ದುಬೈ ಬಿಟ್ಟು ಬಂದು ಕಾಸರಗೋಡಿನಲ್ಲಿ ಅಡಿಕೆ ಹಾಳೆಯ ಪ್ಲೇಟ್ ತಯಾರಿಸುತ್ತಿರುವ ದಂಪತಿ; ಇವರ ಆದಾಯ ಕೇಳಿದ್ರೆ ಅಚ್ಚರಿ ಪಡ್ತೀರ! | Kasaragod Couple Quits UAE Job to Make Tableware and Grow Bags From Areca Leaf do you know Their Income


ದುಬೈ ಬಿಟ್ಟು ಬಂದು ಕಾಸರಗೋಡಿನಲ್ಲಿ ಅಡಿಕೆ ಹಾಳೆಯ ಪ್ಲೇಟ್ ತಯಾರಿಸುತ್ತಿರುವ ದಂಪತಿ; ಇವರ ಆದಾಯ ಕೇಳಿದ್ರೆ ಅಚ್ಚರಿ ಪಡ್ತೀರ!

ಕಾಸರಗೋಡಿನ ದಂಪತಿ ಶರಣ್ಯ- ದೇವಕುಮಾರ್

ದುಡ್ಡು ಸಂಪಾದಿಸಲು ನಮ್ಮ ದೇಶ ಬಿಟ್ಟು ಬೇರೆ ದೇಶಕ್ಕೆ ಹೋಗಿ ಸೆಟಲ್ ಆದ ಸಾಕಷ್ಟು ಜನರಿದ್ದಾರೆ. ಹಾಗೇ, ಊರಲ್ಲೇ ಹೊಸ ಉದ್ಯಮ ಶುರು ಮಾಡಿ ಕೋಟಿಗಟ್ಟಲೆ ಹಣ ಸಂಪಾದಿಸಿದವರೂ ಇದ್ದಾರೆ. ಇವೆರಡೂ ಒಂದಕ್ಕೊಂದು ತದ್ವಿರುದ್ಧವಾದ ನಿದರ್ಶನವಾಗಿದೆ. ಕೇರಳದ ಗಂಡ-ಹೆಂಡತಿ ಯುಎಇಯಲ್ಲಿ ಕೈ ತುಂಬ ಸಂಬಳ ಬರುತ್ತಿದ್ದ ಸಾಫ್ಟ್​ವೇರ್ ಉದ್ಯೋಗವನ್ನು ಬಿಟ್ಟು ತಮ್ಮ ಊರಿಗೆ ವಾಪಾಸಾಗಿ, ಇದೀಗ ಊರಿನಲ್ಲೇ ಸ್ವಂತ ಉದ್ಯಮ ಶುರು ಮಾಡಿ ತಿಂಗಳಿಗೆ 2 ಲಕ್ಷ ರೂ. ಸಂಪಾದನೆ ಮಾಡುತ್ತಿದ್ದಾರೆ! ಇಂಜಿನಿಯರ್ ಆಗಿದ್ದ ಕೇರಳದ ದೇವಕುಮಾರ್ ನಾರಾಯಣನ್ ಅವರು ಯುಎಇಯಲ್ಲಿ (UAE) 4 ವರ್ಷ ಕೆಲಸ ಮಾಡಿದ್ದರು. ಇದುವರೆಗೂ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗಿನ ಕಾರ್ಪೊರೇಟ್ ಉದ್ಯೋಗ ಮಾಡಿ, ವೇಗದ ಬದುಕಿನಲ್ಲಿ ಸಿಲುಕಿದ್ದ ಅವರಿಗೆ ಒಂದು ಬ್ರೇಕ್ ಬೇಕಿತ್ತು. ಹೀಗಾಗಿ, ತಮ್ಮ ಹೆಂಡತಿಯೊಂದಿಗೆ ದುಬೈ ತೊರೆದು ತಮ್ಮ ಊರಾದ ಕೇರಳದ ಕಾಸರಗೋಡಿಗೆ (Kasaragod) ವಾಪಾಸ್ ಬಂದರು.

ಸಾಫ್ಟ್​ವೇರ್ ಇಂಜಿನಿಯರ್ ಆಗಿದ್ದ ಹೆಂಡತಿ ಶರಣ್ಯ ಜೊತೆ ಊರಿಗೆ ವಾಪಾಸಾದ ದೇವಕುಮಾರ್ ಲಕ್ಷಾಂತರ ರೂ. ಸಂಬಳ ಬರುತ್ತಿದ್ದ ಕೆಲಸ ಬಿಟ್ಟ ಬಳಿಕ ಊರಲ್ಲೇ ಕುಳಿತು ಏನು ಮಾಡುವುದು ಎಂಬ ಯೋಚನೆ ಮಾಡಿದರು. ಬ್ಯುಸಿ ಬದುಕಿನ ಬದಲು ಹಳ್ಳಿಯ ಆರಾಮದ ಜೀವನವನ್ನು ಬಯಸಿದ್ದ ಅವರು ಊರಿನಲ್ಲೇ ಏನಾದರೂ ಬ್ಯುಸಿನೆಸ್ ಮಾಡಲು ಪ್ಲಾನ್ ಮಾಡಿದರು. ಆಗ ಹುಟ್ಟಿಕೊಂಡಿದ್ದೇ ‘ಪಾಪ್ಲಾ’ ಎಂಬ ಸಂಸ್ಥೆ.

