ಕೊರೊನಾತಂಕದಿಂದ ಅರ್ಧಕ್ಕೆ ನಿಂತ 14ನೇ ಆವೃತ್ತಿ ಐಪಿಎಲ್​ನ ​ಮರು ಆಯೋಜನೆಗೆ ಕಸರತ್ತು ನಡೆಸಿರುವ ಬಿಸಿಸಿಐ ಯುಎಇ ನಾಡಲ್ಲಿ ಟೂರ್ನಿಯ ಉಳಿದ ಪಂದ್ಯಗಳನ್ನ ನಡೆಸಲು ತಿರ್ಮಾನಿಸಿದೆ. ಉಳಿದ 31 ಪಂದ್ಯಗಳನ್ನ ಸೆಪ್ಟೆಂಬರ್​ – ಅಕ್ಟೋಬರ್​​ನಲ್ಲಿ ಅರಬ್ಬರ ನಾಡಲ್ಲಿ ಆಡಿಸಿ 14ನೇ ಆವೃತ್ತಿಗೂ ಯಶಸ್ಸಿನ ಫುಲ್​ ಸ್ಟಾಫ್​ ಇಡೋದು ಬಿಸಿಸಿಐ ಉದ್ದೇಶ. ಆದ್ರೆ, ಯುಎಇನಲ್ಲಿ ಉಳಿದ ಪಂದ್ಯಗಳ ಆಯೋಜನೆ ಅಷ್ಟು ಸುಲಭವಲ್ಲ…!

ಅರಬ್ಬರ ನಾಡಲ್ಲಿ ಐಪಿಎಲ್​ ಆಯೋಜನೆ ಅಷ್ಟು ಸುಲಭವಲ್ಲ
ಬಿಸಿಸಿಐ & ಐಪಿಎಲ್​ ಆಡಳಿಯ ಮಂಡಳಿ ಮುಂದಿವೆ ಸವಾಲು

ಯೆಸ್​​..! ಐಪಿಎಲ್​ ಆಯೋಜನೆ ಹಿನ್ನೆಲೆಯಲ್ಲಿ ಮಹತ್ವದ ವಿಶೇಷ ಬೋರ್ಡ್​​ ಮೀಟಿಂಗ್​ ಕರೆದ ಬಿಸಿಸಿಐ, ಐಪಿಎಲ್​ ಮರು ಆಯೋಜನೆ ಪ್ರಸ್ತಾಪಕ್ಕೆ ಸಮ್ಮತಿ ಪಡೆದುಕೊಂಡಿದೆ. ಆದರ ಬೆನ್ನಲ್ಲೇ ಮರು ಆಯೋಜನೆಯ ಸಾಧ್ಯಾಸಾಧ್ಯತೆಯ ಬಗ್ಗೆ ಚರ್ಚೆಗಳು ಹುಟ್ಟಿಕೊಂಡಿವೆ. ಅದರಲ್ಲೂ ಈ ಪ್ರಮುಖವಾಗಿ ಈ ಮೂರು ಸವಾಲುಗಳನ್ನ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ ಹೇಗೆ ನಿಭಾಯಿಸುತ್ತೆ ಅನ್ನೋದು ಕುತೂಹಲ ಮೂಡಿಸಿದೆ.

ಇನ್ನೂ ನಿರ್ಧಾರವಾಗಿಲ್ಲ ವಿದೇಶಿ ಆಟಗಾರರ ಲಭ್ಯತೆ

ಸೆಪ್ಟೆಂಬರ್​​ – ಅಕ್ಟೋಬರ್​ನಲ್ಲಿ ಬಿಸಿಸಿಐ ಏನೋ ಐಪಿಎಲ್​ ಮರು ಆಯೋಜನೆಗೆ ಸಿದ್ಧತೆ ನಡೆಸಿದೆ. ಆದ್ರೆ, ವಿದೇಶಿ ಆಟಗಾರರ ಲಭ್ಯತೆ – ಅಲಭ್ಯತೆಯೇ ಫ್ರಾಂಚೈಸಿಗಳಿಗೆ ತಲೆ ನೋವಾಗಿದೆ. ಇಂಗ್ಲೆಂಡ್​​, ನ್ಯೂಜಿಲೆಂಡ್​​​, ಆಸ್ಟ್ರೇಲಿಯಾ, ಬಾಂಗ್ಲಾದೇಶ ಮತ್ತು ಅಫಘಾನಿಸ್ತಾನದ ಆಟಗಾರರ ಲಭ್ಯತೆ ದೊಡ್ಡ ಪ್ರಶ್ನೆಯಾಗಿದೆ. ಇದಲ್ಲದೇ ಕೆರಿಬಿಯನ್​ ಪ್ರೀಮಿಯರ್​ ಲೀಗ್​ ಕೂಡ ಇದೇ ಸಮಯದಲ್ಲಿ ಆಯೋಜನೆಯಾಗಿರುವುದರಿಂದ ಐಪಿಎಲ್​ಗೆ ವಿದೇಶಿ ಸ್ಟಾರ್​​ಗಳ ಅಲಭ್ಯತೆ ಕಾಡೋದು ಸಾಧ್ಯತೆಯಿದೆ. ಇದರಿಂದಾಗಿ ಇನ್ನುಳಿದ ಪಂದ್ಯಗಳಿಗೆ ವಿದೇಶಿ ಸ್ಟಾರ್​​ಗಳ ರಂಗು ಇರಲ್ವಾ ಅನ್ನೋ ಪ್ರಶ್ನೆ ಹುಟ್ಟಿಗೆ ಕಾರಣವಾಗಿದೆ.

