ಮಡಿಕೇರಿ: ಕೊರೊನಾ ರೋಗಿಗಳೆಂದರೆ ಜನ ಕಿಲೋಮೀಟರ್ ದೂರ ಹೋಗುತ್ತಿದ್ದಾರೆ. ಇನ್ನೊಂದು ಕಡೆ ಸೂಕ್ತ ಸಮಯದಲ್ಲಿ ಅಂಬುಲೆನ್ಸ್ ಸಿಗದೆ ಹಲವರು ಪ್ರಾಣ ಬಿಡುತ್ತಿದ್ದಾರೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಇಲ್ಲೊಬ್ಬರು ತನ್ನ ವಾಹನದಲ್ಲಿ ಕೋವಿಡ್ ರೋಗಿಗಳಿಗೆ ಉಚಿತ ಸೇವೆ ನೀಡುವ ಮೂಲಕ ಮಾನವೀಯತೆಗೆ ಸಾಕ್ಷಿಯಾಗಿದ್ದಾರೆ.

ಹೌದು. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪ ಗ್ರಾಮದ ಅಬ್ದುಲ್ ಲತೀಫ್ ಎಂಬವರು ಕೋವಿಡ್ ರೋಗಿಗಳಿಗೆ ಉಚಿತ ಸೇವೆ ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಅಗಿರುವ ಲತೀಫ್ ಅವರು ಕೊರೊನಾ ಸೇರಿದಂತೆ ಯಾವುದೇ ತುರ್ತು ವೈದ್ಯಕೀಯ ಸೇವೆಗಾಗಿ ಕರೆ ಮಾಡಿದ್ರೆ ಸಾಕು, ಲತೀಫ್ ಅವರು ತಾವಿದ್ದಲ್ಲಿಗೆ ಬಂದು ಆಸ್ಪತ್ರೆಗೆ ಕರೆದೊಯ್ಯುತ್ತಾರೆ.

ಕೊಡಗಿನ ಯಾವುದೇ ಗ್ರಾಮೀಣ ಭಾಗದಿಂದ ಕರೆ ಬಂದರೂ ಇವರು ಅಲ್ಲಿಗೆ ಹೋಗಿ ರೋಗಿಗಳನ್ನು ಕರೆತರುತ್ತಾರೆ. ಲಾಕ್‍ಡೌನ್‍ನಲ್ಲಿ ಕೋವಿಡ್ ರೋಗಿಗಳಿಗೆ ಆಸ್ಪತ್ರೆಗೆ ಹೋಗಲು ಖಾಸಗಿ ವಾಹನ, ಆಟೋ, ಅಂಬುಲೆನ್ಸ್‍ಗಳು ಸಿಗದ ಹಿನ್ನೆಲೆಯಲ್ಲಿ ಅನೇಕ ರೋಗಿಗಳು ಸಾವನ್ನಪ್ಪುತ್ತಿದ್ದು, ಆಯಾ ರೋಗಿಗಳಿಗೆ ಆಯಾ ಆಸ್ಪತ್ರೆಗೆ ಬಿಡುವ ಮಾನವೀಯತೆ ಕಾರ್ಯದಲ್ಲಿ ಮಗ್ನರಾಗಿದ್ದಾರೆ.

ಲತೀಫ್ ಅವರು ಕಳೆದ ಕೊರೊನಾ ಬಂದ ಸಮಯದಿಂದಲೂ ಈ ರೀತಿಯ ಕಾರ್ಯ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ತುಂಬಾ ಸಂಕಷ್ಟದಲ್ಲಿ ಇರುವ ಕುಟುಂಬಗಳಿಗೆ ಅಹಾರ ಕಿಟ್ ಗಳನ್ನು ನೂರಾರು ಜನಕ್ಕೆ ನೀಡಿ ಮಾನವೀಯತೆಯನ್ನು ಮೆರೆದಿದ್ದಾರೆ. ಇವರ ಮಾನವೀಯತೆ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ಜಿಲ್ಲೆಯಲ್ಲಿ ವ್ಯಕ್ತವಾಗುತ್ತಿದೆ.

The post ದಿನದ 24 ಗಂಟೆಯೂ ಉಚಿತವಾಗಿ ಕೋವಿಡ್ ರೋಗಿಗಳ ಸೇವೆ ಮಾಡ್ತಿದ್ದಾರೆ ಅಬ್ದುಲ್ ಲತೀಪ್ appeared first on Public TV.

Source: publictv.in

Source link