ದೀಪಾವಳಿ ಪ್ರಯುಕ್ತ ಕೋಟೆನಾಡಲ್ಲಿ ಪಂಚಪದಿ ಉತ್ಸವ: ಬುಡಕಟ್ಟು ಸಮುದಾಯದ ಸಂಸ್ಕೃತಿ ಅನಾವರಣ! – Panchapadi Utsav in Kotenadu on the occasion of Diwali


ದೀಪಾವಳಿ ಸಂದರ್ಭದಲ್ಲಿ ಪಂಚಪದಿ ಉತ್ಸವ ನಡೆಯುತ್ತದೆ. ಜೊತೆಗೆ ದೇವರ ಎತ್ತುಗಳ ಭವ್ಯ ಮೆರವಣಿಗೆ ಇಲ್ಲಿಯ ಬುಡಕಟ್ಟು ಸಮುದಾಯದ ಸಂಸ್ಕೃತಿ ಅನಾವರಣಗೊಳಿಸುತ್ತದೆ.

ದೀಪಾವಳಿ ಪ್ರಯುಕ್ತ ಕೋಟೆನಾಡಲ್ಲಿ ಪಂಚಪದಿ ಉತ್ಸವ: ಬುಡಕಟ್ಟು ಸಮುದಾಯದ ಸಂಸ್ಕೃತಿ ಅನಾವರಣ!

ಪಂಚಪದಿ ಉತ್ಸವ ಆಚರಣೆ

ಚಿತ್ರದುರ್ಗ: ಆಯಾ ಪ್ರದೇಶಗಳಲ್ಲಿನ ಜನಜೀವನಕ್ಕೆ ಅನುಗುಣವಾಗಿ ವಿಶೇಷ ಆಚರಣೆಗಳು‌ ಆಚರಿಸಲ್ಪಡುತ್ತವೆ. ಇಂತಹ ವಿಶೇಷತೆಗೆ ಸದ್ಯ ಚಿತ್ರದುರ್ಗ ಸಾಕ್ಷಿಯಾಗಿದೆ. ದೀಪಾವಳಿ ಸಂದರ್ಭದಲ್ಲಿ (Panchapadi Utsav) ಪಂಚಪದಿ ಉತ್ಸವ ನಡೆಯುತ್ತದೆ. ಜೊತೆಗೆ ದೇವರ ಎತ್ತುಗಳ ಭವ್ಯ ಮೆರವಣಿಗೆ ಇಲ್ಲಿಯ ಬುಡಕಟ್ಟು ಸಮುದಾಯದ ಸಂಸ್ಕೃತಿ ಅನಾವರಣಗೊಳಿಸುತ್ತದೆ. ಹೌದು, ಕೋಟೆನಾಡು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಬಂಗಾರದೇವರಹಟ್ಟಿ ಬಳಿ ದೀಪಾವಳಿ ಹಬ್ಬದ ಅಂಗವಾಗಿ ಬುಡಕಟ್ಟು ಸಂಸ್ಕೃತಿಯ ಮ್ಯಾಸ ಬೇಡ ಸಮುದಾಯದ ಜನರು ವಿಶೇಷ ದೀಪಾವಳಿ ಆಚರಿಸುತ್ತಾರೆ. ಗ್ರಾಮದ ಹೊರವಲಯದಲ್ಲಿ ಪರಿಸರದ‌ ಮಧ್ಯೆ ಗಿಡಬಳ್ಳಿಗಳ ನಡುವೆ ಪಂಚಪದಿ (ತಾತ್ಕಾಲಿಕ ಪುಟ್ಟ ದೇಗುಲ) ನಿರ್ಮಿಸುತ್ತಾರೆ. ಬೊಮ್ಮದೇವರು, ಗಾದ್ರಿ ದೇವರು, ಓಬಳದೇವರು, ಬಂಗಾರದೇವರು ಮತ್ತು ಮುತ್ತೈಗಳು ಆ ಪುಟ್ಟ ದೇಗುಲಗಳಲ್ಲಿ ಪ್ರತಿಷ್ಠಾಪಿಸಿ ಪೂಜಿಸುತ್ತಾರೆ. ಬಳಿಕ ಸುಮಾರು 300ಕ್ಕೂ ಹೆಚ್ಚು ಸಾಂಪ್ರದಾಯಿಕ ದೆಡವರ ಎತ್ತುಗಳನ್ನು ಕರೆತಂದು ಪೂಜಿಸಿ ನೈವೇದ್ಯ ಅರ್ಪಿಸುತ್ತಾರೆ. ಬಳಿಕ ಎತ್ತುಗಳ ಮೆರವಣಿಗೆ ( ದೇವರ ಎತ್ತು ಓಡಿಸುವುದು) ನಡೆಸುತ್ತಾರೆ. ಆ ಮೂಲಕ ನಾಡು ರೋಗ ರುಜನಿಗಳಿಂದ ಮುಕ್ತವಾಗಿ ಸಮೃದ್ಧ ಮಳೆ,‌ ಬೆಳೆ ಆಗುತ್ತದೆ ಎಂಬುದು ಈ ಭಾಗದ ಜನರ ನಂಬಿಕೆ ಆಗಿದೆ.

