ಹಿಂದಿನ ಕಾಲದಲ್ಲಿ ಅಂಚೆ ಸಂದೇಶಕ್ಕೆ ಬಳಕೆ ಆಗುತ್ತಿದ್ದ ಪಾರಿವಾಳು ಇಂದು ರೇಸ್‌ ಪ್ರಿಯರಿಗೆ ಫೇವರಿಟ್‌ ಆಗಿ ಬಿಟ್ಟಿವೆ. ನಿರ್ದಿಷ್ಟ ಗುರಿ ಮುಟ್ಟಿ ವಾಪಸ್‌ ಆಗುವಲ್ಲಿ ಅವು ಎತ್ತಿದ ಕೈ. ಆದ್ರೆ, ಇತ್ತೀಚೆಗೆ ಇಂಗ್ಲೆಂಡ್‌ನಲ್ಲಿ ನಡೆದ ರೇಸ್‌ನಲ್ಲಿ ಕಣ್ಮರೆಯಾದ ಪಾರಿವಾಳಗಳ ಸಂಖ್ಯೆ ಕೇಳಿದ್ರೆ ಹೌಹಾರಿ ಬಿಡ್ತೀರಿ.

ಇಂದು ಪಾರಿವಾಳ ರೇಸ್‌ ಒಂದು ಕ್ರೇಜ್‌ ಆಗಿ ಬೆಳೆದು ಬಿಟ್ಟಿದೆ. ಯುರೋಪ್‌ ರಾಷ್ಟ್ರಗಳಲ್ಲಂತೂ ಅದರ ಜನಪ್ರಿಯತೆ ತುತ್ತ ತುದಿಯಲ್ಲಿದೆ. ರೇಸ್‌ಗಾಗಿಯೇ ಪಾರಿವಾಳಗಳಿಗೆ ಕೋಟಿಗಟ್ಟಲೇ ಹಣವನ್ನು ವೆಚ್ಚ ಮಾಡ್ತಾರೆ ಅಂದ್ರೆ ಅದರ ಜನಪ್ರಿಯತೆ ಯಾವ ರೀತಿಯಲ್ಲಿದೆ ಅನ್ನೋದನ್ನು ಊಹಿಸಿ ನೋಡಿ. ರೇಸ್‌ನಲ್ಲಿ ಪಾಲ್ಗೊಳ್ಳುವ ಉದ್ದೇಶವೇ ಗೆಲ್ಲುವುದಕ್ಕಾಗಿ. ಆದ್ರೆ, ಇತ್ತೀಚೆಗೆ ಇಂಗ್ಲೆಂಡ್‌ನಲ್ಲಿ ನಡೆದ ಪಾರಿವಾಳದ ರೇಸ್‌ವೊಂದು ಭಾರೀ ಆಘಾತ ಮೂಡಿಸಿದೆ. ರೇಸ್‌ನಲ್ಲಿ ಪಾಲ್ಗೊಂಡವರು ಗೆಲ್ಲೋದು ಇರಲಿ, ಹಾರಿ ಬಿಟ್ಟ ಪಾರಿವಾಳವೂ ಹೋಯ್ತಲ್ಲ ಅಂತ ತಲೆ ಮೇಲೆ ಕೈಹೊತ್ತಿದ್ದಾರೆ.

