ದಾವಣಗೆರೆ: ಪೊಲೀಸರ ವಶದಲ್ಲಿದ್ದ ವ್ಯಕ್ತಿ ಸಾವು; ಲಾಕಪ್ ಡೆತ್ ಎಂದು ಆರೋಪಿಸಿದ ಕುಟುಂಬಸ್ಥರು | A man dead in police custody at Davanagere family alleged that its lockup death


ದಾವಣಗೆರೆ: ಪೊಲೀಸರ ವಶದಲ್ಲಿದ್ದ ವ್ಯಕ್ತಿ ಸಾವು; ಲಾಕಪ್ ಡೆತ್ ಎಂದು ಆರೋಪಿಸಿದ ಕುಟುಂಬಸ್ಥರು

ಮೃತಪಟ್ಟ ಕುಮಾರ್

ದಾವಣಗೆರೆ: ಪೊಲೀಸರ ವಶದಲ್ಲಿದ್ದ ವ್ಯಕ್ತಿಯೋರ್ವ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾನೆ. ಚಿತ್ರದುರ್ಗ ಜಿಲ್ಲೆಯ ಭರಮಸಾಗರ ತಾಲೂಕಿನ ಬಹದ್ದೂರಘಟ್ಟ ಗ್ರಾಮದ ಕುಮಾರ್ (35) ನಿಗೂಡ ರೀತಿಯಲ್ಲಿ ಮರಣವನ್ನಪ್ಪಿದ್ದಾನೆ. ಸದ್ಯ ದಾವಣಗೆರೆ ಶವಾಗಾರದಲ್ಲಿ ಕುಮಾರ್ ಮೃತದೇಹವಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಸಿಇಎನ್ ಪೊಲೀಸ್ ಇನ್ಸ್‌ಪೆಕ್ಟರ್ ಬಂಧಿಸುವಂತೆ ಆಗ್ರಹಿಸಿ, ದಾವಣಗೆರೆ ಜಿಲ್ಲಾಸ್ಪತ್ರೆ ಬಳಿ ಡಿಎಸ್​ಎಸ್​, ಗ್ರಾಮಸ್ಥರು ಧರಣಿ ನಡೆಸಿದ್ದಾರೆ. ಸ್ಥಳಕ್ಕೆ ದಾವಣಗೆರೆ ಎಸ್‌ಪಿ ಸಿ.ಬಿ.ರಿಷ್ಯಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಕುರಿತು ಮೃತನ ಸಂಬಂಧಿಕರಿಗೆ ದೂರು ನೀಡುವಂತೆ ಸಲಹೆ ನೀಡಿದ್ದಾರೆ.

ಪ್ರಕರಣದ ಕುರಿತು ಎಸ್​ಪಿ ರಿಷ್ಯಂತ್ ಹೇಳಿದ್ದೇನು?
ಪೊಲೀಸರ ವಶದಲ್ಲಿದ್ದ ವ್ಯಕ್ತಿ ಕುಮಾರ್ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದರ ಕುರಿತಂತೆ ದಾವಣಗೆರೆ ಜಿಲ್ಲಾಸ್ಪತ್ರೆ ಬಳಿ ಎಸ್‌ಪಿ ಸಿ.ಬಿ.ರಿಷ್ಯಂತ್ ಪ್ರತಿಕ್ರಿಯಿಸಿದ್ದಾರೆ. ‘‘ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸುತ್ತೇವೆ. ಲಾಕಪ್‌ಡೆತ್‌ ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ. ಕುಟುಂಬಸ್ಥರ ದೂರಿನ ಮೇರೆಗೆ ಪೊಲೀಸರ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆಯನ್ನು ಸಿಐಡಿಗೆ ಒಪ್ಪಿಸುತ್ತೇವೆ’’ ಎಂದು ಅವರು ಹೇಳಿದ್ದಾರೆ. ಇದೇ ವೇಳೆ ಅವರು, ಆರೋಪಿ ಕುಮಾರ್‌ ಲಾಡ್ಜ್‌ವೊಂದರಲ್ಲಿ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಹಣಕ್ಕಾಗಿ ಪೀಡಿಸಿ ಕುಮಾರ್​​ನನ್ನು ಪೊಲೀಸರು ಕೊಂದಿದ್ದಾರೆ: ನವ ನಿರ್ಮಾಣ ಸೇನೆಯ ಚಿತ್ರದುರ್ಗ ಜಿಲ್ಲಾಧ್ಯಕ್ಷ ಗಂಭೀರ ಆರೋಪ
ಹಣಕ್ಕಾಗಿ ಪೀಡಿಸಿ ಕುಮಾರ್​​ನನ್ನು ಪೊಲೀಸರು ಕೊಂದಿದ್ದಾರೆ ಎಂದು ದಾವಣಗೆರೆಯಲ್ಲಿ ನವ ನಿರ್ಮಾಣ ಸೇನೆಯ ಚಿತ್ರದುರ್ಗ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. ಕುಮಾರ್​ಗೆ ಪೊಲೀಸರು ಕರೆ ಮಾಡಿ ಹಣಕ್ಕಾಗಿ ಪೀಡಿಸುತ್ತಿದ್ದರು. ಹಣ ಕೊಡದಿದ್ದಾಗ ವಶಕ್ಕೆ ಪಡೆದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಅದರಿಂದಲೇ ಕುಮಾರ್ ಮೃತಪಟ್ಟಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಕುಮಾರ್​ನದ್ದು ಲಾಕಪ್​ಡೆತ್​: ಡಿಎಸ್​ಎಸ್​ ಆರೋಪ
ಕುಮಾರ್​ನದ್ದು ಲಾಕಪ್​ಡೆತ್​ ಎಂದು ಡಿಎಸ್​ಎಸ್​​​ ಸಂಸ್ಥಾಪಕ ರಾಜ್ಯಾಧ್ಯಕ್ಷ ಪ್ರಕಾಶ್​ ಆರೋಪಿಸಿದ್ದಾರೆ. ‘‘ಅಮಾಯಕ ಕುಮಾರ್​ನನ್ನು ಪೊಲೀಸರು ಸಾಯಿಸಿದ್ದಾರೆ. ವಿಚಾರಣೆಗೆ ಎಂದು ಕರೆದು ಪೊಲೀಸರು ಕೊಲೆ ಮಾಡಿದ್ದಾರೆ. ಕೂಡಲೇ ಪಿಎಸ್​ಐ, ಕಾನ್ಸ್​ಟೇಬಲ್ ಅವರನ್ನು ಬಂಧಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇವೆ’’ ಎಂದು ದಾವಣಗೆರೆಯಲ್ಲಿ ಪ್ರಕಾಶ್​ ಹೇಳಿಕೆ ನೀಡಿದ್ದಾರೆ.

TV9 Kannada


Leave a Reply

Your email address will not be published. Required fields are marked *