ದಿ ಗ್ರೇಟ್ ಬ್ರಿಟನ್ ನಲ್ಲಿ ಆಹಾರ ಸಿಗದೇ ಜನರ ಪರದಾಟ.. ಜಗತ್ತಿನ ಸೂಪರ್​ ಪವರ್​ ದೇಶಕ್ಕೆ ಈ ಗತಿ ಬಂದಿದ್ಯಾಕೆ?

ಬ್ರಿಟನ್​ ನೆಲ ಹಸಿವಿನ ಆರ್ತನಾದ ಜೋರಾಗ್ತಿದೆ. ಸೂರ್ಯ ಮುಳುಗದ ಸಾಮ್ರಾಜ್ಯ ಅಂತಲೇ ಖ್ಯಾತಿ ಪಡೆದಿರೋ ಆ ದೇಶ ಹಸಿವಿನಿಂದ ಆಕ್ರಂದಿಸ್ತಿದೆ. ದುರಂತಗಳ ಮೇಲೆ ದುರಂತಗಳನ್ನ ಎದುರಿಸುತ್ತಿರುವ ಬ್ರಿಟನ್​​ ಶಾಲೆಗಳಲ್ಲಿ ಕಂದಮ್ಮಗಳ ಅನ್ನಕ್ಕೂ ಹಾಹಾಕಾರ ಎದ್ದಿದ್ದು, ಜನರು ದಿಗ್ಭ್ರಾಂತರಾಗಿದ್ದಾರೆ. ಇದು ಜಗತ್ತಿನ ಸೂಪರ್​ ಪವರ್​ ದೇಶ ಎನಿಸಿಕೊಂಡಿರುವ ದಿ ಗ್ರೇಟ್ ಬ್ರಿಟನ್​ನ ಕರುಣಾಜನಕ ಕಥೆ

ಒಂದು ಕಾಲದಲ್ಲಿ ಬ್ರಿಟನ್, ದಿ ಗ್ರೇಟ್ ಬ್ರಿಟನ್ ಅನ್ನೋ ಈ ದೇಶಕ್ಕೆ ಜಾಗತಿಕವಾಗಿ ಇದ್ದ ಪವರೇ ಬೇರೆ. ಜಗತ್ತಿನ ಶ್ರೀಮಂತಿಕೆಯನ್ನ ತನ್ನ ಗರ್ಭದಲ್ಲಿ ತುಂಬಿಕೊಂಡಿದ್ದ ಈ ದೇಶ ವಿಶ್ವಾದ್ಯಂತ ತಾನೂ ಒಬ್ಬ ಕುಬೇರ ಅಂತಾ ಎದೆಯುಬ್ಬಿಸಿ ಹೇಳಿಕೊಳ್ತಿತ್ತು. ಮ್ಯಾನ್​ಚೆಸ್ಟರ್, ಬರ್ಮಿಂಗ್​ ಹ್ಯಾಮ್​ನಂತಹ ಕೆಲವು ನಗರಗಲ್ಲಿ ನೀರಿಗಿಂತ ಬಿಯರ್ ಚೀಪ್ ಅನ್ನೋ ಮಾತನ್ನ ನಾವು ಕೇಳಿದ್ದೇವೆ. ಅದ್ರಲ್ಲೂ ಬ್ರಿಟನ್ ದೊರೆಗಳು ವಿಶ್ವದ ಅನೇಕ ರಾಷ್ಟ್ರಗಳನ್ನ ಆಳಿದ ಖ್ಯಾತಿ ಪಡೆದಿದ್ದಾರೆ.. ದೇಶದ ರಾಜಧಾನಿ ಲಂಡನ್​​ನಂತೂ ಜಗತ್ತಿನ ಶ್ರೀಮಂತಿಕೆಯನ್ನೆಲ್ಲಾ ತನ್ನ ಮೇಲೆಯೇ ಹೊದ್ದಂತೆ ಕಂಗೊಳಿಸಿದೆ. ಕಣ್ಣಾಯಿಸಿದಲ್ಲೆಲ್ಲಾ ಬರೀ ಶ್ರೀಮಂತಿಕೆಯೇ ಕಾಣುತ್ತಿದ್ದ ರಾಷ್ಟ್ರ ಈಗ ಬಡವಾಯ್ತಾ? ಈ ಪ್ರಶ್ನೆ ಮೂಡೋದಕ್ಕೆ ಕಾರಣ ಬ್ರಿಟನ್ ದೇಶದ ಈಗಿನ ವಾಸ್ತವ ಸ್ಥಿತಿ