ಶನಿವಾರ ನಡೆದಿತ್ತು ವೀಕೆಂಡ್‌ ರೇಸ್‌
ಭಾರೀ ಸಂಖ್ಯೆಯ ಪಾರಿವಾಳ ಹಾರಿಸಿ ಬಿಡಲಾಗಿತ್ತು

ಅದು ಇಂಗ್ಲೆಂಡ್‌ನ ಪೀಟ್​​ರ್ಬಗ್‌. ಅಲ್ಲಿ ಐತಿಹಾಸಿಕ ಕ್ರೀಡೆಯಾಗಿ ಗುರುತಿಸಿಕೊಂಡಿರುವುದು ಪಾರಿವಾಳಗಳ ರೇಸ್‌. ಪ್ರತಿ ವೀಕೆಂಡ್‌ ರೇಸ್‌ ನಡೆಯುತ್ತೆ. ಪಾರಿವಾಳಗಳನ್ನು ಸಾಕಿದವರು ಆ ರೇಸ್‌ನಲ್ಲಿ ಪಾಲ್ಗೊಳ್ಳುತ್ತಾರೆ. ಪ್ರಥಮ, ದ್ವಿತೀಯ ಸ್ಥಾನ ಪಡೆದವರು ದೊಡ್ಡ ಮೊತ್ತದ ಹಣವನ್ನೇ ಜೇಬಿಗೆ ಇಳಿಸಿಕೊಳ್ಳುತ್ತಾರೆ. ಹೇಗಾದ್ರೂ ಮಾಡಿ ಈ ರೇಸ್‌ ಗೆಲ್ಲಬೇಕು ಅಂತಲೇ ಪಾರಿವಾಳಗಳಿಗೆ ನಾನಾ ರೀತಿಯ ತರಬೇತಿ ನೀಡಲಾಗುತ್ತೆ. ಕಳೆದ ಶನಿವಾರ ಕೂಡ 270 ಕಿಲೋಮೀಟರ್‌ ಪಾರಿವಾಳಗಳ ರೇಸ್‌ ಏರ್ಪಡಿಸಲಾಗಿತ್ತು. ಎಂದಿನಂತೆ ರೇಸ್‌ ಪ್ರಿಯರು ಬಂದು ಪಾರಿವಾಳ ಹಾರಿಸಿದ್ದಾರೆ. ರೇಸ್‌ ತಾವೇ ಗೆಲ್ಲುತ್ತೇವೆ ಅಂತ ಉಸಿರು ಬಿಗಿ ಹಿಡಿದು ಕುಳಿತ್ತಿದ್ದಾರೆ.

10 ಸಾವಿರ ಪಾರಿವಾಳಗಳು ಕಣ್ಮರೆ
ಹಾರಿ ಹೋದವು ಪಾಪಸ್‌ ಬಂದೇ ಇಲ್ಲ

ಹೌದು, ಈ ರೇಸ್‌ನಲ್ಲಿ ಹಾರಿಹೋದ ಸುಮಾರು 10 ಸಾವಿರ ಪಾರಿವಾಳು ಇನ್ನೂ ಪತ್ತೆಯಾಗಿಲ್ಲ. ತಮ್ಮ ಪಾರಿವಾಳು ಬರುತ್ತೆ, ತಾವೇ ಪ್ರಶಸ್ತಿಯ ಮೊತ್ತ ಗೆಲ್ಲಬಹುದು ಅಂತ ಆಸೆ ಹೊತ್ತು ಕುಳಿತವರಿಗೆ ಈಗ ಚಿಂತೆ ಶುರುವಾಗಿದೆ. ಅತ್ತ ಬಹುಮಾನವೂ ಇಲ್ಲ, ಇತ್ತ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸಾಕಿದ ಪಾರಿವಾಳವೂ ಇಲ್ಲದಂತಾಗಿದೆ. ವಾಪಸ್‌ ಬರಬಹುದು ಅಂತ ಕಾದು ಕಾದು ಸುಸ್ತಾಗಿದ್ದಾರೆ. ಹಾಗಾದ್ರೆ ಪಾರಿವಾಳಗಳು ಏನಾದ್ವು ಅನ್ನೋದೆ ಯಕ್ಷಪ್ರಶ್ನೆಯಾಗಿ ಬಿಟ್ಟಿದೆ.

