ದೆಹಲಿಯಲ್ಲಿ ಜ.9-12ರವರೆಗೆ ಕೊವಿಡ್​ನಿಂದ ಮೃತಪಟ್ಟ 92 ರೋಗಿಗಳಲ್ಲಿ ಕೇವಲ 8 ಜನ ಸಂಪೂರ್ಣ ಲಸಿಕೆ ಪಡೆದವರು: ವರದಿ | Of the 97 people who died from Corona between January 9 and 12, only 8 were fully vaccinated says reports


ದೆಹಲಿಯಲ್ಲಿ ಜ.9-12ರವರೆಗೆ ಕೊವಿಡ್​ನಿಂದ ಮೃತಪಟ್ಟ 92 ರೋಗಿಗಳಲ್ಲಿ ಕೇವಲ 8 ಜನ ಸಂಪೂರ್ಣ ಲಸಿಕೆ ಪಡೆದವರು: ವರದಿ

ಪ್ರಾತಿನಿಧಿಕ ಚಿತ್ರ

ಜನವರಿ 9 ರಿಂದ 12 ರ ನಡುವೆ ದೆಹಲಿಯ ಆಸ್ಪತ್ರೆಗಳಲ್ಲಿ ಸಾವನ್ನಪ್ಪಿದ 97 ಕೋವಿಡ್ ಪಾಸಿಟಿವ್ ರೋಗಿಗಳಲ್ಲಿ 8 ಜನರು ಮಾತ್ರ ಸಂಪೂರ್ಣವಾಗಿ ಲಸಿಕೆ ಪಡೆದಿದ್ದರು. ಕೇವಲ 19 ಜನರು ಮಾತ್ರ ಮೊದಲ ಡೋಸ್ ಲಸಿಕೆಯನ್ನು ಪಡೆದಿದ್ದರು ಎಂದು ಸರ್ಕಾರದ ಹೊಸ ವಿಶ್ಲೇಷಣೆ ತಿಳಿಸಿದೆ. ಇದು ಮೂರನೇ ಅಲೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಪ್ರಕರಣಗಳಲ್ಲಿ ಲಸಿಕೆ ಪಡೆಯದವರ ಸಾವಿನ ಪ್ರಮಾಣವನ್ನು ತಿಳಿಸುತ್ತಿದೆ ಎಂದು ಅಧ್ಯಯನವೊಂದು ಹೇಳಿವೆ. ಈ ಅಧ್ಯಯನದಲ್ಲಿ ಕೊವಿಡ್ ಸೋಂಕಿತ ರೋಗಿಗಳ ಸಾವಿನಲ್ಲಿ ಪ್ರಮುಖ ಅಂಶಗಳನ್ನು ಗುರುತಿಸಲಾಗಿದೆ.  ಅವುಗಳೆಂದರೆ, ಹೆಚ್ಚಿನ ಸಾವುಗಳು ಲಸಿಕೆ ಪಡೆಯದ ಜನರಲ್ಲಿವೆ. ಕ್ಯಾನ್ಸರ್ ಮತ್ತು ಮೂತ್ರಪಿಂಡದ ಕಾಯಿಲೆಯಂತಹ ಗಂಭೀರ ಸಹವರ್ತಿ ಕಾಯಿಲೆಗಳನ್ನು ಹೊಂದಿದ್ದರೆ ಜನರು ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ ಮತ್ತು ಹೆಚ್ಚಿನ ಸಾವುನೋವುಗಳು ಆಸ್ಪತ್ರೆಗೆ ದಾಖಲಾದ ಎರಡು ದಿನಗಳಿಗಿಂತ ಕಡಿಮೆ ಅವಧಿಯಲ್ಲಿ ಸಂಭವಿಸಿವೆ ಅರ್ಥಾತ್ ಜನರು ಆಸ್ಪತ್ರೆಗೆ ಸೇರುವಲ್ಲಿ ತಡಮಾಡುತ್ತಿದ್ದಾರೆ ಎಂದು ಅಧ್ಯಯನದಲ್ಲಿ ಗುರುತಿಸಲಾಗಿದೆ.

ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಮತತ್ಒಂದು ಅಂಶವನ್ನು ಪ್ರಸ್ತಾಪಿಸಿದ್ದಾರೆ. ‘‘ಇತ್ತೀಚೆಗೆ ಪುನರ್ರಚಿಸಲಾದ ಸಾವಿನ ಸಂಖ್ಯೆ ತಿಳಿಸುವ ಸಮಿತಿಯ ವರದಿಯ ಪ್ರಕಾರ, ಕೋವಿಡ್ -19 ನಿಂದಾಗಿ ಹೆಚ್ಚಿನ ಸಂಖ್ಯೆಯ ಸಾವುಗಳು ಸಹ ಖಾಯಿಲೆಯಿಂದ ಅಥವಾ ಗಂಭೀರ ಕಾಯಿಲೆಯಿಂದ ದಾಖಲಾದವರಾಗಿದ್ದಾರೆ. ಆಸ್ಪತ್ರೆಯ ದಾಖಲಾತಿಗಾಗಿ, ಆರ್‌ಟಿ-ಪಿಸಿಆರ್ ಪರೀಕ್ಷೆಯು ಕಡ್ಡಾಯವಾಗಿದೆ, ಆದ್ದರಿಂದ ತೀವ್ರವಾಗಿ ಅಸ್ವಸ್ಥರಾದ ಅನೇಕ ರೋಗಿಗಳು ಇತರ ಗಂಭೀರ ಕಾಯಿಲೆಗಳೊಂದಿಗೆ ದಾಖಲಾಗಿದ್ದರೂ ಕೂಡ, ಆಸ್ಪತ್ರೆಗೆ ದಾಖಲಾದ ನಂತರ ಪಾಸಿಟಿವ್ ಆಗಿರುವುದು ಕಂಡುಬಂದಿದೆ’’ ಎಂದಿದ್ದಾರೆ.

ಕೊಮೊರ್ಬಿಡ್ ಅರ್ಥಾತ್ ಸಹ ಖಾಯಿಲೆಗಳನ್ನು ಹೊಂದಿರದವರು, ಲಸಿಕೆ ಪಡೆದವರು ಮತ್ತು ವಯಸ್ಸಾಗಿಲ್ಲದವರು ಕೊವಿಡ್​ ಸಂಬಂಧಿತ ಸೌಮ್ಯ ಲಕ್ಷಣಗಳನ್ನಷ್ಟೇ ಹೊಂದಿದ್ದಾರೆ ಎಂದು ಸತ್ಯೇಂದ್ರ ಜೈನ್ ತಿಳಿಸಿದ್ದಾರೆ.

ಹಿಂದೂಸ್ತಾನ್ ಟೈಮ್ಸ್ ನಡೆಸಿರುವ ವಿಶ್ಲೇಷಣೆಯ ಪ್ರಕಾರ, ಸತ್ತ 97 ಜನರಲ್ಲಿ ಕೇವಲ 8.3% ಮಾತ್ರ ಎರಡೂ ಡೋಸ್‌ ಲಸಿಕೆಗಳನ್ನು ಪಡೆದಿದ್ದಾರೆ. 19.6% ಜನರು ಒಂದು ಡೋಸ್ ಲಸಿಕೆ ತೆಗೆದುಕೊಂಡಿದ್ದಾರೆ. ಉಳಿದ ಶೇ.70 ಮಂದಿ ಯಾವುದೇ ಡೋಸ್ ತೆಗೆದುಕೊಂಡಿರಲಿಲ್ಲ. ದೆಹಲಿಯ ಆಸ್ಪತ್ರೆಗಳಲ್ಲಿ ಸಾವನ್ನಪ್ಪಿದ 37 ರೋಗಿಗಳಲ್ಲಿ, ದಾಖಲಾದ ದಿನಾಂಕ ಮತ್ತು ಪರೀಕ್ಷಾ ವರದಿಯ ದಿನಾಂಕ ಲಭ್ಯವಿದ್ದು, 25 ಮಂದಿಗೆ ಅದೇ ದಿನ ಅಥವಾ ನಂತರ ಕೋವಿಡ್-ಪಾಸಿಟಿವ್ ಎಂದು ವರದಿ ಬಂದಿತ್ತು. 37 ಸಾವುಗಳಲ್ಲಿ, 22 ಅದೇ ದಿನ ಅಥವಾ ಮರುದಿನ ಸಂಭವಿಸಿದೆ.

ಜನವರಿ 5ರಿಂದ 9 ರ ನಡುವೆ ಸಾವನ್ನಪ್ಪಿದ 46 jನರಲ್ಲಿ 76% ರಷ್ಟು ಜನರು ಲಸಿಕೆ ಪಡೆದಿರಲಿಲ್ಲ. ಅದರ ನಂತರ ನಾಲ್ಕು ದಿನಗಳಲ್ಲಿ ಸಾವನ್ನಪ್ಪಿದ 97 ಜನರಲ್ಲಿ, 72% ರಷ್ಟು ಲಸಿಕೆ ಪಡೆದಿರಲಿಲ್ಲ.