2018ರಲ್ಲಿ ಪಾಪ್ಲಾ ಎಂಬ ಹೆಸರಿನ ಸ್ವಂತ ಉದ್ಯಮ ಆರಂಭಿಸಲು ನಿರ್ಧರಿಸಿದ ಕಾಸರಗೋಡಿನ ಈ ದಂಪತಿ ಇದೀಗ ತಿಂಗಳಿಗೆ ಮನೆಯಲ್ಲೇ 2 ಲಕ್ಷ ರೂ. ಸಂಪಾದನೆ ಮಾಡುತ್ತಾರೆ. ಹಾಗೇ, ಹಳ್ಳಿಯ ಶುದ್ಧ ವಾತಾವರಣದಲ್ಲಿ ಹಾಯಾಗಿಯೂ ಇದ್ದಾರೆ. ಅಂದಹಾಗೆ, ‘ಪಾಪ್ಲಾ’ ಎಂಬುದು ಅಡಿಕೆ ಹಾಳೆಗಳಿಂದ ತಟ್ಟೆ, ಕಪ್, ತೆಂಗಿನಕಾಯಿಯ ಗರಟದಿಂದ ಡೆಕೋರೇಟಿವ್ ವಸ್ತುಗಳು, ಕಪ್​ಗಳನ್ನು ಉತ್ಪಾದಿಸಿ, ಮಾರಾಟ ಮಾಡುವ ಸಂಸ್ಥೆ.

Kasaragod Couple Quits UAE Job to Make Tableware

ಕಾಸರಗೋಡಿನ ದಂಪತಿ ಶರಣ್ಯ- ದೇವಕುಮಾರ್

“ನಾವು ಯಾವಾಗಲೂ ನಮ್ಮದೇ ಆದ ಉದ್ಯಮವನ್ನು ಪ್ರಾರಂಭಿಸಲು ಯೋಜನೆ ರೂಪಿಸಿದೆವು. ಆದರೆ, ನಮಗೆ ಯಾವ ಉದ್ಯಮಕ್ಕೆ ಕೈ ಹಾಕಬೇಕೆಂದು ಗೊತ್ತಿರಲಿಲ್ಲ. ನಾವು ನಮ್ಮ ಆಸಕ್ತಿಗಳಿಗೆ ಹೊಂದಿಕೆಯಾಗುವ ಪ್ಲಾನ್​ಗಳನ್ನು ಮಾಡತೊಡಗಿದೆವು. ನಮಗೆ ಹಣ ಮಾಡುವುದು ಮಾತ್ರವಲ್ಲದೆ ಸಾಮಾಜಿಕ ಜವಾಬ್ದಾರಿಯೊಂದಿಗೆ ಹಳ್ಳಿಯ ಜನರಿಗೂ ಅನುಕೂಲವಾಗುವ ಉದ್ಯಮವೊಂದನ್ನು ತಯಾರಿಸಬೇಕೆಂಬ ಉದ್ದೇಶವಿತ್ತು ಎಂದು ಶರಣ್ಯ ದಿ ಬೆಟರ್ ಇಂಡಿಯಾಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ಹೀಗಾಗಿ, ಅವರು ಸ್ಥಳೀಯವಾಗಿ ಲಭ್ಯವಿರುವ ನೈಸರ್ಗಿಕ ಕಚ್ಚಾ ವಸ್ತುಗಳನ್ನು ಬಳಸಿಕೊಂಡು ದಿನಬಳಕೆಯ ವಸ್ತುಗಳನ್ನು ತಯಾರಿಸಲು ನಿರ್ಧರಿಸಿದರು. ಕಾಸರಗೋಡಿನಲ್ಲಿ ಅಡಿಕೆ ಮರಗಳು ಹೇರಳವಾಗಿ ಬೆಳೆಯುತ್ತವೆ. ಅದರಿಂದಾಗಿ ಅಡಿಕೆ ಹಾಳೆಯ ತಟ್ಟೆ, ಕಪ್​ಗಳನ್ನು ಸುಲಭವಾಗಿ ಉತ್ಪಾದಿಸಬಹುದು ಎಂದು ಯೋಚಿಸಿದರು. ಅಲ್ಲದೆ, ಪರಿಸರ ಸ್ನೇಹಿಯಾಗಿರುವ ಅಡಿಕೆ ಹಾಳೆ ಪ್ಲಾಸ್ಟಿಕ್‌ಗೆ ಉತ್ತಮ ಪರ್ಯಾಯವಾಗಿರುವುದರಿಂದ ಹಾಗೂ ಸ್ಥಳೀಯ ಕೃಷಿಕರಿಗೂ ಒಂದು ಆದಾಯದ ಮೂಲವನ್ನು ಒದಗಿಸುವ ಉದ್ದೇಶದಿಂದ ಪಾಪ್ಲಾ ಸಂಸ್ಥೆಯನ್ನು ಶುರು ಮಾಡಲಾಯಿತು ಎನ್ನುತ್ತಾರೆ ದೇವಕುಮಾರ್.