ಮೂರು ತಾಸಿನಲ್ಲಿಯೇ ಮುಗಿಯಬೇಕಿದ್ದ ರೇಸ್‌
ಅದು, 270 ಕಿಲೋಮೀಟರ್‌ ರೇಸ್‌ ಆಗಿತ್ತು. ಪಾರಿವಾಳಗಳ ವೇಗ ಗಂಟೆಗೆ 160 ಕಿಲೋ ಮೀಟರ್‌. ಆದ್ರೆ, ರೇಸ್‌ನಲ್ಲಿ ಪಾಲ್ಗೊಳ್ಳುವ ಪಾರಿವಾಳಗಳು ಇನ್ನೂ ವೇಗವಾಗಿ ಹಾರಾಟ ಮಾಡುತ್ತವೆ. ಅದು ಹೇಗೆ ಲೆಕ್ಕ ಹಾಕಿದರೂ ಈ ರೇಸ್ ಮೂರು ತಾಸಿನಲ್ಲಿಯೇ ಅಂತ್ಯವಾಗಬೇಕಿತ್ತು. ಆದ್ರೆ, ದಿನವಿಡೀ ಕಾದರೂ ಶೇ.40 ರಷ್ಟು ಪಾರಿವಾಳಗಳು ವಾಪಸ್‌ ಆಗಲೇ ಇಲ್ಲ. ಪಾರಿವಾಳ ಹಾರಿ ಬಿಟ್ಟವರು ಕಾದುಕಾದು ಬಂದ ದಾರಿಗೆ ಸುಂಕ ಇಲ್ಲದೇ ವಾಪಸ್‌ ಆಗಿದ್ದಾರೆ.

ಪಾರಿವಾಳಗಳು ದಿಕ್ಕು ತಪ್ಪಿದ್ದು ಯಾಕೆ?
ಎಲ್ಲಿಗೆ ಹಾರಿಹೋದವು ಪಾರಿವಾಳಗಳು

ಇದೊಂದು ರೇಸ್‌ ಪ್ರಿಯರಿಗೆ ಯಕ್ಷಪ್ರಶ್ನೆಯಾಗಿ ಬಿಟ್ಟಿದೆ. ಅತ್ಯುತ್ತಮ ತರಬೇತಿ ಪಡೆದ ಪಾರಿವಾಗಳು ಅವು. ಹೀಗಾಗಿ ವಾಪಸ್‌ ಆಗಲೇಬೇಕಿತ್ತು. ಕೆಲವಷ್ಟು ಪಾರಿವಾಳಗಳು ಕಣ್ಮರೆ ಆದ್ರೆ ಯಾರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದ್ರೆ, ಕಣ್ಮರೆಯಾಗಿದ್ದು ಬರೋಬ್ಬರಿ 10 ಸಾವಿರ ಪಾರಿವಾಳಗಳು. ಸೌರ ಚಂಡಮಾರುತ ಇವುಗಳ ದಿಕ್ಕು ತಪ್ಪಿಸಿರಬಹುದು ಅಂತ ಅಂದಾಜಿಸಲಾಗುತ್ತಿದೆ. ಅಂದ್ರೆ ರೇಸ್‌ ಸಂದರ್ಭದಲ್ಲಿ ವಾತಾವರಣದಲ್ಲಿ ಆದಂಥ ಬದಲಾವಣೆ ಪಾರಿವಾಳಗಳ ದಿಕ್ಕು ತಪ್ಪಿಸಿರುವ ಸಾಧ್ಯತೆ ಇದೆ. ಹೀಗಾಗಿ ಅವು ಬೇರೆ ಪ್ರದೇಶಕ್ಕೆ ಹಾರಿಹೋಗಿರುವ ಸಾಧ್ಯತೆ ಇದೆ ಅಂತ ಅಂದಾಜಿಸಲಾಗಿದೆ. ಆದ್ರೆ, ಯಾಕೆ ಕಣ್ಮರೆ ಅನ್ನುವ ಬಗ್ಗೆ ಇನ್ನೂ ಖಚಿತವಾದ ಉತ್ತರ ಸಿಕ್ಕಿಲ್ಲ.

