ದೆಹಲಿಯಲ್ಲಿ ಕರ್ನಾಟಕದ ಕಲ್ಲಿದ್ದಲು ಬೇಡಿಕೆ ಬಗ್ಗೆ ಚರ್ಚೆ: ಸಿಎಂ ಬಸವರಾಜ ಬೊಮ್ಮಾಯಿ | CM Basavaraj Bommai Says He Discussed Coal Shortage Issue with Union Govt


ದೆಹಲಿಯಲ್ಲಿ ಕರ್ನಾಟಕದ ಕಲ್ಲಿದ್ದಲು ಬೇಡಿಕೆ ಬಗ್ಗೆ ಚರ್ಚೆ: ಸಿಎಂ ಬಸವರಾಜ ಬೊಮ್ಮಾಯಿ

ಬಸವರಾಜ್ ಬೊಮ್ಮಾಯಿ (ಸಂಗ್ರಹ ಚಿತ್ರ)

ಬೆಂಗಳೂರು: ನನ್ನ ದೆಹಲಿ ಪ್ರವಾಸ ಬಹಳ ಯಶಸ್ವಿಯಾಗಿದೆ ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ರಾಜ್ಯಕ್ಕೆ ಬೇಕಾದ ಕಲ್ಲಿದ್ದಲು ಪ್ರಮಾಣ ಕುರಿತು ಚರ್ಚೆ ಮಾಡಲಾಗಿದೆ. ಒಡಿಶಾದಲ್ಲಿ ಮಂದಾಕಿನಿ ಕಲ್ಲಿದ್ದಲು ಗಣಿಗಳ ಉಪಯೋಗಕ್ಕೆ ಅನುಮತಿ ನೀಡುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದೆ. ಮುಂದಿನ ದಿನಗಳಲ್ಲಿ ಮಹಾರಾಷ್ಟ್ರದಿಂದಲೂ ಹೆಚ್ಚಿನ ಪ್ರಮಾಣದಲ್ಲಿ ಕಲ್ಲಿದ್ದಲು ಒದಗಿಸುವ ಬಗ್ಗೆ ತಿಳಿಸಿದ್ದಾರೆ. ಭವಿಷ್ಯದಲ್ಲಿ ಕಲ್ಲಿದ್ದಲು ಸಮಸ್ಯೆ ಇರುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯಲ್ಲಿ ನಮಗೆ ₹ 2,100 ಕೋಟಿ ಕೊಡಬೇಕೆಂಬ ಬೇಡಿಕೆ ಇತ್ತು. ಈ ಹಣ ಕೊಡಲು ಕೇಂದ್ರ ಆಹಾರ ಸಚಿವ ಪೀಯೋಷ್ ಗೋಯೆಲ್ ಒಪ್ಪಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರನ್ನು ಭೇಟಿ ಮಾಡಿದ್ದೇನೆ. 100 ದಿನಗಳಲ್ಲಿನ ನಮ್ಮ ಕಾರ್ಯಕ್ರಮದ ಬಗ್ಗೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲ ಕಾರ್ಯಕ್ರಮದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಈ ಪ್ರವಾಸದಲ್ಲಿ ನನಗೆ ಬಹಳ ಸಂತೋಷವಾಗಿದೆ. ಮುಂದಿನ ದಿನಗಳಲ್ಲಿ ಉತ್ತಮ, ಜನಪರ ಕೆಲಸ ಮಾಡುತ್ತೇನೆ. ದೆಹಲಿ ಪ್ರವಾಸ ನನಗೆ ಆ ಆತ್ಮವಿಶ್ವಾಸವನ್ನು ನೀಡಿದೆ ಎಂದು ಬೊಮ್ಮಾಯಿ ನುಡಿದರು.

ದೆಹಲಿಯಿಂದ ಬಂದ ಸಿಎಂ ಬಸವರಾಜ ಬೊಮ್ಮಾಯಿ ವಿಮಾನದಲ್ಲೇ ಮೊಬೈಲ್ ಮರೆತರು
ದೆಹಲಿ ಪ್ರವಾಸ ಮುಗಿಸಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಿಂದಿರುಗಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಮಾನದಲ್ಲಿಯೇ ಮೊಬೈಲ್ ಮರೆತಿದ್ದರು. ವಿಮಾನ ನಿಲ್ದಾಣದ ವಿಐಪಿ ಟರ್ಮಿನಲ್​ನಿಂದ ಹೊರಬಂದಾಗ ಮೊಬೈಲ್ ವಿಚಾರ ಸಿಎಂಗೆ ನೆನಪಾಯಿತು. ನಂತರ ಮೊಬೈಲ್ ತರಲು ಸಿಬ್ಬಂದಿಯನ್ನು ಕಳಿಸಿಕೊಟ್ಟರು. ಮುಖ್ಯಮಂತ್ರಿ ಆಪ್ತ ಸಿಬ್ಬಂದಿ ಹಿಂದಿರುಗುವವರೆಗೂ ಅವರ ಕಾರು ರಸ್ತೆಯಲ್ಲಿಯೇ ನಿಂತಿತ್ತು.

ಬೆಂಗಳೂರಿನಲ್ಲಿ ಲ್ಯಾಂಡ್ ಆದ ಚೆನ್ನೈ ವಿಮಾನ
ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಭಾರಿ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಹವಾಮಾನ ವೈಪರಿತ್ಯದ ಕಾರಣ ದುಬೈನಿಂದ ಚೆನ್ನೈಗೆ ತೆರಳಬೇಕಿದ್ದ ವಿಮಾನವು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿಯೇ ಲ್ಯಾಂಡ್ ಆಯಿತು. ದುಬೈನಿಂದ ಬಂದಿದ್ದ 40ಕ್ಕೂ ಹೆಚ್ಚು ಪ್ರಯಾಣಿಕರನ್ನು ಐರಾವತ ಬಸ್ ಮೂಲಕ ಚೆನ್ನೈಗೆ ಕಳುಹಿಸಿಕೊಡಲಾಯಿತು.

ಇದನ್ನೂ ಓದಿ: ಕಲ್ಲಿದ್ದಲು, ಕೊರೊನಾ ಲಸಿಕೆ ಪೂರೈಸಲು ಮನವಿ; ದೆಹಲಿ ಪ್ರವಾಸ ಯಶಸ್ವಿಯಾಗಿದೆ ಎಂದ ಬಸವರಾಜ ಬೊಮ್ಮಾಯಿ
ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿ ಬಹಳ ಒಳ್ಳೆ ರೀತಿಯಲ್ಲಿ ಆಗಿದೆ; ಬೆಂಗಳೂರಿಗೆ ಬರಲು ಆಹ್ವಾನಿಸಿದ್ದೇನೆ- ಸಿಎಂ ಬಸವರಾಜ ಬೊಮ್ಮಾಯಿ

TV9 Kannada


Leave a Reply

Your email address will not be published. Required fields are marked *