ಜಾಗತಿಕವಾಗಿ ಪ್ರಬಲ ಅಭಿವೃದ್ಧಿತ ರಾಷ್ಟ್ರಗಳಲ್ಲೊಂದಾದ ಬ್ರಿಟನ್​ ಇಂದಿನ ಪರಿಸ್ಥಿತಿ ನೋಡಿದ್ರೆ, ಅಯ್ಯೋ ಇದು ನಿಜಕ್ಕೂ ಬ್ರಿಟನ್​​ ಹೌದಾ ಅನ್ನೋ ಪ್ರಶ್ನೆ ಹುಟ್ಟಿಕೊಳ್ಳುತ್ತೆ. ಕಾಲ ಬದಲಾದಂತೆ, ವರ್ಷಗಳು ಉರುಳಿದಂತೆ ಬ್ರಿಟನ್ ತನ್ನ ನೈಜ ಶಕ್ತಿಯನ್ನ ಕಳೆದುಕೊಳ್ಳುತ್ತಿದೆ. ಪರಿಣಾಮ ಇದೀಗ ಬ್ರಿಟನ್​ನಲ್ಲಿ ಆಹಾರಕ್ಕೂ ಹಾಹಾಕಾರ ಎದ್ದಿದೆ.

ಇಂಧನದ ಬೆನ್ನಲ್ಲೆ ಬ್ರಿಟನ್​​ಗೆ ಬಿಗ್​​ ಶಾಕ್!
ಆಂಗ್ಲರ ನಾಡಲ್ಲಿ ಆಹಾರಕ್ಕೂ ಹಾಹಾಕಾರ

ಬ್ರಿಟನ್​ ಜನರಿಗೆ ಶಾಪವೋ ಏನೋ ಗೊತ್ತಿಲ್ಲ. ಆಂಗ್ಲರ ಕೊರಳಿಗೆ ಸಾಲು ಸಾಲು ಸಮಸ್ಯೆಗಳು ಸುತ್ತಿಕೊಳ್ತಿದೆ. ಕೊರೊನಾ ಹೆಮ್ಮಾರಿಯ ಹೊಡೆತಕ್ಕೆ ನಲುಗಿ ಹೋಗಿದ್ದ ಬ್ರಿಟನ್​ ಜನರಿಗೆ ಇಂಧನ ವ್ಯತ್ಯಯ ಭಾರೀ ಶಾಕ್​​. ಹೆಮ್ಮಾರಿ ಕೊಟ್ಟ ಮರ್ಮಾಘಾತದಿಂದ ಚೇತರಿಸಿಕೊಳ್ಳುವ ಹೊತ್ತಿನಲ್ಲೇ ಮತ್ತೊಂದು ಸಮಸ್ಯೆ ಉಂಟಾಗಿದೆ.

ಕಳೆದ ವಾರವಷ್ಟೇ ಬ್ರಿಟನ್​ನ​ ಬಹುತೇಕ ಪೆಟ್ರೋಕ್​ ಬಂಕ್​ಗಳ ಎದುರು , sorry no fuel ಅನ್ನೋ ಫಲಕಗಳೇ ರಾರಾಜಿಸುತ್ತಿದ್ದವು. ಇದೀಗ ಇದೇ ಇಂಗ್ಲೆಂಡ್​ನಲ್ಲಿ ಹಲವರು ಅನ್ನಕ್ಕೂ ಪರದಾಡುತ್ತಿದ್ದಾರೆ. ಇಂಧನ, ಆಹಾರ ಸೇರಿದಂತೆ ದಿನ ನಿತ್ಯ ಬಳಕೆಯ ವಸ್ತುಗಳಿಗೂ ಕೊರತೆ ಉಂಟಾಗಿದ್ದು, ಶಾಲೆಗಳಲ್ಲಿ ಮಕ್ಕಳ ಅನ್ನಕ್ಕೂ ಹಾಹಾಕಾರ ಎದ್ದಿದೆ.

ಶಾಲೆಗಳಲ್ಲಿ ಮಕ್ಕಳಿಗೂ ಸಿಗ್ತಿಲ್ಲ ಆಹಾರ!

