ದಿನೇ ದಿನೇ ಮತ್ತಷ್ಟು ತೀವ್ರವಾಗ್ತಿದ್ಯಾ ಕೊರೊನಾ..? ಚೇತರಿಸಿಕೊಂಡರೂ ಎಚ್ಚರಿಕೆಯಿಂದಿರಿ

ದಿನೇ ದಿನೇ ಮತ್ತಷ್ಟು ತೀವ್ರವಾಗ್ತಿದ್ಯಾ ಕೊರೊನಾ..? ಚೇತರಿಸಿಕೊಂಡರೂ ಎಚ್ಚರಿಕೆಯಿಂದಿರಿ

ಈ ಕೊರೊನಾ ಹೊಸ ಹೊಸ ರೀತಿಯಲ್ಲಿ ಶಾಕ್ ಕೊಡ್ತಾ ಹೋದಂತೆ ಇದರ ಬಗ್ಗೆ ನಿರಂತರ ಅಧ್ಯಯನಗಳು ಕೂಡ ಮುಂದುವರೆದಿವೆ. ಸಂಶೋಧನೆಗಳನ್ನು ಮಾಡ್ತಾ ಹೋದ ಹಾಗೆಲ್ಲ ಕೊರೊನಾದ ಎಷ್ಟೊಂದು ಅಪಾಯಕಾರಿ ಅನ್ನೋದು ಒಂದೊಂದಾಗಿ ಗೊತ್ತಾಗ್ತಾ ಇದೆ. ಸೋಂಕು ಬಂತು, ಹೋಯ್ತು ಅಂತ ಸುಮ್ಮನಿದ್ರೆ ಒಮ್ಮೆಲೆ ದಿಢೀರ್ ಅಂತ ಅಪಾಯ ತಂದೊಡ್ಡಿಬಿಡುತ್ತೆ ಈ ಕೊರೊನಾ.

ಕೊರೊನಾ ವಿಶ್ವವ್ಯಾಪಿಯಾಗಿ ಕೋಟಿ ಕೋಟಿ ಜನರಿಗೆ ತಗುಲಿದೆ. ಅಷ್ಟೇ ಅಲ್ಲ ಲಕ್ಷಾಂತರ ಜನ ಬಲಿಯಾಗಿ ಹೋಗಿದ್ದಾರೆ. ಅಧಿಕೃತ ಅಂಕಿ ಅಂಶಗಳ ಪ್ರಕಾರವೇ ಈವರೆಗೆ ವಿಶ್ವದಲ್ಲಿ 34 ಲಕ್ಷಕ್ಕೂ ಹೆಚ್ಚು ಜನ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಆದ್ರೆ, ವಿಶ್ವ ಆರೋಗ್ಯ ಸಂಸ್ಥೆಯೇ ಹೇಳಿರುವಂತೆ ಸಾವಿನ ಸಂಖ್ಯೆ ಇದಕ್ಕಿಂತ ಮೂರು ಪಟ್ಟಾಗಿರುವ ಸಾಧ್ಯತೆ ಇದೆ. ಅದೆಷ್ಟೋ ದೇಶಗಳು ಲೆಕ್ಕವನ್ನೇ ಕೊಡುತ್ತಿಲ್ಲ. ಬಹುತೇಕ ದೇಶಗಳು ಲೆಕ್ಕ ಕೊಟ್ಟರೂ ಅದರಲ್ಲಿ ಸ್ಪಷ್ಟತೆ ಇಲ್ಲ. ಹೀಗಾಗಿ ಕೋಟಿ ಮೀರಿರಬಹುದು ಅಂತಿದಾರೆ. ಭಾರತದಲ್ಲಂತೂ ಎರಡನೇ ಅಲೆ ದೊಡ್ಡ ಆಘಾತವನ್ನೇ ನೀಡಿದೆ. ಸಾವಿನ ಅಂಕಿ-ಅಂಶಗಳ ಪ್ರಕಾರ ವಿಶ್ವದಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಮೊದಲು ಅಮೆರಿಕಾ, ಬಳಿಕ ಬ್ರೆಜಿಲ್, ನಂತರದ ಸ್ಥಾನ ಭಾರತಕ್ಕೆ. ಭಾರತದಲ್ಲಿ ಈವರೆಗೆ ಮೂರು ಲಕ್ಷಕ್ಕೂ ಹೆಚ್ಚು ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಈ ಕೊರೊನಾ ಅದೆಷ್ಟೋ ಲಕ್ಷ ಜನರ ಜೀವವನ್ನೇ ತೆಗೆದುಕೊಂಡರೆ, ಅದೆಷ್ಟೋ ಜನರ ಬದುಕನ್ನೇ ಕಿತ್ತುಕೊಂಡಿದೆ.

