“ದಶಾವತಾರ ’ ಚಿತ್ರದಲ್ಲಿ ರಾಜ್‌ಕುಮಾರ್‌ ರಾವಣ ಪಾತ್ರವನ್ನು ಮಾಡಿರೋದು ಗೊತ್ತೇ ಇದೆ. ದಶಕಂಠನ ಈ ಪಾತ್ರಕ್ಕೆ ರಾವಣನ ಹತ್ತೂ ತಲೆಗಳನ್ನು ತೋರಿಸಬೇಕಿತ್ತು. ಹತ್ತೂ ತಲೆಗಳೂ ಜೀವಂತ ತಲೆಗಳಾಗಿರಬೇಕಿತ್ತು. ಇವತ್ತಿನ ಗ್ರಾಫಿಕ್ಸ್‌ ತಂತ್ರಜ್ಞಾನ ಅವತ್ತು ಇರಲಿಲ್ಲ. ಟ್ರಿಕ್ಸ್‌ ಶಾಟ್ಸ್‌ ಅನಿವಾರ್ಯವಾಗಿತ್ತು. ಕ್ಯಾಮರಾಮೆನ್‌ ದೊರೆ ಅವರು ಮೂರು ದಿನ ಹಗಲು-ರಾತ್ರಿ ಯೋಚಿಸಿ ಒಂದು ಐಡಿಯಾ ಕಂಡು ಹಿಡಿದರು.

ರಾಜ್‌ ಅವರಿಗೆ ಅವರ ಯೋಜನೆ ವಿವರಿಸಿ, ಚಿತ್ರೀಕರಣಕ್ಕೆ ಒಂದು ಇಡೀ ರಾತ್ರಿ ಬೇಕಾಗುತ್ತದೆ ಎಂದು, ಅಲ್ಲದೆ ನಿಂತ ಜಾಗದಿಂದ ಒಂದಿಂಚೂ ಅತ್ತಿತ್ತ ಕದಲಬಾರದು ಎಂದು ಹೇಳಿ, ಅವರಿಗೆ ಒಪ್ಪಿಗೆ ಇದ್ದಲ್ಲಿ, ಈ ಕಠಿಣ ಟ್ರಿಕ್‌ ಶಾಟ್ಸ್‌ ತೆಗೆಯಬಹುದು ಎಂದು ಹೇಳಿದರು.

ಯೋಜನೆ ಏನೆಂದರೆ, ಹತ್ತೂ ತಲೆಗಳೂ ಒಂದಾದ ನಂತರ ಒಂದು ಮಾತನಾಡುವುದು. ಹಾಗೆ ಮಾತನಾಡುವ ಮುಖವನ್ನು ಮಿಕ್ಕ ಒಂಭತ್ತೂ ಮುಖಗಳೂ ನೋಡುವುದು. ದೊರೆಯವರ ಈ ಪ್ರಯೋಗವನ್ನು ರಾಜ್‌ ಸವಾಲಾಗಿ ಸ್ವೀಕರಿಸಿದರು. ಚಿತ್ರೀಕರಣ ಪೂರ್ಣವಾಗದೆ ನಿಂತಿದ್ದ ಜಾಗ ಬಿಟ್ಟು ಕದಲುವಂತಿಲ್ಲ ಎಂಬ ನಿಬಂಧನೆ ಬೇರೆ. ರಾಜ್‌ ಎಲ್ಲ ನಿಯಮಗಳಿಗೆ ಸಂತೋಷದಿಂದ ಒಪ್ಪಿ ಪಾಲಿಸಿಯೇ ಬಿಟ್ಟರು. ಅವರ ಕಾರ್ಯಕ್ಷಮತೆ ಪರಿಣಾಮ ಇಡೀ ಚಿತ್ರಣ ಒಂದೇ ಟೇಕ್‌ನಲ್ಲಿ ಓ.ಕೆ ಆಯಿತು. ರಾತ್ರಿ ಹತ್ತಕ್ಕೆ ಪ್ರಾರಂಭವಾದ ಚಿತ್ರೀಕರಣ ಬೆಳಿಗ್ಗೆ ಆರಕ್ಕೆ ಮುಕ್ತಾಯವಾಯಿತು. ದೊರೆಯವರು ಶಾಟ್‌ ಓ.ಕೆ ಎಂದೊಡನೆ ರಾಜ್‌ ನಿಂತಿದ್ದ ಸ್ಥಳದಲ್ಲೇ ಜ್ಞಾನ ತಪ್ಪಿಬಿದ್ದುಬಿಟ್ಟರು.