ಅರಬ್ಬರ ನಾಡಲ್ಲಿ ಹೆಚ್ಚಲಿದೆ ಖರ್ಚು-ವೆಚ್ಚ

ಯೆಸ್​​..! ಈಗಾಗಲೇ ಭಾರತದಲ್ಲಿ 14ನೇ ಆವೃತ್ತಿಗೆಂದು ಖರ್ಚು ಮಾಡಿರುವ ಹಣಕ್ಕಿಂತ ಮೂರು ಪಟ್ಟು ಹಣವನ್ನ ಯುಎಇನಲ್ಲಿ ಖರ್ಚು ಮಾಡಬೇಕಿದೆ ಅನ್ನೋದು ಫ್ರಾಂಚೈಸಿಗಳ ಅಳಲಾಗಿದೆ. ವಿದೇಶಿ ಆಟಗಾರರನ್ನ ಒಂದು ಬಾರಿ ಕರೆಸಿಕೊಂಡು ಕಳುಹಿಸಿರುವ ಫ್ರಾಂಚೈಸಿಗಳು, ಮತ್ತೇ ಅದೇ ಕೆಲಸವನ್ನ ಮಾಡಬೇಕಿದೆ. ಒಂದು ವೇಳೆ ಬಬಲ್​ನಿಂದ ಬಬಲ್​ಗೆ ವರ್ಗಾವಣೆಯಾದರೆ ವಿಶೇಷ ವಿಮಾನದಲ್ಲಿ ಕರೆ ತಂದು, ಕಳುಹಿಸಬೇಕಾಗುತ್ತದೆ. ಇದು ಫ್ರಾಂಚೈಸಿಗಳಿಗೆ ಹೆಚ್ಚಿನ ಹೊರೆಯಾಗಲಿದೆ.

ಇಷ್ಟೇ ಅಲ್ಲ.. ಆಟಗಾರರ ವಾಸ್ತ್ರವ್ಯವೂ ಫ್ರಾಂಚೈಸಿಗಳಿಗೆ ಹೊರೆಯಾಗಲಿದೆ. ಭಾರತದಲ್ಲಿ ಹೋಟೆಲ್​ಗಳು ದಿನವೊಂದರ ರಾತ್ರಿಗೆ 3,500 ರೂಪಾಯಿಗಳನ್ನ ತೆಗೆದುಕೊಂಡರೇ, ಯುಎಇನಲ್ಲಿ 12,000 ರೂಪಾಯಿಗಳನ್ನ ಭರಿಸಬೇಕಾಗುತ್ತದೆ ಅನ್ನೋದು ತಂಡವೊಂದರ ಅಧಿಕಾರಿ ನೀಡಿದ ಮಾಹಿತಿಯಾಗಿದೆ. ಇದರ ಜೊತೆಗೆ ಆಟಗಾರರಿಗೆ ಟ್ರೈನಿಂಗ್​ ಕ್ಯಾಂಪ್ ಆಯೋಜನೆಯೂ ಆರ್ಥಿಕವಾಗಿ ಪೆಟ್ಟು ಬೀಳಲಿದೆ ಅನ್ನೋದನ್ನು ಕೂಡ ಮೂಲಗಳು ಹೇಳುತ್ತಿವೆ.