ಕೊರೊನಾ ಸೋಂಕಿನಿಂದ ಒಂದು ಕಡೆ ಸಂಕಷ್ಟ, ಇನ್ನೊಂದು ಕಡೆ ಲಾಕ್ ಡೌನ್ ತರ್ತಾ ಇರುವ ಆರ್ಥಿಕ ಸಂಕಷ್ಟ. ಜನ ಸಾಮಾನ್ಯರು, ಬಡವರ ಬದುಕಂತೂ ದುಸ್ತರವಾಗಿ ಬಿಟ್ಟಿದೆ. ತಿಂಗಳಾನುಗಟ್ಟಲೇ ಮಹಾನಗರಗಳೇ ಸ್ತಬ್ಧವಾಗಿ ಬಿಟ್ಟಿದ್ದರಿಂದ ಲಕ್ಷಾಂತರ ಜನರು ಹೊತ್ತಿನ ಊಟಕ್ಕೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿ ಬಿಟ್ಟಿದೆ. ಆದರೆ, ಜೀವ ಇದ್ದರೆ ಮುಂದೆ ಜೀವನ.. ಈ ಕೊರೊನಾ ಯಾವಾಗ ತೊಲಗುತ್ತಪ್ಪಾ ಅಂತ ಎಲ್ಲರೂ ತಾಳ್ಮೆಯಿಂದ ಇದ್ದಾರೆ. ಹೊಟ್ಟೆ ಬಟ್ಟೆ ಕಟ್ಟಿ ಹೇಗೋ ದಿನ ದೂಡುತ್ತಿದ್ದಾರೆ. ಆದ್ರೆ ಕೊರೊನಾವೈರಸ್​ ದಿನಕ್ಕೊಂದು ರೀತಿ ಶಾಕ್ ಕೊಡ್ತಾ ಇದೆ. ಸೋಂಕಿತರ ಮನೆಗಳಲ್ಲಂತೂ ನೆಮ್ಮದಿಯನ್ನೇ ಕಿತ್ತುಕೊಂಡು ಬಿಟ್ಟಿದೆ. ಹಲವರನ್ನು ಅಕ್ಷರಶಃ ಬೀದಿ ಪಾಲು ಮಾಡಿ ಬಿಟ್ಟಿದೆ. ಕೊರೊನಾ ಸೋಂಕಿತರಾಗಿ ಹೇಗೋ ಗುಣವಾಗಿ ಬಂದು ಬಿಟ್ಟೆವು ಅಂತಾನು ನಮ್ಮ ಪಾಡಿಗೆ ನಾವು ಇರೋ ಹಾಗಿಲ್ಲ. ಅಂತದ್ದೊಂದು ಶಾಕಿಂಗ್ ನ್ಯೂಸ್ ಈಗ ಬರ್ತಾ ಇದೆ.

