ದುಡ್ಡು ಮಾಡೋಕೆ ಅಡ್ಡದಾರಿ ಹಿಡಿದು ಪೊಲೀಸರ ಅತಿಥಿಯಾದ ಇಂಜಿನಿಯರಿಂಗ್ ವಿದ್ಯಾರ್ಥಿ

ದುಡ್ಡು ಮಾಡೋಕೆ ಅಡ್ಡದಾರಿ ಹಿಡಿದು ಪೊಲೀಸರ ಅತಿಥಿಯಾದ ಇಂಜಿನಿಯರಿಂಗ್ ವಿದ್ಯಾರ್ಥಿ

ಟ್ಯಾಲೆಂಟ್​ ಇರೋ ಕಡೆ ದುಡ್ಡು ಇರೋದಿಲ್ಲ, ದುಡ್ಡು ಇರೋ ಕಡೆ ಟ್ಯಾಲೆಂಟ್​​ ಇರೋದಿಲ್ಲ. ಎರಡನ್ನ ಒಟ್ಟಿಗೆ ಪಡಿಬೇಕು ಅಂದ್ರೆ ಅದಕ್ಕಾಗಿ ಸಾಕಷ್ಟು ಕಷ್ಟ ಪಡಲೇಬೇಕು. ಅದೇ ರೀತಿ ಇಲ್ಲೊಬ್ಬನಿಗೆ ತುಂಬಾನೆ ಟ್ಯಾಲೆಂಟ್​ ಇತ್ತು. ಆದ್ರೆ ಅವನ ಹತ್ತಿರ ದುಡ್ಡಿರಲಿಲ್ಲ. ದುಡ್ಡು ಮಾಡಲು ಅಡ್ಡ ದಾರಿ ಹಿಡಿದು ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಈ ಚಿತ್ರದಲ್ಲಿ ಕಾಣುತ್ತಿರೋನ ಹೆಸರು ಅಬ್ದುಲ್ಲಾ.. ವಯಸ್ಸು 28 ಆಗಿದ್ರು ನೋಡೋಕೆ ಸ್ವಲ್ಪ ದೊಡ್ಡವನ ತರಾನೆ ಕಾಣ್ತಾನೆ. ಈತ ಎಲ್ಲಿಂದಲೋ ಬಂದು ಬೆಂಗಳೂರಿನಲ್ಲಿ ಸೆಟಲ್ ಆದವನಲ್ಲ, ಬದಲಾಗಿ ಇಲ್ಲೇ ಹುಟ್ಟಿ ಬೆಳೆದವನು. ಚಿಕ್ಕಿಂದಿನಿಂದಲೂ ಈತನನ್ನ ಬೆಳೆಸಿದ್ದ ಪೋಷಕರು ಮುಂದೊಂದು ದಿನ ದೊಡ್ಡ ವ್ಯಕ್ತಿ ಆಗ್ತಾನೆ ಅನ್ನೋ ಕನಸು ಕಂಡಿದ್ದರು. ಅದಕ್ಕೆ ತಕ್ಕಂತೆ ಅಬ್ದುಲ್ಲಾ ಚೆನ್ನಾಗಿ ಓದಿ ಬೆಳೆದು, ಎಂಜಿನಿಯರಿಂಗ್​​ಗೆ ಸೇರಿಕೊಳ್ಳುತ್ತಾನೆ.

ಚಿಕ್ಕಿಂದಿನಿಂದಲೂ ತುಂಬಾನೇ ಆಕ್ಟೀವ್ ಆಗಿದ್ದ ಅಬ್ದುಲ್ಲಾ ಎಂಜಿನಿಯರಿಂಗ್​ಗೆ ಸೇರಿಕೊಂಡ ಮೇಲೆ ಕಾಲೇಜಿನಲ್ಲಿ ಒಬ್ಬ ಟ್ಯಾಲೆಂಟೆಡ್​​ ಹುಡುಗ ಅಂತಾ ಗುರುತಿಸಿಕೊಂಡಿದ್ದ. ಹೀಗೆ ಖಾಸಗಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದಿಕೊಂಡಿದ್ದವನು ಇವತ್ ಏನಾಗಿದ್ದಾನೆ ಗೊತ್ತಾ? ಒಬ್ಬ ಟ್ಯಾಲೆಂಟ್​ ಇದ್ದಂತಹ ಹುಡುಗ ಎಲ್ಲಿಗೆ ಪಯಣ ಬೆಳೆಸಿದ್ದಾನೆ ಗೊತ್ತಾ? ಅದೇ ಇಲ್ಲಿರೋ ಅಸಲಿ ಕಹಾನಿ. ಟ್ಯಾಲೆಂಟೆಡ್​​​ ಹುಡುಗ ಅಬ್ದುಲ್ಲಾ ಹಣದ ಆಸೆಗೆ ಬಿದ್ದು ಚಂದ್ರಲೇಔಟ್​ ಪೊಲೀಸರ ಅತಿಥಿಯಾಗಿ ಬಿಟ್ಟಿದ್ದಾನೆ.

