ದುರಂತದಲ್ಲಿ ಅಂತ್ಯಕಂಡ ದೇಶದ ಮೊದಲ ಪ್ರಧಾನ ದಂಡನಾಯಕ; ಹೆಮ್ಮೆಯ ರಾವತ್ ಸಾಧನೆ ಅಪಾರ


ನವದೆಹಲಿ: ದೇಶದ ಮೊದಲ ಸಿಡಿಎಸ್​. (ಚೀಫ್​ ಆಫ್​ ಡಿಫೆನ್ಸ್​ ಸ್ಟಾಫ್). ಸೇನಾ ಪ್ರಧಾನ ದಂಡ ನಾಯಕ ಜನರಲ್ ಬಿಪಿನ್ ರಾವತ್ ಇನ್ನು ನೆನಪು ಮಾತ್ರ. ತಮಿಳುನಾಡಿನ ಕೂಣೂರು ಬಳಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟಿದ್ದಾರೆ.

ಜನವರಿ 1, 2020 ರಿಂದ ಸೇನಾ ಪ್ರಧಾನ ದಂಡನಾಯಕರಾಗಿ ಸೇವೆ ಸಲ್ಲಿಸುತ್ತಿದ್ದ ರಾವತ್, ಹೆಲಿಕಾಪ್ಟರ್​ ದುರಂತದಲ್ಲಿ ಮೃತಪಟ್ಟಿದ್ದು, ಇಡೀ ದೇಶಕ್ಕೆ ದೊಡ್ಡ ಆಘಾತ ಆಗಿದೆ. ಅಲ್ಲದೇ ದೇಶಕ್ಕೆ ತುಂಬಲಾರದ ಬಹುದೊಡ್ಡ ನಷ್ಟ ಉಂಟಾಗಿದೆ. ದೇಶಕ್ಕೆ ತುಂಬಾನೇ ಬೇಕಾಗಿರುವ ವ್ಯಕ್ತಿಯನ್ನ ಕಳೆದುಕೊಂಡು ಭಾರತಾಂಬೆ ಅಕ್ಷರಶಃ ಬಡವಾಗಿ ಹೋಗಿದೆ. ಅಂದ್ಹಾಗೆ ರಾವತ್ ಪಡೆದುಕೊಂಡಿರೋ ಪದವಿಗಳು ತುಂಬಾನೇ ಇದೆ. ಮೆಡಲ್​ಗಳಂತೂ ಲೆಕ್ಕಕ್ಕೇ ಇಲ್ಲ.

‘Sword of Honour’ ಗೌರವ
ರಾವತ್, ಉತ್ತರಖಾಂಡ್​ನ ಪುರಿಯಲ್ಲಿ 1958 ಮಾರ್ಚ್​ 6 ರಂದು ಜನಿಸಿದ್ದರು. ​ಇವರ ಕುಟುಂಬ ಮೊದಲಿನಿಂದಲೂ ಸೇನೆಯ ಸೇವೆಯಲ್ಲಿತ್ತು. ತಂದೆ ಲಕ್ಷ್ಮಣ್ ಸಿಂಗ್ ರಾವತ್ ಲೆಫ್ಟಿನೆಂಟ್ ಜನರಲ್ ಆಗಿದ್ದರು. ರಾವತ್, ಶಿಮ್ಲಾದ St. Edward School ಮತ್ತು ಖಡಕ್ವಾಸ್ಲಾದ ನ್ಯಾಷನಲ್ ಡಿಫೆನ್ಸ್​ ಅಕಾಡೆಮಿಯಲ್ಲಿ ಶಿಕ್ಷಣ ಪಡೆಯುತ್ತಾರೆ. ನಂತರ 1978ರಲ್ಲಿ ಡೆಹ್ರಾಡೂನ್‌ನ ಇಂಡಿಯನ್ ಮಿಲಿಟರಿ ಅಕಾಡೆಮಿಯ ಹನ್ನೊಂದನೇ ಗೂರ್ಖಾ ರೈಫಲ್ಸ್‌ನ ಐದನೇ ಬೆಟಾಲಿಯನ್‌ನಲ್ಲಿ ನಿಯೋಜನೆಗೊಳ್ತಾರೆ. ಇಲ್ಲಿ ಅವರಿಗೆ ‘Sword of Honour’ ಗೌರವಕ್ಕೆ ಪಾತ್ರರಾಗಿದ್ದರು.

