ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಪ್ರಣಿತಾ ಸುಭಾಷ್ ಅವರು ನಿತಿನ್ ರಾಜು ಜೊತೆ ಭಾನುವಾರ ಸಪ್ತಪದಿ ತುಳಿದಿದ್ದಾರೆ. ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಮದುವೆ ತುಂಬಾ ಸರಳವಾಗಿ ನಡೆದಿದ್ದು, ಕಾರ್ಯಕ್ರಮಕ್ಕೆ ವಧು-ವರರ ಕುಟುಂಬಸ್ಥರನ್ನು ಮಾತ್ರ ಆಹ್ವಾನಿಸಲಾಗಿತ್ತು.

ಸ್ನೇಹಿತರೊಬ್ಬರು ನೂತನ ವಧು-ವರರ ಜೊತೆ ನಿಂತಿರುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದರಿಂದ ಪ್ರಣಿತಾ ಮದುವೆಯಾಗಿರುವ ಸುದ್ದಿ ಬೆಳಕಿಗೆ ಬಂದಿದೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ನಟಿ ಅಭಿಮಾನಿಗಳು ಶುಭಾಶಯಗಳ ಸುರಿಮಳೆಗೈಯುತ್ತಿದ್ದಾರೆ. ಮೂಲತಃ ಬೆಂಗಳೂರು ನಿವಾಸಿಯಾಗಿರುವ ಪ್ರಣಿತಾ ಪತಿ ನಿತಿನ್, ಮಾಲ್‍ವೊಂದರ ಓನರ್ ಎಂಬುದು ಸದ್ಯದ ಮಾಹಿತಿ.

ಮೂಲಗಳ ಪ್ರಕಾರ ನಟಿ ಮದುವೆಯಲ್ಲಿ ತುಂಬಾ ಹತ್ತಿರದ ಸಂಬಂಧಿಕರು ಹಾಗೂ ಸ್ನೇಹಿತರು ಮಾತ್ರ ಭಾಗಿಯಾಗಿದ್ದರು ಎನ್ನಲಾಗಿದೆ. ಅಲ್ಲದೆ ಪ್ರಣಿತಾ ದಂಪತಿ ತಮ್ಮ ಮದುವೆಯನ್ನು ಅದ್ಧೂರಿಯಾಗಿ ಮಾಡಲು ನಿರ್ಧರಿಸಿದ್ದರು. ಆದರೆ ಮಹಾಮಾರಿ ಕೊರೊನಾ ವೈರಸ್ ಎರಡನೇ ಅಲೆಯ ಹಿನ್ನೆಲೆಯಲ್ಲಿ ಲಾಕ್ ಡೌನ್ ಮಾಡಲಾಗಿದ್ದು, ಮದುವೆ ಸಮಾರಂಭಗಳಿಗೆ ಇಂತಿಷ್ಟೇ ಜನ ಸೇರಬೇಕೆಂಬ ನಿಯಮ ತರಲಾಗಿದೆ. ಹೀಗಾಗಿ ಅತ್ಯಾಪ್ತರ ಸಮ್ಮುಖದಲ್ಲಿ ಸರಳವಾಗಿ ಪ್ರಣಿತಾ ಮದುವೆ ನಡೆದಿದೆ ಎಂಬ ಮಾಹಿತಿ ಲಭಿಸಿದೆ.

ನವಜೋಡಿ ಇಲ್ಲಿಯವರೆಗೆ ತಮ್ಮ ಮದುವೆಯ ಬಗ್ಗೆ ಅಧಿಕೃತ ಘೋಷಣೆ ಮಾಡಿಲ್ಲ. ನಟಿ ಪ್ರಣೀತಾ ಇತ್ತೀಚಿನ ದಿನಗಳಲ್ಲಿ ತಮ್ಮ ಸಿನಿಮಾ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಬ್ಯುಸಿ ಆಗಿದ್ರು. ಹಂಗಾಮಾ 2 ಹಾಗೂ ಭುಜ್ ಸಿನಿಮಾಗಳ ಮೂಲಕ ನಟಿ ಕೆಲ ದಿನಗಳಲ್ಲೇ ಬಾಲಿವುಡ್ ಅಂಗಳಕ್ಕೂ ಪಾದಾರ್ಪಣೆ ಮಾಡಲಿದ್ದಾರೆ. ಸ್ಯಾಂಡಲ್‍ವುಡ್‍ನಲ್ಲಿ ರಾಮನ ಅವತಾರ ಎಂಬ ಸಿನಿಮಾದಲ್ಲಿ ರಿಷಿ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೆ ಇವರು ಈಗಾಗಲೇ ತಮಿಳು, ತೆಲುಗಿನಲ್ಲಿಯೂ ನಟಿಸುವ ಮೂಲಕ ಮನೆ ಮಾತಾಗಿದ್ದಾರೆ.

The post ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಪ್ರಣಿತಾ ಸುಭಾಷ್- ನಿತಿನ್ ರಾಜ್ ಯಾರು..? appeared first on Public TV.

Source: publictv.in

Source link