್ಲಿ ಅಧಿಕೃತ ಹುದ್ದೆ ಇಲ್ಲ. ಸೂಕ್ಷ್ಮವಾಗಿ ನನ್ನ ವಿಚಾರವನ್ನು ಹೇಳಿದ್ದೇನೆ. ನಾನೇನು ಸರ್ಕಾರ ಅಥವಾ ಪಕ್ಷದ ವಿರುದ್ಧ ಇಲ್ಲ. ನನ್ನನ್ನು ಸಿಎಂ ಯಡಿಯೂರಪ್ಪ ಅವರ ವಿಲನ್ ರೀತಿ ಬಿಂಬಿಸಬೇಡಿ. ನನ್ನನ್ನು ಅವರು ಸರ್ಕಾರದಲ್ಲಿ ಮಂತ್ರಿ ಮಾಡಿಕೊಂಡಿದ್ದಾರೆ ಎಂದರು.

ಸಚಿವ ಶ್ರೀರಾಮುಲು ಪಿಎ ಬಂಧನ, ಬಿಡುಗಡೆ ಕುರಿತು ಮಾತನಾಡಿದ ಅವರು, ಇದರ ಸರಿ, ತಪ್ಪು ಚರ್ಚೆ ನಾನು ಮಾಡಲ್ಲ. ಏನು ಮಾತನಾಡಿದರು ವಿವಾದವಾಗುತ್ತದೆ. ಈಗ ಆಗಿದ್ದನ್ನು ನಾನು ಒಪ್ಪಲ್ಲ, ಈ ಬಗ್ಗೆ ಕರೆದು ಕೇಳಬಹುದಿತ್ತು. ಅಂಗೈ ಹುಣ್ಣಿಗೆ ಕನ್ನಡಿ ಏಕೆ ಎಂದು ಯೋಗೇಶ್ವರ್ ಮಾಧ್ಯಮದವರನ್ನೇ ಪ್ರಶ್ನಸಿದ್ದಾರೆ.

ರಮೇಶ್ ಜಾರಕಿಹೊಳಿ ಷಡ್ಯಂತರಕ್ಕೆ ಬಲಿಯಾಗಿದ್ದಾರೆ, ಅವರಿಗೆ ಸಿಗುವ ನ್ಯಾಯ ಸಿಕ್ಕಿಲ್ಲ. ದುರುದ್ದೇಶದಿಂದಲೇ ತನಿಖೆಯನ್ನು ವಿಳಂಬ ಮಾಡಲಾಗುತ್ತಿದೆ. ಈ ನೋವು, ಚಡಪಡಿಕೆ ಅವರಿಗೆ ಇದೆ, ಅವರು ಸಮಯಕ್ಕೆ ಕಾಯುತ್ತಿದ್ದಾರೆ. ಷಡ್ಯಂತರಕ್ಕೆ ಒಳಗಾಗಿದ್ದಾರೆ ಅನ್ನೋದು ಜಗಜ್ಜಾಹೀರಾಗಿದೆ ಎಂದರು. ನಿಮ್ಮ ಪಕ್ಷದವರಿಂದಲೇ ಷಡ್ಯಂತರ ಆಗಿದೆಯಾ ಎಂಬ ಪ್ರಶ್ನೆಗೆ ಉತ್ತರಿಸದೆ ತೆರಳಿದರು.

ಮೈಸೂರಿನ ಜಯಲಕ್ಷ್ಮಿಪುರಂ ನಲ್ಲಿನ ಮನೆಯಲ್ಲಿ ಸಂಸದ ವಿ.ಶ್ರೀನಿವಾಸಪ್ರಸಾದ್ ಭೇಟಿ ಮಾಡಿದ ಸಚಿವ ಸಿ.ಪಿ.ಯೋಗೇಶ್ವರ್, ಪ್ರಸ್ತುತ ರಾಜಕೀಯ ವಿದ್ಯಮಾನಗಳ ಬಗ್ಗೆ ಇಬ್ಬರೂ ನಾಯಕರು ಪ್ರತ್ಯೇಕ ಮಾತುಕತೆ ನಡೆಸಿದರು.

The post ದಸರಾ ಹೊತ್ತಿಗೆ ಅಂಬಾರಿ ಹೊರುವ ಆನೆ ಹೈಕಮಾಂಡ್‍ಗೆ ಸಿಗುತ್ತೆ: ಯೋಗೇಶ್ವರ್ appeared first on Public TV.

Source: publictv.in

Source link