ಚಿಕ್ಕಂದಿನಿಂದಲೂ ದೊಡ್ಡ ಮಟ್ಟದಲ್ಲಿ ಕನಸನ್ನ ಕಾಣುತ್ತಾ ಬೆಳೆದಿದ್ದವನು ಅಬ್ದುಲ್ಲಾ. ಒಂದು ಗುರಿಯನ್ನ ಇಟ್ಟುಕೊಂಡು ಆ ಗುರಿಯನ್ನ ರೀಚ್ ಆಗೋ ಸಲುವಾಗಿ ಓದಿನಲ್ಲಿ ಆಸಕ್ತಿ ತೋರಿಸುತ್ತಿರುತ್ತಾನೆ. ಅಂಥ ಹುಡುಗ ಇವತ್ತು ಪೊಲೀಸರ ಕೈಗೆ ತಗ್ಲಾಕ್ಕೊಂಡು ಕಂಬಿ ಹಿಂದೆ ಮುದ್ದೆ ಮುರಿಯಲು ರೆಡಿಯಾಗಿದ್ದಾನೆ. ಅದು ಒಂದಲ್ಲ ಎರಡಲ್ಲ ಸುಮಾರು 11 ಪ್ರಕರಣಗಳಲ್ಲಿ ಅಬ್ದುಲ್ಲಾ ಭಾಗಿಯಾಗಿದ್ದ. ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಇವತ್ತು ಅಬ್ದುಲ್ಲಾ ವಿರುದ್ದ ದೂರುಗಳು ದಾಖಲಾಗಿವೆ. ಅದೇ ಕಾರಣಕ್ಕಾಗಿ ಅಬ್ದುಲ್ಲಾನನ್ನ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ದರೋಡೆ, ದರೋಡೆಗೆ ಸಂಚು, ಸುಲಿಗೆ, ಕೊಲೆ ಯತ್ನ, ಹಲ್ಲೆ, ಪೊಲೀಸರ ಮೇಲೆ ಹಲ್ಲೆ ಹೀಗೆ ಸುಮಾರು 11 ಪ್ರಕರಣಗಳು ಈತನ ವಿರುದ್ದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದೆ. ಚಿಕ್ಕಂದಿನಿಂದಲೂ ಚೆನ್ನಾಗಿ ಓದಿಕೊಂಡು ಬರುತ್ತಿದ್ದವನು, ಇಂಜಿನಿಯರ್ ಓದಬೇಕಾದ್ರೆ ಟ್ಯಾಲೆಂಟ್​ ಇದ್ದವನು ಹೀಗೆ ಯಾಕೆ ಮಾಡಿಕೊಂಡು ಪೊಲೀಸ​​ರ ಅತಿಥಿ ಆಗಿಬಿಟ್ಟಿದ್ದಾನೆ ಅಂತಾ ಎಲ್ಲರಿಗೂ ಅನ್ನಿಸುತ್ತೆ. ಅದಕ್ಕೆಲ್ಲಾ ಕಾರಣವೇ ದುಡ್ಡು. ನಾವು ಮೊದಲೆ ಹೇಳಿದ ಹಾಗೆ ಟ್ಯಾಲೆಂಟ್ ಇರೋ ಕಡೆ ದುಡ್ಡು ಇರೋದಿಲ್ಲ. ದುಡ್ಡು ಇರೋ ಕಡೆ ಟ್ಯಾಲೆಂಟ್​ ಇರೋದಿಲ್ಲ. ಎರಡು ಒಟ್ಟಿಗೆ ಇರಬೇಕಾದ್ರೆ ಅದಕ್ಕೆ ಹೆಚ್ಚು ಶ್ರಮ ಪಡಬೇಕು. ಇಲ್ಲಿ ಅಬ್ದುಲ್ಲಾ ಬಳಿ ಟ್ಯಾಲೆಂಟ್​ ಇತ್ತು. ಆತನಿಗೆ ಹಣದ ಅವಶ್ಯಕತೆ ಇತ್ತು. ಅದಕ್ಕಾಗಿ ಆತ ಶ್ರಮ ಪಡೋಕೆ ಮುಂದಾದ. ಆದ್ರೆ ಅದು ಒಳ್ಳೆ ರೀತಿಯಲ್ಲಿ ಅಲ್ಲ, ಅಡ್ಡದಾರಿ ಹಿಡಿದು ಸಂಪಾದನೆ ಮಾಡೋಕೆ ಹೋಗಿ ಈಗ ಪೊಲೀಸರ ಅತಿಥಿ ಆಗಿಬಿಟ್ಟಿದ್ದಾನೆ.

ಹಣಕ್ಕಾಗಿ ಅಡ್ಡದಾರಿ ಹಿಡಿದ ಅಬ್ದುಲ್ಲಾ
ಹೌದು. ಇವತ್ತು ಅಬ್ದುಲ್ಲಾ ಹೀಗೆ ಪೊಲೀಸರ ಅತಿಥಿ ಆಗೋದಕ್ಕೆ ಕಾರಣವೇ ಅಡ್ಡ ದಾರಿಯಲ್ಲಿ ಹಣ ಸಂಪಾದನೆ ಮಾಡೋಕೆ ಮುಂದಾಗಿದ್ದು. ಅದಕ್ಕು ಕೂಡ ಒಂದು ಕಾರಣ ಇದೆ. ಹೀಗೆ ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವೇಳೆ ಅಬ್ದುಲ್ಲಾ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತೇ. ಆಗ ಮನೆಗೆ ಏನಾದ್ರು ಮಾಡಿ ಹಣ ಸಂಗ್ರಹಿಸಿಕೊಡೋ ಅನಿವಾರ್ಯತೆ ಅಬ್ದುಲ್ಲಾಗೆ ಬಂದೊದಗುತ್ತೆ. ಇನ್ನೂ ಓದುತ್ತಿದ್ದ ಅಬ್ದುಲ್ಲಾ ಹೇಗೆ ದುಡ್ಡು ಹೊಂದಿಸಿಕೊಂಡು ಮನೆಗೆ ಕೊಡೋದು ಅನ್ನೋ ಆಲೋಚನೆಗೆ ಇಳಿಯುತ್ತಾನೆ.