ಪಾರಿವಾಳಗಳ ಸ್ಪರ್ಧೆ ನಡೆಯುವುದು ಹೇಗೆ?
ಪಾರಿವಾಳ ಸ್ಪರ್ಧೆ ಆಯೋಜಿಸಿದಾಗ ಪಾಲ್ಗೊಳ್ಳುವವರು ನೋಂದಣಿ ಮಾಡಿಕೊಳ್ಳಬೇಕಾಗುತ್ತೆ. ನೋಂದಣಿ ಮಾಡುವಾಗ ನಿರ್ದಿಷ್ಟ ಮೊತ್ತದ ಹಣ ಸಂದಾಯ ಮಾಡಬೇಕು. ಸ್ಪರ್ಧೆಯ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು. ಪಾರಿವಾಳಗಳ ಕಾಲಿಗೆ ಬ್ಲೇಡ್​ನಂತಹ ಅಪಾಯಕಾರಿ ವಸ್ತುಗಳನ್ನು ಕಟ್ಟುವಂತಿಲ್ಲ. ಯಾವ ಸ್ಥಳದಿಂದ ಹಾರಿ ಬಿಡಲಾಗುತ್ತೋ ಅದೇ ಸ್ಥಳಕ್ಕೆ ಪಾರಿವಾಳಗಳು ವಾಪಸ್‌ ಮರಳಬೇಕು. ಹಾರಿ ಬಿಡುವ ಸಮಯ ಮತ್ತು ವಾಪಸ್‌ ಮರಳುವ ಸಮಯವನ್ನು ನೋಡಿಕೊಳ್ಳಲಾಗುತ್ತೆ. ಆ ಸಮಯದ ಆಧಾರದ ಮೇಲೆ ಬಹುಮಾನ ವಿತರಣೆ ನಡೆಯಲಿದೆ.

ಪಾರಿವಾಳಗಳ ಸ್ಪರ್ಧೆ ಆರಂಭವಾಗಿದ್ದು ಯಾವಾಗ?
ಯಾವ ಯಾವ ರಾಷ್ಟ್ರಗಳಲ್ಲಿ ಹೆಚ್ಚಿನ ರೇಸ್‌ ನಡೆಯುತ್ತೆ?

ಪಾರಿವಾಳಗಳ ಸ್ಪರ್ಧೆ ಅಧಿಕೃತವಾಗಿ ಆರಂಭವಾಗಿದ್ದು ಬೆಲ್ಜಿಯಂನಲ್ಲಿ. ಅದು, 1818ರಲ್ಲಿ 160 ಕಿಲೋಮೀಟರ್‌ ದೂರದ ರೇಸ್‌ ಆರಂಭಿಸಲಾಗಿತ್ತು. ಅದುವೇ ಪಾರಿವಾಳಗಳ ಮೊದಲ ರೇಸ್‌ ಎಂದು ಗುರುತಿಸಿಕೊಂಡಿದೆ. ಅಂದಿನಿಂದ ಹಂತ ಹಂತವಾಗಿ ರೇಸ್‌ ಬೆಳವಣಿಗೆ ಹೊಂದಿರೋ ರೀತಿ ಅಚ್ಚರಿಯಾಗಿದೆ. ಇದು, ಅಮೆರಿಕಾ, ಬೆಲ್ಜಿಯಂ, ಆಸ್ಟ್ರೇಲಿಯಾ, ಕೆನಡಾ, ಬ್ರೆಜಿಲ್‌, ಪೊಲೆಂಡ್‌, ದಕ್ಷಿಣ ಆಫ್ರಿಕಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿದೆ.

