ದೀರ್ಘ ರಜೆ ಬಳಿಕ ಭಾರತಕ್ಕೆ ಹಿಂದಿರುಗಿದ ಆದಾರ್ ಪೂನಾವಾಲಾ

ಮುಂಬೈ: ಇಂಗ್ಲೆಂಡ್‍ಗೆ ತೆರಳಿದ್ದ ಸೀರಂ ಸಂಸ್ಥೆಯ ಸಿಇಓ ಆದಾರ್ ಪೂನಾವಾಲಾ ದೀರ್ಘ ರಜೆ ಬಳಿಕ ಭಾರತಕ್ಕೆ ಹಿಂದಿರುಗಿದ್ದಾರೆ.

ಭಾರತದಲ್ಲಿ ಕೊರೊನಾ ಎರಡನೇ ಅಲೆ ಸ್ಫೋಟಗೊಂಡ ವೇಳೆಯೇ ಆದಾರ್ ಪೂನಾವಾಲಾ ಇಂಗ್ಲೆಂಡ್‍ಗೆ ತೆರಳಿದ್ದರು. ಬೆದರಿಕೆ ಮತ್ತು ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಪೂನಾವಾಲಾ ಲಂಡನ್ ಸೇರಿದ್ದರು. ಇಂದು ಬೆಳಗ್ಗೆ ಪೂನಾವಾಲಾ ಸಂಸ್ಥೆಯ ಖಾಸಗಿ ಜೆಟ್ ಪುಣೆ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿತ್ತು. ಅಲ್ಲಿಂದ ಖಾಸಗಿ ಹೆಲಿಕಾಪ್ಟರ್ ಮೂಲಕ ನೇರವಾಗಿ ಆದಾರ್ ಪೂನಾವಾಲಾ ಸೀರಂ ಸಂಸ್ಥೆಗೆ ತೆರಳಿದ್ದಾರೆ.

ಭಾರತದ ಕೊರೊನಾ ಲಸಿಕಾಕರಣ ಅಭಿಯಾನದಲ್ಲಿ ಸೀರಂ ಸಂಸ್ಥೆಯ ಪಾತ್ರ ಪ್ರಮುಖವಾಗಿದೆ. ಕೊರೊನಾ ಸಂಜೀವಿನಿ ಕೋವಿಶೀಲ್ಡ್ ಲಸಿಕೆಯನ್ನ ಸೀರಂ ಉತ್ಪಾದನೆ ಮಾಡುತ್ತಿದೆ. ಮೇನಲ್ಲಿ ಕೊರೊನಾ ಲಸಿಕೆಗೆ ಬೇಡಿಕೆ ಹೆಚ್ಚಾಗಿದ್ದ ವೇಳೆ ದಿಢೀರ್ ಪೂನಾವಾಲಾ ಲಂಡನ್ ಗೆ ತೆರಳಿದ್ದು, ಹಲವು ಚರ್ಚೆಗಳಿಗೆ ಕಾರಣವಾಗಿತ್ತು.

ಲಂಡನ್ ತಲುಪಿದ ಬಳಿಕ ಸ್ಪಷ್ಟನೆ ನೀಡಿದ್ದ ಪೂನಾವಾಲಾ, ಕೊರೊನಾ ಲಸಿಕೆಗೆ ಸಂಬಂಧಿಸಿದಂತೆ ತಮ್ಮ ಮೇಲೆ ಒತ್ತಡ ಹೆಚ್ಚಾಗುತ್ತಿದೆ ಎಂದಿದ್ದರು. ಈ ಹೇಳಿಕೆ ದೇಶದಲ್ಲಿ ರಾಜಕೀಯ ತಿರುವು ಪಡೆದುಕೊಂಡು ನಾಯಕರ ಕೆಸರೆರಚಾಟಕ್ಕೆ ಕಾರಣವಾಗಿತ್ತು. ಇದನ್ನೂ ಓದಿ: ಬೆದರಿಕೆ ಬರುತ್ತಿದೆ ಇಂತಹ ಸ್ಥಿತಿಯಲ್ಲಿ ಇರಲಾರೆ: ಕೋವಿಶೀಲ್ಡ್ ಲಸಿಕೆ ತಯಾರಿಕಾ ಸಂಸ್ಥೆಯ ಸಿಇಓ

ಸೀರಂ ಸಂಸ್ಥೆ ಕೋವಿಶೀಲ್ಡ್ ಲಸಿಕೆಯನ್ನು ಉತ್ಪಾದಿಸುತ್ತಿದೆ. ಇಡೀ ವಿಶ್ವದಲ್ಲಿಯೇ ಲಸಿಕೆಯ ಉತ್ಪಾದನೆ ಸಂಸ್ಥೆಗಳಲ್ಲಿ ಸೀರಂ ಸಹ ಒಂದಾಗಿದೆ. ಆಗಸ್ಟ್ ನಿಂದ ಡಿಸೆಂಬರ್ ವರೆಗೆ ಭಾರತ ಸರ್ಕಾರಕ್ಕೆ ಸೀರಂ ಸಂಸ್ಥೆ 50 ಕೋಟಿ ಕೊರೊನಾ ವ್ಯಾಕ್ಸಿನ್ ನೀಡಬೇಕಿದೆ.

The post ದೀರ್ಘ ರಜೆ ಬಳಿಕ ಭಾರತಕ್ಕೆ ಹಿಂದಿರುಗಿದ ಆದಾರ್ ಪೂನಾವಾಲಾ appeared first on Public TV.

Source: publictv.in

Source link