ಬ್ರಿಟನ್ ಪರಿಸ್ಥಿತಿ ಯಾವ ಮಟ್ಟಕ್ಕೆ ತಲುಪಿದೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ.. ಹೌದು.. ಬ್ರಿಟನ್ ಕೆಲ​ ಶಾಲೆಯಲ್ಲಿ ಮಕ್ಕಳಿಗೆ ಆಹಾರ ಸಿಗ್ತಿಲ್ಲ. ಇನ್ನೂ ಕೆಲವೆಡೆ ಆಹಾರ ಸಿಗ್ತಿದ್ರೂ ಅದರಲ್ಲಿ ಪೌಷ್ಟಿಕಾಂಶ ಇಲ್ಲದಂತ್ತಾಗಿದೆ. ಕಂದಮ್ಮಗಳು ಹಸಿವಿನಿಂದ ಕಂಗೆಟ್ಟಿದ್ರೆ, ಏನು ಮಾಡಲಾಗದ ಸ್ಥಿತಿ ಶಾಲೆಯ ಸಿಬ್ಬಂದಿಯಿದ್ದು. ಶಾಲೆಗಳಲ್ಲಿ ಮಕ್ಕಳಿಗೆ ಮಾತ್ರವಲ್ಲದೇ, ಬ್ರಿಟನ್​ನಲ್ಲಿ ಹಲವೆಡೆ ಇದೇ ಸ್ಥಿತಿ ಉಂಟಾಗಿದೆ. ಪರಿಣಾಮ ಆಂಗ್ಲರು ಅಂಜಿಕೆಯಿಂದಲೇ ದಿನದೂಡುತ್ತಿದ್ದಾರೆ. ಚಳಿಗಾಲದಲ್ಲಿ ಈ ಆಹಾರ ಸಮಸ್ಯೆಗೆ ಮತ್ತಷ್ಟು ತೀವ್ರವಾಗುವ ಸಾಧ್ಯತೆ ಇದೆ ಅಂತಲೂ ಹೇಳಲಾಗ್ತಿದೆ. ಅಲ್ಲದೇ, ಈಗಾಗಲೇ ಬರೋಬ್ಬರಿ 450 ಶಾಲೆಗಳಿಗೆ ಊಟಕ್ಕೆ ಸಂಬಂಧಪಟ್ಟ ಆಹಾರಪದಾರ್ಥಗಲಳನ್ನು ಈಗಲೇ ಸ್ಟಾಕ್ ಮಾಡಿಟ್ಟುಕೊಳ್ಳುವಂತೆ ಸೂಚನೆ ನೀಡಲಾಗಿದೆ.

ಬ್ರಿಟನ್​ ಆರ್ಥಿಕತೆಯ ಮೇಲೆ ಹೆಮ್ಮಾರಿಯ ಸವಾರಿ?

ಕೊರೊನಾ ಹೆಮ್ಮಾರಿ ಕೊಟ್ಟ ಹೊಡೆತದಿಂದ ಎದ್ದೇಳಲಾಗದೆ ಕೂತಿರುವ ಬ್ರಿಟನ್​ ದೇಶದ ಎಕಾನಮಿ ನೆಲಕಚ್ಚುತ್ತಿದೆ . ಪರಿಣಾಮ ಇಂದಿಗೂ ಹಲವು ಕಂಪನಿಗಳು ಬಾಗಿಲು ಮುಚ್ಚಿದೆ.. ಮತ್ತೊಂದು ಕಡೆಯಲ್ಲಿ ಜನರು ಉದ್ಯೋಗವಿಲ್ಲದೆ ಕಂಗಲಾದ್ರೆ, ಅಗತ್ಯ ವಸ್ತುಗಳ ಬೆಲೆ ಮುಗಿಲು ಮುಟ್ಟಿದೆ. ಪರಿಣಾಮ ಬ್ರಿಟನ್ ಜನರು ಅಗತ್ಯ ವಸ್ತುಗಳು ಸಿಗದೆ ಹೈರಾಣಾಗಿ ಹೋಗಿದ್ದಾರೆ.
ಬ್ರೆಕ್ಸಿಟ್​ಗೆ ಗುಡ್​ ಬೈ ಅಂದಿದ್ದೇ ಬ್ರಿಟನ್​ಗೆ ಮುಳುವಾಯ್ತಾ..?

