ಡೆಡ್ಲಿ ವೈರಸ್​ನಿಂದ ಮುಂದೂಡಲಾಗಿದ್ದ 14ನೇ ಆವೃತ್ತಿಯ ಮಿಲಿಯನ್​ ಡಾಲರ್ ಐಪಿಎಲ್​​ ಟೂರ್ನಿಗೆ ಮರುಚಾಲನೆ ಸಿಕ್ಕಿದೆ. ನಿನ್ನೆ ನಡೆದ ವಿಶೇಷ ಸಭೆಯಲ್ಲಿ, ದುಬೈನಲ್ಲಿ IPL​ ನಡೆಸೋಕೆ BCCI ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಆ ಮೂಲಕ ಐಪಿಎಲ್ ​ಎಲ್ಲಿ..? ಯಾವಾಗ..? ಹೇಗೆ ನಡೆಯುತ್ತೆ ಅನ್ನೋ ಗೊಂದಲಗಳಿಗೆ, ಬಿಗ್​ಬಾಸ್​ಗಳು ತೆರೆ ಎಳೆದಿದ್ದಾರೆ. ಸಭೆಯಲ್ಲಿ ಏನೆಲ್ಲಾ ತೀರ್ಮಾನ ತೆಗೆದುಕೊಳ್ಳಲಾಯ್ತು ಎಂಬುದರ ಕಂಪ್ಲೀಟ್ ಡೀಟೈಲ್ಸ್​ ಇಲ್ಲಿದೆ.

ದುಬೈನಲ್ಲೇ ನಡೆಯಲಿದೆ ರದ್ದಾದ ಕಲರ್​​ಫುಲ್​ ಲೀಗ್​
ಯೆಸ್​. ಕೊರೊನಾ 2ನೇ ಅಲೆಯ ಹಿನ್ನೆಲೆ ತಾತ್ಕಾಲಿಕವಾಗಿ ರದ್ದಾಗಿದ್ದ ಐಪಿಎಲ್ ಮತ್ತೆ ದುಬೈನಲ್ಲಿ ನಡೆಯೋದು ಕನ್ಫರ್ಮ್​ ಆಗಿದೆ. ಸೆಪ್ಟೆಂಬರ್ ಮೂರನೇ ವಾರದಲ್ಲಿ IPL ನಡೆಯುವುದರ ಬಗ್ಗೆ ಬಿಸಿಸಿಐ ಉಪಾಧ್ಯಕ್ಷ ರಾಜೀವ್​ ಶುಕ್ಲ ಅಧಿಕೃತವಾಗಿ ಖಚಿತಪಡಿಸಿದ್ದಾರೆ. ಆದರೆ ಟೂರ್ನಿಯ ದಿನಾಂಕಗಳನ್ನ ಫೈನಲೈಸ್​ ಮಾಡುವುದಷ್ಟೇ ಬಾಕಿ ಎಂದಿದ್ದಾರೆ. ಜೊತೆಗೆ ಅದಕ್ಕೆ ಬೇಕಾದ ಸಕಲ ವ್ಯವಸ್ಥೆಗಳತ್ತಲೂ ಬಿಸಿಸಿಐ ಗಮನಹರಿಸುತ್ತಿರುವುದಾಗಿ ತಿಳಿಸಿದ್ದಾರೆ. ನಿನ್ನೆ ವಿಶೇಷ ಸಾಮಾನ್ಯ ಸಭೆ ನಡೆಸಿದ ಬಿಸಿಸಿಐ, ಈ ಮಹತ್ವದ ತೀರ್ಮಾನವನ್ನ ತೆಗೆದುಕೊಂಡಿದೆ.

ದುಬೈನಲ್ಲೇ ಸಕ್ಸಸ್​​ಫುಲ್​​ ಆಗಿ ನಡೆದಿತ್ತು 13ನೇ ಆವೃತ್ತಿ
2020ರ 13ನೇ ಆವೃತ್ತಿಯ ಸಂಪೂರ್ಣ ಐಪಿಎಲ್​ಗೆ ಯುನೈಟೆಡ್ ಅರಬ್ ಎಮಿರೇಟ್ಸ್‌ ಆತಿಥ್ಯ ವಹಿಸಿತ್ತು. ಅಲ್ಲಿ ಯಾವುದೇ ರೀತಿಯ ತೊಂದರೆಗಳು ಉಂಟಾಗದೇ, ಕಲರ್​ಫುಲ್​ ಲೀಗ್​ ಸುಗಮವಾಗಿ ಆಯೋಜನೆಗೊಂಡಿತ್ತು. ಭಾರತದಲ್ಲಿ ಸದ್ಯ ಕೋವಿಡ್ ಹೆಚ್ಚಾದ ಹಿನ್ನೆಲೆಯಲ್ಲಿ, ಇನ್ನುಳಿದ 31 ಐಪಿಎಲ್ ಪಂದ್ಯಗಳನ್ನು ಯುಎಇಗೆ ಸ್ಥಳಾಂತರಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಆ ಮೂಲಕ ಐಪಿಎಲ್‌ ಫೇಸ್​-2 ಇಂಗ್ಲೆಂಡ್, ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾದಲ್ಲಿ ನಡೆಸಲಾಗುತ್ತೆ ಎಂಬ ಎಲ್ಲಾ ಅನುಮಾನಗಳಿಗೆ ಬ್ರೇಕ್​ ಬಿದ್ದಿದೆ.

