ದಿಂಗಾಲೇಶ್ವರ ಸ್ವಾಮೀಜಿ ನನ್ನ ಪರ ಮಾತಾಡಿದ್ದಕ್ಕೆ ಅಭಿನಂದನೆ; ಆದ್ರೆ ಕಮಿಷನ್ ಬಗ್ಗೆ ಆರೋಪಿಸುವ ಬದಲಿಗೆ ದಾಖಲೆ ನೀಡಲಿ -ಕೆ.ಎಸ್.ಈಶ್ವರಪ್ಪ | KS Eshwarappa Slams Congress and dingaleshwara Swamiji in Shivamogga


ದಿಂಗಾಲೇಶ್ವರ ಸ್ವಾಮೀಜಿ ನನ್ನ ಪರ ಮಾತಾಡಿದ್ದಕ್ಕೆ ಅಭಿನಂದನೆ; ಆದ್ರೆ ಕಮಿಷನ್ ಬಗ್ಗೆ ಆರೋಪಿಸುವ ಬದಲಿಗೆ ದಾಖಲೆ ನೀಡಲಿ -ಕೆ.ಎಸ್.ಈಶ್ವರಪ್ಪ

ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ: ದಿಂಗಾಲೇಶ್ವರ ಸ್ವಾಮೀಜಿ ನನ್ನ ಪರ ಮಾತಾಡಿದ್ದಕ್ಕೆ ದಿಂಗಾಲೇಶ್ವರ ಸ್ವಾಮೀಜಿಗೆ ನನ್ನ ಅಭಿನಂದನೆ ತಿಳಿಸುತ್ತೇನೆ ಆದರೆ ಕಮಿಷನ್ ಬಗ್ಗೆ ದಿಂಗಾಲೇಶ್ವರ ಸ್ವಾಮೀಜಿ ಆರೋಪಿಸುವ ಬದಲಿಗೆ ದಾಖಲೆಗಳನ್ನು ನೀಡಲಿ. ಬಾಯಿಗೆ ಬಂದಂತೆ ಮಾತನಾಡುವುದು ಬಿಡಬೇಕು. ಯಾವುದೇ ಇಲಾಖೆಗೆ ಕಮಿಷನ್ ಕೊಟ್ಟಿದ್ದರೆ ದಾಖಲೆ ನೀಡಿ ಎಂದು ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.

ಇನ್ನು ಇದೇ ವೇಳೆ ಈಶ್ವರಪ್ಪ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್‌ಗೆ ಬೆಳಗ್ಗೆ ಎದ್ದರೆ ಮುಸ್ಲಿಮರನ್ನು ಮೆಚ್ಚಿಸುವ ಕೆಲಸ ಮಾಡುತ್ತಿದೆ. ಇವರಿಗೆ ಕಮಿಷನ್ ಬಗ್ಗೆ ಮಾತನಾಡುವುದೇ ಕೆಲಸವಾಗಿಬಿಟ್ಟಿದೆ. ಮುಂದಿನ ದಿನದಲ್ಲಿ ಕಾಂಗ್ರೆಸ್ ವಿಪಕ್ಷ ಸ್ಥಾನದಲ್ಲೂ ಇರಲ್ಲ. ಕೋಮುಗಲಭೆ ಸೃಷ್ಟಿಸುವುದು ತಪ್ಪೆಂದು ಹೇಳುವ ಧೈರ್ಯ ಡಿಕೆಶಿ, ಸಿದ್ದರಾಮಯ್ಯಗೆ ಇಲ್ಲ ಎಂದು ಡಿಕೆ ಶಿವಕುಮಾರ್, ಸಿದ್ದರಾಮಯ್ಯ ವಿರುದ್ಧ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಭಿವೃದ್ಧಿ ಕೆಲಸಗಳನ್ನು ಮಾಡಲಿಲ್ಲ. ವೀರಶೈವ ಲಿಂಗಾಯತರನ್ನು ಒಡೆಯುವ ಕೆಲಸ ಮಾಡಿದ್ದರು. ಹೀಗಾಗಿ ರಾಜ್ಯದ ಜನರು ನಿಮಗೆ ಅಧಿಕಾರವನ್ನು ಕೊಡಲಿಲ್ಲ. ಕಾಂಗ್ರೆಸ್ ಈಗಲಾದರೂ ಜನಪರ ಕೆಲಸ ಮಾಡಲಿ ಎಂದರು.

