ಬೆಂಗಳೂರು: ದೀಪವೊಂದು ಮರೆಯಾಗಿದೆ. ಬದುಕಿನ ಅಸ್ಮಿತೆಗಳನ್ನು, ಬದುಕಿನ ಕಥನಗಳನ್ನು ಅಕ್ಷರ ರೂಪದಲ್ಲಿ ಕಟ್ಟಿದವರು ದಲಿತ ಕವಿ ಶ್ರೀ ಸಿದ್ದಲಿಂಗಯ್ಯನವರು. ಸಾಹಿತ್ಯ ಲೋಕದಲ್ಲಿ ತಮ್ಮ ವರ್ಗದ ಅಸ್ಮಿತೆಗೆ ಧ್ವನಿಯಾಗಿ ‘ದಲಿತ ಕವಿ’ಎಂದೇ ಪ್ರಸಿದ್ಧರಾದ ನಾಡೋಜ ಸಿದ್ಧಲಿಂಗಯ್ಯನವರ ಅಗಲುವಿಕೆಗೆ ಭಾರತೀಯ ಜನತಾ ಪಾರ್ಟಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿಯವರು ಸಂತಾಪ ಸೂಚಿಸಿದ್ದಾರೆ.

ಇವರ ಒಳ ಧ್ವನಿಯ ಆಕ್ರೋಶದಿಂದ ಹುಟ್ಟಿದ ಹಾಡುಗಳು ಆರಂಭದ ದಿನಗಳಲ್ಲಿ ಚಳುವಳಿಗೆ ಬಲ ತುಂಬಿದವು ನಂತರದ ದಿನಗಳಲ್ಲಿ ರಾಷ್ಟ್ರೀಯತೆಯ ಕಾರಣಕ್ಕಾಗಿ ಮಧ್ಯಮ ಮಾರ್ಗವನ್ನು ಕಂಡುಕೊಂಡ ಶ್ರೀಯುತರು ಕನ್ನಡ ಸಾಹಿತ್ಯ ರಂಗದ ಒಬ್ಬ ಅಪ್ರತಿಮ ಸಾಧಕರು. ಶ್ರೀಯುತರ ಸಾಹಿತ್ಯದ ಕೃಷಿಗೆ ಕನ್ನಡದ ಶ್ರೇಷ್ಠ ಪ್ರಶಸ್ತಿ ಪಂಪ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಜಾನಪದ ತಜ್ಞ ಪ್ರಶಸ್ತಿ, ಡಾ. ಅಂಬೇಡ್ಕರ್ ಪ್ರಶಸ್ತಿ, ಸತ್ಯಕಾಮ ಪ್ರತಿಷ್ಠಾನ ಪ್ರಶಸ್ತಿ, ಬಾಬು ಜಗಜೀವನ ರಾಮ್ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಇವರಿಗೆ ಸಂದಿದ್ದವು. ಇದನ್ನೂ ಓದಿ: ‘ಊರುಕೇರಿ’ ತೊರೆದು ಹೋದ ಸಿದ್ದಲಿಂಗಯ್ಯ

ಹೊಲೆ ಮಾದಿಗರ ಹಾಡು, ಮೆರವಣಿಗೆ, ಸಾವಿರಾರು ನದಿಗಳು, ಕಪ್ಪು ಕಾಡಿನ ಹಾಡು ಮೊದಲಾದ ಕೃತಿಗಳನ್ನು ರಚಿಸಿದ ಶ್ರೀಯುತರು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆ ಅಪಾರ. ಎರಡು ಬಾರಿ ರಾಜ್ಯ ವಿಧಾನ ಪರಿಷತ್ತಿನ ಸದಸ್ಯರಾಗಿದ್ದ ಶ್ರೀಯುತರು 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕವಿ ಸಿದ್ಧಲಿಂಗಯ್ಯನವರು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಅತ್ತಂತ ಸಮರ್ಪಕವಾಗಿ ಕೆಲಸ ನಿರ್ವಹಿಸಿದ್ದರು.

ನನ್ನಂತಹ ಸಾವಿರ ಸಾವಿರ ಓದುಗರ ಪಾಲಿಗೆ ಶ್ರೀಯುತರ ಅಗಲಿಕೆ ಅತಿದೊಡ್ಡ ನಷ್ಟ. ಇಹಕಾಯವನ್ನು ತೊರೆದಿದ್ದರೂ ಅವರ ಬರವಣಿಗೆಗಳ ಮೂಲಕ ನಮ್ಮ ನಡುವೆ ಸದಾ ನೆಲೆಸಿರುತ್ತಾರೆ. ಅವರ ಅಗಲುವಿಕೆಯ ದುಃಖ ಭರಿಸುವ ಶಕ್ತಿ ಅವರ ಕುಟುಂಬಕ್ಕೆ, ಅವರ ಅಭಿಮಾನಿ ವರ್ಗಕ್ಕೆ ಹಾಗೂ ಓದುಗ ಬಳಗಕ್ಕೆ ಶ್ರೀ ಗುರು ದತ್ತಾತ್ರೇಯರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸೂಚಿಸಿದ್ದಾರೆ.