ಯುಎಇನಲ್ಲೇ ನಡೆಯಲಿದೆ ಐಪಿಎಲ್​, ವಿಶ್ವಕಪ್​.!
ವಿಶ್ವಕಪ್​​ಗೂ ಭಾರತವೇ ಆತಿಥ್ಯ ವಹಿಸಿರುವ ಕಾರಣ, ಐಪಿಎಲ್​ ಮತ್ತು ವಿಶ್ವಕಪ್​ ಅನ್ನು ದುಬೈನಲ್ಲೇ ನಡೆಸೋಕೆ ಸಭೆಯಲ್ಲಿ ಅಂತಿಮ ನಿರ್ಧಾರಕ್ಕೆ ಬರಲಾಗಿದೆ. ಆದರೆ ಟಿ20 ವಿಶ್ವಕಪ್​​ ಅಕ್ಟೋಬರ್​ 18ರಿಂದ ಪ್ರಾರಂಭವಾಗಲಿರುವ ಕಾರಣ, ಸ್ವಲ್ಪ ದಿನಗಳ ಕಾಲ ವಿಶ್ವಕಪ್​​  ಮುಂದೂಡಿಕೆಗೆ ಐಸಿಸಿ ಬಳಿ ಬಿಸಿಸಿಐ ಮನವಿ ಮಾಡಿದೆ. ಹೀಗಾಗಿ ವಿಶ್ವಕಪ್​ ಅಂದುಕೊಂಡ ದಿನಾಂಕಕ್ಕೇ ನಡೆಯುತ್ತೊ ಇಲ್ಲವೊ ಅನ್ನೋದ್ರ ಬಗ್ಗೆ, ಜೂನ್​ 1ರಂದು ಐಸಿಸಿ ನಡೆಸಲಿರುವ ಸಭೆಯ ಬಳಿಕ ಗೊತ್ತಾಗಲಿದೆ.

‘ಐಸಿಸಿಗೆ ಮನವಿ’
‘UAEನಲ್ಲಿ IPL​ ಮರುಚಾಲನೆಗೆ ಅಧಿಕೃತ ಒಪ್ಪಿಗೆ ಸಿಕ್ಕಿದೆ. ಜೊತೆಗೆ ಟಿ20 ವಿಶ್ವಕಪ್ UAEನಲ್ಲೇ ಆಯೋಜಿಸುವ ಕುರಿತು ಚರ್ಚೆ ಕೂಡ ನಡೆಸಿದ್ದೇವೆ. ಏಕೆಂದರೆ ದುಬೈನಲ್ಲೇ ಶ್ರೀಮಂತ ಲೀಗ್​ ಆರಂಭವಾದ್ರೆ, ಬಳಿಕ ವಿಶ್ವಕಪ್​ ಆಯೋಜನೆಗೂ ಸುಲಭವಾಗಲಿದೆ. ಹಾಗೆಯೇ ಆಟಗಾರರಿಗೂ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಪ್ರಯಾಣ ಮಾಡೋದು ತಪ್ಪುತ್ತೆ. ಆದರೆ ಐಸಿಸಿ ಈ ಬಗ್ಗೆ ಏನು ಹೇಳುತ್ತೋ ಜೂನ್​ 1 ರಂದು ಗೊತ್ತಾಗುತ್ತೆ’

ರಾಜೀವ್​ ಶುಕ್ಲಾ, ಬಿಸಿಸಿಐ ಉಪಾಧ್ಯಕ್ಷ

ಯುಎಇ ಮೇಲ್ಯಾಕೆ ಬಿಸಿಸಿಐ ಒಲವು..?
ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್​, ಲಂಕಾ ಕ್ರಿಕೆಟ್ ಬೋರ್ಡ್​ಗಳು ಐಪಿಎಲ್ ಆಯೋಜನೆಗೆ ಆಫರ್​ ನೀಡಿದ್ದವು. ಆದರೆ ಬಿಸಿಸಿಐ ಒಲವು ಮಾತ್ರ ಯುಎಇ ಮೇಲಿದೆ. ಇದಕ್ಕೆ ಕಾರಣಗಳೇನಂದ್ರೆ;