ಎರಡನೇ ಅಲೆಯಲ್ಲಿ ದಿಢೀರ್ ಆಘಾತ ತಂದೊಡ್ಡಿದ್ದ ವೈರಸ್
ನೋಡಿ ಮೊದಲ ಅಲೆ ಬಂದಾಗ ಕೊರೊನಾ ಇಷ್ಟರಮಟ್ಟಿಗೆ ಶಾಕ್ ಕೊಟ್ಟಿರಲಿಲ್ಲ. ವಯಸ್ಸಾದವರಿಗೆ ಕೊರೊನಾ ಬಂದ್ರೆ ಸಮಸ್ಯೆ ಆಗಬಹುದು ಅಂತಿದ್ರು. ಆದ್ರೆ ಎರಡನೇ ಅಲೆಯಲ್ಲಿ ಯಾವುದೂ ಲೆಕ್ಕಕ್ಕಿಲ್ಲ. ಎಲ್ಲಾ ವಯೋಮಾನದವರನ್ನು ಬಲಿ ತೆಗೆದುಕೊಂಡು ಬಿಟ್ಟಿದೆ ಕೊರೊನಾ. ಈ ಬಾರಿಯಂತೂ ದಿಢೀರ್ ಉಸಿರಾಟದ ಸಮಸ್ಯೆ ಎಲ್ಲಾ ಕಡೆ ಕಾಣಿಸತೊಡಗಿದ್ದರಿಂದ ಆಕ್ಸಿಜನ್ ಕೊರತೆ ಎಲ್ಲೆಲ್ಲೂ ಶುರುವಾಗಿ ಹೋಗಿತ್ತು. ಇದರಿಂದ ದುರಂತಗಳೂ ಸಂಭವಿಸಿ ಹೋದವು. ರಸ್ತೆ ರಸ್ತೆಯಲ್ಲಿ ಆಕ್ಸಿಜನ್ ತೆಗೆದುಕೊಳ್ಳುತ್ತಿದ್ದ ದೃಶ್ಯಗಳು ರಾಷ್ಟ್ರ ರಾಜಧಾನಿ ದೆಹಲಿಯಲ್ಲೇ ಕಂಡು ಬಂತು. ಇನ್ನು ಬೆಡ್ ಸಿಗದೇ, ಬೆಡ್ ಸಿಕ್ಕರೂ ಆಕ್ಸಿಜನ್ ಸಿಗದೇ, ವೆಂಟಿಲೇಟರ್ ಇಲ್ಲದೆ ಪರದಾಡಿದವರು ಅದೆಷ್ಟು ಮಂದಿಯೋ. ಅಬ್ಬಾ.! ಈ ಕೊರೊನಾ ಭೀಕರತೆ ಸೃಷ್ಟಿಸಿಬಿಟ್ಟಿತ್ತು. ಕೊರೊನಾ ಬಂದರೆ ಹೇಗೋ ಗುಣಮುಖರಾಗಬಹುದು ಅಂದುಕೊಂಡಿದ್ದವರಿಗೆ ಮೃತ್ಯುವೇ ಬಂದೆರಗಿ ಬಿಟ್ಟಿತ್ತು. ಈಗ ನೋಡಿದ್ರೆ ಮತ್ತಷ್ಟು ತೊಂದರೆಗಳನ್ನು ತಂದಿಡ್ತಾ ಇದೆ ಕೊರೊನಾ.

ಬ್ಲ್ಯಾಕ್,ವೈಟ್,ಯಲ್ಲೋ ಫಂಗಸ್ ಕಾಟದಿಂದ ಆತಂಕ
ಕೊರೊನಾ ಗೆದ್ದು, ಫಂಗಸ್ ನಿಂದ ಪಾರಾದ್ರೂ ತಪ್ಪಿಲ್ಲ ಭೀತಿ 