ನಾರಾಯಣಸ್ವಾಮಿ ಸಂತಾಪ:
ಕನ್ನಡದ ಕವಿ ಡಾ ಸಿದ್ಧಲಿಂಗಯ್ಯ ನವರು ಇಹಲೋಕ ತ್ಯಜಿಸಿದ್ದಾರೆ. ದಲಿತ ಸಮುದಾಯದ ಉನ್ನತಿ ಮತ್ತು ಪ್ರಗತಿಗಾಗಿ ಶ್ರಮಿಸಿದ ಸಿದ್ದಲಿಂಗಯ್ಯ ನವರಿಗೆ ಭಾವಪೂರ್ಣ ಶ್ರದ್ಧಾಂಜಲಿ, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಅಂತಾ ಬಿಜೆಪಿ ಎಸ್ ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಸಂತಾಪ ಸೂಚಿಸಿದ್ದಾರೆ.

ಮುಖ್ಯಮಂತ್ರಿ ಮಾನ್ಯ ಯಡಿಯೂರಪ್ಪನವರಲ್ಲಿ ಮನವಿ ಮಾಡುತ್ತೇನೆ. ಸಿದ್ಧಲಿಂಗಯ್ಯನವರು ರಾಜ್ಯದಲ್ಲಿ ಹೆಸರಾಂತ ಕವಿಗಳು ಮಾತ್ರವಲ್ಲ ಅವರು ಪ್ರೊಫೆಸರ್ ಆಗಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಹಾಗೂ ಎರಡು ಅವಧಿಗೆ ಕರ್ನಾಟಕ ವಿಧಾನಪರಿಷತ್ ಸದಸ್ಯರಾಗಿಯೂ ಸೇವೆ ಸಲ್ಲಿಸಿ ರಾಜ್ಯದಲ್ಲಿ ಜನಾನುರಾಗಿ ಆಗಿದ್ದಾರೆ. ಆದ್ದರಿಂದ ಅವರ ಸಹಸ್ರಾರು ಸಂಖ್ಯೆಯ ಶಿಷ್ಯವೃಂದ ಹಾಗೂ ಅವರ ಅನುಯಾಯಿಗಳು ಸಿದ್ಧಲಿಂಗಯ್ಯನವರನ ಅಂತ್ಯಕ್ರಿಯೆ ನಡೆಸಲು ಬೆಂಗಳೂರು ವಿಶ್ವವಿದ್ಯಾಲಯದ ಕಲಾಗ್ರಾಮದಲ್ಲಿ ಪ್ರೊಫೆಸರ್ ಜಿ.ಎಸ್ ಶಿವರುದ್ರಪ್ಪ ಮತ್ತು ಪ್ರೊಫೆಸರ್ ಯು.ಆರ್ ಅನಂತಮೂರ್ತಿರವರ ಸ್ಮಾರಕಗಳ ಸ್ಥಳದಲ್ಲಿ ಅಂತ್ಯಕ್ರಿಯೆಗೆ ಸ್ಥಳಾವಕಾಶ ಕೋರುತ್ತಿದ್ದಾರೆ. ದಯಮಾಡಿ ದಲಿತ ಸಮುದಾಯಗಳ ಈ ಮನವಿಗೆ ಸ್ಪಂದಿಸಿ ಅವಕಾಶ ಕಲ್ಪಿಸಿಕೊಡಲು ಮನವಿ ಮಾಡುತ್ತೇನೆ ಅಂತಾ ಛಲವಾದಿ ನಾರಾಯಣಸ್ವಾಮಿ ಮನವಿ ಮಾಡಿದ್ದಾರೆ. ಇದನ್ನೂ ಓದಿ:ದಲಿತ ಕವಿ ಸಿದ್ದಲಿಂಗಯ್ಯ ನಿಧನ – ವಿಪಕ್ಷ ನಾಯಕ ಸಿದ್ದರಾಮಯ್ಯ ಸಂತಾಪ

The post ದೀಪವೊಂದು ಮರೆಯಾಗಿದೆ: ಸಿದ್ದಲಿಂಗಯ್ಯನವರ ನಿಧನಕ್ಕೆ ಸಿ.ಟಿ.ರವಿ ಸಂತಾಪ appeared first on Public TV.

Source: publictv.in

Source link