  • ಕೊರೊನಾ ನಡುವೆ 2020ರ ಐಪಿಎಲ್ ಟೂರ್ನಿಯ ಯಶಸ್ಸು
  • ಭಾರತಕ್ಕಿಂತ ಯುಎಇ ಬಯೋಬಬಲ್ ಹೆಚ್ಚು ಸುರಕ್ಷಿತ
  • ಇತರೆ ದೇಶಗಳಿಗೆ ಹೋಲಿಸಿದರೆ ಪ್ರಯಾಣದ ಅವಧಿ ಕಡಿಮೆ
  • ಆಟಗಾರರ ಪ್ರಯಾಣದ ಜೊತೆ ವಸ್ತುಗಳ ಸಾಗಾಣಿಕೆಯೂ ಸುಲಭ
  • ಐಪಿಎಲ್ ಆಯೋಜನೆಯ ಅನುಭವ, ಕೊರೊನಾ ನಿಯಂತ್ರಣ

ಕೊರೊನಾ ಸಂಕಷ್ಟದ ನಡುವೆ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನ ಯಶಸ್ವಿಯಾಗಿ ಮುಗಿಸಿತ್ತು. ಆಟಗಾರರ ಬಯೋಬಬಲ್ ಕೂಡ 100ರಷ್ಟು ಸೇಫ್​ ಆಗಿತ್ತು. ಇತರೆ ದೇಶಗಳಿಗೆ ಹೋಲಿಸಿದರೆ ಆಟಗಾರರ ಪ್ರಯಾಣದ ಅವಧಿ ಕಡಿಮೆ, ದುಬೈ ಇಂಟರ್​ನ್ಯಾಷನಲ್ ಸ್ಟೇಡಿಯಂ, ಶೇಖ್ ಜಾಯೇದ್ ಸ್ಟೇಡಿಯಮ್, ಶಾರ್ಜಾ ಕ್ರಿಕೆಟ್ ಸ್ಟೇಡಿಯಂಗಳನ್ನ ಸುಮಾರು ಒಂದು ಗಂಟೆ ಅವಧಿಯಲ್ಲೇ ಕ್ರಮಿಸಬಹುದು. ಇದರ ಜೊತೆಗೆ ವಸ್ತುಗಳ ಸಾಗಾಟಕ್ಕೂ ಅನುಕೂಲಕರ. ಇದಕ್ಕೆಲ್ಲಾ ಮಿಗಿಲಾಗಿ ಐಪಿಎಲ್ ಆಯೋಜನೆಯ ಅನುಭವ ಹಾಗೂ ಇತರೆ ದೇಶಗಳಿಗೆ ಹೋಲಿಸಿದ್ರೆ ಯುಎಇನಲ್ಲಿ ಕೊರೊನಾ ನಿಯಂತ್ರಣದಲ್ಲಿದೆ. ಹೀಗಾಗಿಯೇ ಅರಬ್​ನಲ್ಲಿ ಐಪಿಎಲ್ ನಡೆಸೋಕೆ, ಬಿಸಿಸಿಐ ಹೆಚ್ಚು ಒಲವು ತೋರಿಸ್ತಿದೆ.

ರೂಪುರೇಷೆ ಸಿದ್ಧಪಡಿಸಿಕೊಂಡ ಬಿಸಿಸಿಐ
ಸದ್ಯ ಐಪಿಎಲ್​ ಮರು ಆಯೋಜನೆಗೆ ಹಲವು ರೂಪು ರೇಷೆಗಳನ್ನ ಬಿಸಿಸಿಐ ಮಾಡಿಕೊಂಡಿದೆ. ಜೊತೆಗೆ ವಿಶ್ವಕಪ್​ ಮುಂದೂಡಿದ್ರೆ ಅಥವಾ ಮುಂದೂಡದಿದ್ರೆ, ಏನೆಲ್ಲಾ ಮಾಡಬೇಕು ಅನ್ನೋದ್ರ ಬಗ್ಗೆ ಕೂಡ ಗಮನ ಹರಿಸಿದೆ.

