ದಾವಣಗೆರೆಯಲ್ಲಿ ಸುರಿದ ಮಳೆಗೆ ನೆಲ ಕಚ್ಚಿದ ಅಡಿಕೆ ಮರಗಳು, ಹರನಗಳ್ಳಿ-ಕೆಂಗಾಪುರ ಸೇರಿದಂತೆ ಹತ್ತಕ್ಕೂ ಹೆಚ್ಚು ಗ್ರಾಮಗಳ ರಸ್ತೆ ಸಂಚಾರ ಸ್ಥಗಿತ | Davanagere rain effect road block and farmers facing huge loss


ದಾವಣಗೆರೆಯಲ್ಲಿ ಸುರಿದ ಮಳೆಗೆ ನೆಲ ಕಚ್ಚಿದ ಅಡಿಕೆ ಮರಗಳು, ಹರನಗಳ್ಳಿ-ಕೆಂಗಾಪುರ ಸೇರಿದಂತೆ ಹತ್ತಕ್ಕೂ ಹೆಚ್ಚು ಗ್ರಾಮಗಳ ರಸ್ತೆ ಸಂಚಾರ ಸ್ಥಗಿತ

ಮಳೆಯಿಂದಾದ ಹಾನಿ

ದಾವಣಗೆರೆ: ಜಿಲ್ಲೆಯಲ್ಲಿ ತಡರಾತ್ರಿ ಭಾರಿ ಗಾಳಿ ಮಳೆ ಹಿನ್ನೆಲೆ ಅಡಿಕೆ ಮರಗಳು ನೆಲ ಕಚ್ಚಿವೆ. ಹತ್ತಾರು ಎಕರೆ ಅಡಿಕೆ ತೋಟಗಳಲ್ಲಿ ನೀರು ತುಂಬಿದೆ‌. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಗಿರಿಯಾಪುರ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಮಳೆ ಗಾಳಿ ಅಬ್ಬರ ಜೋರಾಗಿದೆ. ಜಿಎಸ್ ಶಿವಮೂರ್ತಪ್ಪ ಹಾಗೂ ಜಿಎಸ್ ಅಜ್ಜಪ್ಪ ಅವರಿಗೆ ಸೇರಿದ ತೋಟದಲ್ಲಿ ನೂರಕ್ಕೂ ಹೆಚ್ಚು ಅಡಿಕೆ ಮರಗಳು ನೆಲ ಕಚ್ಚಿವೆ. ಸ್ಥಳಕ್ಕೆ ತೋಟಗಾರಿಕಾ ಇಲಾಖೆ ಅಧಿಕಾರಿಗಳು ಭೇಟಿ ನೀಡುವಂತೆ ರೈತರು ಆಗ್ರಹಿಸಿದ್ದು ಸೂಕ್ತ ಪರಿಹಾರ ನೀಡಲು ಮನವಿ ಮಾಡಿದ್ದಾರೆ.