Kasaragod Couple Quits UAE Job to Make Tableware

ಕಾಸರಗೋಡಿನ ಹಳ್ಳಿಯಲ್ಲಿ ತಯಾರಾಗುತ್ತಿರುವ ಅಡಿಕೆ ಹಾಳೆಯ ತಟ್ಟೆ, ಕಪ್​ಗಳು

ಅಡಿಕೆ ಎಲೆಯ ಹಾಳೆಗಳು ಪ್ಲಾಸ್ಟಿಕ್ ಮತ್ತು ಕಾಗದಕ್ಕೆ ಉತ್ತಮ ಪರ್ಯಾಯವಾಗಿದೆ. ಕಡಿಮೆ ಕಾಗದ ಮತ್ತು ಕಡಿಮೆ ಪ್ಲಾಸ್ಟಿಕ್ ಎಂಬ ಕಲ್ಪನೆಯನ್ನು ಸಂಯೋಜಿಸುವ ಮೂಲಕ ನಾವು ಅದಕ್ಕೆ ‘ಪಾಪ್ಲಾ’ ಎಂದು ಹೆಸರಿಸಿದ್ದೇವೆ ಎಂದು ಶರಣ್ಯಾ ಹೇಳುತ್ತಾರೆ.

2018ರಲ್ಲಿ ಪ್ರಾರಂಭವಾದ ಪಾಪ್ಲಾ ಈಗ ಟೇಬಲ್‌ವೇರ್‌ನಿಂದ ಹಿಡಿದು ಅಡಿಕೆ ಎಲೆಯ ಪೊರೆಗಳಿಂದ ತಯಾರಿಸುವ ಚೀಲಗಳವರೆಗೆ ಹಲವು ರೀತಿಯ ಉತ್ಪನ್ನಗಳನ್ನು ತಯಾರಿಸುತ್ತದೆ. ಇದರಿಂದ ತಿಂಗಳಿಗೆ 2 ಲಕ್ಷ ರೂಪಾಯಿ ವಹಿವಾಟು ನಡೆಸಲಾಗುತ್ತಿದೆ. ದೇವಕುಮಾರ್ ಮತ್ತು ಶರಣ್ಯ ಮಡಿಕೈ ಪಂಚಾಯತ್‌ನಲ್ಲಿ ತಮ್ಮ ಮನೆಯ ಸಮೀಪದಲ್ಲಿ ಸಣ್ಣ ಉತ್ಪಾದನಾ ಘಟಕವನ್ನು ಸ್ಥಾಪಿಸಿದ್ದಾರೆ. ಅಲ್ಲಿ 7 ಮಂದಿ ಸಿಬ್ಬಂದಿ ಕೂಡ ಇದ್ದಾರೆ.

ನಾವು ಅಡಿಕೆ ಹಾಳೆಗಳನ್ನು ಹೆಚ್ಚಾಗಿ ಕಾಸರಗೋಡಿನಿಂದ ಮತ್ತು ಕೆಲವೊಮ್ಮೆ ಕರ್ನಾಟಕದಿಂದಲೂ ತರಿಸಿಕೊಳ್ಳುತ್ತೇವೆ. ಅವುಗಳ ಗುಣಮಟ್ಟವನ್ನು ಖಚಿತಪಡಿಸಿಕೊಂಡ ನಂತರ ನಾವು ಅವುಗಳನ್ನು ಖರೀದಿಸುತ್ತೇವೆ. ಅಡಿಕೆ ಹಾಳೆಗಳ ವೈವಿಧ್ಯತೆ, ಗಾತ್ರ ಮುಂತಾದ ವಿವಿಧ ಅಂಶಗಳ ಆಧಾರದ ಮೇಲೆ ಉತ್ಪಾದಕರಿಗೆ ಹಣ ಪಾವತಿಸುತ್ತೇವೆ ಎಂದು ದೇವಕುಮಾರ್ ತಿಳಿಸಿದ್ದಾರೆ.

TV9 Kannada


Leave a Reply

Your email address will not be published. Required fields are marked *