ಎರಡನೇ ಅಲೆಯಲ್ಲಿ ಕೊರೊನಾ ವೈರಸ್ ಅದೆಷ್ಟು ಕರಾಳ ಮುಖವನ್ನು ತೋರಿಸಿಬಿಟ್ಟಿತ್ತು ಅಂದ್ರೆ ಜನ ಉಸಿರಾಟದ ಸಮಸ್ಯೆಯಿಂದ ತತ್ತರಿಸಿ ಹೋದರು. ಅನೇಕರು ಪ್ರಾಣವನ್ನೇ ಕಳೆದುಕೊಂಡರು. ಈ ಉಸಿರಾಟದ ಸಮಸ್ಯೆಯಿಂದ ಜನರನ್ನು ಕಾಪಾಡಲು ವೈದ್ಯಲೋಕ ಹರಸಾಹಸವನ್ನೇ ಪಡ್ತಾ ಇದೆ. ದಿಢೀರ್ ಅಂತ ಒಂದಿಷ್ಟು ಮೆಡಿಸಿನ್ಗಳಿಗೂ ಬೇಡಿಕೆ ಹೆಚ್ಚಾಗತೊಡಗಿತ್ತು. ರೆಮ್ಡೆಸಿವಿರ್ ಇಂಜೆಕ್ಷನ್ ಗಂತೂ ಎಲ್ಲೆಲ್ಲೂ ಹುಡುಕಾಟ. ಎರಡೂವರೆ ಸಾವಿರದ ಇಂಜೆಕ್ಷನ್ ಮೂವತ್ತು ನಲವತ್ತು ಸಾವಿರಕ್ಕೂ ಮಾರಾಟವಾಗುವ ದಂಧೆಯೂ ಶುರುವಾಗಿತ್ತು. ಇನ್ನು ಇದನ್ನೆಲ್ಲ ತಡೆಗಟ್ಟಿ ಎಲ್ಲರಿಗೂ ರೆಮ್ ಡೆಸಿವಿರ್ ಸಿಗುವಂತೆ ನೋಡಿಕೊಂಡ ಮೇಲೆ ಶುರುವಾಗಿದ್ದೇ ಬ್ಲ್ಯಾಕ್ ಫಂಗಸ್ ಕಾಟ. ಇಷ್ಟು ದಿನ ಕಾಣಿಸಿಕೊಳ್ಳದಿದ್ದ ಬ್ಲ್ಯಾಕ್ ಫಂಗಸ್ ಕೊರೊನಾ ಸೋಂಕಿತರಾದವರಲ್ಲಿ ಹೆಚ್ಚಾಗಿ ಪ್ರತಾಪ ತೋರಿಸೋಕೆ ಶುರು ಮಾಡಿತ್ತು. ಇದಕ್ಕೆ ಮತ್ತೆ ಒಂದಿಷ್ಟು ಮೆಡಿಸಿನ್ಗಳಿಗೆ ಬೇಡಿಕೆ ಹೆಚ್ಚಾಯ್ತು. ಕೊರೊನಾ ಸೋಂಕಿತರು ಸೀರಿಯಸ್ ಆದ್ರೆ ಅಂಥವರನ್ನು ಬದುಕಿಸಲು ಉಪಯೋಗಿಸುವ ಸ್ಟೆರಾಯ್ಡ್​​ಗಳೇ ಈ ಬ್ಲ್ಯಾಕ್ ಫಂಗಸ್ ಅಟ್ಯಾಕ್ ಆಗಲು ಕಾರಣ ಅಂತ ಗೊತ್ತಾಯ್ತು. ಆದ್ರೆ  ಆಗ ಜೀವ ಉಳಿಸೋದೇ ಮುಖ್ಯವಾಗಿತ್ತು. ಆದ್ರೆ ಜೀವ ಉಳಿದ್ರೂ ಬ್ಲ್ಯಾಕ್ ಫಂಗಸ್ ಅಟ್ಯಾಕ್ ಆಗತೊಡಗಿತು. ಅದರಿಂದ ಹೇಗೋ ಬಚಾವಾಗಬಹುದು ಅಂದುಕೊಂಡರೆ ಅಷ್ಟರಲ್ಲೇ ಬಂದಿದ್ದು ವೈಟ್ ಫಂಗಸ್. ಅಂತು ಇಂತು ಈ ವೈಟ್ ಫಂಗಸ್ ಅಷ್ಟೊಂದು ಅಪಾಯಕಾರಿಯಲ್ಲ ಅಂತ ಗೊತ್ತಾಯ್ತು. ಬ್ಲ್ಯಾಕ್ ಫಂಗಸ್ ಆಯ್ತು, ವೈಟ್ ಫಂಗಸ್ ಆಯ್ತು ಅಂದುಕೊಳ್ಳುವಷ್ಟರಲ್ಲಿ ಗಾಜಿಯಾಬಾದ್ ನಲ್ಲಿ ಯಲ್ಲೋ ಫಂಗಸ್ ಕೂಡ ಪತ್ತೆಯಾಗಿದೆ. ಈ ಫಂಗಸ್ ಬಂದ್ರೆ ಚಿಕಿತ್ಸೆ ಕೊಡಿಸಲೆಂದೇ ಸರ್ಕಾರ ಪ್ರತ್ಯೇಕವಾಗಿ ಎಲ್ಲಾ ಕಡೆ ವ್ಯವಸ್ಥೆ ಮಾಡುವ ಪರಸ್ಥಿತಿ ಬಂದಿದೆ. ಇಷ್ಟೆಲ್ಲಾ ಗಂಡಾಂತರ ತಂದ ಕೊರೊನಾ ಇಷ್ಟಕ್ಕೆ ಸುಮ್ಮನಾಯ್ತಾ ಅಂದ್ರೆ ಖಂಡಿತ ಇಲ್ಲ. ಈಗ ಬರ್ತಾ ಇರುವ ಅಧ್ಯಯನದ ವರದಿಗಳನ್ನು ನೋಡಿದ್ರೆ ಕೊರೊನಾ ತರುವ ಅಪಾಯ ಒಂದೆರಡಲ್ಲ.

