ದೀಪಾವಳಿ ಪ್ರಯುಕ್ತ ಕಾಶ್ಮೀರದ ಗಡಿಯಲ್ಲಿ ಸಿಹಿ ಹಂಚಿಕೊಂಡ ಭಾರತ- ಪಾಕಿಸ್ತಾನ ಸೈನಿಕರು | Indian Pakistan armies exchange sweets wishes on Diwali along LoC in Jammu Kashmir Poonch


ದೀಪಾವಳಿ ಪ್ರಯುಕ್ತ ಕಾಶ್ಮೀರದ ಗಡಿಯಲ್ಲಿ ಸಿಹಿ ಹಂಚಿಕೊಂಡ ಭಾರತ- ಪಾಕಿಸ್ತಾನ ಸೈನಿಕರು

ಭಾರತೀಯ ಸೈನಿಕರಿಗೆ ಸಿಹಿ ತಿನ್ನಿಸಿದ ಪ್ರಧಾನಿ ನರೇಂದ್ರ ಮೋದಿ

ಶ್ರೀನಗರ: ಜಮ್ಮು ಕಾಶ್ಮೀರದ ರಾಜೌರಿಯಲ್ಲಿರುವ ನೌಶೇರಾದಲ್ಲಿ ಇಂದು ಭಾರತೀಯ ಯೋಧರ ಜೊತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ದೀಪಾವಳಿ ಆಚರಿಸಿದ್ದಾರೆ. ಇದಾದ ಬಳಿಕ ಭಾರತೀಯ ಸೈನಿಕರಿಗೆ ಪ್ರಧಾನಿ ಮೋದಿ ಸಿಹಿ ಹಂಚಿದ್ದಾರೆ. ಪ್ರಧಾನಿ ಮೋದಿ ನೌಶೇರಾದಿಂದ ಜಮ್ಮು ಏರ್​ಪೋರ್ಟ್​ನತ್ತ ಹೊರಟ ನಂತರ ಜಮ್ಮು ಕಾಶ್ಮೀರದ ಗಡಿಯಲ್ಲಿರುವ ಪೂಂಚ್​ನಲ್ಲಿ ಗಡಿ ನಿಯಂತ್ರಣ ರೇಖೆಯ ಬಳಿ (LoC) ಭಾರತ ಮತ್ತು ಪಾಕಿಸ್ತಾನದ ಸೈನಿಕರು ಸಿಹಿ ವಿನಿಯಮ ಮಾಡಿಕೊಂಡಿದ್ದಾರೆ.

ನೌಶೇರಾದಲ್ಲಿ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ, ಸರ್ಜಿಕಲ್ ದಾಳಿಯಲ್ಲಿ ನಮ್ಮ ಸೈನಿಕರ ಪಾತ್ರದ ಬಗ್ಗೆ ನಮಗೆ ಬಹಳ ಹೆಮ್ಮೆಯಿದೆ. ನಮ್ಮ ದೇಶದ ಸೈನಿಕರು ಭಾರತ ಮಾತೆಗೆ ಸುರಕ್ಷಾ ಕವಚದಂತಿದ್ದಾರೆ. ಇಂದು ನನ್ನ ಎದುರು ಕೆಚ್ಚೆದೆಯ ಸೋದರರು- ಸೋದರಿಯರಿದ್ದೀರಿ. ನಿಮ್ಮ ಮಾತೃಭೂಮಿಗಾಗಿ ನೀವೆಲ್ಲರೂ ಧೈರ್ಯದಿಂದ ಹೋರಾಡುತ್ತಿದ್ದೀರಿ. ನಮ್ಮ ತಾಯ್ನಾಡನ್ನು ಕಾಪಾಡಲೇಬೇಕೆಂಬ ಹಠ, ಬದ್ಧತೆ ನಿಮ್ಮ ಕಣ್ಣುಗಳಲ್ಲಿ ಕಾಣುತ್ತಿದೆ ಎಂದು ಹೇಳಿದ್ದಾರೆ.

ನಾನಿಂದು ಒಬ್ಬನೇ ಇಲ್ಲಿಗೆ ಬಂದಿಲ್ಲ. ನನ್ನೊಂದಿಗೆ ಕೋಟ್ಯಂತರ ಭಾರತೀಯರ ಆಶೀರ್ವಾದವನ್ನು ಸೈನಿಕರಿಗಾಗಿ ಹೊತ್ತು ತಂದಿದ್ದೇನೆ. ನಿಮ್ಮಂದಾಗಿಯೇ ನಾವಿಂದು ನೆಮ್ಮದಿಯಿಂದ ನಿದ್ರೆ ಮಾಡುತ್ತಿದ್ದೇವೆ, ಸಂಭ್ರಮದಿಂದ ಹಬ್ಬ ಆಚರಿಸುತ್ತಿದ್ದೇವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಮ್ಮು ಕಾಶ್ಮೀರದ ಗಡಿಯಲ್ಲಿರುವ ರಾಜೌರಿಯಲ್ಲಿ ಹೇಳಿದ್ದಾರೆ.

ನಮ್ಮ ದೇಶದ ಮಹಿಳೆಯರಿಗೆ ಕೂಡ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಲಾಗಿದೆ. ನಮ್ಮ ದೇಶದ ಹೆಣ್ಣುಮಕ್ಕಳು ತಮ್ಮ ಸಾಮರ್ಥ್ಯವೇನೆಂದು ಜಗತ್ತಿಗೆ ಮತ್ತೊಮ್ಮೆ ಸಾಬೀತುಪಡಿಸುವ ಸಮಯ ಬಂದಿದೆ. ಮಹಿಳೆಯರು ಕೂಡ ಭಾರತಾಂಬೆಯನ್ನು ಶತ್ರುಗಳಿಂದ ಕಾಪಾಡಲು ಕಂಕಣಬದ್ಧರಾಗಿರುವುದನ್ನು ನೋಡಿದರೆ ನನಗೆ ಹೆಮ್ಮೆ ಎನಿಸುತ್ತಿದೆ ಎಂದು ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಳಿಕ ಕೆಲ ಕಾಲ ಸೈನಿಕರೊಂದಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾಲ ಕಳೆದಿದ್ದಾರೆ.

ಇದನ್ನೂ ಓದಿ: Narendra Modi: ದೇಶದ ಭದ್ರತೆಯಲ್ಲಿ ಮಹಿಳೆಯರ ಪಾತ್ರ ಹೊಸ ಇತಿಹಾಸ ಸೃಷ್ಟಿಸಲಿದೆ; ನೌಶೇರಾದಲ್ಲಿ ಪ್ರಧಾನಿ ನರೇಂದ್ರ ಮೋದಿ

ನೌಶೇರಾ ಗಡಿ ಪ್ರದೇಶ ತಲುಪಿದ ಪ್ರಧಾನಿ ಮೋದಿ; ಯೋಧರೊಂದಿಗೆ ದೀಪಾವಳಿ ಆಚರಣೆ

TV9 Kannada


Leave a Reply

Your email address will not be published. Required fields are marked *