ದೆಹಲಿಯಲ್ಲಿ ಇಳಿಮುಖವಾಗುತ್ತಿದೆ ಕೊರೊನಾ ಕೇಸ್​, ಪಾಸಿಟಿವಿಟಿ ರೇಟ್​; ನಿರ್ಬಂಧ ಸಡಿಲಿಕೆ ಬಗ್ಗೆ ಶೀಘ್ರ ನಿರ್ಧಾರ | Delhi COVID Positivity Rate Likely To Decline says Health Minister Satyender Kumar Jain


ದೆಹಲಿಯಲ್ಲಿ ಇಳಿಮುಖವಾಗುತ್ತಿದೆ ಕೊರೊನಾ ಕೇಸ್​, ಪಾಸಿಟಿವಿಟಿ ರೇಟ್​; ನಿರ್ಬಂಧ ಸಡಿಲಿಕೆ ಬಗ್ಗೆ ಶೀಘ್ರ ನಿರ್ಧಾರ

ಸಾಂಕೇತಿಕ ಚಿತ್ರ

ದೆಹಲಿಯಲ್ಲಿ ಕೊವಿಡ್​ 19 ಪಾಸಿಟಿವಿಟಿ ರೇಟ್​ ಕಡಿಮೆಯಾಗಿದೆ. ಇಂದು ಸುಮಾರು 17 ಸಾವಿರ ಹೊಸ ಕೇಸ್​ಗಳು ದಾಖಲಾಗುವ ನಿರೀಕ್ಷೆ ಇದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಕುಮಾರ್ ಜೈನ್​ ತಿಳಿಸಿದ್ದಾರೆ. ಶನಿವಾರ ದೆಹಲಿಯಲ್ಲಿ 20,718 ಹೊಸ ಕೇಸ್​ಗಳು ದಾಖಲಾಗಿದ್ದವು. ಅದಕ್ಕೆ ಹೋಲಿಸಿದರೆ ಇಂದು ಸುಮಾರು 3000ಗಳಷ್ಟು ಕೇಸ್​ಗಳು ಕಡಿಮೆಯಾಗಲಿವೆ ಎಂದು ಆರೋಗ್ಯ ಸಚಿವರು ಮಾಹಿತಿ ನೀಡಿದ್ದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ದಿನಗಳಿಂದಲೂ ದಿನನಿತ್ಯದ ಕೊರೊನಾ ಕೇಸ್​ಗಳು ಕಡಿಮೆಯಾಗುತ್ತಿವೆ. ಹಾಗೇ, ಜನವರಿ 15ರಂದು 67 ಸಾವಿರ ಮಂದಿಗೆ ಕೊರೊನಾ ಟೆಸ್ಟ್​ ಮಾಡಲಾಗಿದೆ ಎಂದೂ ಮಾಹಿತಿ ನೀಡಿದ್ದರು. 

ದೆಹಲಿಯಲ್ಲಿ ಕೊರೊನಾದಿಂದ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣವೂ ಕಡಿಮೆಯಾಗುತ್ತಿದೆ.   ದೆಹಲಿಯಲ್ಲಿ ಕೊರೊನಾ ಸೋಂಕಿನ ವಿರುದ್ಧ ಹೋರಾಟಕ್ಕಾಗಿ ಹೇರಲಾಗಿದ್ದ ನಿರ್ಬಂಧಗಳು ಸೋಂಕಿನ ನಿಯಂತ್ರಣ ಮಾಡುತ್ತಿವೆ. ಈಗಾಗಲೇ ವಿಧಿಸಿರುವ ನಿರ್ಬಂಧಗಳನ್ನು ಮುಂದುವರಿಸಬೇಕಾ? ಸಡಿಲಿಸಬೇಕಾ? ಇನ್ನಷ್ಟು ಕಠಿಣಗೊಳಿಸಬೇಕಾ ಎಂಬುದನ್ನು ನಿರ್ಧರಿಸಲು, ಇನ್ನೂ ಮೂರು-ನಾಲ್ಕು ದಿನಗಳ ಕಾಲ ನಾವು ಪರಿಸ್ಥಿತಿ ಅವಲೋಕನ ಮಾಡುತ್ತೇವೆ ಎಂದೂ ತಿಳಿಸಿದರು.

ಶನಿವಾರ ಮಾತನಾಡಿದ್ದ ಸತ್ಯೇಂದ್ರ ಜೈನ್​, ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಕೊವಿಡ್​ 19 ಸೋಂಕು ಉತ್ತುಂಗದಲ್ಲಿದೆ. ಹೀಗಾಗಿ ನಿರ್ಬಂಧ ಸಡಿಲಿಸಲು ಸದ್ಯ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ. ಒಂದೊಮ್ಮೆ ದೆಹಲಿಯಲ್ಲಿ ದಿನದಲ್ಲಿ ಪತ್ತೆಯಾಗುವ ಕೇಸ್​ನಲ್ಲಿ  15,000ದಷ್ಟು ಇಳಿಕೆಯಾದರೆ ನಾವು ಕೊವಿಡ್​ 19 ನಿರ್ಬಂಧ ಸಡಿಲಿಸುವ ಬಗ್ಗೆ ಯೋಚಿಸುತ್ತೇವೆ ಎಂದಿದ್ದರು. ದೆಹಲಿಯಲ್ಲಿ ಶನಿವಾರ  20,718 ಕೊರೊನಾ ಕೇಸ್​ಗಳು ದಾಖಲಾಗಿದ್ದವು. ಹಾಗೇ 30 ಮಂದಿ ಸೋಂಕಿನಿಂದ ಮೃತಪಟ್ಟಿದ್ದರು. ದೈನಂದಿನ ಪಾಸಿಟಿವಿಟಿ ರೇಟ್​ 30.64 ಇದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

TV9 Kannada


Leave a Reply

Your email address will not be published. Required fields are marked *