ಎಷ್ಟು ದಿನಗಳವರೆಗೆ ಕಾಟ ಕೊಡುತ್ತೆ ಗೊತ್ತಾ ಈ ಕೊರೊನಾ?
ನೆಗೆಟಿವ್ ಬಂತು ಅಂತ ನಿರ್ಲಕ್ಷ್ಯ ವಹಿಸಿದ್ರೆ ದಿಢೀರ್ ಶಾಕ್

ಕೊರೊನಾ ಪಾಸಿಟಿವ್ ಬಂದು ಅದಕ್ಕೆ ಟ್ರೀಟ್ಮೆಂಟ್ ತೆಗೆದುಕೊಂಡು ಮನೆಯಲ್ಲೇ ಹುಷಾರಾಗಿ ಬಿಟ್ಟರೆ ಅದಕ್ಕಿಂತ ಖುಷಿ ಬೇರೊಂದಿಲ್ಲ. 10 ರಿಂದ 14 ದಿನಗಳಲ್ಲಿ ಟೆಸ್ಟ್ ಮಾಡಿಸಿದಾಗ ನಿಮಗೆ ನೆಗೆಟಿವ್ ರಿಪೋರ್ಟ್ ಕೂಡ ಬರಬಹುದು. ಆದ್ರೆ ಕೊರೊನಾ ಹೋಯ್ತು ಇನ್ಮುಂದೆ ನೋ ಪ್ರಾಬ್ಲಮ್ ಅಂತ ಎಚ್ಚರ ತಪ್ಪದಿರಿ. ಹೀಗಂತ ತಜ್ಞರೇ ಎಚ್ಚರಿಕೆ ನೀಡ್ತಾ ಇದ್ದಾರೆ. ಕಾರಣ ಕೊರೊನಾಗೆ ಟ್ರೀಟ್ಮೆಂಟ್ ಪಡೆದುಕೊಂಡು ಗುಣಮುಖರಾಗಿ ಮನೆಗೆ ಹೋದವರು ಮತ್ತೆ ಆಸ್ಪತ್ರೆ ಸೇರಿದ ಉದಾಹರಣೆಗಳು ಬಹಳಷ್ಟಿವೆ. ಅಷ್ಟೇ ಅಲ್ಲ ದಿಢೀರ್ ಅಂತ ಹೃದಯಾಘಾತ ಆಗಿ ಮೃತಪಟ್ಟವರೂ ಇದ್ದಾರೆ. ಇ

ದೆಲ್ಲ ಹೇಗಾಗ್ತಿದೆ ಅಂತ ನೋಡಿದ್ರೆ ಕೊರೊನಾ ಒಮ್ಮೆ ನಿಮ್ಮ ದೇಹದೊಳಕ್ಕೆ ಎಂಟ್ರಿ ಕೊಟ್ರೆ ಅದಕ್ಕೆ ಮೆಡಿಸಿನ್ ತೆಗೆದುಕೊಳ್ಳೋದ್ರೊಳಗಾಗಿಯೇ ಅದು ಒಂದಿಷ್ಟು ಡ್ಯಾಮೇಜ್ ಮಾಡಿಬಿಟ್ಟಿರುತ್ತೆ. ಆದ್ರೆ ಇದು ಅರಿವಿಗೇ ಬಂದಿರೋದಿಲ್ಲ. ಹೀಗಾಗಿ ಕೊರೊನಾ ಪಾಸಿಟಿವ್ ಆಗಿ ಬಳಿಕ ನೆಗೆಟಿವ್ ರಿಪೋರ್ಟ್ ಬಂದರೂ ಕನಿಷ್ಠ ಒಂದೆರಡು ತಿಂಗಳು ಬಹಳ ಎಚ್ಚರಿಕೆಯಿಂದ ಇರಬೇಕು. ಅದಕ್ಕಾಗಿಯೇ ವೈದ್ಯರು ಸಿ.ಟಿ ಸ್ಕ್ಯಾನ್ ಮಾಡಿಸಿ, ಚೆಸ್ಟ್ ಎಕ್ಸರೇ ಮಾಡಿಸಿ ಅಂತ ಸಲಹೆ ಕೊಡ್ತಿದಾರೆ. ನಿಮ್ಮ ಶ್ವಾಸಕೋಶಕ್ಕೆ ಏನಾದರೂ ಹಾನಿ ಆಗಿದ್ದರೆ ಅದರಿಂದ ಗೊತ್ತಾಗುತ್ತೆ ಅನ್ನೋದು ತಜ್ಞರ ಅಭಿಪ್ರಾಯ. ಹೀಗೆ ಶ್ವಾಸಕೋಶಕ್ಕೆ ಕೊರೊನಾ ಡ್ಯಾಮೇಜ್ ಮಾಡಿದ್ರೆ ಇದರ ದುಷ್ಪರಿಣಾಮ ದೀರ್ಘಕಾಲೀನವಾದದ್ದು.