ಭಾರತದಲ್ಲಿಯೂ ನಡೆಯುತ್ತೆ ಪಾರಿವಾಳಗಳ ರೇಸ್‌
ಯುರೋಪ್‌ ರಾಷ್ಟ್ರಗಳಲ್ಲಿ ಹೆಚ್ಚು ಜನಪ್ರಿಯವಾಗಿರೋ ಈ ರೇಸ್‌ ಭಾರತದಲ್ಲಿಯೂ ಫೇಮಸ್‌ ಆಗಿದೆ. ಮೊದಲ ಬಾರಿಗೆ ಭಾರತದಲ್ಲಿ ಆರಂಭವಾಗಿದ್ದು 1940ರ ಸಮಯದಲ್ಲಿ. ಅದು ನಮ್ಮ ಬೆಂಗಳೂರು ಮತ್ತು ಕೋಲ್ಕತ್ತಾದಲ್ಲಿ ನಡೆದ ರೇಸ್‌ ಭಾರತದಲ್ಲಿ ಅಧಿಕೃತವಾಗಿ ಆರಂಭವಾದ ಮೊದಲ ರೇಸ್‌. ಆನಂತರ ಅಂದರೆ 1980 ರ ಸಮಯದಲ್ಲಿ ಪಾರಿವಾಳ ರೇಸ್‌ ತಮಿಳುನಾಡಿನಲ್ಲಿ ಭಾರೀ ಜನಪ್ರಿಯತೆ ಪಡೆಯಿತು.

ಕೋಟಿ ಕೋಟಿ ಹಣ ನೀಡಿ ಖರೀದಿಸುತ್ತಾರೆ?
ಅತಿ ಶ್ರೀಮಂತ ಪಾರಿವಾಳ ಎಲ್ಲಿದೆ ಗೊತ್ತಾ?
ಬೆಂಗಳೂರಿನಲ್ಲಿ 10 ಫ್ಲ್ಯಾಟ್‌ಗೆ ಸಮ ಅದರ ಬೆಲೆ

ರೇಸ್‌ ಪ್ರಿಯರಿಗೆ ಪಾರಿವಾಳಗಳನ್ನು ಖರೀದಿಸುವ ಹುಚ್ಚು ಇರುತ್ತೆ. ವೇಗವಾಗಿ ಹಾರಾಡುವ ಪಾರಿವಾಳಕ್ಕೆ ದುಬಾರಿ ಮೊತ್ತ ಇರುತ್ತೆ. ಅದೇ ರೀತಿ ವೇಗವಾಗಿ ಹಾರಾಡುವ ಪಾರಿವಾಳದ ಬೆಲೆ ಕೇಳಿದ್ರೆ ದಂಗಾಗಿ ಹೋಗ್ತೀರಿ. ನಾವು ನೀವು ಊಹೆ ಮಾಡಲು ಸಾಧ್ಯ ಇಲ್ಲ. ಅಷ್ಟೊಂದು ಶ್ರೀಮಂತ ಪಾರಿವಾಳ ಅದು. ಅದರ ಬೆಲೆ ಎಷ್ಟು ಅಂದ್ರೆ, ಆ ಹಣದಲ್ಲಿ ನೀವು ಬೆಂಗಳೂರಿನಲ್ಲಿ 10 ಫ್ಲ್ಯಾಟ್‌ ಖರೀದಿಸಬಹುದು. ಆ ದುಬಾರಿ ಪಾರಿವಾಳ ಇರುವುದು ಚೀನಾದಲ್ಲಿ. ರೇಸ್‌ ಪ್ರಿಯ ವ್ಯಕ್ತಿಯೊಬ್ಬ 2020ರಲ್ಲಿ ಬರೋಬ್ಬರಿ 14 ಕೋಟಿ ನೀಡಿ ಖರೀದಿಸಿದ್ದ. ಆದ್ರೆ, ಆ ವ್ಯಕ್ತಿಯ ಹೆಸರನ್ನು ಎಲ್ಲಿಯೂ ಬಹಿರಂಗಪಡಿಸಿಲ್ಲ.

The post ದಿಕ್ಕು ತಪ್ಪಿದ್ದು ಪಾರಿವಾಳ ರೇಸ್​.. 10 ಸಾವಿರ ಹಕ್ಕಿಗಳು ಕಣ್ಮರೆ appeared first on News First Kannada.

Source: newsfirstlive.com

Source link