2019ರ ಜನವರಿ 31 ರಂದು ಬ್ರಿಟನ್​ ಐರೋಪ್ಯ ಒಕ್ಕೂಟಕ್ಕೆ ಗುಡ್​ ಬೈ ಅಂದಿತ್ತು. ಆದ್ರೆ ಇದುವೆ ಇಂದು ಬ್ರಿಟನ್​​ನ ಈ ದಯನೀಯ ಸ್ಥಿತಿಗೆ ಕಾರಣವಾಯ್ತಾ ಅನ್ನೋ ಮಾತುಗಳು, ಲಂಡನ್​​ನಲ್ಲಿ ಥೇಮ್ಸ್​ ನದಿಯ ನೀರಿನಷ್ಟೇ ವೇಗವಾಗಿ ಹರಿದಾಡ್ತಿದೆ. ಯಾಕಂದ್ರೆ ಅಂದು ಬ್ರಿಟಿಷರು ಇತರೆ ದೇಶಗಳ ಕಾರ್ಮಿಕರಿಗೆ ಅವಮಾನ ಮಾಡಿತ್ತು. “ಬ್ರಿಟನ್ ಸಂಪತ್ಭರಿತ ದೇಶ, ಇತರ ದೇಶದ ಬಡ ವಲಸಿಗರು ಇಲ್ಲಿಗೆ ಬಂದು ನಮ್ಮ ಎಕಾನಾಮಿಯನ್ನ ಹಾಳುಗೆಡುವುತ್ತಾರೆ ಎನ್ನುವ ಧೋರಣೆ ಬ್ರಿಟಿಷರದ್ದಾಗಿತ್ತು”. ಇದೇ ಕಾರಣಕ್ಕೆ ,ಯೂರೋಪಿಯನ್ ಒಕ್ಕೂಟದ ಕೆಲಸಗಾರರಿಗೆ ಬ್ರಿಟನ್​ಗೆ ಬರುವುದಕ್ಕೆ ಕಠಿಣ ಹೇರಿತ್ತು. ಆದ್ರೆ ಇದು ಇಂಗ್ಲೆಂಡ್​ಗೆ ತಿರುಗುಬಾಣವಾಗಿದೆ

ಅಂದು ವಲಸಿಗರಿಗೆ ನಿರ್ಬಂಧ ಹಾಕಿ ಹುಂಬತನದಿಂದ ಮೆರೆದಿದ್ದ ಬ್ರಿಟನ್ ಇಂದು ಹೈರಾಣಾಗಿ ಹೋಗಿದೆ. ಇದೀಗ ಆಂಗ್ಲರೇ ತಮ್ಮ ಎರಡು ಕೈಗಳನ್ನ ಮುಂದಕ್ಕೆ ಚಾಚಿ ವೀಸಾ ನೀಡಿದ್ರು ಕೂಡ, ಇತರೆ ದೇಶದ ವಲಸಿಗರು ಬ್ರಿಟನ್​ಗೆ ಹೋಗಲು ಹಿಂದೇಟು ಹಾಕ್ತಿದ್ದಾರೆ. ಡ್ರೈವರ್​ಗಳ ಕೊರತೆಯಿಂದ ಬರೀ ಇಂಧನ ಮಾತ್ರವಲ್ಲ ಆಹಾರ ಸರಬರಾಜಿಗೂ ಸಮಸ್ಯೆ ಉಂಟಾಗಿದೆ.

ಕಾರ್ಮಿಕರ ಕೊರೆತೆಯಿಂದ ಇಂದು ಆಹಾರಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಾಟ ಮಾಡಲು ಅಡಚಣೆ ಉಂಟಾಗಿದೆ. ಅಲ್ಲದೆ 100 ಜನರಿಗೆ ಬೇಕಾಗಿರುವ ಆಹಾರ ಒಬ್ಬರ ಕೈಯಲ್ಲಿದೆ. ಮುಂದಿನ ದಿನಗಳನ್ನ ಕರಾಳ ದಿನಗಳನ್ನ ನೆನೆದು ಇಂಗ್ಲೆಂಡ್​​ನ ಜನರು ಈಗಾಗಲೇ ಮನೆಯಲ್ಲಿ ತಿಂಗಳಿಗೆ ಸಾಕಾಗುವಷ್ಟು ಆಹಾರವನ್ನ ಶೇಖರಣೆ ಮಾಡಿಕೊಂಡಿದ್ದಾರೆ. ಇದು ಇತೆರೆಡೆ ಆಹಾರದ ಕೊರತೆ ಎದುರಾಗಲು ಕಾರಣವಾಗಿದೆ.

