ಉಡುಪಿ: ಕಳೆದೊಂದು ವಾರದಿಂದ ದುರ್ಬಲಗೊಂಡಿದ್ದ ನೈಋತ್ಯ ಮುಂಗಾರು ಚುರುಕು ಪಡೆದಿದೆ. ಉಡುಪಿ ಜಿಲ್ಲೆಯಲ್ಲಿ ಮಧ್ಯರಾತ್ರಿಯಿಂದ ನಿರಂತರವಾಗಿ ಭಾರೀ ಗಾಳಿ ಮಳೆಯಾಗುತ್ತಿದೆ.

ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಕೇಂದ್ರವು ಗುಡುಗು, ಮಿಂಚು ಸಹಿತ ಅತಿ ಭಾರೀ ಗಾಳಿ ಮಳೆಯ ಮುನ್ಸೂಚನೆ ನೀಡಿದೆ. ಇಂದಿನಿಂದ ನಾಲ್ಕು ದಿನಗಳ ಕಾಲ ಪ್ರತೀ 24 ತಾಸುಗಳಲ್ಲಿ ಜಿಲ್ಲೆಯಲ್ಲಿ 64 ರಿಂದ 115 ಮಿ.ಮೀ. ಮಳೆಯಾಗುವ ನಿರೀಕ್ಷೆ ಇದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಜೂ. 12ರ ಬೆಳಗ್ಗೆ 8.30ರಿಂದ ಜೂ. 16ರ ಬೆಳಗ್ಗೆ 8.30ರವರೆಗೆ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ಈ ವೇಳೆ ಮಳೆಯ ಜತೆ ಗಾಳಿ ಮತ್ತು ಸಿಡಿಲು ಕೂಡ ಇರಲಿದೆ. ತಾಸಿಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿರುವ ಸಾಧ್ಯತೆ ಇದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.

ಉಡುಪಿ ಜಿಲ್ಲೆಯ ಕಾರ್ಕಳ, ಕುಂದಾಪುರ, ಕಾಪು, ಬ್ರಹ್ಮಾವರ, ಬೈಂದೂರು, ಹೆಬ್ರಿ, ಉಡುಪಿ ಎಲ್ಲಾ ತಾಲೂಕುಗಳಲ್ಲಿಯೂ ವ್ಯಾಪಕ ಮಳೆ ಸುರಿಯುತ್ತಿದೆ. ಇದರಿಂದ ಭತ್ತದ ಬೇಸಾಯ ಆರಂಭಿಸಲು ಕಾದಿದ್ದ ಕೃಷಿಕರಿಗೆ ಅನುಕೂಲವಾಗಿದೆ.

The post ದುರ್ಬಲಗೊಂಡಿದ್ದ ನೈಋತ್ಯ ಮುಂಗಾರು ಚುರುಕು- ಉಡುಪಿಯಲ್ಲಿ ಆರೆಂಜ್ ಅಲರ್ಟ್ appeared first on News First Kannada.

Source: newsfirstlive.com

Source link