ಕೆಂಪಣ್ಣ ವಿರುದ್ಧ ಕೆ.ಎಸ್.ಈಶ್ವರಪ್ಪ ಆಕ್ರೋಶ
ಕಮಿಷನ್ ಪಡೆದಿರುವುದಕ್ಕೆ ಯಾರೂ ರಶೀದಿ ಕೊಡಲ್ಲ. ಆದರೆ ಯಾರಿಗೆ ಕಮಿಷನ್ ಕೊಟ್ಟಿದ್ದಾರೆಂದು ಬಹಿರಂಗಪಡಿಸಿ. ಕೆಂಪಣ್ಣ ಕಾಂಗ್ರೆಸ್ ಏಜೆಂಟ್‌ರಂತೆ ಕೆಲಸ ಮಾಡುತ್ತಿದ್ದಾರೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ವಿರುದ್ಧ ಕೆ.ಎಸ್.ಈಶ್ವರಪ್ಪ ಆಕ್ರೋಶ ಹೊರ ಹಾಕಿದ್ದಾರೆ.

ಶಾಂತವಾಗಿದ್ದ ಕರ್ನಾಟಕದಲ್ಲಿ ಗಲಭೆಗಳನ್ನು ಸೃಷ್ಟಿಸುತ್ತಿದ್ದಾರೆ. ಮೌಲ್ವಿಯ ಈ ನಡೆಯನ್ನು ನಾನು ತೀವ್ರವಾಗಿ ಖಂಡಿಸ್ತೇನೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೂಡ ಮೌಲ್ವಿ ಪಕ್ಕದಲ್ಲೇ ನಿಂತಿದ್ದಾರೆ. ಅಲ್ತಾಫ್ ಹಳ್ಳೂರ ಕಲ್ಲು ಹೊಡೆದಿರುವುದನ್ನು ನೋಡಿದ್ದೇನೆ. ಆಂಜನೇಯ ಸ್ವಾಮಿ ದೇಗುಲ, ಆಸ್ಪತ್ರೆ, ಠಾಣೆ ಮೇಲೆ ಕಲ್ಲೆಸೆತವಾಗಿದೆ. ದೊಂಬಿ ಮಾಡಲು ತೀರ್ಮಾನಿಸಿ ಅಶಾಂತಿ ಸೃಷ್ಟಿಸಿದ್ದಾರೆ. ಆರ್‌ಎಸ್ಎಸ್ ಮುರ್ದಾಬಾದ್ ಎಂದು ಘೋಷಣೆ ಕೂಗಿದ್ದಾರೆ. ಕಲ್ಲು ತೂರಿದ ಪುಂಡರನ್ನು ಎದುರಿಸುವ ಶಕ್ತಿ ಹಿಂದೂಗಳಿಗಿದೆ. ಆದರೆ ಹಿಂದೂಗಳು ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಮಾಡಲ್ಲ. ಕೇಂದ್ರ, ರಾಜ್ಯ ಸರ್ಕಾರ ಕಾನೂನು ಕ್ರಮಕೈಗೊಳ್ಳುತ್ತೆ. ಗಲಾಟೆಗೆ ಪ್ರಚೋದನೆ ನೀಡಿದ್ದ ಮೌಲ್ವಿ ಹೇಡಿಯಂತೆ ಓಡಿದ್ದಾನೆ. ದೇಶದ್ರೋಹಿ, ಗೂಂಡಾಗಿರಿ ಮಾಡಿದ ರಾಷ್ಟ್ರದೋಹಿಯನ್ನ ಬಂಧಿಸಿ ಪ್ರಧಾನಿ ಮೋದಿ, ಸಿಎಂ, ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದೇನೆ. ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿಯಲ್ಲೂ ಇದೇ ರೀತಿಯ ಘಟನೆಯಾಯಿತು. ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆಯಾಯ್ತು. ಬೆಂಗಳೂರಿನಲ್ಲಿ ಚಂದ್ರು ಕೊಲೆಯಾಯಿತು, ಆರೋಪಿಗಳನ್ನ ಬಂಧಿಸಿ. ದೊಂಬಿಗೆ ಕಾರಣರಾದವರನ್ನು ಕೂಡಲೇ ಬಂಧಿಸಬೇಕು. ಹುಬ್ಬಳ್ಳಿ ಗಲಾಟೆ ಸಂಬಂಧ ಈಗಾಗಲೇ ಹಲವರನ್ನು ಬಂಧಿಸಿದ್ದಾರೆ. ಇನ್ನುಳಿದ ಆರೋಪಿಗಳನ್ನು ಬಂಧಿಸಿ, ಗಡಿಪಾರು ಮಾಡಬೇಕು ಎಂದು ಈಶ್ವರಪ್ಪ ಒತ್ತಾಯಿಸಿದ್ದಾರೆ.