ಕೊರೊನಾದಿಂದ ಚೇತರಿಸಿಕೊಂಡರೂ ಶ್ವಾಸಕೋಶಕ್ಕೆ ಹಾನಿ
ಕನಿಷ್ಠ ಮೂರು ತಿಂಗಳವರೆಗೂ ದುಷ್ಪರಿಣಾಮದ ಸಾಧ್ಯತೆ ಹೆಚ್ಚು

ಕೊರೊನಾ ಸೋಂಕಿನಿಂದ ರೋಗ ಉಲ್ಭಣಗೊಂಡು ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆದುಕೊಂಡು ಎಲ್ಲಾ ರೀತಿಯಲ್ಲಿ ಹುಷಾರಾಗಿ ಬಂದ್ವಿ ಅಂತ ಮೈ ಮರೆತರೆ ಒಬ್ಬೊಬ್ಬರಿಗೆ ಅಪಾಯ ತಂದು ಬಿಡುತ್ತೆ.  ಸೋಂಕಿನಿಂದ ಚೇತರಿಸಿಕೊಂಡವರಲ್ಲಿ ಶ್ವಾಸಕೋಶಕ್ಕೆ ನಿರಂತರವಾಗಿ ಹಾನಿಯಾಗುತ್ತಿರುವುದನ್ನು ಇದೀಗ ಪತ್ತೆಹಚ್ಚಲಾಗಿದೆ. ಕೊರೊನಾ ಸೋಂಕಿತರು ಚೇತರಿಸಿಕೊಂಡ ನಂತರದ ಮೂರು ತಿಂಗಳವರೆಗೂ ಶ್ವಾಸಕೋಶಕ್ಕೆ ಹಾನಿಯಾಗುತ್ತಲೇ ಇರುವುದು ಕಂಡು ಬಂದಿದೆ. ಇದು ಬ್ರಿಟನ್ನಲ್ಲಿ ನಡೆಸಲಾದ ಅಧ್ಯಯನಿಂದ ತಿಳಿದು ಬಂದಿರುವ ಆಘಾತಕಾರಿ ವಿಚಾರ. ಶೆಫೀಲ್ಡ್ ವಿಶ್ವವಿದ್ಯಾಲಯ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ಈ ಆಘಾತಕಾರಿ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಹೀಗಾಗಿ ಕೊರೊನಾದಿಂದ ಚೇತರಿಸಿಕೊಂಡು ಹಲವು ದಿನಗಳಾದ ಬಳಿಕ ಅನೇಕರಿಗೆ ಮತ್ತೆ ಉಸಿರಾಟದ ಸಮಸ್ಯೆ ಉಂಟಾಗೋದಲ್ಲದೆ ಬೇರೆ ಬೇರೆ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಅಷ್ಟೇ ಅಲ್ಲ ಹೃದಯಾಘಾತ ಕೂಡ ಆಗಬಹುದು ಅಂತಿದ್ದಾರೆ ತಜ್ಞರು. ಆದರೆ, ಇದು ಸಾಮಾನ್ಯ ವೈದ್ಯಕೀಯ ಪರೀಕ್ಷೆಯಿಂದ ಗೊತ್ತಾಗುವುದಿಲ್ಲ. ಶ್ವಾಸಕೋಶಕ್ಕೆ ನಿಧಾನವಾಗಿ ಹಾನಿಯಾಗುತ್ತಿದ್ದರೆ ಇದು ಸೋಂಕಿನಿಂದ ಗುಣಮುಖರಾದವರ ಗಮನಕ್ಕೂ ಬರುವುದಿಲ್ಲ. ಅರಿವಿಗೇ ಬರದೇ ಒಮ್ಮೆಲೇ ಆಘಾತ ತಂದು ಬಿಡುತ್ತೆ ಕೊರೊನಾದಿಂದ ಆಗಿದ್ದ ದುಷ್ಪರಿಣಾಮ.

ಸೋಂಕಿತರಾದವರಲ್ಲಿ ಹೇಗಿದ್ದವರಿಗೆ ಸಮಸ್ಯೆ ಎದುರಾಗುತ್ತೆ?
ದೀರ್ಘಕಾಲೀನ ಉಸಿರಾಟದ ಸಮಸ್ಯೆ ಆದವರಿಗೆ ಹೀಗಾಗುತ್ತಾ?

