ಮಂಡ್ಯ: ದೀಪಾವಳಿ ಸಂಭ್ರಮದಲ್ಲಿರುವ ಜನತೆಗೆ ವರುಣನ ದಿಢೀರ್ ಆಗಮನ ಶಾಕ್ ನೀಡಿದೆ. ಕಳೆದ ರಾತ್ರಿ ಸುರಿದ ಧಾರಾಕಾರ ಮಳೆ ಅಲ್ಲಲ್ಲಿ ಸಾಕಷ್ಟು ಅವಾಂತರ ಸೃಷ್ಟಿಸಿದೆ. ಜಿಲ್ಲೆಯ ಮಲ್ಲಘಟ್ಟ ಗ್ರಾಮದಲ್ಲಿನ ರಸ್ತೆ ಕೆಸರು ಗದ್ದೆಯಂತಾಗಿದ್ದು ಸಾರ್ವಜನಿಕರು ಅದರಲ್ಲಿ ಭತ್ತ ನಾಟಿ ಮಾಡಿ ಆಕ್ರೋಶ ಹೊರಹಾಕಿದ್ದಾರೆ.
ಶಿವಳ್ಳಿ-ಬಸರಾಳು ಮಾರ್ಗದ ರಸ್ತೆ ಮೊದಲೇ ಸಂಪೂರ್ಣ ಹದಗೆಟ್ಟಿದ್ದು ನಿನ್ನೆ ಸುರಿದ ಜೋರು ಮಳೆಯಿಂದಾಗಿ ಕೆಸರಿನ ಗದ್ದೆಯಂತಾಗಿದೆ. ಪರಿಣಾಮ ವಾಹನ ಸವಾರರು, ರೈತರು, ವಿದ್ಯಾರ್ಥಿಗಳು ಈ ರಸ್ತೆಯಲ್ಲಿ ಸಂಚರಿಸಲು ಪರದಾಡುವಂತಾಗಿದೆ.
ಪ್ರತಿ ಬಾರಿ ಮಳೆ ಸುರಿದಾಗಲು ಇದೇ ಪರಿಸ್ಥಿತಿ ಇರುತ್ತೆ. ಆದರೆ ಇದುವರೆಗೆ ಯಾವುದೇ ಸಂಬಂಧ ಪಟ್ಟ ಇಲಾಖೆಯವರು ಯಾವುದೇ ದುರಸ್ತಿ ಕಾರ್ಯವನ್ನು ಮಾಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿ ಹದಗೆಟ್ಟ ರಸ್ತೆಯಲ್ಲೇ ನಾಟಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.