ಇನ್ನು ರಾತ್ರಿ ಸುರಿದ ಮಳೆಯಿಂದಾಗಿ ಹಳ್ಳ ತುಂಬಿ ಹರಿಯುತ್ತಿದ್ದು ಮತ್ತೆ ರಸ್ತೆ ಸಂಚಾರ ಸ್ಥಗಿತಗೊಳಿಸಲಾಗಿದೆ. 15 ಕಿಲೋಮೀಟರ್ ಸುತ್ತಿಕೊಂಡು ಬೇರೆ ಸ್ಥಳಕ್ಕೆ ಗ್ರಾಮಸ್ಥರು ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಚನ್ನಗಿರಿ ತಾಲೂಕಿನ ಕೆಂಗಾಪುರ ಬಳಿ ಹರಿದ್ರಾವತಿ ನದಿ ಎಂದೇ ಕರೆಯುವ ಹಳ್ಳಕ್ಕೆ ಭಾರಿ ಪ್ರಮಾಣದ ನೀರು ಹರಿದಿದೆ. ಹರನಗಳ್ಳಿ-ಕೆಂಗಾಪುರ ಸೇರಿದಂತೆ ಹತ್ತಕ್ಕೂ ಹೆಚ್ಚು ಗ್ರಾಮಗಳ ರಸ್ತೆ ಸಂಚಾರ ಸ್ಥಗಿತಗೊಳಿಸಲಾಗಿದೆ. ಹಳ್ಳಕ್ಕೊಂದು ಸೇತುವೆ ನಿರ್ಮಿಸುವಂತೆ ಹತ್ತಾರು ಸಲ ಗ್ರಾಮಸ್ಥರು ಹೋರಾಟ ಮಾಡಿದ್ರು ಸ್ಥಳೀಯ ಶಾಸಕ ಪ್ರೊ. ಲಿಂಗಣ್ಣ ಹಾಗೂ ತಹಶೀಲ್ದಾರ್ ಕ್ಯಾರೆ ಎಂದಿಲ್ಲ. ಶಾಲಾ ಕಾಲೇಜುಗಳಿಗೆ ಹೋಗುವ ಮಕ್ಕಳು ಸೂಳೆಕೆರೆಗೆ ಬಂದು 15 ಸುತ್ತು ಹಾಯ್ದು ಬೇರೆ ಬೇರೆ ಸ್ಥಳಕ್ಕೆ ಹೋಗಬೇಕಿದೆ. ಸೂಕ್ತ ಸೇತುವೆ ನಿರ್ಮಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕರ್ನಾಟಕದಲ್ಲಿ ಇನ್ನೂ 3 ದಿನ ಮಳೆಯ ಆರ್ಭಟ
ಕರ್ನಾಟಕದಲ್ಲಿ ಮಳೆಯ ಅಬ್ಬರ ಹೆಚ್ಚಾಗಿದೆ. ರಾಜ್ಯಾದ್ಯಂತ (Rain in Karnataka) ಇನ್ನೂ ಮೂರು ದಿನ ಮಳೆಯಾಗಲಿದೆ. ಇಂದಿನಿಂದ 3 ದಿನ ಕರ್ನಾಟಕದ (Karnataka Rains) ಉತ್ತರ ಒಳನಾಡು, ದಕ್ಷಿಣ ಒಳನಾಡು ಮತ್ತು ಕರಾವಳಿ ಭಾಗದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಇಂದು ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಆಲಿಕಲ್ಲು ಸಹಿತ ಮಳೆಯಾಗಲಿದೆ. ಕರ್ನಾಟಕದಲ್ಲಿ ಹವಾಮಾನ ಇಲಾಖೆ ಬಹುತೇಕ ರಾಜ್ಯಗಳಲ್ಲಿ ಹಳದಿ ಅಲರ್ಟ್ ಘೋಷಣೆ ಮಾಡಿದೆ. ಬೀದರ್, ಕಲಬುರಗಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ ಮತ್ತು ಧಾರವಾಡದಲ್ಲಿ ಇನ್ನೆರಡು ದಿನ ಯೆಲ್ಲೋ ಅಲರ್ಟ್ (Yellow Alert) ಘೋಷಿಸಲಾಗಿದೆ. ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ತಮಿಳುನಾಡು, ತೆಲಂಗಾಣದಲ್ಲಿ ಚಂಡಮಾರುತ ಎದ್ದಿರುವ ಕಾರಣ ಕರ್ನಾಟಕದ ಹಲವು ರಾಜ್ಯಗಳಲ್ಲಿ ಇನ್ನು ಕೆಲವು ದಿನ ತುಂತುರು ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಇನ್ನೂ ನಾಲ್ಕು ದಿನಗಳ ಕಾಲ ಮೋಡ ಮುಸುಕಿದ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರ್ನಾಟಕ, ತಮಿಳುನಾಡು, ಕೇರಳ ಸೇರಿದಂತೆ ದಕ್ಷಿಣ ಭಾರತದಲ್ಲಿ ಮುಂದಿನ 3 ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

TV9 Kannada


Leave a Reply

Your email address will not be published.