ಸ್ನೇಹಿತರ ಬಳಿ ಸಾಲ ಕೇಳಿದ್ದ ಅಬ್ದುಲ್ಲಾ
ಮನೆಯಲ್ಲಿ ಕಷ್ಟ ಇದೆ ಅದಕ್ಕಾಗಿ ಹಣ ಬೇಕು ಅಂತಾ ಹೇಳಿಕೊಂಡು ಅಬ್ದುಲ್ಲಾ ತನ್ನ ಕಾಲೇಜು ಸ್ನೇಹಿತರ ಬಳಿ ಹಾಗೂ ತನ್ನ ಏರಿಯಾದ ಸ್ನೇಹಿತರ ಬಳಿ ಸಾಲಕ್ಕಾಗಿ ಕೈ ಚಾಚುತ್ತಾನೆ. ಆದ್ರೆ ಯಾರು ಕೂಡ ಆ ಕ್ಷಣಕ್ಕೆ ಅಬ್ದುಲ್ಲಾಗೆ ಸಾಲ ಕೊಡೋ ಧೈರ್ಯ ಮಾಡೋದಿಲ್ಲ. ಈಗ ನಾವು ದುಡ್ಡು ಕೊಟ್ರೆ ಮತ್ತೆ ವಾಪಸ್ ಕೊಡ್ತಾನೋ ಇಲ್ವೋ ಅನ್ನೋ ಕಾರಣಕ್ಕಾಗಿ ಯಾರು ಕೂಡ ಅಬ್ದುಲ್ಲಾಗೆ ಹಣ ಕೊಡೋಕೆ ಹೋಗೋದಿಲ್ಲ. ಅಲ್ಲದೇ ನಿನಗೆ ಯಾರು ಸಹ ಹಣ ಕೊಡೋದಿಲ್ಲ ಅನ್ನೋ ಮಾತುಗಳನ್ನ ವ್ಯಂಗ್ಯವಾಗಿ ಆಡೋದಕ್ಕೆ ಶುರು ಮಾಡ್ತಾರೆ. ಆಗಲೇ ನೋಡಿ ಆತ ಹೇಗಾದ್ರು ಮಾಡಿ ದುಡ್ಡು ಸಂಪಾದನೆ ಮಾಡಿ ಮನೆಗೆ ಕೊಡಲೇಬೇಕು ಅನ್ನೋ ನಿರ್ಧಾರಕ್ಕೆ ಬರೋದು.

2017ರಲ್ಲಿ ಕಾಲೇಜಿಗೆ ಗುಡೈ ಬೈ
ಯಾರೂ ಕೂಡ ತನಗೆ ಹಣ ಕೊಡದಿದ್ದಾಗ ಅಬ್ದುಲ್ಲಾ ಕಾಲೇಜನ್ನ ತೊರೆಯುವ ಪ್ಲಾನ್ ಮಾಡಿ ಎಂಜಿನಿಯರಿಂಗ್ ವ್ಯಾಸಾಂಗವನ್ನ ಅರ್ಧಕ್ಕೆ ನಿಲ್ಲಿಸಿ ಏನಾದ್ರೂ ಕೆಲಸ ಮಾಡೋಣಾ ಅಂತಾ ಓದನ್ನ ನಿಲ್ಲಿಸಿಬಿಡುತ್ತಾನೆ. ತನ್ನಲ್ಲಿ ಟ್ಯಾಲೆಂಟ್​ ಇದೆ ಅನ್ನೋದು ಗೊತ್ತಿತ್ತು. ಆದ್ರೆ ಮನೆಯಲ್ಲಿ ಅವತ್ತಿಗೆ ಇದ್ದಂತ ಕಷ್ಟಕ್ಕೆ ಅಬ್ದುಲ್ಲಾ ಏನಾದ್ರು ಧನಸಹಾಯ ಮಾಡಲೇಬೇಕಾದ ಸಂದರ್ಭವಿತ್ತು. ಅದೇ ಕಾರಣಕ್ಕಾಗಿ ಆತ ಕಾಲೇಜನ್ನ ಕೂಡ ಬಿಟ್ಟು ಕೆಲಸ ಹುಡುಕಿಕೊಂಡು ಹೊರಡ್ತಾನೆ.

