– ಸಚಿವರ ಸಭೆಯಲ್ಲೂ ಸಿಎಂ ಮಾಹಿತಿ

ಬೆಂಗಳೂರು: ಕೋವಿಡ್ ಅಬ್ಬರ ನಡುವೆ ಬಿಜೆಪಿಯಲ್ಲಿ ದಿಢೀರ್ ಆಗಿ ರಾಜಕೀಯ ಬೆಳವಣಿಗೆ ಗರಿಗೆದರಿದೆ. ಬಿಜೆಪಿ ಹೈಕಮಾಂಡ್ ರಾಜ್ಯದಲ್ಲಿ ಸಿಎಂ ಬದಲಾವಣೆ ಮಾಡುತ್ತಾ ಎಂಬ ಪ್ರಶ್ನೆಯೊಂದು ಎದ್ದಿದೆ. ಈ ಮೂಲಕ ಬಿಜೆಪಿಯಲ್ಲಿನ ಬೆಳವಣಿಗೆಗಳು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.

ಬಿಜೆಪಿ ಶಾಸಕರ ಸಭೆ ನಡೆಸುವಂತೆ ಸಿಎಂ ಯಡಿಯೂರಪ್ಪಗೆ ಪಕ್ಷದ ಹೈಕಮಾಂಡ್ ಫರ್ಮಾನು ಹೊರಡಿಸಿದೆ. ಈ ಬಗ್ಗೆ ನಿನ್ನೆ ನಡೆದಿದ್ದ ಸಂಪುಟ ಸಭೆಯಲ್ಲೂ ಸಿಎಂ ಸುಳಿವು ನೀಡಿದ್ದಾರೆ. ಜೂನ್ ಮೊದಲ ವಾರದಲ್ಲಿ ಶಾಸಕರ ಸಭೆಗೆ ಹೈಕಮಾಂಡ್ ಆದೇಶ ನೀಡಿರುವುದಾಗಿ ತಿಳಿಸಿದ್ದಾರೆ.

ಜೂನ್ 7ರಂದು ಪಕ್ಷದ ಶಾಸಕರ ಸಭೆಗೆ ಸಿಎಂ ಬಿಎಸ್‍ವೈ ನಿರ್ಧರಿಸಿದ್ದಾರೆ. ಹೈಕಮಾಂಡ್ ಆದೇಶ ಬಳಿಕ ಬಿಜೆಪಿ ಶಾಸಕರ ಸಭೆಗೆ ಸಿಎಂ ತೀರ್ಮಾನ ಮಾಡುತ್ತಾರೆ. ಹಾಗಾದ್ರೆ ಶಾಸಕರ ಸಭೆಯಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ಆಗುತ್ತಾ ಎಂಬ ಪ್ರಶ್ನೆ ಮೂಡಿದೆ. ಸಿಎಂ ಬದಲಾವಣೆ ಬಗ್ಗೆ ಚರ್ಚೆ ಆಗುತ್ತೆ ಅಂತ ಬಿಎಸ್‍ವೈ ವಿರೋಧಿ ಬಣ ಹೇಳುತ್ತಿದೆ. ಆದರೆ ಬಿಎಸ್‍ವೈ ಬಣ ಮಾತ್ರ ಕೋವಿಡ್ ನಿರ್ವಹಣೆ ಬಗ್ಗೆಯಷ್ಟೇ ಚರ್ಚೆ ಆಗುತ್ತೆ ಎನ್ನುತ್ತಿದೆ.

ಶನಿವಾರ ಸಿಎಂ ಯಡಿಯೂರಪ್ಪ ಮನೆಯಲ್ಲಿ ಸಭೆಯೊಂದು ನಡೆದಿತ್ತು. ಕಾವೇರಿ ನಿವಾಸದಲ್ಲಿ 1 ಗಂಟೆಗೂ ಅಧಿಕ ಹೊತ್ತು ನಡೆದ ಮಾತುಕತೆಯಲ್ಲಿ ಆರ್‍ಎಸ್‍ಎಸ್ ನಾಯಕರು ಸಿಎಂ ಭೇಟಿ ಮಾಡಿದ್ದರು. ಆರ್‍ಎಸ್‍ಎಸ್ ಮುಖಂಡ ಮುಕುಂದ್ ಸಿಎಂ ಭೇಟಿ ಮಾಡಿ ದೀರ್ಘ ಸಮಾಲೋಚನೆ ನಡೆಸಿದ್ದರು. ಭವಿಷ್ಯದ ನಾಯಕತ್ವ ಬಗ್ಗೆಯೇ ಪ್ರಮುಖವಾಗಿ ಚರ್ಚೆ ನಡೆದಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭಿಸಿದೆ. ರಾಜ್ಯದ ಸದ್ಯ ರಾಜಕೀಯ ವಿದ್ಯಮಾನಗಳ ಬಗ್ಗೆಯೂ ಸಮಾಲೋಚನೆ ನಡೆದಿದೆ ಎನ್ನಲಾಗಿದ್ದು, ಈ ಭೇಟಿಯ ಬಳಿಕ ಈಗ ಶಾಸಕರ ಸಭೆಗೆ ಸಿಎಂಗೆ ಹೈಕಮಾಂಡ್ ಸೂಚನೆ ನೀಡಿದೆ ಎಂಬುದಾಗಿ ತಿಳಿದುಬಂದಿದೆ.

The post ದಿಢೀರ್ ರಾಜಕೀಯ ಬೆಳವಣಿಗೆ – ಶಾಸಕರ ಸಭೆ ನಡೆಸುವಂತೆ ಸಿಎಂಗೆ ಹೈಕಮಾಂಡ್ ಫರ್ಮಾನು appeared first on Public TV.

Source: publictv.in

Source link