ಕೊರೊನಾ ಸೋಂಕಿತರಾದವರಿಗೆಲ್ಲರಿಗೂ ದೀರ್ಘಕಾಲದ ಆರೋಗ್ಯ ಸಮಸ್ಯೆಗಳು ಉದ್ಭವಿಸುವುದಿಲ್ಲ. ಆದರೆ, ರೋಗ ಉಲ್ಭಣಗೊಂಡು ದೀರ್ಘಕಾಲೀನ ಉಸಿರಾಟದ ಸಮಸ್ಯೆ ಅನುಭವಿಸಿದ್ದವರಿಗೆ ಹೀಗಾಗಬುದು ಅಂತಿದ್ದಾರೆ ತಜ್ಞರು. ಅಷ್ಟೇ ಅಲ್ಲ ಬೇರೆ ಬೇರೆ ಅನಾರೋಗ್ಯದ ಸಮಸ್ಯೆ ಇದ್ದವರೂ ಕೂಡ ಇಂತಹ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಹೀಗಿದ್ದವರು ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದರೂ ನಿರಂತರವಾಗಿ ಎಚ್ಚರಿಕೆ ವಹಿಸಲೇಬೇಕು. ಹಾಗಾದರೆ ಸಾಮಾನ್ಯ ಲಕ್ಷಣ ಇದ್ದು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರೆ ಇಂತಹ ಸಮಸ್ಯೆ ಆಗೋದಿಲ್ವೇ ಅಂತ ಕೇಳಿದ್ರೆ ಅವರಿಗೂ ಆಗಬಹುದು ಅಂತಿದಾರೆ ತಜ್ಞರು. ಹೀಗಾಗಿ ಮನೆಯಲ್ಲೇ ಆಗಲಿ, ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದುಕೊಂಡು ಮರಳಿದವರಾಗಲಿ ಕನಿಷ್ಠ ಮೂರರಿಂದ ಆರು ತಿಂಗಳು ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸೋದು ಒಳಿತು.

ರೂಪಾಂತರಿ ತಳಿಯಿಂದ ಒಬ್ಬೊಬ್ಬರಿಗೆ ಒಂದೊಂದು ಸಮಸ್ಯೆನಾ?
ಪ್ರಬಲ ವೈರಸ್ ಅಟ್ಯಾಕ್ ಮಾಡಿದ್ದರೆ ತುಂಬಾ ಅಪಾಯ ತರುತ್ತಾ?

ಕೊರೊನಾ ಮೊದಲು ಬಂದಾಗ ಅದು ರೂಪಾಂತರವಾಗಿರಲಿಲ್ಲ. ಬಳಿಕ ಒಂದಾದ ಮೇಲೊಂದು ರೂಪಾಂತರಿ ವೈರಸ್ ಅಟ್ಯಾಕ್ ಮಾಡಲು ಶುರುವಾಗಿತ್ತು. ಅದು ಬ್ರಿಟನ್ ವೈರಸ್, ಬ್ರೆಜಿಲ್ ವೈರಸ್, ಬಳಿಕ ದಕ್ಷಿಣ ಆಫ್ರಿಕಾ ವೈರಸ್ ಅಂತೆಲ್ಲಾ ಹೇಳಲಾಗ್ತಾ ಇತ್ತು. ಆದ್ರೆ ಈಗ ಭಾರತದಲ್ಲೇ ಅದೆಷ್ಟು ರೂಪಾಂತರ ಪಡೆದುಕೊಂಡಿದೆ ಎಂಬುದು ನಿಖರವಾಗಿ ಹೇಳಲು ಆಗುತ್ತಿಲ್ಲ. ಯಾರಿಗೆ ರೂಪಾಂತರವಾಗದ ವೈರಸ್ ಅಟ್ಯಾಕ್ ಮಾಡುತ್ತೋ, ಯಾರಿಗೆ ರೂಪಾಂತರಿ ವೈರಸ್ ಅಟ್ಯಾಕ್ ಮಾಡುತ್ತೋ ಅನ್ನೋದನ್ನು ಗುರುತಿಸೋದೇ ಕಷ್ಟ. ಬಹುಶಃ ರೂಪಾಂತರಿ ವೈರಸ್ ಸಹಜವಾಗಿ ಪ್ರಬಲವಾಗಿರೋದ್ರಿಂದ ಅದೇನಾದರೂ ಅಟ್ಯಾಕ್ ಮಾಡಿದ್ರೆ ಅಂಥವರಿಗೆ ಹೆಚ್ಚಿನ ಸಮಸ್ಯೆಗಳು ಆಗಬಹುದು. ಗುಣಮುಖರಾದ ಮೇಲೆಯೂ ದೀರ್ಘಕಾಲಿನ ಸಮಸ್ಯೆಗಳಿಗೂ ಎಡೆ ಮಾಡಿಕೊಡಬಹುದು ಅಂತ ಅಂದಾಜಿಸಲಾಗ್ತಾ ಇದೆ.