ಎಷ್ಟೇ ಅಲೆದರೂ ಸಿಗಲಿಲ್ಲ ಕೆಲಸ
ಇನ್ನು ಅರ್ಧಕ್ಕೆ ಕಾಲೇಜು ಮೊಟಕುಗೊಳಿಸಿ ಕೆಲಸ ಹುಡುಕಿಕೊಂಡ ಹೊರಟ ಅಬ್ದುಲ್ಲಾಗೆ ಅಲ್ಲೂ ಕೂಡ ನಿರಾಸೆಯೆ ಎದುರಾಗುತ್ತೇ. ಎಷ್ಟೇ ಅಲೆದಾಡಿದ್ರು ಕೂಡ ಕೆಲಸವೆ ಸಿಗೋದಿಲ್ಲಾ. ಒಂದು ಕಡೆ ಸ್ನೇಹಿತರು ಯಾರು ಕೂಡ ಸಹಾಯ ಮಾಡೋದಿಲ್ಲ, ಮತ್ತೊಂದು ಕಡೆ ಯಾರು ಕೂಡ ಕೆಲಸವನ್ನ ಕೊಡೋದಿಲ್ಲ. ಇನ್ನೊಂದು ಕಡೆ ಮನೆಗೆ ದುಡ್ಡು ಕೊಡಲೇಬೇಕಾದ ಪರಿಸ್ಥಿತಿ. ಇದೆಲ್ಲದ್ರಿಂದ ಮಾನಸಿಕವಾಗಿ ಕುಗ್ಗಿ ಹೋಗುತ್ತಾನೆ ಅಬ್ದುಲ್ಲಾ. ಇದೆಲ್ಲಾ ಕಾರಣದಿಂದಾಗಿ ಮನೆಗೆ ಮುಖ ತೋರಿಸಲು ಆಗದೇ, ಇತ್ತ ಕಾಲೇಜು ಲೈಫ್​ ದೂರು ಮಾಡಿಕೊಂಡು ಒಂದು ರೀತಿಯಲ್ಲಿ ಬೂದಿ ಮುಚ್ಚಿದ ಕೆಂಡದಂತಾಗಿಬಿಡುತ್ತಾನೆ.

ಇದೇ ಆಲೋಚನೆಯಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ, ಎದುರುಗಡೆಯಿಂದ ಒಬ್ಬ ವ್ಯಕ್ತಿ ನಡೆದುಕೊಂಡು ಬರುತ್ತಿರುತ್ತಾನೆ. ಆತನ ಎದುರು ಹೋಗಿ ನಿಂತುಕೊಳ್ಳೋ ಅಬ್ದುಲ್ಲಾ, ನೇರವಾಗಿ.. ಹಣ ಕೊಡು ಇಲ್ಲಾ ಅಂದ್ರೆ ಕೊಂಡು ಬಿಡುತ್ತೀನಿ ಅಂತಾ ಒಂದು ಡೈಲಾಗ್ ಹೊಡೆಯುತ್ತಾನೆ. ಅಷ್ಟೇ ಅಬ್ದುಲ್ಲಾನನ್ನ ನೋಡಿ ಮೊದಲೇ ಹೆದರಿದ್ದ ವ್ಯಕ್ತಿ ತನ್ನ ಬಳಿಯಿದ್ದ ಇದ್ದಬದ್ದ ದುಡ್ಡನ್ನೆಲ್ಲಾ ಕೊಟ್ಟು ಪ್ರಾಣ ಉಳಿದರೆ ಸಾಕಪ್ಪ ಅಂತಾ ಹೊರಟು ಬಿಡುತ್ತಾನೆ. ಅಷ್ಟೇ ಕೇವಲ ಒಂದೇ ಒಂದು ಅವಾಜ್​ಗೆ ಸಾವಿರ ಸಾವಿರ ಹಣ ಸಿಕ್ಕಿಬಿಡ್ತು ಅಂತಾ ಆ ಹಣವನ್ನ ತಗೊಂಡು ಹೋಗಿ ಮನೆಗೆ ಕೊಟ್ಟು ಖುಷಿ ಪಡ್ತಾನೆ. ನಿಜ ಹೇಳಬೇಕು ಅಂದ್ರೆ ಅವತ್ತಿಗೆ ಆತನ ಕುಟುಂಬಕ್ಕಿಂದ ಕಷ್ಟಕ್ಕೆ ಆತ ತಗೊಂಡು ಹೋದ ಹಣ ಸಾಕಾಗಿತ್ತು. ಅಲ್ಲಿಗೆ ಅಬ್ದುಲ್ಲಾ ಅದನ್ನ ನಿಲ್ಲಿಸಿಬಿಡಬೋದಿತ್ತು. ಆದ್ರೆ ಅಬ್ದುಲ್ಲಾ ಹಾಗೆ ಮಾಡಲಿಲ್ಲ.