ರಾವತ್ ಅವರು, ಹೈ-ಅಲ್ಟಿಟ್ಯುಡ್ ವಾರ್​​ ಮತ್ತು ಕೌಂಟರ್ ಇನ್​​ಸರ್ಜನ್ಸಿ ಕಾರ್ಯಾಚರಣೆಯಲ್ಲಿ ಅನುಭವವನ್ನ ಹೊಂದಿದ್ದರು. ಕಾಶ್ಮೀರ ಕಣಿವೆಯ ಕಾಲಾಳುಪಡೆ ಬೆಟಾಲಿಯನ್ ಮತ್ತು ರಾಷ್ಟ್ರೀಯ ರೈಫಲ್ಸ್ ಸೆಕ್ಟರ್​ನಲ್ಲಿ ಕಮಾಂಡ್ ಮಾಡಿದ್ದರು. ಜೊತೆಗೆ ಡೆಹ್ರಾಡೂನ್​​ನಲ್ಲಿರುವ ಇಂಡಿಯನ್ ಮಿಲಿಟರಿ ಅಕಾಡೆಮೆಯಲ್ಲೂ ಸೇವೆ ಸಲ್ಲಿಸಿದ್ದರು.

ಡಿಫೆನ್ಸ್​ ಸರ್ವಿಸಸ್​​ ಸ್ಟ್ಯಾಫ್​​ ಕಾಲೇಜಿನಲ್ಲಿ ವ್ಯಾಸಂಗ
ಬಿಪಿನ್​ ರಾವತ್ ಅವರು, ವೆಲ್ಲಿಂಗ್​ಟನಲ್ಲಿರುವ, ಡಿಫೆನ್ಸ್​ ಸರ್ವಿಸಸ್​​ ಸ್ಟ್ಯಾಫ್​​ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದರು. ಅದರೊಂದಿಗೆ, ಸೇನೆಯ ಉನ್ನತ ಮಟ್ಟದ ಆಡಳಿತ ಹಾಗೂ ರಾಷ್ಟ್ರೀಯ ರಕ್ಷಣಾ ವಿಷಯದಲ್ಲಿ ತರಬೇತಿ ಪಡೆದಿದ್ದರು. ಅವರು ಇಲ್ಲಿವರೆಗೂ 38 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಅದರೊಂದಿಗೆ ಸೇನೆಯಲ್ಲಿ ಅವರು ಉತ್ತಮ ಸೇವೆ ಸಲ್ಲಿಸಿದ್ದಕ್ಕೆ ಹಲವು ಬಾರಿ ಸೇನೆಯಲ್ಲಿ ಸಾಹಸ ಹಾಗೂ ಶೌರ್ಯ ಮೆರೆದ ಮೆಡಲ್​ಗಳನ್ನ ಪಡೆದ್ದರು. UYSM, AVSM, YSM, SM, VSM, COAS ಸೇನಾ ಮೆಡಲ್​ಗಳನ್ನ ಪಡೆದುಕೊಂದ್ದರು.