ದೀರ್ಘಕಾಲಿನ ಸಮಸ್ಯೆಗಳನ್ನು ಪತ್ತೆ ಹಚ್ಚೋದಾದ್ರೂ ಹೇಗೆ?
ಕಾಲ ಕಾಲಕ್ಕೆ ಸಾಮಾನ್ಯ ಪರೀಕ್ಷೆ ಮಾಡಿಸಿದರೂ ಪತ್ತೆ ಆಗಲ್ವಾ?

ಸೋಂಕಿನಿಂದ ಚೇತರಿಸಿಕೊಂಡವರ ಶ್ವಾಸಕೋಶಕ್ಕೆ ಆಗುತ್ತಿರುವ ಹಾನಿಯನ್ನು ಸಿಟಿ ಸ್ಕ್ಯಾನ್ ಮೂಲಕ ಪತ್ತೆ ಮಾಡಬಹುದು ಅಂತ ಇಷ್ಟು ದಿನ ಹೇಳಲಾಗ್ತಾ ಇತ್ತು. ಚೆಸ್ಟ್ ಎಕ್ಸರೆ ಮಾಡಿಸಿದರೂ ಕೂಡ ಗುರುತಿಸಬಹುದು ಅಂತಾನು ಹೇಳಲಾಗ್ತಾ ಇತ್ತು. ಆದ್ರೆ ಈಗ ಮಾಡಿರುವ ಅಧ್ಯಯನ ವರದಿ ಪ್ರಕಾರ, ಶ್ವಾಸಕೋಶಕ್ಕೆ ಆಗುತ್ತಿರುವ  ಹಾನಿಯು ಸಿಟಿ ಸ್ಕ್ಯಾನ್ ಮತ್ತು ಸಾಮಾನ್ಯ ವೈದ್ಯಕೀಯ ಪರೀಕ್ಷೆಗಳಲ್ಲಿ ಪತ್ತೆಯಾಗುವುದಿಲ್ಲ. ‘ಹೈಪರ್‌ಪೋಲಾರೈಸ್ಡ್  ಎಂಆರ್‌ಐ  ಸ್ಕ್ಯಾನಿಂಗ್‌’ಗೆ ಒಳಪಡಿಸಿದಾಗ ಶ್ವಾಸಕೋಶದಲ್ಲಿ ಹಾನಿಯಾಗ್ತಾ ಇರೋದು ಕಂಡು ಬರ್ತಾ ಇದೆ ಅಂತ ಅಧ್ಯಯನ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಇದನ್ನು ಪದೇ ಪದೇ ಮಾಡಿಸಲೂ ಕೂಡ ಆಗಲ್ಲ. ಜನ ಸಾಮಾನ್ಯರಿಗೆ,ಬಡವರಿಗೆ ಇದು ವೆಚ್ಚದಾಯಕ ಕೂಡ. ಹಾಗಿದ್ದಾಗ ದೀರ್ಘಕಾಲದ ನಂತರ ದಿಢೀರ್ ಅಂತ ಇಂತಹ ಸಮಸ್ಯೆಗಳು ಕಾಣಿಸಿಕೊಂಡರೆ ಏನು ಮಾಡೋದು ಅಂತ ಕೇಳಿದರೆ ಆಗಾಗ ವೈದ್ಯರ ಸಲಹೆ ಪಡೆಯೋದೊಂದೇ ದಾರಿ.

ಕೊರೊನಾ ಬಂತು ಹೋಯ್ತು ಅಂತ ಮೈಮರೆಯೋ ಸಂದರ್ಭ ಇದಲ್ಲ. ಯಾವುದೇ ರೀತಿ ಸಣ್ಣ ಸಮಸ್ಯೆ ಆದರೂ ವೈದ್ಯರ ಸಲಹೆ ಪಡೆದುಕೊಳ್ಳಿ. ನಿಮಗೆ ನೀವೇ ಮೆಡಿಸಿನ್ ತೆಗೆದುಕೊಂಡು ಬಳಿಕ ಆಘಾತ ತಂದುಕೊಳ್ಳಬೇಡಿ.

The post ದಿನೇ ದಿನೇ ಮತ್ತಷ್ಟು ತೀವ್ರವಾಗ್ತಿದ್ಯಾ ಕೊರೊನಾ..? ಚೇತರಿಸಿಕೊಂಡರೂ ಎಚ್ಚರಿಕೆಯಿಂದಿರಿ appeared first on News First Kannada.

Source: newsfirstlive.com

Source link