ಅವತ್ತು ಒಳ್ಳೆ ರೀತಿಯಲ್ಲಿ ಆಲೋಚನೆ ಮಾಡಿ, ಅಬ್ದುಲ್ಲಾ ಸುಲಿಗೆ ಮಾಡಿ ಹಣ ಸಂಪಾದನೆ ಮಾಡೋದನ್ನ ನಿಲ್ಲಿಸಿಬಿಡಬೋದಿತ್ತು. ಆದ್ರೆ ಹಣದ ಅವಶ್ಯಕೆತ ಜೊತೆಗೆ ಆಸೆ ಕೂಡ ಹೆಚ್ಚಾಗೋಕೆ ಶುರು ಆಗುತ್ತೇ. ಆಗಲೇ ನೋಡಿ ಅಬ್ದುಲ್ಲಾ ಆ ಚಾಳಿಯನ್ನ ಮುಂದುವರೆಸೋದು. ಒಂದು ಬಾರಿ ದುಡ್ಡಿನ ಮದ ಮನುಷ್ಯನ ತಲೆಗೆ ಏರಿದ್ರೆ ಅದು ಇಳಿಯೋದು ತುಂಬಾನೇ ಕಷ್ಟ ಅಂತಾರೆ. ಅದೇ ರೀತಿ ಸುಲಭವಾಗಿ ಹಣ ಸಂಪಾದನೆ ಮಾಡಬೋದು ಅಲ್ವಾ ಅಂದುಕೊಳ್ಳೋ ಅಬ್ದುಲ್ಲಾ ಅದೇ ರೀತಿಯಾಗಿ ಅಡ್ಡದಾರಿಯಲ್ಲಿ ಹಣವನ್ನ ಸಂಪಾದನೆ ಮಾಡೋಕೆ ಮುಂದಾಗ್ತಾನೆ.

ಪೊಲೀಸರ ಕೈಗೆ ಸಿಕ್ಕಿಬಿದ್ದ ಅಬ್ದುಲ್ಲಾ
ಹಣ ಸಂಪಾದನೆ ಮಾಡೋದಕ್ಕೆ ಅಂತಾ ಫೀಲ್ಡ್​​ಗೆ ಎಂಟ್ರಿ ಕೊಡೋ ಅಬ್ದುಲ್ಲಾ ಸುಮಾರು ಜನರನ್ನ ಅಡ್ಡಗಟ್ಟಿ ಹಣ ಸುಲಿಗೆ ಮಾಡಿ ಎಸ್ಕೇಪ್ ಆಗಿರುತ್ತಾನೆ. ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದ್ರೂ ಕುಡ ಅಬ್ದುಲ್ಲಾ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಿರಲಿಲ್ಲ. ಆದ್ರೆ ಹೀಗೆ ಒಂದು ದಿನ ಅಂದ್ರೆ ಆತ ಅಪರಾಧ ಚಟುವಟಿಕೆಗೆ ಇಳಿದ ಒಂದು ವರ್ಷದ ಬಳಿಕ ಪೊಲೀಸರ ಕೈಗೆ ಸಿಕ್ಕಿ ಬೀಳುತ್ತಾನೆ. ಹೀಗೆ ಸಿಕ್ಕಿ ಹಾಕಿಕೊಂಡ ಬಳಿಕ ಅಬ್ದುಲ್ಲಾ ಜೈಲಿಗೆ ತೆರಳಿ ಜಾಮೀನು ಪಡೆದು ರಿಲೀಸ್ ಆಗುತ್ತಾನೆ.

ಜೈಲಿಂದ ಹೊರ ಬಂದ ಮೇಲೆ ಕಂಪನಿ ಸೇರಿದ್ದ ಅಬ್ದುಲ್ಲಾ
ಇನ್ನು ಜೈಲಿಗೆ ಹೋಗಿ ಬಂದ ಮೇಲೆ ಅಬ್ದುಲ್ಲಾ ಪಶ್ಚಾತಾಪ ಪಟ್ಟುಕೊಂಡು ಇನ್ನು ಮುಂದೆ ಈ ಕೆಲಸ ಮಾಡೋದು ಬೇಡಾ ಅಂದುಕೊಂಡು ಅದೇ ರೀತಿ ಪೋಷಕರು ಹೇಳಿದಂತೆ ಮತ್ತೆ ಒಳ್ಳೆ ದಾರಿಯಲ್ಲಿ ಸಾಗೋದ್ರ ಬಗ್ಗೆ ಆಲೋಚನೆ ಮಾಡುತ್ತಾನೆ. ಅದರಂತೆ ಸ್ನೇಹಿತರ ಸಹಾಯವನ್ನ ಪಡೆದುಕೊಂಡು ಒಂದು ಖಾಸಗಿ ಕಂಪನಿಗೆ ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ಹೀಗೆ ಖಾಸಗಿ ಕಂಪನಿಗೆ ಸೇರಿಕೊಂಡ ಬಳಿಕ ಅಪರಾಧ ಚಟುವಟಿಕೆಗಳಿಗೆ ಬ್ರೇಕ್ ಹಾಕಿ ತಾನಾಯಿತು, ತನ್ನ ಕೆಲಸ ಆಯ್ತು ಅಂತಾ ಅಂದುಕೊಂಡು ಕುಟುಂದ ಜೊತೆ ನೆಮ್ಮದಿಯಿಂದ ಕಾಲ ಕಳೆಯುತ್ತಿರುತ್ತಾನೆ.