ಬಯೋಬಬಲ್​ನಲ್ಲೂ ಸುರಕ್ಷತೆಯೇ ಸವಾಲು

ದುಬೈನಲ್ಲಿ ನಡೆದ 13ನೇ ಆವೃತ್ತಿಯ ಐಪಿಎಲ್​ನಲ್ಲಿ ಯಶಸ್ಸು ಕಂಡಿದ್ದ ಬಿಸಿಸಿಐ 14ನೇ ಆವೃತ್ತಿಯಲ್ಲಿ ಎಡವಿದ್ದು ಗೊತ್ತೇ ಇದೆ. ಪ್ರೋಟೋಕಾಲ್​ಗಳ ಉಲ್ಲಂಘನೆಯ ಪರಿಣಾಮ ಬಯೋ ಸೆಕ್ಯೂರ್​​ ವಾತಾವರಣದಲ್ಲೂ ಕೊರೊನಾ ಸಾಂಕ್ರಾಮಿಕ ಎಂಟ್ರಿಗೆ ದಾರಿ ಮಾಡಿ ಕೊಟ್ಟಿತ್ತು. ಆದ್ರೆ, ಮರು ಆಯೋಜನೆಯಲ್ಲಿ ಆ ಲೋಪ ದೋಷವನ್ನ ಬಿಸಿಸಿಐ ಸರಿಪಡಿಸಬೇಕಿದೆ. ಒಂದು ವೇಳೆ ಇದೇ ಸಮಸ್ಯೆ ಮತ್ತೇ ಮರುಕಳಿಸದರೇ ಇಂಡಿಯನ್​ ಪ್ರೀಮಿಯರ್​ ಲೀಗ್​ ಇತಿಹಾಸಕ್ಕೆ ಕಪ್ಪುಚುಕ್ಕೆಯಾಗುವುದರಲ್ಲಿ ಅನುಮಾನವಿಲ್ಲ..!

ಈ ಪ್ರಮುಖ ಸಮಸ್ಯೆಗಳ ಬಗ್ಗೆ ಬಿಸಿಸಿಐಗೂ ಸ್ಪಷ್ಟ ಅರಿವಿದೆ. ಹೀಗಾಗಿ ಸಭೆಯ ನಿರ್ಣಯ ಹೊರ ಬಿದ್ದ ಬೆನ್ನಲ್ಲೇ ಆಟಗಾರರ ಲಭ್ಯತೆ ಕುರಿತಂತೆ ಮಾತುಕತೆಯ ಮೂಲಕ ಪರಿಹಾರಕ್ಕೆ ಮೊದಲ ಹೆಜ್ಜೆಯನ್ನಿಟ್ಟಿದೆ. ಈಗಾಗಲೇ ವೆಸ್ಟ್​ಇಂಡೀಸ್​​​ ಕ್ರಿಕೆಟ್​ ಮಂಡಳಿಯ ಜೊತೆ ನಡೆದ ಸಿಪಿಎಲ್​ ಮುಂದೂಡಿಕೆಯ ಮಾತುಕತೆಯಲ್ಲಿ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ ಅನ್ನೋದು ಮೂಲಗಳ ಮಾಹಿತಿಯಾಗಿದೆ. ಜೊತೆಗೆ ಇಂಗ್ಲೆಂಡ್​ ಆಟಗಾರರ ಅಲಭ್ಯತೆಯ ಬಗ್ಗೆಯೂ ಚರ್ಚೆ ನಡೆಯುತ್ತಿದೆ ಅನ್ನೋ ಮಾಹಿತಿಯನ್ನ ಸ್ವತಃ ಬಿಸಿಸಿಐ ಖಜಾಂಜಿ ಅರುಣ್​ ಕುಮಾರ್​ ಧಮಲ್​ ಅವರೇ ತಿಳಿಸಿದ್ದಾರೆ.

ಒಟ್ಟಿನಲ್ಲಿ, ಐಪಿಎಲ್​ ಮರು ಆಯೋಜನೆಗೆ ಪಣತೊಟ್ಟಿರುವ ಬಿಸಿಸಿಐ ಶತಯುಗತಾಯ ನಡೆಸಿಯೇ ತೀರುವ ವಿಶ್ವಾಸದಲ್ಲಿದೆ. ಎದುರಾಗಿರೋ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವೂ ನಡೀತಾ ಇದೆ. ಬಿಗ್​ಬಾಸ್​​ಗಳು ಅಂದುಕೊಂಡ ದಿನಾಂಕದೊಳಗೆ ಸಮಸ್ಯೆಗಳನ್ನ ಪರಿಹರಿಸಿ, 14ನೇ ಆವೃತ್ತಿಗೆ ಯಶಸ್ಸಿನ ಫುಲ್​​​ಸ್ಟಾಫ್​ ಇಡ್ತಾರಾ ಕಾದುನೋಡಬೇಕಿದೆ.

 

 

 

The post ದುಬೈನಲ್ಲಿ ಐಪಿಎಲ್ ಆಯೋಜಿಸೋದು ಸುಲಭವಲ್ಲ.. ಬಿಸಿಸಿಐ ಮುಂದಿರೋ ಸವಾಲೇನು..? appeared first on News First Kannada.

Source: newsfirstlive.com

Source link