ಬಿಸಿಸಿಐ ಪ್ಲಾನ್​ ಏನು ?
2ನೇ ಭಾಗದ IPL​​ ಆಯೋಜಿಸಲು ಬಿಗ್​ಬಾಸ್​​ಗಳ ಪ್ಲಾನ್​ ಹೇಗಿದೆ ಅಂದರೆ, UAEನಲ್ಲಿ ಸೆಪ್ಟೆಂಬರ್​​ 18 ಅಥವಾ 19ರಂದು IPL​ ನಡೆಸೋದು ಖಚಿತವಾಗಿದೆ. ಆದರೆ ಅಕ್ಟೋಬರ್​ 18ರಂದು ಟಿ20 ವಿಶ್ವಕಪ್​ ಆರಂಭವಾಗುವ ಸಲುವಾಗಿ, ​IPL​ ಬೇಗನೇ ಮುಗಿಸೋಕೆ BCCI ನಿರ್ಧರಿಸಿದೆ. ಒಂದು ವೇಳೆ ಐಸಿಸಿ ವಿಶ್ವಕಪ್​ ಮುಂದೂಡದಿದ್ರೆ, 10 ಡಬಲ್ ಹೆಡ್ಡರ್​, 7 ಸಿಂಗಲ್​ ಹೆಡ್ಡರ್​​ ಪಂದ್ಯಗಳ ಆಯೋಜನೆ ಮೂಲಕ, 21ದಿನಕ್ಕೇ ಮುಗಿಯಲಿದೆ. ಒಂದು ವೇಳೆ ವಿಶ್ವಕಪ್​ ಮುಂದೂಡಿದ್ರೆ, 30 ದಿನಗಳ ಕಾಲ ಐಪಿಎಲ್​ ನಡೆಯಲಿದ್ದು, ವೀಕೆಂಡ್​ನಲ್ಲಿ ಮಾತ್ರ ಡಬಲ್​ ಹೆಡ್ಡರ್ ಪಂದ್ಯಗಳು ನಡೆಯಲಿವೆ.

ಇಂಗ್ಲೆಂಡ್​ ಟು ಯುಎಇ ಟೀಮ್​ ಇಂಡಿಯಾ ಪ್ಲೇಯರ್ಸ್​ ಪ್ರಯಾಣ
ಜೂನ್​ 2ರಂದು ಇಂಗ್ಲೆಂಡ್​ ಪ್ರವಾಸ ಕೈಗೊಳ್ಳಲಿರುವ ಟೀಮ್​ ಇಂಡಿಯಾ ಆಟಗಾರರು ಜೂನ್​ 18ರಂದು ವಿಶ್ವಟೆಸ್ಟ್​ ಚಾಂಂಪಿಯನ್​ ಶಿಪ್​ ಫೈನಲ್​ ಪಂದ್ಯ ಆಡಲಿದ್ದಾರೆ. ಬಳಿಕ ಆಗಸ್ಟ್​ 4 ರಿಂದ 5 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಇಂಗ್ಲೆಂಡ್​ ವಿರುದ್ಧ ಸೆಣೆಸಾಟ ನಡೆಸಲಿದ್ದಾರೆ. ಈ ಸರಣಿ ಸೆಪ್ಟೆಂಬರ್​ 14ಕ್ಕೆ ಮುಗಿಯಲಿದ್ದು, 18 ಅಥವಾ 19ರಂದೇ ಐಪಿಎಲ್​ ಆಯೋಜನೆಗೊಂಡ್ರೆ, 18 ಅಥವಾ 19 ರಂದು ಐಪಿಎಲ್​ ನಡೆದ್ರೆ ಸೆಪ್ಪೆಂಬರ್​​ 14ರ ಮರುದಿನವೇ ಯುಎಇಗೆ ಹಾರಬೇಕಾಗುತ್ತೆ.

ಒಟ್ಟಿನಲ್ಲಿ ಮಿಲಿಯನ್​ ಡಾಲರ್​ ಟೂರ್ನಿ ಆಯೋಜನೆ ಬಗ್ಗೆ ಉಂಟಾಗಿದ್ದ ಮಿಲಿಯನ್​ ಡಾಲರ್​ ಪ್ರಶ್ನೆಗಳಿಗೆ, ಬಿಸಿಸಿಐ ಅಧಿಕೃತವಾಗಿ ತೆರೆ ಎಳೆದಿದ್ದು, ಕ್ರಿಕೆಟ್​ ಪ್ರೇಮಿಗಳಿಗೆ ಗುಡ್​ ನ್ಯೂಸ್​ ನೀಡಿದೆ. ಆದರೆ ಈ ಖುಷಿ ಡಬಲ್​ ಆಗಬೇಕಂದ್ರೆ ಇನ್ನೆರಡು ದಿನ ಕಾಯಬೇಕು.

The post ದುಬೈನಲ್ಲೇ ನಡೆಯುತ್ತಾ ಟಿ-20 ವಿಶ್ವಕಪ್? ಯುಎಇ ಮೇಲ್ಯಾಕೆ ಬಿಸಿಸಿಐ ಒಲವು? appeared first on News First Kannada.

Source: newsfirstlive.com

Source link