Ph.D ಕೂಡ ಪಡೆದುಕೊಂಡಿದ್ದರು
ಇದೆಲ್ಲದರ ಜೊತೆಗೆ ಹಲವು ಪತ್ರಿಕೆ ಹಾಗೂ ಪಬ್ಲಿಕೇಷನ್​ಗಳಲ್ಲಿ ರಾಷ್ಟ್ರೀಯ ಭದ್ರತೆ ಹಾಗೂ ಲೀಡರ್​ಶಿಪ್​ಗೆ ಸಂಬಂಧಿಸಿದ ಲೇಖನಗಳನ್ನ ಬರೆಯುತ್ತಿದ್ದರು. ಜೊತೆಗೆ ಮದ್ರಾಸ್​ ವಿಶ್ವವಿದ್ಯಾಲಯದಲ್ಲಿ ರಕ್ಷಣೆಗೆ ಸಂಬಂಧಿಸಿದ ವಿಷಯದಲ್ಲಿ M. Phil ಪದವಿ ಪಡೆದುಕೊಂಡಿದ್ದರು. ಮ್ಯಾನೇಜ್​​ಮೆಂಟ್​ನಲ್ಲಿ ಡಿಪ್ಲೋಮಾ, ಕಂಪ್ಯೂಟರ್ ಸ್ಟಡಿಯಲ್ಲಿ ಮತ್ತೊಂದು ಡಿಪ್ಲೋಮಾ ಪದವಿಯನ್ನೂ ಪಡೆದುಕೊಂಡಿರುವುದರ ಜೊತೆಗೆ ಮಿಲಿಟರಿ ಸ್ಟ್ರಾಟೆಜಿಕ್ ಸ್ಟಡೀಸ್​​ನಲ್ಲಿ ಸಂಶೋಧನೆಗಳನ್ನ ಮಾಡಿದ್ದರು. ಇದೆಲ್ಲದರ ಜೊತೆಗೆ 2011ರಲ್ಲಿ ಮೀರತ್​ನಲ್ಲಿರುವ ಚೌದರಿ ಚರಣ್ ಸಿಂಗ್ ವಿಶ್ವವಿದ್ಯಾಲಯದಲ್ಲಿ Ph.D ಕೂಡ ಪಡೆದುಕೊಂಡಿದ್ದರು.

ಅನೇಕ ಮೆಡಲ್ ತಮ್ಮದಾಗಿಸಿಕೊಂಡಿದ್ದ ರಾವತ್
ಸೆಪ್ಟೆಂಬರ್ 1, 2016 ರಿಂದ ಡಿಸೆಂಬರ್ 31, 2016 ವರೆಗೆ ಭೂ ಸೇನೆಯ 37ನೇ ಉಪ ಮುಖ್ಯಸ್ಥರಾಗಿ ಹಾಗೂ ಡಿಸೆಂಬರ್ 31, 2016 ರಿಂದ 31 ಡಿಸೆಂಬರ್ 2019ರವರೆಗೆ 27ನೇ ಚೀಫ್ ಆಫ್​ ದ ಆರ್ಮಿ ಸ್ಟಾಪ್​ ಆಗಿ ಸೇವೆ ಸಲ್ಲಿಸಿದ್ದರು. ಜೊತೆಗೆ 32ನೇ ಚೀಫ್ ಆಫ್ ಸ್ಟಾಪ್ ಕಮೀಟಿಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿರುವ ಅನುಭವನ್ನ ಬಿಪಿನ್ ರಾವತ್ ಹೊಂದಿದ್ದರು. ರಾವತ್ ಅವರಿಗೆ ಪರಮ ವಿಶಿಷ್ಟ ಸೇವಾ ಮೆಡಲ್, ಉತ್ತಮ್ ಯುಧ್ ಸೇವಾ ಮೆಡಲ್, ಅತಿ ವಿಶಿಷ್ಟ ಸೇವಾ ಮೆಡಲ್, ಯುದ್ಧ ಸೇವಾ ಮೆಡಲ್, ವಿಶಿಷ್ಟ ಸೇವಾ ಮೆಡಲ್ ಸೇರಿದಂತೆ ಅನೇಕ ಮೆಡಲ್​ಗಳನ್ನ ತಮ್ಮಾಗಿಸಿಕೊಂಡಿದ್ದರು.

News First Live Kannada


Leave a Reply

Your email address will not be published. Required fields are marked *