ಒಂದು ಕಡೆ ಸುಲಿಗೆ ದರೋಡೆ ಎಲ್ಲವನ್ನು ಕೂಡ ಬಿಟ್ಟು ಮಗ ಕಂಪನಿಯಲ್ಲಿ ಕೆಲಸವನ್ನ ಮಾಡಿಕೊಂಡಿದ್ದಾನೆ ಅಂತಾ ಅಂದುಕೊಳ್ಳೋ ಕುಟುಂಬಸ್ಥರು ನೆಮ್ಮದಿಯ ಜೀವನವನ್ನ ಸಾಗಿಸುತ್ತಿರುತ್ತಾರೆ. ಈ ನಡುವೆ ಆಗಾಗ್ಗೆ ಅಬ್ದುಲ್ಲಾ ಹೆಚ್ಚೆಚ್ಚು ಹಣ ಸಂಪಾದನೆ ಮಾಡಬೇಕು ಅಂತಾ ಅಂದುಕೊಳ್ಳುತ್ತಿರುತ್ತಾನೆ. ಆದ್ರೆ ಮತ್ತೆ ಕೆಟ್ಟ ದಾರಿಗೆ ಹೋಗೋದು ಬೇಡಾ, ತನ್ನ ತಂದೆ ತಾಯಿ ಅಕ್ಕಂದಿರ ಭವಿಷ್ಯ ಹಾಳಾಗೋದು ಬೇಡಾ ಅಂದುಕೊಂಡು ಸ್ನೇಹಿತನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡು ಕಾಲವನ್ನ ದೂಡುತ್ತಿರುತ್ತಾನೆ. ಇದನ್ನ ನೋಡುತ್ತಿದ್ದ ಪೋಷಕರು ಖುಷಿಯಾಗಿರುತ್ತಾರೆ. ಅಬ್ದುಲ್ಲಾ ಅಕ್ಕಂದಿರು ಕೂಡ ತಕ್ಕ ಮಟ್ಟಿಗೆ ಹ್ಯಾಪಿಯಾಗಿರುತ್ತಾರೆ.

ಹೀಗೆ ಒಂದು ವರ್ಷ ಕೆಲಸವನ್ನ ಮಾಡಿಕೊಂಡು ಬರುತ್ತಿದ್ದ ಸಂಬಳದಲ್ಲಿ ಸುಖಕರವಾದ ಜೀವನವನ್ನ ಅಬ್ದುಲ್ಲಾ ನಡೆಸುತ್ತಿದ್ದ. ಹಿಂದೆ ಮಾಡಿದ್ದ ತಪ್ಪುಗಳನ್ನ ಮತ್ತೊಮ್ಮೆ ಮಾಡಲೇ ಬಾರದು ಅಂತಾ ಅಂದುಕೊಂಡೇ ಕಾಲವನ್ನ ದೂಡುತ್ತಿರುತ್ತಾನೆ. ಆದ್ರೆ ಅಂತಾ ದಿನ ಮತ್ತೊಮ್ಮೆ ತನ್ನ ಜೀವನದಲ್ಲಿ ಬಂದೇ ಬರುತ್ತೇ ಅನ್ನೋ ಊಹೆ ಮಾಡಿರಲಿಲ್ಲ. ಆದ್ರೆ ಆ ಒಂದು ದಿನ ಅಬ್ದುಲ್ಲಾ ಜೀವನದಲ್ಲಿ ಬಂದೆ ಬಿಡುತ್ತೇ. ಆ ದಿನ ಬರೋದಕ್ಕೆ ಕಾರಣವೇ ಅದೊಂದು ಮಹಾಮಾರಿ.

ಕೊರೊನಾ ಬಂದ ಮೇಲೆ ಕೆಲಸ ಕಳ್ಕೊಂಡ ಅಬ್ದುಲ್ಲಾ
ಹೆಮ್ಮಾರಿ ಕೊರೊನಾ ದೇಶವ್ಯಾಪಿ ಹರಡೋಕೆ ಶುರು ಆದಮೇಲೆ ದೇಶದಲ್ಲಿನ ಅದೆಷ್ಟೋ ಜನರ ಬದುಕು ಮುರಾಬಟ್ಟೆಯಾಯ್ತು. ಅದೇ ರೀತಿ ಅಬ್ದುಲ್ಲಾ ಕೆಲಸ ಮಾಡಿಕೊಂಡಿದ್ದ ಕಂಪನಿ ಕೂಡ ಕ್ಲೋಸ್ ಆಗಿ ಅಬ್ದುಲ್ಲಾಗೆ ಕೆಲಸವಿಲ್ಲದಂತಾಗಿಬಿಡುತ್ತೆ. ಇದ್ದ ಕೆಲಸವನ್ನ ಕಳೆದುಕೊಳ್ಳೋ ಅಬ್ದುಲ್ಲಾ ಮತ್ತೆ ಚಿಂತೆಗೆ ಬಿದ್ದು ಬೀಡುತ್ತಾನೆ.