ಆಹಾರದ ಕೊರತೆಯನ್ನ ನೀಗಿಸಲು ಬ್ರಿಟನ್​ ಪ್ರಧಾನಿ ಕೆಲ ಕ್ರಮಗಳನ್ನ ಕೈಗೊಂಡಿದ್ದಾರೆ. ಆಹಾರ ಸಾಗಾಟ ವ್ಯವಸ್ಥೆಯನ್ನ ಕೂಡ ಮಾಡ್ತಿದ್ದಾರೆ.. ಆದ್ರೆ ರಾವಣನ ಹೊಟ್ಟೆಗೆ ಆರೆ ಕಾಸಿನ ಮಜ್ಜಿಗೆ ಎಲ್ಲಿಗೆ ಸಾಲುತ್ತೆ ಹೇಳಿ..?

ದಿ ಗ್ರೇಟ್ ಬ್ರಿಟನ್ ಎಂದು ಕರೆಸಿಕೊಳ್ಳುತ್ತಿದ್ದ ದೇಶಕ್ಕೆ ಇಂದು ಈ ಸ್ಥಿತಿ ಬರಬಾರದಿತ್ತು. ಬ್ರಿಟನ್​ನ ಇಂದಿನ ದುಸ್ಥಿತಿಗೆ ಹಲವು ಕಾರಣಗಳನ್ನ ಪಟ್ಟಿ ಮಾಡಬಹುದು.. ಆದ್ರೆ ಉಗುರಿನಲ್ಲಿ ತೆಗೆಯಬಹುದಾಗಿದ್ದ ಸಣ್ಣ ಸಿಬುರಿಗೆ ಕೊಡಲಿಯ ಪೆಟ್ಟು ಕೊಟ್ಟಿದೆ ಬ್ರಿಟನ್​ ದೇಶದ ಈ ದುರ್ಗತಿಗೆ ಕಾರಣ ಅನ್ನೋದ್ರರಲ್ಲಿ ಎರಡು ಮಾತಿಲ್ಲ. ಭವಿಷ್ಯಕ್ಕಾಗಿ ಈಗಾಗಲೇ ಹಲವು ಶಸ್ಸ್ತಾಸ್ತಗಳನ್ನ ತನ್ನ ಒಡಲಲ್ಲಿ ಬಚ್ಚಿಟ್ಟುಕೊಂಡಿರುವ ಬ್ರಿಟನ್​ಗೆ, ತನ್ನ ದೇಶದ ಜನರ ಹಸಿವಿನ ನೋವು ಅರಿವಿಗೆ ಬರದಿರುವುದು ನಿಜಕ್ಕೂ ದುರಂತ ಅಲ್ಲದೇ ಇನ್ನೇನು ಹೇಳಿ..?

ಸದ್ಯದ ಬ್ರಿಟನ್​ನ ಪರಿಸ್ಥಿತಿಗೆ ಏನ್​ ಕಾರಣ ಎಂದು ಕೇಳಿದ್ರೆ,ಹತ್ತಾರು ಕಾರಣಗಳನ್ನ ಬ್ರಿಟನ್​ ಪ್ರಧಾನಿ ಕೊಡಬಲ್ಲರು.. ಆದ್ರೆ ಪರಿಸ್ಥಿತಿಯನ್ನ ಹೇಗೆ ನಿಭಾಯಿಸಬಹುದು ಅನ್ನೋ ಪ್ರಶ್ನೆಯನ್ನ ಮುಂದಿಟ್ಟರೆ, ಅವರ ಬಾಯಿಯಿಂದ ಉತ್ತರ ಕಂಡುಕೊಳ್ಳುವುದು , ಕಡಲ ತಟದಲ್ಲಿರುವ ಮರಳನ್ನ ಎಣಿಸಿದಷ್ಟೇ ಕಠಿಣ. ಮುಂದಿನ ಎರಡು ತಿಂಗಳಲ್ಲಿ ಬ್ರಿಟನ್​ ಮತ್ತಷ್ಟು ಕಠಿಣ ಪರಿಸ್ಥಿತಿಯನ್ನ ಎದುರಿಸಲಿದೆ ಎಂದು ಆರ್ಥಿಕ ತಜ್ಷರು ಅಭಿಪ್ರಾಯ ಪಟ್ಟಿದ್ದಾರೆ. ಏನೆ ಇರಲಿ ಬ್ರಿಟನ್​​ನ ಹಲವು ಕಡೆ​ ಇಂದು ತುತ್ತು ಅನ್ನಕ್ಕೂ ಪರದಾಟ ಎದುರಾಗಿರೋದು ನಿಜಕ್ಕೂ ದುರದೃಷ್ಟಕರ.

News First Live Kannada

Leave a comment

Your email address will not be published. Required fields are marked *