ಇದನ್ನೂ ಓದಿ:ಇಂದು ವರನಟ ಡಾ.ರಾಜ್‌ ಕುಮಾರ್ 93ನೇ ಹುಟ್ಟುಹಬ್ಬ

ಅಲ್ಲಿದ್ದವರಿಗೆಲ್ಲ ಭಯ ಆತಂಕ ಕಾಡಿತು. ದೊರೆಯವರಿಗಂತೂ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತಾಗಿತ್ತು. ಅಲ್ಲೇ ಇದ್ದ ಅವರ ತಮ್ಮ ವರದಪ್ಪ ಓಡಿ ಹೋಗಿ ನೀರು ತಂದು ಅಣ್ಣನ ಮುಖದ ಮೇಲೆ ಚಿಮುಕಿಸಿದರು. ರಾಜ್‌ ಕಣ್ಣು ಬಿಟ್ಟು, ಏನೂ ಆಗದವರಂತೆ ಎದ್ದು ಕುಳಿತರು.

ಕೂಡಲೇ “ದೊರೆಯವರೇ ಶಾಟ್‌ ಓ.ಕೆ ನಾ?’ ಎಂದು ಪ್ರಶಂಸಿದರರಂತೆ. ಅದಕ್ಕೆ ದೊರೆ ಅವರು. “ನನಗೇನೋ ಓ.ಕೆ ಆದರೆ ಈಗ ಚಿತ್ರಿಸಿರುವ ಫಿಲಂನ ಲ್ಯಾಬ್‌ಗ ಕಳಿಸಿ ಅದು ಸಂಸ್ಕರಣಗೊಂಡು ಅವರು ಓ.ಕೆ ಎಂದ ಮೇಲೆ ನಿರ್ಧಾರವಾಗೋದು, ನೀವು ಮನೆಗೆ ಹೋಗಿ ರೆಸ್ಟ್‌ ತೆಗೆದುಕೊಳ್ಳಿ’ ಎಂದರಂತೆ. “ಅದು ಬರಲು ಎಷ್ಟು ಹೊತ್ತಾಗಬಹುದು’ ಎಂಬುದು ರಾಜ್‌ ಅವರ ಮರುಪ್ರಶ್ನೆ. “ನಮ್ಮ ಈ ವಿಕ್ರಂ ಸ್ಟುಡಿಯೋದಲ್ಲೇ ಲ್ಯಾಬೋರೇಟರಿಯೂ ಇರುವುದರಿಂದ, ಇನ್ನೂಂದೆರಡು ಗಂಟೆಯಾಗಬಹುದು’ ಎಂಬುದು ದೊರೆ ಮಾತು.

“ಹಾಗಾದರೆ, ನಾನೂ ಮನೆಗೆ ಹೋಗುವುದಿಲ್ಲ. ಇಲ್ಲೇ ಇರುತ್ತೇನೆ. ಶಾಟ್ಸ್‌ ಸರಿಯಾಗಿ ಬರದಿದ್ದರೆ, ಮತ್ತೂಮ್ಮೆ ಚಿತ್ರಿಸಿ’ ಎಂದು ಬಿಟ್ಟರಂತೆ ರಾಜ್‌. ಅದಕ್ಕೆ ದೊರೆಯವರು, “ಬೇಡ ಈಗ ನೀವು ಮನೆಗೆ ಹೋಗಿ ರೆಸ್ಟ್‌ ತೆಗೆದುಕೊಳ್ಳಿ. ಎಂಟು ಗಂಟೆಕಾಲ ಒಂದೇ ಸ್ಥಳದಲ್ಲಿ ನಿಲ್ಲಬೇಕಾದ ಕಷ್ಟದ ಅರಿವು ನನಗಿದೆ. ಹಾಗೇನಾದರೂ ಸರಿ ಬರದಿದ್ದರೆ, ಮತ್ತೂಂದು ದಿನ ಚಿತ್ರಿಸೋಣ’ ಎಂದುಬಿಟ್ಟರಂತೆ. ಆದರೆ ರಾಜ್‌ ಅವರು ಯಾರ ಒತ್ತಾಯಕ್ಕೂ ಮಣಿಯದೆ, ಅಲ್ಲೇ ಇದ್ದ ಮೇಕಪ್‌ ರೂಮಿನಲ್ಲಿ ಕುಳುತುಬಿಟ್ಟರು. ಇದೇ ರಾಜ್‌ ಅವರ ಕರ್ತವ್ಯನಿಷ್ಠೆಗೆ ಅತ್ಯುತ್ತಮ ನಿದರ್ಶನ.

ಇದನ್ನೂ ಓದಿ: ಈ ವಾರವೂ ವೀಕೆಂಡ್‌ನ‌ಲ್ಲಿ ಕಿಚ್ಚನ ದರ್ಶನವಿಲ್ಲ

ಸಿನೆಮಾ – Udayavani – ಉದಯವಾಣಿ
Read More