ಹೈ ಫೈ ಜೀವನಕ್ಕಾಗಿ ಮತ್ತೆ ಸುಲಿಗೆಗೆ ಇಳಿಯುವ ಅಬ್ದುಲ್ಲಾ
ಮೊದಲ ಬಾರಿಗೆ ಅಬ್ದುಲ್ಲಾ ಅಡ್ಡದಾರಿಗೆ ಇಳಿದಿದ್ದಕ್ಕೆ ಒಂದು ಕಾರಣ ಇತ್ತು. ಆಗ ಮನೆ ಕಡೆ ತುಂಬಾನೆ ಕಷ್ಟ ಇರುತ್ತೇ. ಅದೇ ಕಾರಣಕ್ಕಾಗಿ ಆತ ಅಪರಾಧ ಚಟುವಟಿಕೆಯಲ್ಲಿ ತೊಡಗಿಕೊಳ್ಳೋದಕ್ಕೆ ಶುರು ಮಾಡ್ತಾನೆ. ಅದಾದ ಬಳಿಕ ಆ ಚಾಳಿಯನ್ನ ಬಿಟ್ಟುಬಿಡುತ್ತಾನೆ. ಆದರೆ ಲಾಕ್​ಡೌನ್​ನಿಂದಾಗಿ ಕೆಲಸ ಕಳೆದುಕೊಂಡು ಮತ್ತು ಅದೇ ಚಾಳಿಗೆ ಧುಮುಕುತ್ತಾನೆ. ಆದ್ರೆ ಈ ಬಾರಿ ಆತನಿಗೆ ಮನೆ ಕಡೆ ಕಷ್ಟ ಇದೆ ಅಂತಾ ಅಲ್ಲಾ, ಬದಲಾಗಿ ಹೈಫೈ ಜೀವನವನ್ನ ಲೀಡ್ ಮಾಡೋ ಸಲುವಾಗಿ ಆತ ಅಪರಾಧ ಚಟುವಟಿಕೆಗ ಇಳಿಯುತ್ತಾನೆ.

ಸ್ನೇಹಿತರಂತೆ ಕಾರಿನಲ್ಲಿ ಓಡಾಡೊ ಕನಸು ಕಂಡಿದ್ದ
ಒಂದು ಕಡೆ ಲಾಕ್​ಡೌನ್​ನಿಂದ ಕೆಲಸ ಕಳೆದುಕೊಂಡು ಸುಮ್ಮನೆ ಕೂತಿದ್ದ ಅಬ್ದುಲ್ಲಾ, ತನ್ನ ಸ್ನೇಹಿತರು ಆಗಾಗ್ಗೆ ಕಾರಿನಲ್ಲಿ ಜುಮ್ ಅಂತಾ ಓಡಾಡೋದನ್ನ ನೋಡಿಕೊಂಡು ತಾನು ಕೂಡ ಒಂದು ಕಾರನ್ನ ತಗೋಬೇಕು, ನಾನು ಕುಡ ಜುಮ್ ಅಂತಾ ಓಡಾಡಬೇಕು ಅಂತಾ ಕನಸು ಕಾಣೋದಕ್ಕೆ ಶುರು ಮಾಡ್ತಾನೆ. ಅದಕ್ಕಾಗಿ ಹಣವನ್ನ ಸಂಪಾದನೆ ಮಾಡೋಕೆ​​ ಕೆಲಸ ಬೇರೆ ಇರೋದಿಲ್ಲ. ಹೀಗಾಘಿ ಆತ ಮತ್ತೆ ತನ್ನ ಹಳೆ ಚಾಳಿಯನ್ನ ಮುಂದುವರೆಸುತ್ತಾನೆ. ಲಾಕ್​ಡೌನ್ ಆದಮೇಲೆ ಬೆಂಗಳೂರಿನ ನಾನಾ ಕಡೆ ಹಣ ಸುಲಿಗೆ ಮಾಡೋದಕ್ಕೆ ಶುರು ಮಾಡಿಕೊಳ್ತಾನೆ.

ಪೊಲೀಸರ ಕೈಗೆ ಸಿಕ್ತಾ ಇರಲಿಲ್ಲ ಅಬ್ದುಲ್ಲಾ
ಓದಿನಲ್ಲಿ ಟ್ಯಾಲೆಂಟೆಡ್​​​ ಹುಡುಗ ಅನ್ನಿಸಿಕೊಂಡಿದ್ದ ಅಬ್ದುಲ್ಲಾ ತನ್ನ ಅಪರಾಧ ಚಟುವಟಿಕೆಗಳಲ್ಲೂ ಟ್ಯಾಲೆಂಟ್ ತೋರಿಸುತ್ತಿದ್ದ. ತಾನು ಎಷ್ಟೇ ಅಪರಾಧ ಕೃತ್ಯವೆಸಗಿದ್ರು ಕೂಡ ಪೊಲೀಸರ ಕೈಗೆ ತಗ್ಲಾಕಿಕೊಳ್ಳುತ್ತಿರಲಿಲ್ಲ ಅಬ್ದುಲ್ಲಾ. ಅದಕ್ಕಾಗಿ ಆತ ಮಾಡುತ್ತಿದ್ದ ಕೆಲಸವೇನೆಂದರೆ ಸಂಜೆಯ ಸಮಯದಲ್ಲಿ ಬೈಕ್ನಲ್ಲಿ ಏರಿಯಾ ಏರಿಯಾಗಳಿಗೆ ಹೋಗಿ ಅಲ್ಲಿ ಲೈಟ್​ ಕಂಬ ಇದ್ಯಾ, ಸಿಸಿಕ್ಯಾಮೆರಾಗಳು ಇದ್ಯಾ ಅನ್ನೋದನ್ನ ನೋಡಿಕೊಂಡು ಬರುತ್ತಿದ್ದ. ಆಮೇಲೆ ಕತ್ತಲಾಗುತ್ತಿದ್ದಂತೆ ಆ ಏರಿಯಾಗೆ ಎಂಟ್ರಿ ಕೊಟ್ಟು ಅಲ್ಲಿ ಯಾರಾದ್ರೂ ಒಬ್ಬಂಟಿಯಾಗಿ ನಡೆದುಕೊಂಡು ಬರುತ್ತಿರೋದು ಕಂಡು ಬಂದರೆ ಅವರನ್ನ ಅಡ್ಡ ಗಟ್ಟಿ ಸುಲಿಗೆ ಮಾಡಿಕೊಂಡು ಅಲ್ಲಿಂದ ಎಸ್ಕೆಪ್ ಆಗುತ್ತಿದ್ದ.