ಇನ್ನು ಈ ವಿಶೇಷ ಪಂಚಪದಿ ಉತ್ಸವಕ್ಕೆ ನನ್ನಿವಾಳ ಕಟ್ಟೆಮನೆಯ ಮ್ಯಾಸಬೇಡ ಸಮುದಾಯದ ಜನರು ಸೇರಿರುತ್ತಾರೆ. ಅಲ್ಲದೆ ಸಂಬಂಧಿಕರು, ದೇವರ ಎತ್ತುಗಳ ಆರಾಧಕರು ನೂರಾರು ಸಂಖ್ಯೆಯಲ್ಲಿ ಆಗಮಿಸಿ ಭಕ್ತಿ ಸಮರ್ಪಿಸುತ್ತಾರೆ. ಪಂಚ‌ಪದಿ ಉತ್ಸವದ ಬಳಿಕ ಸಾಮೂಹಿಕ ಪ್ರಸಾದ ಸ್ವೀಕರಿಸುತ್ತಾರೆ. ಆ ಮೂಲಕ ಪಶುಪಾಲನೆ, ಪ್ರಕೃತಿ ಆರಾಧನೆ ಜತೆಗೆ ವಿಶೇಷ ಧಾರ್ಮಿಕ ಆಚರಣೆ ನಡೆಯುವುದು ದೇಶದಲ್ಲೇ ಅಪರೂಪ ಎಂದು ತಹಸೀಲ್ದಾರ್ ರಘುಮೂರ್ತಿ ಹೇಳಿದರು.

ಕೋಟೆನಾಡು ಚಿತ್ರದುರ್ಗದಲ್ಲಿ ಬುಡಕಟ್ಟು ಸಂಸ್ಕೃತಿಯ ಅನಾವರಣ ಆಗಿದೆ. ದೇವರ ಎತ್ತುಗಳ ಮೆರವಣಿಗೆ, ಪಂಚಪದಿ ಉತ್ಸವ ತನ್ನದೇ ಆದ ವಿಶೇಷ ಆಕರ್ಷಣೆ ಪಡೆದಿದೆ. ಆಧುನಿಕ ಯುಗದಲ್ಲೂ ಅಪರೂಪದ ಈ ವಿಶಿಷ್ಟ ಸಂಪ್ರದಾಯ ಇಂದಿಗೂ ಆಚರಿಸಿಕೊಂಡು ಬರಲಾಗುತ್ತಿದೆ.

ವರದಿ: ಬಸವರಾಜ ಮುದನೂರ್, ಟಿವಿ9, ಚಿತ್ರದುರ್ಗ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ

TV9 Kannada


Leave a Reply

Your email address will not be published.