ಗೂಂಡಾಕಾಯ್ದೆಯಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು. ಈಗ ಅರೆಸ್ಟ್ ಆಗೋದು, ಬೇಲ್ ಮೇಲೆ ಮತ್ತೆ ಹೊರಬರುತ್ತಾರೆ. ಇದು ಮತ್ತೆ ಮತ್ತೆ ಮರುಕಳಿಸಬಾರದು, ಸೂಕ್ತ ಕ್ರಮಕೈಗೊಳ್ಳಬೇಕು. ಇವರ ವಿರುದ್ಧ ಸರ್ಕಾರ ತುರ್ತು ಕ್ರಮಕೈಗೊಳ್ಳಬೇಕು. ಈ ಆರೋಪಿಗಳು ಎಲ್ಲೆಲ್ಲಿ ಸ್ಕೆಚ್ ಹಾಕಿದ್ದಾರೆಂದು ತನಿಖೆಯಾಗಬೇಕು. ಅಧಿಕಾರ ಕಳೆದುಕೊಂಡು ಕಾಂಗ್ರೆಸ್ ಗಲಭೆ ಖಂಡಿಸಲು ತಯಾರಿಲ್ಲ. ಕಲ್ಲಂಗಡಿ ಒಡೆದ ವಿಚಾರದಲ್ಲಿ ಕಾಂಗ್ರೆಸ್ ಬೊಬ್ಬೆ ಹಾಕಿದ್ದರು. ಪೊಲೀಸ್ ಅಧಿಕಾರಿ ತಲೆ ಒಡೆದಿದ್ದಕ್ಕೆ ಬೊಬ್ಬೆ ಹಾಕಿಲ್ಲ. ಕಾಂಗ್ರೆಸ್‌ಗೆ ರಾಜಕಾರಣವೇ ಪ್ರಮುಖವಾಗಿದೆ ಎಂದು ಸಿದ್ದರಾಮಯ್ಯ, ಡಿಕೆಶಿ, ಕುಮಾರಸ್ವಾಮಿ ವಿರುದ್ಧ ಈಶ್ವರಪ್ಪ ಕಿಡಿಕಾರಿದ್ದಾರೆ. ಎಲ್ಲಾ ಮುಸ್ಲಿಮರು ದೇಶದ್ರೋಹಿಗಳು ಎಂದು ನಾನು ಹೇಳಲ್ಲ. ಕಾಂಗ್ರೆಸ್‌ನವರು ಅಧಿಕಾರದ ದಾಹದಿಂದ ಇದೆಲ್ಲಾ ನಡೆಯುತ್ತಿದೆ. ಇದಕ್ಕೆಲ್ಲಾ ಕೂಡಲೇ ಕಡಿವಾಣ ಹಾಕಬೇಕೆಂದು ಈಶ್ವರಪ್ಪ ಒತ್ತಾಯಿಸಿದ್ದಾರೆ.

TV9 Kannada


Leave a Reply

Your email address will not be published. Required fields are marked *