ಹಾವಳಿ ಹೆಚ್ಚಾದಂತೆ ಬಲೆ ಬೀಸಿದ ಪೊಲೀಸರರು
ಹೀಗೆ ಒಂದು ದಿನ ಜ್ಞಾನಭಾರತಿ ಬಳಿ ತನ್ನ ಕೈ ಚಳಕ ತೋರಿಸಿ ಅಬ್ದುಲ್ಲಾ ಎಸ್ಕೇಪ್ ಆಗಿದ್ದ. ಆಗ ಅಲ್ಲಿದ್ದ ಕೆಲವರು ತಕ್ಷಣ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದರು. ಮಾಹಿತಿ ಪಡೆಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಅಬ್ದುಲ್ಲಾ ಬೆನ್ನ ಹಿಂದೆ ಬಿದ್ದರು. ಆಗ ತಲೆಮರೆಸಿಕೊಳ್ಳುತ್ತಿದ್ದ ಅಬ್ದುಲ್ಲಾನನ್ನ ಹೇಗೋ ಚೇಸ್ ಮಾಡಿ ಕೊನೆಗೆ ಅಡ್ಡಗಟ್ಟಿ ಪೊಲೀಸರು ಲಾಕ್ ಮಾಡಿದ್ದರು. ಆಗ ಅಬ್ದುಲ್ಲಾ ಪೊಲೀಸರ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದ.

ಗಲ್ಲಿ ಗಲ್ಲಿಗಳಲ್ಲಿ ಫೋಟೋ ಹಿಡಿದುಕೊಂಡು ಹುಡುಕಾಟ
ಪೊಲೀಸರ ಮೇಲೆ ಹಲ್ಲೆ ಮಾಡಿದ್ದ ಅಬ್ದುಲ್ಲಾನನ್ನ ಸೆರೆಹಿಡಿಯಲೇಬೇಕು ಅಂದುಕೊಳ್ಳೋ ಪೊಲಿಸರು ಆತನ ಫೋಟೋ ಹಿಡಿದುಕೊಂಡು ಗಲ್ಲಿ ಗಲ್ಲಿ ಗಳಲ್ಲಿ ಸುತ್ತಾಡಿ, ಈತ ಕಾಣಿಸಿಕೊಂಡರೆ ಮಾಹಿತಿ ನೀಡಿ ಎಂದು ಹೇಳಿರುತ್ತಾರೆ. ಹೀಗೆ ಒಂದು ದಿನ ಆತ ಕಾಣಿಸಿಕೊಳ್ಳುತ್ತಿದ್ದಂತೆ ಸ್ಥಳೀಯರೊಬ್ಬರು ಚಂದ್ರ ಲೇಔಟ್ ಪೋಲೀಸರಿಗೆ ಮಾಹಿತಿ ನೀಡ್ತಾರೆ. ಮಾಹಿತಿ ಪಡೆಯುತ್ತಿದ್ದಂತೆ ಅಬ್ದುಲ್ಲಾನನ್ನ ಕೊನೆಗೂ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗ್ತಾರೆ.

ನೋಡಿ ಹೈ ಫೈ ಜೀವನದ ಆಸೆಗೆ ಬಿದ್ದು, ಹಣದ ಹಿಂದೆ ಬಿದ್ದು, ಒಂದೊಳ್ಳೆ ಟ್ಯಾಲೆಂಟ್ ಇದ್ದ ಅಬ್ದುಲ್ಲಾ ಇಂದು ಕಂಬಿ ಹಿಂದೆ ಮುದ್ದೆ ಮುರಿಯಲು ಸಿದ್ದಗೊಂಡಿದ್ದಾನೆ. ಸದ್ಯಕ್ಕೆ ಆತನ ವಿರುದ್ದ ದಾಖಾಲಾಗಿರೋ 11 ಪ್ರಕರಣಗಳ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಅಲ್ಲದೇ ಮತ್ತೆ ಇನ್ಯಾವ ಪ್ರಕರಣದಲ್ಲಿ ಭಾಗಿ ಆಗಿದ್ದಾನೆ ಅನ್ನೋದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

The post ದುಡ್ಡು ಮಾಡೋಕೆ ಅಡ್ಡದಾರಿ ಹಿಡಿದು ಪೊಲೀಸರ ಅತಿಥಿಯಾದ ಇಂಜಿನಿಯರಿಂಗ್ ವಿದ್ಯಾರ್ಥಿ appeared first on News First Kannada.

Source: newsfirstlive.com

Source link