ಪ್ರತಿದಿನ ಬರುವ ಹೊಸ ಪ್ರಕರಣಗಳಿಗೆ ಹೋಲಿಸಿದರೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಪ್ರಸ್ತುತ ನಿಯಂತ್ರಣದಲ್ಲಿದೆ. ನಾವು ಪರೀಕ್ಷೆಯನ್ನು ಹೆಚ್ಚಿಸಿರುವುದರಿಂದ ಪ್ರಕರಣಗಳು ಹೆಚ್ಚು ಪತ್ತೆಯಾಗುತ್ತಿವೆ. ದೆಹಲಿಯಲ್ಲಿ ಅಸ್ತಿತ್ವದಲ್ಲಿರುವ ಆರೋಗ್ಯ ವ್ಯವಸ್ಥೆಯು ಉತ್ತಮ ಸ್ಥಿತಿಯಲ್ಲಿದೆ ಮತ್ತು ಅತ್ಯಂತ ಗಂಭೀರವಾದ ಪರಿಸ್ಥಿತಿಗಳನ್ನು ಎದುರಿಸಲು ನಾವು ಸಂಪೂರ್ಣವಾಗಿ ಸಿದ್ಧರಾಗಿದ್ದೇವೆ ಎಂದು ಜೈನ್ ಹೇಳಿದ್ದಾರೆ. ರಾಜಧಾನಿಯಲ್ಲಿ ಎರಡನೇ ಅಲೆಯ ಸಮಯಕ್ಕಿಂತ ಈಗ ಸಾವಿನ ಸಂಖ್ಯೆ ಕಡಿಮೆಯಾಗಿದೆ. ಆದರೆ ಜನರು ಆಸ್ಪತ್ರೆಗೆ ಏಕೆ ತಡವಾಗಿ ದಾಖಲಾಗುತ್ತಿದ್ದಾರೆ ಎಂದು ತಿಳಿಯಲು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಪ್ರಸ್ತುತ 15,000 ಕೋವಿಡ್ ಹಾಸಿಗೆಗಳನ್ನು ಸಿದ್ಧಗೊಳಿಸಲಾಗಿದೆ ಎಂದು ದೆಹಲಿಯ ಹಿರಿಯ ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ‘‘ಅಗತ್ಯವಿದ್ದರೆ ಸರ್ಕಾರವು ಹಾಸಿಗೆಗಳ ಸಂಖ್ಯೆಯನ್ನು ದ್ವಿಗುಣಗೊಳಿಸಬಹುದು. ಆದರೆ ಪ್ರಸ್ತುತ ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಸಂಖ್ಯೆಯು ತುಂಬಾ ಕಡಿಮೆಯಿರುವುದರಿಂದ, ಹಾಸಿಗೆಗಳನ್ನು ಹೆಚ್ಚಿಸುವ ಅಗತ್ಯ ತಕ್ಷಣಕ್ಕಿಲ್ಲ. 37,000 ಆಮ್ಲಜನಕಯುಕ್ತ ಹಾಸಿಗೆಗಳನ್ನು ಸಕ್ರಿಯಗೊಳಿಸಲು ಆಡಳಿತವು ಸಿದ್ಧವಾಗಿದೆ’’ ಎಂದು ಅಧಿಕಾರಿ ಹೇಳಿದರು.

ಆಸ್ಪತ್ರೆಗೆ ದಾಖಲಾದ ರೋಗಿಗಳು ಶೀಘ್ರವಾಗಿ ಗುಣಮುಖರಾಗುತ್ತಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಇಂದ್ರಪ್ರಸ್ಥ ಅಪೊಲೊ ಆಸ್ಪತ್ರೆಗಳ ಶ್ವಾಸಕೋಶಶಾಸ್ತ್ರ/ಉಸಿರಾಟದ ಔಷಧದ ಸಲಹೆಗಾರ ಡಾ.ನಿಖಿಲ್ ಮೋದಿ ಮಾಹಿತಿ ನೀಡಿ, ‘ಮೂರು ದಿನಗಳಲ್ಲಿ ಜನರು ಚೇತರಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ, ಯಾರಾದರೂ ಗಂಭೀರ ಹೃದಯ ಸ್ಥಿತಿ ಅಥವಾ ಯಾವುದೇ ಇತರ ಕಾಯಿಲೆಯೊಂದಿಗೆ ಬರುತ್ತಿದ್ದರೂ ಸಹ, ಕೊವಿಡ್ ಪರೀಕ್ಷೆ ನಡೆಸಿ ನಂತರ ಚಿಕಿತ್ಸೆಯನ್ನು ತಕ್ಷಣ ಪ್ರಾರಂಭಿಸಲಾಗುತ್ತದೆ. ಕೆಲವೇ ದಿನಗಳಲ್ಲಿ ರೋಗಿಗಳು ಚೇತರಿಸಿಕೊಳ್ಳುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ದಾಖಲಾತಿಗಳು ಹೆಚ್ಚಿನ ಪ್ರಮಾಣದಲ್ಲಿಲ್ಲ. ದೈನಂದಿನ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ರೋಗ ಪೀಡಿತರು ನಿಧಾನವಾಗಿ ಹೆಚ್ಚಾಗುತ್ತಿದ್ದಾರೆ’’ ಎಂದು ಅವರು ಹೇಳಿದರು.

TV9 Kannada


Leave a Reply

Your email address will not be published. Required fields are marked *